ADVERTISEMENT

ಅಧಿಕಾರದ ಅಹಂಕಾರ

ಡಾ. ಗುರುರಾಜ ಕರಜಗಿ
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ಗೋಧಿ ಬೆಳೆದು ನಿಂತಿತ್ತು. ಆ ಬಂಗಾರ ಬಣ್ಣದ ಬೆಳೆ ಗಾಳಿಗೆ ಅಲ್ಲಾ­ಡು­ವುದನ್ನು ನೋಡುವುದೇ ಸೊಗಸು.  ಹೊಲದ ಯಜಮಾನ ಬದು­ವಿನ ಮೇಲೆ ಕುಳಿತಿದ್ದ. ಯಾವಾಗ ಕಟಾವು ಮಾಡಬೇಕು ಮತ್ತು ಅದಕ್ಕೆ ಯಂತ್ರ­ವನ್ನು, ಜನರನ್ನು ಕರೆಯಬೇಕಲ್ಲ ಎಂದು ಚಿಂತಿಸುತ್ತಿದ್ದ. ಆಗ ರಸ್ತೆಯ ಮೇಲೊಂದು ಕಾರು ಬಂದು ನಿಂತಿತು. ಒಬ್ಬ ತರುಣ ಕೆಳಗಿಳಿದ. ಅವನ ವೇಷ­ಭೂಷಣ ನೋಡಿದರೆ ಅಧಿಕಾರಿ­ಯಂತೆ ತೋರುತ್ತಿದ್ದ. ಅವನ ಠೀವಿಯೂ ಜೋರಾ­ಗಿತ್ತು. ಆತ ಈ ಯಜಮಾನ ಹತ್ತಿರ ಬಂದ. ಧಿಮಾಕಿನಿಂದಲೇ ಮಾತ­ನಾಡಿ­ಸಿದ, ‘ಏನಯ್ಯಾ, ನೀನೇ ಏನು ಈ ಹೊಲದ ಮಾಲಿಕ?’. ಈತ ಎದ್ದು ನಿಂತು ವಿನಯದಿಂದಲೇ ಹೇಳಿದ, ‘ಹೌದು ಸ್ವಾಮಿ, ಈ ಹೊಲ ನನ್ನದೇ’. ಆ ತರುಣ ಬಿರು­ಸಾಗಿ ಹೇಳಿದ, ‘ನಾನು ನಿನ್ನ ಹೊಲದ ಪರೀಕ್ಷೆ ಮಾಡಬೇಕು.  ನೀನು ಗೋಧಿಯ ನಡುವೆ ಮಾದಕ ವಸ್ತುಗಳ ಬೆಳೆಯನ್ನು ಬೆಳೆದಿದ್ದೀ ಎಂದು ತಕರಾರು ಬಂದಿದೆ’. ಯಜಮಾನ, ‘ಸ್ವಾಮಿ, ನಾವು ತಲೆತಲಾಂತರದಿಂದ ಗೋಧಿ ಬೆಳೆಯು­ವ­­ವರು. ನಮಗೆ ಬೇರೆ ಯಾವುದನ್ನೂ ಬೆಳೆದು ಗೊತ್ತಿಲ್ಲ. ಅದಲ್ಲದೇ ಅಂತಹ ಕೆಟ್ಟ ವಸ್ತುಗಳನ್ನು ನಾವೇಕೆ ಬೆಳೆಯೋಣ?’ ಎಂದ. ಅಧಿಕಾರಿಗೆ ಕೋಪ ಬಂದಿತು.

‘ಬಾಯಿ ಮುಚ್ಚಿಕೊಂಡು ನಿಂತುಕೊ. ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡು. ನನಗೆ ಹೊಲ ಪರೀಕ್ಷೆ ಮಾಡುವ ಅಧಿಕಾರವಿದೆ’ ಎಂದ ಅಧಿಕಾರಿ. ‘ಹಾಗೇ ಆಗಲಿ ಸ್ವಾಮಿ, ಪರೀಕ್ಷೆ ಮಾಡಿ. ಆದರೆ ಬದುವಿನ ಆಚೆ ಇರುವ ಹೊಲಕ್ಕೆ ಮಾತ್ರ ಕಾಲಿ­ಡ­ಬೇಡಿ’ ಎಂದ ಯಜಮಾನ. ಅಧಿಕಾರಿಯ ಮೂಗು ಮೇಲಕ್ಕೇರಿತು. ಆಹಾ! ಆ ಕಡೆಗೇ ಇರಬೇಕು ಆ ಮಾದಕವಸ್ತುಗಳ ಬೆಳೆ ಎಂದುಕೊಂಡ. ಧ್ವನಿ ಏರಿಸಿ ಹೇಳಿದ, ‘ಏ, ನಾನು ಯಾರು ಎಂದುಕೊಂಡಿದ್ದೀ? ನನಗೆ ಯಾವ ಹೊಲವನ್ನಾ­ದರೂ ತಪಾಸಣೆ ಮಾಡುವ ಅಧಿಕಾರವಿದೆ. ಇದೋ ನೋಡು ನನ್ನ ಬ್ಯಾಜು’ ಎಂದು ಜೇಬಿನಿಂದ ಹೊಳೆಹೊಳೆಯುವ ಬ್ಯಾಜ್‌ನ್ನು ತೋರಿಸಿದ. ಯಜಮಾನ ಸುಮ್ಮನಾದ.

ಅಧಿಕಾರಿ ನೇರವಾಗಿ ಬದುವಿನ ಆ ಬದಿಗಿದ್ದ ಹೊಲಕ್ಕೇ ಹೋದ.  ಯಜ­ಮಾನ ಈ ಕಡೆಗೆ ಕುಳಿತೇ ಇದ್ದ. ಐದಾರು ನಿಮಿಷಗಳಲ್ಲಿ ಭಯಂಕರ-­ವಾದ ಹುಯಿಲು ಕೇಳಿಸಿತು. ಯಜಮಾನ ತಲೆ ಎತ್ತಿ ನೋಡಿದ. ತರುಣ ಅಧಿಕಾರಿ, ಹೌಹಾರಿ, ಕೂಗುತ್ತ, ಅರಚುತ್ತಾ ಓಡಿ ಬರುತ್ತಿದ್ದಾನೆ. ಅವನ ಮುಖ ನೋಡು­ವಂತಿಲ್ಲ, ಕಣ್ಣುಗಳು ಕಿತ್ತು ಹೊರಬರುವಂತೆ ಕಾಣುತ್ತ್ತಿವೆ. ‘ಪಾರು ಮಾಡಿ, ಪಾರು ಮಾಡಿ’ ಎಂದು ಕೂಗುತ್ತಿದ್ದಾನೆ, ಯಜಮಾನನ ಕಡೆಗೆ ಕೈ ಮಾಡುತ್ತಿ­ದ್ದಾನೆ. ಅವನ ಹಿಂದೆಯೇ ಯಜಮಾನನ ಭಾರಿ  ಹೋರಿ  ಹೂಂಕರಿಸಿ ಬೆನ್ನು ಹತ್ತಿದೆ. ಅಧಿಕಾರಿಯ ಪ್ರತಿಯೊಂದು ಹೆಜ್ಜೆಗೂ ಅವರಿಬ್ಬರ ನಡುವಿನ ಅಂತರ ಕಡಿಮೆ­ಯಾಗುತ್ತಿದೆ. ಯಾವುದೇ ಕ್ಷಣದಲ್ಲಿ ಅದು ತನ್ನ ಭಯಂಕರವಾದ ಕೋಡು­­­ಗಳಿಂದ ಅವನನ್ನು ತಿವಿದು ಕೆಡವಿಬಿಡಬಹುದು. ಬರೀ ಕೆಡವುತ್ತದೆಯೋ? ಇವನನ್ನು ತುಳಿದು, ಇರಿದು ಚಿಂದಿ ಮಾಡಿ ಬಿಡುತ್ತದೆ.

ಅಧಿಕಾರಿ ಮತ್ತೆ ಕೂಗಿದ, ‘ಅಯ್ಯಾ ಯಜಮಾನ, ನಿನ್ನ ಹೋರಿಯನ್ನು ಹಿಡಿದುಕೋ, ಬೇಗ ಬೇಗ ಇಲ್ಲವೇ ಅದು ನನ್ನನ್ನು ಕೊಂದೇ ಬಿಡುತ್ತದೆ’. ಯಜಮಾನ ತನ್ನ ಕೈಯಲ್ಲಿದ್ದ ಕುಡು­ಗೋ­­ಲನ್ನು ನೆಲಕ್ಕೆಸೆದು ನಿಧಾನವಾಗಿ ಎದ್ದು ನಿಂತು ಹೇಳಿದ, ‘ಭಯಬೇಡ, ನಿಮ್ಮ ಬ್ಯಾಜ್ ಇದೆಯಲ್ಲ, ಅದನ್ನು ತೋರಿಸಿ ಹೋರಿಗೆ. ಪಾಪ! ಅದಕ್ಕೆ ನೀವಾರು ಎಂಬುದು ಗೊತ್ತಿಲ್ಲ’ ನಂತರ ಹೋರಿಯನ್ನು ಹಿಡಿದು ಕಟ್ಟಿದ. ನಮ್ಮ ಅಧಿಕಾರ­ವನ್ನು ಎಲ್ಲೆಲ್ಲಿಯೋ ಚಲಾವಣೆ ಮಾಡುವುದು ಮೂರ್ಖತನ. ಅಧಿಕಾರದ ಜೊತೆಗೆ ಅಹಂಕಾರ ಸೇರಿದರಂತೂ ಬಲು ಬೇಗನೇ ಮೂಗು ಕೊಯ್ಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.