ADVERTISEMENT

ಅನಪೇಕ್ಷಿತ ಉತ್ತರ

ಡಾ. ಗುರುರಾಜ ಕರಜಗಿ
Published 11 ಫೆಬ್ರುವರಿ 2013, 19:59 IST
Last Updated 11 ಫೆಬ್ರುವರಿ 2013, 19:59 IST

ಎರಡನೇ ತರಗತಿಯ ಗಣಿತದ ಪಾಠ ನಡೆಯುತ್ತಿತ್ತು. ಕೂಡುವ ಲೆಕ್ಕವನ್ನು ಶಿಕ್ಷಕಿ ಹೇಳಿಕೊಡುತ್ತಿದ್ದರು. ಚಿನ್ನ ತುಂಬ ಚೂಟಿಯಾದ ಹುಡುಗ, ಆದರೆ ತುಂಬ ಚಂಚಲವಾದ ಮನಸ್ಸು. ಅವನಿಗೆ ಕೂಡುವ ಲೆಕ್ಕ ತಿಳಿಸಲು ಅವರು ಶ್ರಮಿಸುತ್ತಿದ್ದರು. ಅವರು ಚಿನ್ನನ ಹತ್ತಿರ ಬಂದು, `ಚಿನ್ನ, ನಿನಗೊಂದು ಸುಂದರವಾದ ಸಮಸ್ಯೆ  ಹೇಳುತ್ತೇನೆ. ನಿಧಾನವಾಗಿ, ಯೋಚಿಸಿ ಉತ್ತರ ಹೇಳುತ್ತೀಯಾ'  ಎಂದು ಕೇಳಿದರು. ಅವನೂ ಉತ್ಸಾಹದಿಂದ ಆಗಲಿ ಎಂದು ತಲೆ ಅಲ್ಲಾಡಿಸಿದ. ಶಿಕ್ಷಕಿ ನಿಧಾನವಾಗಿ ಕೇಳಿದರು,  `ಚಿನ್ನ, ನಿನಗೆ ಒಂದು ಸೇಬುಹಣ್ಣು, ಮತ್ತೊಂದು ಸೇಬುಹಣ್ಣು, ಇನ್ನೊಂದು ಸೇಬುಹಣ್ಣು ಕೊಟ್ಟರೆ ನಿನ್ನ ಕಡೆಗೆ ಎಷ್ಟು ಸೇಬುಹಣ್ಣು ಇದ್ದಂತಾಯಿತು'  ಚಿನ್ನ ತಕ್ಷಣ ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದ, `ನಾಲ್ಕು'. ಶಿಕ್ಷಕಿಗೆ ಮುಖ ಬಿದ್ದು ಹೋಯಿತು. ಇಷ್ಟು ಸುಲಭವಾದ ಪ್ರಶ್ನೆಗೆ ಸರಿಯಾದ ಉತ್ತರ ಬರಲಿಲ್ಲವಲ್ಲ ಎಂದುಕೊಂಡರು. ಬಹುಶಃ ಆತನಿಗೆ ಪ್ರಶ್ನೆ ಸರಿಯಾಗಿ ಅರ್ಥವಾಗಿರಲಿಕ್ಕಿಲ್ಲ ಎಂದುಕೊಂಡು ಮತ್ತೆ ಮುಖದ ಮೇಲೆ ನಗೆ ತಂದುಕೊಂಡು ಕೇಳಿದರು,  `ಚಿನ್ನ ಈಗ ಸರಿಯಾಗಿ ಕೇಳಿಸಿಕೋ. ನಾನು ನಿನಗೆ ಒಂದು ಸೇಬುಹಣ್ಣು ಕೊಡುತ್ತೇನೆ.

ಆನಂತರ ಮತ್ತೊಂದು ಸೇಬುಹಣ್ಣು ನೀಡುತ್ತೇನೆ. ಆಮೇಲೆ ಇನ್ನೊಂದು ಸೇಬುಹಣ್ಣು ನಿನ್ನ ಕೈಗೆ ಬರುತ್ತದೆ. ಈಗ ನಿನ್ನ ಹತ್ತಿರ ಒಟ್ಟು ಸೇಬುಹಣ್ಣುಗಳು ಇದ್ದಂತಾಯಿತು'. ಚಿನ್ನ ಆಗಲೇ ಶಿಕ್ಷಕಿ ನಿರಾಸೆಯಾದದ್ದನ್ನು ಕಂಡಿದ್ದ. ಅವರು ಮೆಚ್ಚುವ, ಸಂತೋಷಪಡುವ ಉತ್ತರವನ್ನೇ ಕೊಡಬೇಕು ಎಂದುಕೊಂಡ. ತನ್ನ ಪುಟ್ಟ ಬೆರಳುಗಳನ್ನು ಮಡಚಿ, ಮಡಚಿ ಲೆಕ್ಕ ಹಾಕಿದ. ಶಿಕ್ಷಕಿ ನಗುಮೊಗದಿಂದ ಕಾಯುತ್ತಲೇ ಇದ್ದರು. ತಕ್ಷಣ ಚಿನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿ ಸಂತೋಷದಿಂದ ಫೋಷಿಸಿಬಿಟ್ಟ  `ನಾಲ್ಕು ಮಿಸ್'. ಮತ್ತೆ ಶಿಕ್ಷಕಿಯ ಮುಖದ ಮೇಲೆ ಮೋಡ ಮುಸುಕಿತು. ಛೇ ಎಂಥ ದಡ್ಡ ಈ ಚಿನ್ನ. ಇಷ್ಟು ಸುಲಭದ ಪ್ರಶ್ನೆಗೆ ಉತ್ತರ ಸರಿಯಾಗಿ ನೀಡದೆ ಹೋದರೆ ಇವನಿಗೆ ಗಣಿತ ಹೇಗೆ ಬಂದೀತು ಎಂದು ಚಿಂತಿಸಿದರು.


ಅವರು ಕ್ಷಣಕಾಲ ಯೋಚಿಸಿದರು. ತಮ್ಮ ಪ್ರಶ್ನೆಯನ್ನೇ ಮತ್ತೆ ಬದಲಿಸಿ ಕೇಳಿದರೆ ಸರಿ ಎಂದುಕೊಂಡರು. ಆಗ ಅವರಿಗೆ ನೆನಪಾಯಿತು, ಚಿನ್ನನಿಗೆ ಮಾವಿನ ಹಣ್ಣೆಂದರೆ ಬಲುಪ್ರೀತಿ. ಅದಲ್ಲದೇ ಇದು ಮಾವಿನಹಣ್ಣಿನ ಕಾಲವೂ ಹೌದು. ತಕ್ಷಣ ಮುಖದ ಮೇಲೆಲ್ಲ ನಗುವನ್ನು ಸಾರಿಸಿಕೊಂಡು ಚಿನ್ನನನ್ನೇ ನೋಡುತ್ತ ಕೇಳಿದರು,  `ಚಿನ್ನ, ಈ ಪ್ರಶ್ನೆ ಹೇಗಿದೆ ನೋಡು. ನಾನು ನಿನ್ನ ಕೈಯಲ್ಲಿ ಒಂದು ಮಾವಿನಹಣ್ಣು ಕೊಡುತ್ತೇನೆ. ಆಮೇಲೆ ಮತ್ತೊಂದು ಮಾವಿನಹಣ್ಣು ನೀಡುತ್ತೇನೆ. ಸ್ವಲ್ಪ ಕಾಲದ ನಂತರ ಇನ್ನೊಂದು ಮಾವಿನಹಣ್ಣು ಕೊಡುತ್ತೇನೆ.

ಈಗ ನಿನ್ನ ಹತ್ತಿರ ಒಟ್ಟು ಎಷ್ಟು ಮಾವಿನಹಣ್ಣು ಇದ್ದಂತಾಯಿತು ಯೋಚಿಸಿ ಹೇಳು'. ಚಿನ್ನ ಮತ್ತೆ ಬೆರಳು ಮಡಚಿದ. ಶಿಕ್ಷಕಿಯ ಮುಖ ನೋಡಿದ. ನಂತರ ಸ್ವಲ್ಪ ಹೆದರುತ್ತ ಹೇಳಿದ, `ಮೂರು ಮಿಸ್'. ಶಿಕ್ಷಕಿಗೆ ಯುದ್ಧ ಗೆದ್ದಷ್ಟು ಸಂತೋಷವಾಯಿತು. ಅಂತೂ ಚಿನ್ನನಿಗೆ ಕೂಡುವ ಲೆಕ್ಕ ಬಂದಿತು ಎನ್ನಿಸಿತು. ಆದರೂ ಅನುಮಾನ ಪರಿಹಾರಕ್ಕೆ,  `ಚಿನ್ನ, ಈಗ ಮತ್ತೊಮ್ಮೆ ಹೇಳು. ನಿನಗೆ ಒಂದು ಸೇಬುಹಣ್ಣು, ನಂತರ ಮತ್ತೊಂದು ಅನಂತರ ಇನ್ನೊಂದು ಸೇಬುಹಣ್ಣು ಕೊಟ್ಟರೆ ನಿನ್ನ ಕಡೆಗೆ ಎಷ್ಟು ಸೇಬುಹಣ್ಣು ಇದ್ದಂತಾಯಿತು'  ಎಂದು ಕೇಳಿದರು. ತಕ್ಷಣ ಚಿನ್ನ ಕೂಗಿದ,  `ನಾಲ್ಕು'. ಶಿಕ್ಷಕಿಗೆ ತಲೆಕೆಟ್ಟುಹೋಯಿತು.  `ಏ ದಡ್ಡ, ಇದೀಗ ಮೂರು ಮಾವಿನಹಣ್ಣು ಎಂದು ಸರಿಯಾದ ಉತ್ತರಕೊಟ್ಟೆ. ಸೇಬುಹಣ್ಣು ಎಂದು ಕೇಳಿದಾಗ ನಾಲ್ಕು ಎಂದು ಏಕೆ ತಪ್ಪು ಉತ್ತರಕೊಟ್ಟೆ'  ಎಂದು ಕೇಳಿದರು.

ಆಗ ಚಿನ್ನ ಮುದ್ದಾಗಿ ನಕ್ಕುಬಿಟ್ಟ. `ಹೌದು ಮಿಸ್. ಮಾವಿನಹಣ್ಣು ಮೂರೇ ಆದರೆ ಸೇಬುಹಣ್ಣು ನಾಲ್ಕು, ಯಾಕೆಂದರೆ ನಾನು ಮನೆಯಿಂದ ಒಂದು ಸೇಬುಹಣ್ಣು ತಂದಿದ್ದೀನಲ್ಲ'  ಎಂದು ಚೀಲದಿಂದ ತೆಗೆದು ತೋರಿಸಿದ.  ನಮ್ಮ ಪ್ರಶ್ನೆಗಳಿಗೆ ಜನ ತಪ್ಪು ಉತ್ತರ ಕೊಡುತ್ತಾರೆಂದು ಬೇಜಾರು ಮಾಡಿಕೊಳ್ಳಬಾರದು. ನಾವು ಅಪೇಕ್ಷೆ ಮಾಡಿದ ಉತ್ತರ ಬರಲಿಲ್ಲವೆಂದು ಕೋಪ ಮಾಡಿಕೊಳ್ಳುವುದೂ ಸರಿಯಲ್ಲ. ಏಕೆಂದರೆ ಅವರು ಪ್ರಶ್ನೆ  ನೋಡಿದ ರೀತಿ, ಅವರ ಅನುಭವದ ಹಿನ್ನೆಲೆಯೇ ಬೇರೆಯಾಗಿರಬಹುದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.