ADVERTISEMENT

ಇದಕಾರಂಜುವರು, ಇದಕಾರಳುಕುವರು

ಆರ್.ಪೂರ್ಣಿಮಾ
Published 8 ಡಿಸೆಂಬರ್ 2014, 19:30 IST
Last Updated 8 ಡಿಸೆಂಬರ್ 2014, 19:30 IST
ಇದಕಾರಂಜುವರು, ಇದಕಾರಳುಕುವರು
ಇದಕಾರಂಜುವರು, ಇದಕಾರಳುಕುವರು   

ಗರ್ಭಿಣಿಯರ ಆರೈಕೆ ಮತ್ತು ಪ್ರಸೂತಿ ಮಾಡುವ ತಜ್ಞ ವೈದ್ಯೆಯರೊಂದಿಗೆ ಸುಮ್ಮನೆ ಮಾತನಾಡಿದರೆ ಸಾಕು, ಈ ಕಾಲದ ಕೆಲವು ಹುಡುಗ ಹುಡುಗಿಯರಿಗೆ ಇರುವ ಜ್ಯೋತಿಷ, ಜಾತಕಗಳ ‘ಆಳವಾದ ಜ್ಞಾನ’ ತಮ್ಮನ್ನು ಹೇಗೆ ಬೆಚ್ಚಿಬೀಳಿಸಿ ಉರುಳಿಸುತ್ತದೆ ಎಂಬುದನ್ನು ವಿನೋದ–ವಿಷಾದ ಬೆರೆಸಿ ವಿವ­ರಿ­ಸು­ತ್ತಾರೆ.

ಕೆಲವು ಯುವಜೋಡಿಗಳ ಮೈಮೇಲೆ ಕಂಗೊಳಿಸುವ ಅತ್ಯಾಧುನಿಕ ವೇಷಭೂಷಣಕ್ಕೂ ಅವರ ತಲೆಯಲ್ಲಿ ದಟ್ಟವಾಗಿ ತುಂಬಿರುವ ಮೌಢ್ಯಕ್ಕೂ ಅರ್ಥಾತ್ ಸಂಬಂಧ ಇರುವುದಿಲ್ಲ, ಅನೇಕ ಟೆಕ್ಕಿಗಳು ತಮ್ಮ ಬದುಕಿನ ಬಹುಮುಖ್ಯ ನಿರ್ಧಾರಗಳನ್ನು ನಿಕ್ಕಿ ಮಾಡಲು ಜ್ಯೋತಿಷಿ­ಗಳನ್ನೇ ನಂಬುತ್ತಾರೆ, ಅವರಲ್ಲಿ ಆತ್ಮವಿಶ್ವಾಸವೇ ಇಲ್ಲದಿರುವುದು ಆತಂಕ ಹುಟ್ಟಿಸುತ್ತದೆ ಎಂದು ಕೆಲವು ವೈದ್ಯೆಯರು ಹೇಳುತ್ತಾರೆ.

ಜ್ಯೋತಿಷಿ­ಗಳು ಅವರ ಮದುವೆಗೆ ಮುಹೂರ್ತ ಇಟ್ಟು­ಕೊಡುವುದಂತೂ ಬಿಡಿ, ಮಗು ಬೇಕು ಎಂದು ಆ ದಂಪತಿ ನಿರ್ಧರಿಸಿದಾಗ ಮಿಲನಕ್ಕೆ ಮುಹೂರ್ತ­ಗಳನ್ನೂ ನಿಗದಿ ಮಾಡುತ್ತಾರಂತೆ! ನಂತರ ಬಸುರಿ ಹುಡುಗಿ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು, ಯಾವ ಬಣ್ಣದ ಉಡುಪು ಧರಿಸಬೇಕು ಇತ್ಯಾದಿ ಹತ್ತೆಂಟನ್ನೂ ಹೇಳುತ್ತಾ­ರಂತೆ. ಆಮೇಲೆ, ಮಗು ಹುಟ್ಟುವ ಗಳಿಗೆ­ಯಂತೂ ಜ್ಯೋತಿಷಿಗಳದೇ ಕಟ್ಟುನಿಟ್ಟಿನ ನಿರ್ಧಾರ. ಮಗುವಿನ ಹಣೆಬರಹವನ್ನು ಬ್ರಹ್ಮ ಬರೆಯು­ತ್ತಾನೆ ಎಂದು ಯಾರು ಹೇಳಿದರು!

ಇಂಥ ದಿನ ಇಂಥ ಗಳಿಗೆಯಲ್ಲಿ ಇಂಥ ನಕ್ಷತ್ರ­ದಲ್ಲಿ ಮಗು ಹುಟ್ಟಲಿ ಎಂದು ಆ ಬುರುಡೆ­ಬ್ರಹ್ಮರು ಮುಹೂರ್ತ ಇಟ್ಟುಕೊಟ್ಟಬಿಟ್ಟರೆ ಆಯಿತು, ವೈದ್ಯಶಾಸ್ತ್ರ, ಆರೋಗ್ಯಶಾಸ್ತ್ರ, ಗರ್ಭಸ್ಥ ಶಿಶುವಿನ ಸ್ಥಿತಿಯ ಕಾಳಜಿ, ದಿನ ತುಂಬಿದ ಮೇಲೆ ಸಹಜ ಹೆರಿಗೆಯ ಹಕ್ಕು, ನಿಸರ್ಗ ನಿಯಮ ಎಲ್ಲವನ್ನೂ ಗಾಳಿಗೆ ತೂರುವ ಈ ಅಲ್ಟ್ರಾ ಮಾಡರ್ನ್ ದಂಪತಿಗಳು ’ಸಿಸೇರಿ­ಯನ್ ಮಾಡಬೇಕು ಅದೇ ಗಳಿಗೆಯಲ್ಲಿ ಮಗು ಹುಟ್ಟಬೇಕು’ ಎಂದು ಹಟ ಹಿಡಿಯುತ್ತಾರಂತೆ. ಇದಕ್ಕೆ ಒಬ್ಬರು ನಿರಾಕರಿಸಿ­ದರೆ, ಇನ್ನೊಬ್ಬ ವೈದ್ಯೆ ಇದ್ದೇ ಇರುತ್ತಾರೆ.

ಪಂಚತಾರಾ ಪ್ರಸೂತಿ ಗೃಹಗಳ ಶಸ್ತ್ರಚಿಕಿತ್ಸಾ ಕೊಠಡಿಗಳ ಹೊರಗಡೆ ‘ಮುಹೂರ್ತವಿಟ್ಟ ಜನ್ಮ’ ನಿರೀಕ್ಷಿಸುತ್ತಾ ಕುಳಿತ ಅತ್ಯಾಧುನಿಕ ಅಪ್ಪಂದಿರ ಜೇಬಿನಲ್ಲಿ ‘ಆ ಸೂಪರ್ ರಾಶಿ–ನಕ್ಷತ್ರ’ ದಲ್ಲಿ ಹುಟ್ಟುವ ಅಥವಾ ಹುಟ್ಟಿಸಿರುವ ಮಗುವಿನ ‘ಕಂಪ್ಯೂಟರ್ ಜಾತಕ’ ಅದಾಗಲೇ ಇರುತ್ತದಂತೆ! ಇಲ್ಲವೇ ಕೈಲಿರುವ ಐಪ್ಯಾಡ್, ಐಫೋನ್ ಇತ್ಯಾದಿಗಳಿಗೆ ಇಳಿಸಿಕೊಂಡಿರುವ ಅನೇಕ ಆ್ಯಪ್ ಗಳಿಂದ ಈ ಅಪ್ಪಂದಿರು ಗ್ರಹಸ್ಥಾನರಾಶಿನಕ್ಷತ್ರಗಳ ವಿವರ­ಗಳನ್ನು ಪಡೆಯುತ್ತಾರಂತೆ. ಆಹಾ, ವಿಜ್ಞಾನ ಮತ್ತು ತಂತ್ರಜ್ಞಾನ ಸಮಾಜವನ್ನು ಪ್ರಗತಿಪಥಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಯಾರು ಇಲ್ಲವೆಂದರು! 

ಶಾಲಾಕಾಲೇಜು ದಿನಗಳಿಂದ ಶುರುಮಾಡಿ ಕನಿಷ್ಠ ಇಪ್ಪತ್ತು ವರ್ಷ ವಿಜ್ಞಾನ ಓದಿರುವ, ಬೇರೆ ಎಲ್ಲದರಲ್ಲೂ ಸ್ವಾತಂತ್ರ್ಯ ಬಯಸುವ ತಲೆಮಾರಿನ ಹುಡುಗ ಹುಡುಗಿಯರ ಇಂಥ ಬೌದ್ಧಿಕ ದಾಸ್ಯದಿಂದ ಹಿಡಿದು, ಊರೂರುಗಳ ಗೊಲ್ಲರಹಟ್ಟಿಗಳಾಚೆ ದೂರದಲ್ಲಿ ಹಾಕಿದ ಗುಡಿಸ­ಲು­ಗಳಲ್ಲಿ ಹಸಿಬಾಣಂತಿ ಹಸುಗೂಸನ್ನು ಚಳಿ ಗಾಳಿಗೆ ಬಿಸಾಕುವ ಅಂಥ ನಿರ್ದಯ ಆಚರಣೆಯವರೆಗೆ–ಮೌಢ್ಯ, ಮೂಢನಂಬಿಕೆ­ಗಳ ವಿಸ್ತಾರವು ಧರ್ಮ ಮತ್ತು ನಾಗರಿಕತೆ­ಯಷ್ಟೇ ದೊಡ್ಡದು.

ಅವುಗಳ ಜೊತೆಯೇ ಹುಟ್ಟಿದ, ಬೆಳೆದ ಮತ್ತು ಬೆಳೆಯುತ್ತಿರುವ ಮೌಢ್ಯ, ಮೂಢನಂಬಿಕೆಗಳಿಗೆ ದೇಶವೂ ಇಲ್ಲ, ಕಾಲವೂ ಇಲ್ಲ, ಅದು ಎಲ್ಲಕ್ಕೂ ಅತೀತ. ಇಡೀ ಜಗತ್ತೇ ಅದಕ್ಕೆ ಮನೆಯಾಗಿ ಬಹುಶಃ ಅದೊಂದೇ ‘ವಸುಧೈವ ಕುಟುಂಬಕಂ’ ಅನ್ನಬಹುದು.
ನಮ್ಮ ದೇಶದಲ್ಲಂತೂ ಎಲ್ಲದರಲ್ಲಿ ಇರುವಂತೆ ಮೂಢನಂಬಿಕೆಯಲ್ಲೂ ಬಹುತ್ವ, ಬಹುರೂಪ ಸಹಜವಾಗಿ ಇದ್ದೇ ಇದೆ; ಎಲ್ಲದಕ್ಕೂ ಇರುವಂತೆ ಇದಕ್ಕೂ ಸಾವಿರಾರು ವರ್ಷಗಳ ಇತಿಹಾಸ, ಪರಂಪರೆಯಿದೆ.

ಈ ಸಾವಿರಾರು ವರ್ಷಗಳಲ್ಲಿ ಚಾರ್ವಾಕರಿಂದ ಹಿಡಿದು ಎಚ್ಚೆನ್‌ವರೆಗೆ ಸಾವಿ­ರಾರು ಜನರು ಒಂದಲ್ಲ ಒಂದು ಸಂದರ್ಭದಲ್ಲಿ ಮತ್ತು ತಮ್ಮದೇ ಕಾರಣಗಳಿಗೆ ಅದನ್ನು ಪ್ರಶ್ನಿಸಿದ್ದಾರೆ. ಆದರೆ ವಿವೇಕ, ವಿಚಾರ, ವಿವೇಚನೆ ಮತ್ತು ವಿಜ್ಞಾನ ಎಲ್ಲದರ ಅಸ್ತಿತ್ವವನ್ನೇ ಪ್ರಶ್ನಿಸುತ್ತ ಮೂಢನಂಬಿಕೆ ಮಾತ್ರ ಬೆಳೆಯುತ್ತಲೇ ಇದೆ. ಎಷ್ಟು ಬೆಳೆಯುತ್ತಿದೆ ಎಂದರೆ, ಜ್ಯೋತಿಷಿಗಳು, ವೈಜ್ಞಾನಿಕ ಮನೋಭಾವ ಎಂಬ ಅಬಲೆಯನ್ನು ನಾಡೇ ನೋಡುವಂತೆ ರೇಪ್ ಮಾಡುವಷ್ಟು. ಮೌಢ್ಯದ ಎಂಜಲೆಲೆಗಳ ಮೇಲೆ ತರ್ಕಹೀನತೆಯ ಮಡ ಮಡೆ ಸ್ನಾನದ ಉರುಳುಸೇವೆ ಮುಂದು­ವರೆ­ಯುತ್ತಲೇ ಇದೆ.

ಶತಮಾನಗಳು ಉರುಳಿದಂತೆ ಪ್ರಗತಿಯ ಬಾಹ್ಯ ಸೂಚಕಗಳಾದ ಎಲ್ಲ ಬಗೆಯ ಹಾರ್ಡ್‌ವೇರ್ ಊಹಾತೀತವಾಗಿ ವೇಗವಾಗಿ ಹೊಸಹೊಸದಾಗಿ ಬದಲಾದವು–ಆದರೆ ನಮ್ಮ ಜನರ ತಲೆಯೊಳ­ಗಿನ ‘ಮೂಢನಂಬಿಕೆ ಎಂಬ ಸಾಫ್ಟ್‌ವೇರ್’ ಮಾತ್ರ ಹಾಗೇ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿ­ಕೊಳ್ಳುತ್ತ ಗಟ್ಟಿಯಾಗಿ ಉಳಿದುಬಿಟ್ಟಿತಲ್ಲ! ಏನಿ­ದ್ದರೂ ಅದಕ್ಕೆ ಹೊಸಹೊಸ ವರ್ಶನ್‌ಗಳು
ಮಾತ್ರ ಬಂದು ಸೇರುತ್ತಿವೆ.

ಇಪ್ಪತ್ತನೇ ಶತ­ಮಾನಕ್ಕೆ ಕಂಪ್ಯೂಟರ್ ಇತ್ಯಾದಿ ಹೊಸದೇನೋ ಬಂತೇ, ಬರಲಿ ಬಿಡಿ, ‘ಅದನ್ನು ಈ ದಿಕ್ಕಿನಲ್ಲೇ ಇಟ್ಟರೆ ನಿಮಗೆ ಒಳ್ಳೆಯದು’ ಎಂಬ ಹೊಸ ಆ್ಯಪ್‌ಅನ್ನು ಮೌಢ್ಯ­ವೆಂಬ ಮಹಾಮಾರುಕಟ್ಟೆಗೆ ಬಿಟ್ಟರಾಯಿತು. ಐಟಿ ಕಂಪೆನಿಗಳಲ್ಲಿ ಎಷ್ಟು ಜನ ಟೆಕ್ಕಿಗಳು ಅದನ್ನು ಡೌನ್‌ಲೋಡ್ ಮಾಡಿ­ಕೊಂಡಿಲ್ಲ? ಹಾಗೇ ಎಷ್ಟು ಜನ ವೈದ್ಯರು ಸ್ಕಾಲ್ ಪೆಲ್‌ಗೆ ಪ್ರತೀ ಶುಕ್ರವಾರ ಪೂಜೆ ಮಾಡುವು­ದಿಲ್ಲ? ಬದುಕು ಮುಂದೆ ಉರುಳಿದಂತೆ ತಲೆ­ಯನ್ನು ಹಿಂದಕ್ಕೊಯ್ಯುವ ಆಧುನಿಕ ಆ್ಯಪ್‌ಗಳ ತಯಾರಿಕೆ ಇದ್ದೇ ಇರುತ್ತದೆ.

ಹೋಗಲಿ ಬಿಡಿ, ಖಗೋಳ ವಿಜ್ಞಾನ, ಖಭೌತ ವಿಜ್ಞಾನಗಳ ನಿಖರ, ನಿರ್ದಿಷ್ಟ ಲೆಕ್ಕಾಚಾರಗಳನ್ನು ಅಣಕಿಸುವಂತೆ ಮಂಗಳ ಗ್ರಹ ಯಾನದ ‘ಗ್ರಹ’­ಗತಿ ಚೆನ್ನಾಗಿರಲಿ ಎಂದು ತಿರುಪತಿಗೆ ಹೋಗಿ ಅಲಮೇಲು ಮಂಗಮ್ಮನ ಪತಿದೇವರನ್ನು ‘ಇಸ್ರೋ’ ಉಪಗ್ರಹ ಸಂಸ್ಥೆಯ ಮಹಾವಿಜ್ಞಾನಿ ಅಧ್ಯಕ್ಷರೇ ಪ್ರಾರ್ಥಿಸಿದರು. ಮಂಗಳ ನೌಕೆಯ ಮಾರ್ಗಕ್ಕೆದುರಾಗಿ ಒಂಟಿ ಬ್ರಾಹ್ಮಣನೂ ವಿಧವೆಯೂ ಬರುವ ಸಾಧ್ಯತೆಯಿಲ್ಲ ಎಂದು ಜನ­ಸಾಮಾನ್ಯರು ತರ್ಕಿಸುವುದು ಹೇಗೆ? ‘ಇಂದಿನ ದಿನವೇ ಶುಭ ದಿನವು, ಇಂದಿನ ವಾರ ಶುಭ ವಾರ’ ಎಂಬ ದಾಸರ ಪದವಷ್ಟೇ ಅವರಿಗ ನೆನಪಿಗೆ ಬರುವುದು.

ಹೀಗೆ ಮೂಢನಂಬಿಕೆ ಎನ್ನುವ ಕಸ ಭೂಮಿ­ವ್ಯೋಮ­ಗಳನ್ನು ವ್ಯಾಪಿಸಿಕೊಂಡಿರುವಾಗ ಇದನ್ನು ಗುಡಿಸಿ ಎಸೆದು ಸ್ವಚ್ಛ ಮಾಡುವ ಬೃಹತ್ ಪೊರಕೆಯನ್ನು ಎಲ್ಲಿಂದ ತರೋಣ ಎಂದು ಹತಾಶೆಯಿಂದ ತಲೆಯ ಮೇಲೆ ಕೈ­ಹೊತ್ತು ಕುಳಿತುಕೊಳ್ಳುವುದು ಬೇಡ. ಏಕೆಂದರೆ ಆ ಪೊರಕೆ ಇರುವುದು ನಮ್ಮೆಲ್ಲರ ತಲೆಯಲ್ಲೇ! ಆದರೆ ವೈಜ್ಞಾನಿಕ ಮನೋಭಾವ ಎಂಬ ಆ ಗುಡಿಸುವ ಪೊರಕೆಯನ್ನು ಕೈಗೆ ತೆಗೆದು­ಕೊಳ್ಳುವುದು, ವೈಜ್ಞಾನಿಕ ಮನೋಭಾವ ಎಂಬ ಆ್ಯಪ್ ಅನ್ನು ನಮ್ಮ ಬದುಕಿಗೆ ಡೌನ್ ಲೋಡ್ ಮಾಡಿಕೊಳ್ಳುವುದು ಕಡುಕಷ್ಟದ ಕೆಲಸ.

‘ಬದುಕು ನಶ್ವರ, ಜೀವನವೇ ಮಿಥ್ಯೆ, ಹಿಂದಿನ ಕರ್ಮ ಸವೆಸಲು ಈ ಜನ್ಮ ಎತ್ತಿದ್ದೇವೆ, ಸ್ವರ್ಗ­ದಲ್ಲಿದೆ ನಮ್ಮ ಮನೆ’ ಮುಂತಾದ ನೂರೆಂಟು ನೆಗೆಟಿವ್ ಆಲೋಚನೆಗಳ ನಡುವೆ ಇರುವಷ್ಟು ದಿನವೂ ಅಭದ್ರತೆಯಿಂದ ನರಳುವ ನಮ್ಮ ಜನ ನಮ್ಮ ಮನ, ‘ಜಾತಸ್ಯಂ ಮರಣಂ ಧ್ರುವಂ’ ಅಲ್ಲವೇ, ಅದರಿಂದ ‘ಇದಕಾರಂಜುವರು ಇದ­ಕಾರಳುಕುವರು’ ಎಂಬ ಪಾಸಿಟಿವ್ ನಿಲುವನ್ನು ತಳೆಯುವುದು ಹೇಗೆ? ಪಾಸಿಟಿವ್ ಆಲೋಚನೆ­ಗಳೆಂಬ ಎಣ್ಣೆಯಿಂದ ವಿಚಾರಶಕ್ತಿಯೆಂಬ ದೀಪ ಬೆಳಗಿದರೆ ಮೂಢನಂಬಿಕೆಯ ಕತ್ತಲು ಕರಗು­ತ್ತದೆ ಎಂಬುದನ್ನು ವ್ಯಕ್ತಿಗೆ ಅರ್ಥ ಮಾಡಿಸು­ವುದು ನಿಜಕ್ಕೂ ಸುಲಭವಲ್ಲ.

ಮೂಢನಂಬಿಕೆ­ಯನ್ನು ಗುಡಿಸಿ ಹಾಕಲು ವ್ಯಕ್ತಿಯ ಮನೋ­ಶಕ್ತಿಯೂ ಅಗತ್ಯ, ಜಾಗೃತಿ ಆಂದೋಲನಗಳ ಜನಶಕ್ತಿಯೂ ಅಗತ್ಯ, ಅಧಿಕಾರ ವ್ಯವಸ್ಥೆಯ ದಂಡಶಕ್ತಿಯೂ ಅತ್ಯಗತ್ಯ. ನಮ್ಮ ದೇಶ ಭಾರತದಲ್ಲಿ ವೈಜ್ಞಾನಿಕ ಪ್ರಗತಿಯೂ ಇದೆ ಮತ್ತು ಪರಂಪರಾಗತ ಮೂಢನಂಬಿಕೆ, ಕಂದಾಚಾರವೂ ಇದೆ, ಬೇರು­ಬಿಟ್ಟಿರುವ ಮೂಢನಂಬಿಕೆಗಳನ್ನು ರಾತ್ರೋರಾತ್ರಿ  ಕಿತ್ತೆಸೆಯಲು ಆಗುವುದಿಲ್ಲ ಎಂಬಂಥ ಮಾತು­ಗಳನ್ನು ವಿಜ್ಞಾನಿಗಳೇ ಹೇಳಿದ್ದಾರೆ ಸರಿ. ಆದರೆ, ಸತಿಪದ್ಧತಿ, ಅಸ್ಪೃಶ್ಯತೆ, ಬಾಲ್ಯವಿವಾಹ, ವರ­ದಕ್ಷಿಣೆ, ಅನಕ್ಷರತೆ ಮುಂತಾದ ಅನೇಕಾನೇಕ ಅನಿಷ್ಟಗಳನ್ನು ನಿವಾರಿಸಲು ಜನಾಂದೋಲನ ಮತ್ತು ಸರ್ಕಾರದ ಕಾನೂನು ಎರಡೂ ಪ್ರಭಾವ ಬೀರಲಿಲ್ಲವೇ? ಹೇಳಿಕೇಳಿ ಹುಸಿಯಾದ ಮೂಢ­ನಂಬಿಕೆ ಅವುಗಳಿಗೆ ಕ್ರಮೇಣ ಹೆದರದೇ ಇರುವು­ದಿಲ್ಲ.

ನಮ್ಮ ಮಕ್ಕಳಿಗೆ ವಿಚಾರಕ್ರಾಂತಿಗೆ ಆಹ್ವಾನ ಕೊಡುವುದು ನಮ್ಮ ಕರ್ತವ್ಯ– ಅದಕ್ಕೆ ಮೊದಲು ನಾವು ಅಂದರೆ ಜನ ಮತ್ತು ಸರ್ಕಾರ, ವಿಚಾರ­ಶಕ್ತಿಯಿಂದ ಸನ್ನದ್ಧಗೊಳ್ಳಬೇಕಷ್ಟೆ. ಆದರೆ ದಿಕ್ಕುಗಳ ಹೆಸರಿನಲ್ಲಿ ಅವೈಜ್ಞಾನಿಕ, ಅವೈಚಾರಿಕ ನಂಬಿಕೆ ಹರಡುವ ವಾಸ್ತುಶಾಸ್ತ್ರಕ್ಕೆ ಸಂಸ್ಥೆ ಆರಂಭಿಸಲು ಸರ್ಕಾರವೇ ಉತ್ಸಾಹ ತಳೆದು ದಿಕ್ಕು ತಪ್ಪಿದರೆ, ‘ಸೌರವ್ಯೂಹದಲ್ಲಿ, ಸೂರ್ಯನ ಸುತ್ತ ಭೂಮಿ ಸೇರಿ ಎಲ್ಲ ಗ್ರಹಗಳೂ ಸುತ್ತುತ್ತಲೇ ಇರುವುದರಿಂದ ಮತ್ತು ಭೂಮಿ ತನ್ನ ಅಕ್ಷದಲ್ಲೂ ಸುತ್ತುತ್ತಲೇ ಇರುವುದರಿಂದ ಬದಲಾಗುವ ದಿಕ್ಕುಗಳಿಗೆ ಅರ್ಥವೇ ಬೇರೆ’ ಎಂದು ಶಾಲಾ ಮಕ್ಕಳಿಗೆ ಅರ್ಥ ಮಾಡಿಸುವುದಾದರೂ ಹೇಗೆ?

‘ಮೂಢನಂಬಿಕೆಗೆ ವಿರೋಧ’ ಎಂಬ ಪದಗಳನ್ನು ಕೇಳಿದೊಡನೆ ಆಕಾಶ ಹರಿದು ಕೆಳಗೆ ಬೀಳು­ವುದೂ ಖಂಡಿತ; ಬೈಗುಳ, ಖಂಡನೆ, ಜಗಳ, ದ್ವೇಷ ಹೊಳೆಯಾಗಿ ಹರಿಯುವುದೂ ಖಚಿತ. ವೈಚಾರಿಕ ಮನೋಭಾವ ಹರಡಲು ಶ್ರಮಿಸಿದ ಚಳವಳಿಕಾರ ಡಾ. ನರೇಂದ್ರ ದಾಭೋಲ್ಕರ್ ಅಂಥವರ ಹತ್ಯೆ ಮಾಡಿದರೆ ಅಂಥ ಆಂದೋಲನ ಸಾಯುತ್ತದೆ ಅನ್ನುವ ಮೂಢನಂಬಿಕೆಯೂ ಪ್ರದರ್ಶಿತವಾಗಿದೆ.
ಅವೆಲ್ಲವನ್ನೂ ಮೀರಿ, ಮೂಢನಂಬಿಕೆಯ ಮೂಢಾರ್ಥಗಳಿರಲಿ, ಗೂಢಾರ್ಥಗಳನ್ನಾದರೂ ಅರಿಯುವ ಪ್ರಯತ್ನ ಮಾಡುವುದು ಅಗತ್ಯ.

ಮೊದಲಿಗೆ, ಮೂಢನಂಬಿಕೆ ಎಂಬ ಪದವನ್ನೇ ಗೊಂದಲದಲ್ಲಿ ಅದ್ದುವುದು, ಮೂಢನಂಬಿಕೆ– ಕಂದಾಚಾರವನ್ನು ಧಾರ್ಮಿಕ ಆಚರಣೆಗೆ ಸಮೀಕರಿಸುವುದನ್ನು ಬಿಡಿಸುವ ಪ್ರಯತ್ನ. ‘ಮೂಢನಂಬಿಕೆ ಬೇಡ, ಮೌಢ್ಯ ತೊಲಗಲಿ ’ ಎಂದೊಡನೆ ಅದನ್ನು ಧರ್ಮಕ್ಕೆ ವಿರೋಧ, ಧಾರ್ಮಿಕ ಆಚರಣೆಗೆ ಅಡಚಣೆ ಎಂದು ಕಿರಿಚುವುದು ಅರಚುವುದು ಸಾಮಾನ್ಯ. ಎಷ್ಟೋ ಧಾರ್ಮಿಕ ಆಚರಣೆಗಳು ಮತ್ತು ಮೂಢನಂಬಿಕೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿರಬಹುದು. ಆದರೆ ಇಂಥ ಕ್ಷುದ್ರ ಕರ್ಮಗಳನ್ನೇ ‘ಧರ್ಮ’ ಎಂದು ತಪ್ಪು ತಿಳಿದು ಅದರ ಉದಾತ್ತ ಮೌಲ್ಯ ಇಳಿಸುವುದು ಸರಿಯಲ್ಲ.

ಇನ್ನು ಹಲ್ಲಿ ಲೊಚಗುಟ್ಟುವುದನ್ನೂ ‘ಇದೇ ನಮ್ಮ ಸಂಸ್ಕೃತಿ, ಇದೇ ನಮ್ಮ ಸಭ್ಯತೆ’ ಎಂದು ಹಾಡಿ ಹೊಗಳುವುದುಂಟು. ಸಂಸ್ಕೃತಿ ಅನ್ನುವುದು ಇಷ್ಟು ಲೈಟಾದರೆ ಹೇಗೆ ಸ್ವಾಮಿ? ಇನ್ನು ಎರಡನೆಯದು ಮೂಢನಂಬಿಕೆ, ಕಂದಾ­ಚಾರ, ತರ್ಕಹೀನ ಆಚರಣೆಗಳು, ಧಾರ್ಮಿಕತೆ ಹೆಸರಿನ ಮೌಢ್ಯ ಇವೆಲ್ಲವೂ ಯಾರ ಹಿತಾಸಕ್ತಿ­ಗಳನ್ನು ರಕ್ಷಿಸುತ್ತವೆ ಎಂಬುದನ್ನು ಅರಿಯುವ ಪ್ರಯತ್ನ. ಎಲ್ಲ ಧರ್ಮ, ಜಾತಿ, ವರ್ಗಗಳಲ್ಲಿ ಎಲ್ಲ ದೇಶಗಳಲ್ಲಿ ಮೂಢನಂಬಿಕೆ ಸರ್ವವ್ಯಾಪಿ­ಯಾಗಿದ್ದರೂ ಅದನ್ನು ಬೇಕಾದ ವಿಚಾರಗಳಿಗೆ ಬಳಸಿಕೊಳ್ಳುವ ಶಕ್ತಿ ಅಲ್ಲಿನ ಕೆಲವರಿಗೆ ಮಾತ್ರ ಇರುತ್ತದೆ.

ಅದನ್ನು ಕೇವಲ ಹೊಟ್ಟೆಪಾಡಿಗೂ ಬಳಸಬಹುದು, ಶಕ್ತಿಸಂಗೋಪನೆಗೂ ಬಳಸ­ಬಹುದು– ಅದರ ಪೂರ್ಣ ನಿಯಂತ್ರಣ ಕೆಲವರ ಮುಷ್ಟಿಯಲ್ಲಿ ಇರುತ್ತದೆ, ಏಕೆಂದರೆ ಅತ್ಯಂತ ಸುಲಭವಾಗಿ ಒತ್ತೆ ಇಡಬಹುದಾದ ವಸ್ತು­ವೆಂದರೆ ತಲೆ ! ಸಣ್ಣಕಾಸಿಗಾಗಿ ಸಾಲಾವಳಿಗಳನ್ನು ಕೆಡಿಸಿದ, ದೊಡ್ಡಕಾಸಿಗಾಗಿ ದಿಕ್ಕುಗಳನ್ನು ಕೆಡಿಸಿದ, ಕವಡೆ ಬೀಸಿ ಬದುಕು ಬೀಳಿಸಿದ, ನವಗ್ರಹ­ಗಳಿರುವ ಜಾತಕಗಳನ್ನೇ ಮಾರಕಾಸ್ತ್ರ­ಗಳ­ನ್ನಾಗಿಸಿದ ಕೋಟ್ಯಂತರ ಉದಾಹರಣೆಗಳ ಮಾತು ಬಿಡಿ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬಹುಪಾಲು ಜನರ ಬಾಯಿ ಮುಚ್ಚಲು ಅವರ ತಲೆಗೆ ಮೂಢನಂಬಿಕೆ ಎಂಬ ವೈರಸ್ ಸೋಂಕಿಸಿ­ದರೆ ಸಾಕು. ಇನ್ನು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಲು ಅದಕ್ಕಿಂತ ಬೇರಾವ ಅಸ್ತ್ರವೂ ಬೇಡ.

‘ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ಶೋಧನೆ– ಸುಧಾರಣೆಗಳ ಮನೋವೃತ್ತಿ­ಯನ್ನು ರೂಢಿಸಿಕೊಳ್ಳುವುದು ಭಾರತದ ಪ್ರತಿ­ಯೊಬ್ಬ ಪ್ರಜೆಯ ಕರ್ತವ್ಯವಾಗಿರುತ್ತದೆ’ ಎಂದು ನಮ್ಮ ದೇಶದ ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಜನರ ಬದುಕಿಗೆ ಹಾನಿ ಮಾಡುವ ಮೂಢನಂಬಿಕೆ ಆಚರಣೆಗಳನ್ನು ನಿಷೇಧಿಸುವುದು ಅಥವಾ ಪ್ರತಿಬಂಧಿಸುವುದು ಅದರ ಮುಖ್ಯ ಆಶಯ. ಈ ಕರ್ತವ್ಯಪಾಲನೆ ಪ್ರತಿಯೊಬ್ಬರ, ಪ್ರತಿಯೊಂದು ಸರ್ಕಾರದ ಹೊಣೆ.

ಜಾರ್ಖಂಡ್, ಬಿಹಾರ, ಛತ್ತೀಸಗಡ, ಮಹಾರಾಷ್ಟ್ರ ಮುಂತಾದ ರಾಜ್ಯಗಳು ಮೂಢನಂಬಿಕೆ ಆಚರಣೆಗಳನ್ನು ಪ್ರತಿಬಂಧಿಸುವ ಕಾನೂನುಗಳನ್ನು ಜಾರಿ­ಮಾಡಿವೆ. ಅವುಗಳನ್ನು ಕುರಿತು ವ್ಯಾಪಕ ಜಾಗೃತಿ ಮತ್ತು ಕಟ್ಟುನಿಟ್ಟಿನ ಜಾರಿ ಆಗಬೇಕಿದೆ. ಕಾನೂನು ಜಾರಿ ಮಾಡಿದೊಡನೆ ಮೂಢನಂಬಿಕೆ ತೊಲಗಿಬಿಡುತ್ತದೆ ಎಂಬ ಮೂಢನಂಬಿಕೆ ವಿಚಾರವಾದಿಗಳಿಗೆ ಇಲ್ಲ. ಇದೀಗ ನಮ್ಮ ರಾಜ್ಯದಲ್ಲಿ ’ವೈಜ್ಞಾನಿಕ ಮನೋವೃತ್ತಿ’ ಬೆಳೆಸುವ ಆಂದೋಲನದ ಮತ್ತೊಂದು ಪ್ರಯತ್ನ ನಡೆದಿದೆ.

ಬೆಳಗಾವಿಯ ಸ್ಮಶಾನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮೌಢ್ಯದ ಅಂತ್ಯಸಂಸ್ಕಾರ ನಡೆಸಿ ಒಂದು ಸಂದೇಶ ಕೊಟ್ಟಿದ್ದಾರೆ. ಆದರೆ ಅಧಿವೇಶನದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರ ಆಲೋಚಿಸಿದ್ದ ’ಮೂಢನಂಬಿಕೆ – ಕಂದಾಚಾರ ಪ್ರತಿಬಂಧಕ ಮಸೂದೆ’ಯ ಮಂಡನೆಗೆ ಯಾವ ಬೆಕ್ಕು ಅಡ್ಡ ಬಂತು !?
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.