ADVERTISEMENT

ಆನೆಯ ನಡೆ ಬದಲಿಸಿದ ಮಾತು

ಡಾ. ಗುರುರಾಜ ಕರಜಗಿ
Published 8 ಏಪ್ರಿಲ್ 2014, 19:30 IST
Last Updated 8 ಏಪ್ರಿಲ್ 2014, 19:30 IST

​ಬುದ್ಧನ ಅನೇಕ ಜಾತಕ ಕಥೆಗಳಲ್ಲಿ ಇದೂ ಒಂದು. ಪಾಲಕರಿಗೆ, ಶಿಕ್ಷಕರಿಗೆ ಬಹು ಪ್ರಯೋಜನಕಾರಿಯಾಗ­ಬಹು­ದಾದ ಕಥೆ. ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಅವನ ಪ್ರಧಾನಿಯಾಗಿದ್ದ. ರಾಜ್ಯ ಸುಭಿಕ್ಷ­ವಾಗಿತ್ತು. ಆಗ ಬ್ರಹ್ಮದತ್ತನ ಪ್ರೀತಿಯ ಹಾಗೂ ಪಟ್ಟದ ಆನೆ ಮಾಂಗಲೀಕ. ಅದು ಸದಾಚಾರ ಸಂಪನ್ನವಾದ ಆನೆ. ಯಾರಿಗೂ ತೊಂದರೆ ಕೊಡುವಂಥದ್ದಲ್ಲ. ಪುಟ್ಟ ಮಕ್ಕಳು ಮುಂದೆ ಹೋಗಿ ನಿಂತರೂ ಸೊಂಡಿ­ಲ­ನ್ನೆತ್ತಿ ಅವರ ತಲೆಯ ಮೇಲಿರಿಸಿ ಪ್ರೀತಿ ತೋರಿಸುತ್ತಿತ್ತು.

ರಾಜ ಅದನ್ನೇರಿ ಹೊರ­ಟಾಗ ಮಂದಗತಿಯಲ್ಲಿ ನಡೆದು ರಾಜನಿಗೆ ಒಂದಿನಿತೂ ಕುಲು­ಕಾಟ­ವಾಗದ ಹಾಗೆ ನೋಡಿಕೊಳ್ಳು­ತ್ತಿತ್ತು. ಹೀಗಿದ್ದ ಶಾಂತ ಸ್ವಭಾವದ ಮಾಂಗಲೀಕ ಒಂದು ದಿನ ಅತ್ಯಂತ ವ್ಯಗ್ರವಾಯಿತು. ಅದಕ್ಕೆ ಸಮಾಧಾನ­ಮಾಡಲು ಹತ್ತಿರ ಬಂದ, ದಿನ­ನಿತ್ಯವೂ ತನ್ನನ್ನು ನೋಡಿಕೊಳ್ಳುತ್ತಿದ್ದ ಮಾವುತ­ನನ್ನು ಸೊಂಡಿಲಿನಲ್ಲಿ ಸುತ್ತಿ, ಮೇಲ­­ಕ್ಕೆತ್ತಿ, ನೆಲಕ್ಕಪ್ಪಳಿಸಿ ಕೊಂದು ಹಾಕಿತು. ಎಲ್ಲರೂ ಭೀತರಾದರು.

ಮಾಂಗ­ಲೀಕದ ಈ ಕೋಪವನ್ನು ಯಾರೂ ಕಂಡಿರಲಿಲ್ಲ. ಮರುದಿನ ಅದನ್ನು ಪಳಗಿಸಲು ಹೋದ ಮತ್ತೊಬ್ಬ ಮಾವುತನನ್ನೂ ತುಳಿದು­ ಕೊಂದಿತು. ಮಾಂಗಲೀಕದ ಹತ್ತಿರ ಹೋಗುವುದು ಸಾವಿನ ಬಾಗಿಲಿಗೆ ಹೋದಂತೆ ಎಂದು ಎಲ್ಲರೂ ಭಾವಿಸಿ ದೂರ ಉಳಿದರು. ರಾಜ ಬ್ರಹ್ಮದತ್ತನಿಗೆ ಚಿಂತೆಯಾಯಿತು. ಇಷ್ಟು ಶಾಂತ ಸ್ವಭಾವದ, ತಿಳಿ­ವಳಿಕೆಯುಳ್ಳ ಪಟ್ಟದಾನೆ ಹೀಗೆ ಒಮ್ಮೆಲೇ ಉಗ್ರವಾಗಲು ಕಾರಣ­ವೇನು? ಆಸ್ಥಾ­ನದ ಪ್ರಾಣಿವೈದ್ಯರನ್ನು ಕೇಳಿ ನೋಡಿದ. ಅವರಿಗೂ ಇದೊಂದು ಒಗಟಾ­ಗಿತ್ತು.

ಪರೀಕ್ಷೆ ಮಾಡಲು ಹತ್ತಿರವೂ ಹೋಗುವಂತಿಲ್ಲ. ಕೊನೆಗೆ ರಾಜ, ಬೋಧಿ­ಸತ್ವನಿಗೆ ಇದಕ್ಕೆ ಪರಿಹಾರವನ್ನು ಸೂಚಿಸಬೇಕೆಂದು ಕೇಳಿದ. ಬೋಧಿಸತ್ವ ಹೋಗಿ ಸರಪಳಿಗಳಿಂದ ಬಂಧಿತವಾದ ಮಾಂಗಲೀಕ­ವನ್ನು ನೋಡಿದ. ಅದರ ಕೆಂಪಾದ ಕಣ್ಣು­ಗಳಿಂದ ಕಿಡಿಗಳು ಹಾರುವಂತೆ ತೋರುತ್ತಿತ್ತು. ಅದು ಸರಪಳಿಗಳನ್ನು ಎಳೆ­ದಾಡುತ್ತ ಘೋರವಾಗಿ ಹೂಂಕರಿಸುತ್ತಿತ್ತು. ಬೋಧಿಸತ್ವ ಗಮನಿಸಿದ. ಮಾಂಗ­ಲೀಕ­­ವನ್ನು ಕಟ್ಟಿದ ಜಾಗೆ ಗಜ ಶಾಲೆಯ ಕೊನೆಯದು. ಅದರ ಹಿಂದೆ ಕಾಡಿನ ಪ್ರದೇಶ. ಈತ ನಡೆದು ಗಜಶಾಲೆಯ ಹಿಂದೆ ಹೋದ. ಅಲ್ಲಿ ಒಂದಿಷ್ಟು ಇದ್ದಿಲು, ಸೌದೆ, ಬಿಸಾಕಿದ ತಂಗಳು ಆಹಾರ ಕಂಡವು. ಇಲ್ಲಿ ಯಾರು ಬರುತ್ತಾರೆ ಎಂದು ಗಜ­ಶಾಲೆ­ಯವರನ್ನು ಕೇಳಿದ. ರಾತ್ರಿಯಾದ ಮೇಲೆ ಇಲ್ಲಿ ಯಾರೂ ಕಾವಲು­ಗಾರರು ಇಲ್ಲದಿರು­ವುದರಿಂದ ಮತ್ತಾರೂ ಬರುವುದು ಸಾಧ್ಯವಿಲ್ಲವೆಂದರು.

ಬೋಧಿಸತ್ವ ಆ ರಾತ್ರಿ ಮರೆಯಾಗಿ ಗಜಶಾಲೆಯ ಹಿಂದೆ ಕುಳಿತ. ರಾತ್ರಿ ಕೆಲವು ಕಳ್ಳರು ಅಲ್ಲಿಗೆ ಬಂದರು. ಅವರು ಕಳ್ಳತನ ಮಾಡಿದ ಪರಿಯನ್ನು ಜನರನ್ನು ಹೊಡೆದು ಪೀಡಿಸಿದ ರೀತಿಯನ್ನು ಹೇಳಿಕೊಂಡು ಚರ್ಚೆ ಮಾಡಿದರು. ಅವರು ಕುಳಿತ ಸ್ಥಳ ಮಾಂಗಲೀಕವನ್ನು ಕಟ್ಟಿ ಹಾಕಿದ ಭಾಗದ ಹಿಂದುಗಡೆಯೇ ಇತ್ತು. ಅವರು ಮಾತನಾಡುವುದನ್ನು ನೋಡಿದರೆ ಅಲ್ಲಿಗೆ ನಿತ್ಯ ಬರುತ್ತಿದ್ದಂತೆ ಕಂಡಿತು. ಬೋಧಿಸತ್ವ ಅವರನ್ನು ಹಿಡಿಸಿ ಹಾಕಿದ. ನಂತರ ಮರುದಿನದಿಂದ ಸಜ್ಜನರನ್ನು ಕರೆಸಿ ಸಾಧು ಜೀವನ ಹೇಗೆ ಶ್ರೇಷ್ಠ, ಕೋಪದಿಂದ ಯಾವ ಅನಾಹುತ­ಗಳಾ­ಗು­ತ್ತವೆ, ಹಿಂಸೆ ಕೆಟ್ಟದ್ದು ಎಂಬ ಬಗ್ಗೆ ಆನೆಗೆ ಕೇಳುವಂತೆ ಮಾತನಾಡುವಂತೆ ಕೇಳಿ­ಕೊಂಡ.

ಹದಿನೈದು ದಿನಗಳು ಹೀಗೆ ನಡೆದಾಗ ಮತ್ತೆ ಮಾಂಗಲೀಕದ ನಡೆ ಬದ­ಲಾಯಿತು, ಮೊದಲಿನ ಶಾಂತ ಸ್ವಭಾವ ಮರುಕಳಿಸಿತು. ಬೋಧಿಸತ್ವ ರಾಜನಿಗೆ ಹೇಳಿದ. ‘ಆನೆ ದಿನಾಲು ಅನ್ಯಾಯದ, ಅತ್ಯಾಚಾರದ, ಕ್ರೌರ್ಯದ ಮಾತು­ಗಳನ್ನು ಕೇಳಿ ಕೇಳಿ ತನ್ನ ಸ್ವಭಾವ­ವನ್ನೇ ಬದಲಿಸಿಕೊಂಡಿತು. ನಂತರ ಒಳ್ಳೆಯ ಮಾತುಗಳನ್ನು ಗಮನಿಸಿ, ಗಮನಿಸಿ ಮತ್ತೆ ಮೊದಲಿನಂತಾಯಿತು.

’ ಬ್ರಹ್ಮದತ್ತ ಮೆಚ್ಚಿದ. ದಿನನಿತ್ಯ ಕೇಳುವ ಮಾತು ಒಂದು ಆನೆಯ ಚರ್ಯೆಯನ್ನೇ ಬದಲಿಸ­ಬಹುದಾದರೆ ನಮ್ಮ ಮನೆಯ ಪುಟ್ಟ ಮಕ್ಕಳು ದಿನನಿತ್ಯ ನೋಡುವ, ಕೇಳುವ ಹಿಂಸೆಯ, ಭ್ರಷ್ಟತೆಯ, ಮಾತುಗಳು ಏನು ಪರಿಣಾಮ ಬೀರಿಯಾವು ಎಂಬು­ದನ್ನು ಊಹಿಸಬಹುದೇ? ನಮ್ಮ ಮಕ್ಕಳು ಸದಭಿರುಚಿಯವರಾಗಬೇಕೆಂದು ನಾವು ಬಯಸಿದರೆ ಅವರ ಮುಂದೆ ಸದಾಕಾಲ ಒಳ್ಳೆಯ, ಸದಭಿರುಚಿಯ ಮಾತು­ಗಳನ್ನೇ, ಸುಸಂಸ್ಕೃತಿಯ ನಡತೆಗಳನ್ನೇ ಪ್ರದರ್ಶಿಸುತ್ತಿರಬೇಕು. ಹಾಗಾ­ದಾಗ ಮುಂದೆ ಸುಸಂಸ್ಕೃತ ಸಮಾಜವನ್ನು ನಿರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.