ADVERTISEMENT

ನಂಬಿಕಸ್ಥ ಸ್ನೇಹಿತರು

ಡಾ. ಗುರುರಾಜ ಕರಜಗಿ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಇದು ಭೂತಾನದಲ್ಲಿ ತುಂಬ ಪ್ರಚಲಿತವಾದ ಕಥೆ. ಇದನ್ನು ಸಾಮಾನ್ಯ­ವಾಗಿ ಹಿರಿಯರು ಮಕ್ಕಳಿಗೆ ಹೇಳುತ್ತಾರೆ.
ದಟ್ಟ ಕಾಡಿನಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ಅನ್ಯೋನ್ಯವಾಗಿ ಬದುಕು­ತ್ತಿದ್ದವು. ಒಂದು ಮರದ ಮೇಲೆ ಒಂದು ಸುಂದರವಾದ ಗಿಳಿ ವಾಸವಾಗಿತ್ತು.

ಅದು ಬರೀ ಹಸಿರು ಬಣ್ಣದ್ದಲ್ಲ. ಅದರ ಗರಿಗಳಿಗೆ ಅನೇಕ ಬಣ್ಣಗಳು. ಅದರಷ್ಟು ಮುದ್ದಾದ ಪಕ್ಷಿ ಮತ್ತೊಂದಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಅದು ತುಂಬ ಬುದ್ಧಿವಂತ ಹಾಗೂ ಆಳವಾದ ಚಿಂತನೆ ಮಾಡುವ ಪಕ್ಷಿ. ಒಂದು ಬಾರಿ ಅದು ವಿಚಾರ ಮಾಡು­ತ್ತಿತ್ತು. ತಾನು ಗೂಡುಕಟ್ಟಿಕೊಂಡು ಬದುಕಿರುವ ಮರ ತುಂಬ ಹಳೆ­ಯ­ದಾ­ದದ್ದು. ಅದನ್ನು ಯಾರು ನೆಟ್ಟು ಬೆಳೆಸಿದರೋ ತಿಳಿಯದು. ಹಾಗೆಯೇ ಕಾಡಿ­ನ­ಲ್ಲಿರುವ ಪ್ರತಿಯೊಂದು ಮರಕ್ಕೂ ಒಂದು ಇತಿಹಾಸವಿದೆ. ನಾನು ಬರೀ ಮರದ ಪ್ರಯೋ­ಜನ ಪಡೆದಿದ್ದೇನೆ.

ಮುಂದೆ ಬರುವ ಸಮಾಜಕ್ಕೆ ನನ್ನದೊಂದಾದರೂ ಕೊಡುಗೆ ನೀಡದಿದ್ದರೆ ನಾನು ಕೃತಘ್ನನಾಗುವುದಿಲ್ಲವೇ? ಹೀಗೆ ಯೋಚಿಸಿ ತಾನೂ ಒಂದು ಮರವನ್ನು ನೆಟ್ಟು ಬೆಳೆಸುವುದಾಗಿ ತೀರ್ಮಾನಿಸಿತು. ಕಾಡಿನಲ್ಲೆಲ್ಲ ಹಾರಾಡಿ ಅತ್ಯಂತ ದೊಡ್ಡ ಮಧುರವಾದ ಹಣ್ಣಿನ ಮರದ ಶ್ರೇಷ್ಠ ಬೀಜವೊಂದನ್ನು ಆರಿಸಿ ತಂದಿತು.

ಕಾಡಿನ ಮುಂದಿನ ಪ್ರದೇಶದಲ್ಲಿ ಅದನ್ನು ಊರಬೇಕೆಂದುಕೊಂಡು ನೆಲ­ವನ್ನು ಕುಕ್ಕಿ ಕುಕ್ಕಿ ಅಗೆಯತೊಡಗಿತು. ಸ್ವಲ್ಪ ಆಳ ಅಗೆದೊಡನೆ ಅದರಲ್ಲಿ ಬೀಜವನ್ನಿಟ್ಟು ತನ್ನ ಚುಂಚಿನಿಂದ ಮತ್ತೆ ಮಣ್ಣನ್ನು ಮುಚ್ಚಿತು. ಆಗ ಅದಕ್ಕೊಂದು ಚಿಂತೆ ಪ್ರಾರಂಭ­ವಾಯಿತು. ಬೀಜ ಹಾಕಿದ್ದೇನೋ ಸರಿ, ಆದರೆ ಅದಕ್ಕೆ ಸರಿಯಾದ ಕಾಲಕ್ಕೆ ನೀರು ಹಾಕಿ ಬೆಳೆಸುವವರು ಯಾರು? ಆ ಹೊತ್ತಿಗೆ ಅಲ್ಲಿಗೆ ಉದ್ದ ಕಿವಿಯ, ಅಚ್ಚ ಬಿಳುಪು ಬಣ್ಣದ ಮೊಲ ಹಾರುತ್ತ ಬಂದಿತು.

ಏನು ಮಾಡುತ್ತಿದ್ದೀ ಎಂದು ಗಿಳಿಯನ್ನು ಕೇಳಿತು. ತನ್ನ ಉದ್ದೇಶವನ್ನು ಹೇಳಿ, ಸಮಸ್ಯೆಯನ್ನು ಮುಂದಿ­ರಿ­ಸಿತು ಗಿಳಿ. ಮೊಲ ಪಕಪಕನೇ ನಕ್ಕಿತು, ಅದಕ್ಕೇಕೆ ತಲೆಕೆಡಿಸಿಕೊಳ್ಳುತ್ತೀ, ನಾನಿ­ಲ್ಲವೇ? ನಾನು ಬಾಯಿಯಲ್ಲಿ ನೀರು ತುಂಬಿಕೊಂಡು ಬಂದು, ಇಲ್ಲಿ ಸುರುವಿ ಕಾಪಾ­ಡು­ತ್ತೇನೆ. ಯಾವ ಚಿಂತೆಯೂ ಬೇಡ ಎಂದು ತಕ್ಷಣವೇ ಎರಡೆರಡು ಬಾರಿ ಕುಣಿ­ಯುತ್ತ ಹೋಗಿ ನೀರು ತಂದು ಹಾಕಿತು. ಆಗ ಅಲ್ಲಿಗೆ ಒಂದು ಕೆಂಪು ಮುಸು­ಡಿಯ ಮಂಗ ಬಂದಿತು. ಇವರಿಬ್ಬರನ್ನೂ ಮಾತನಾಡಿಸಿ ವಿಷಯ ತಿಳಿದುಕೊಂ­ಡಿತು. ನಂತರ ಹೇಳಿತು, ಮರ ಬೆಳೆಸುವುದು ಸುಲಭವೇ? ಅದಕ್ಕೆ ಗೊಬ್ಬರ ಹಾಕ­ಬೇ­ಡವೇ? ಕಸ ತೆಗೆಯಬೇಡವೇ?. ಚಿಂತಿಸಬೇಡಿ, ಈ ಕೆಲಸವನ್ನು ಮಾಡಿ ಪುಣ್ಯ ಕಾರ್ಯ­ದಲ್ಲಿ ನಾನೂ ಭಾಗಿಯಾಗುತ್ತೇನೆ.

ಎರಡು ವಾರಗಳಲ್ಲಿ ಬೀಜ ಮೊಳೆತು, ಚಿಗುರೆದ್ದು, ನೆಲಸೀಳಿ, ತಲೆ ಮೇಲೆತ್ತಿ ಸಸಿ ನಕ್ಕಿತು. ಆಗ ಗಿಳಿ, ಮೊಲ ಮತ್ತು ಮಂಗಗಳಿಗೆ ಆತಂಕವಾಯಿತು. ಈ ಸಸಿ ತುಂಬ ನಾಜೂಕಾದದ್ದು. ಯಾವು­ದಾದರೂ ಪ್ರಾಣಿ ಅದನ್ನು ತುಳಿಯ­ಬಹುದು ಅಥವಾ ಅದನ್ನು ತಿಂದೇ ಬಿಡಬಹುದು. ತಾವು ಮೂವರೂ ಕೂಡ ಬಲಿಷ್ಠರಲ್ಲ. ಅದನ್ನು ಕಾಪಾಡು­ವುದು ಹೇಗೆ ಎಂದು ಚಿಂತಿಸುತ್ತಿರುವಾಗ ಅಲ್ಲಿಗೊಂದು ಭಾರಿ ಗಾತ್ರದ ಆನೆ ಬಂತು.

ಇವರ ಮಾತನ್ನು ಕೇಳಿಸಿ­ಕೊಂಡು, ನನ್ನ ಶಕ್ತಿ ಸಾಕೇನ್ರಪ್ಪಾ? ನಾನೇ ಇದರ ರಕ್ಷಣೆಗೆ ನಿಲ್ಲುತ್ತೇನೆ. ಯಾರು ಇದರ ಹತ್ತಿರ ಬರುತ್ತಾರೋ ನೋಡುತ್ತೇನೆ ಎಂದಿತು. ಈ ನಾಲ್ವರೂ ನಂಬಿಕಸ್ಥ ಪ್ರಾಣಿ ಪಕ್ಷಿಗಳು ಜೊತೆಯಾಗಿ ಕಣ್ಣಲ್ಲಿ ಕಣ್ಣಿಟ್ಟು ಸಸಿಯನ್ನು ಬೆಳೆಸಿದವು.

ಕೆಲವರ್ಷಗಳಲ್ಲಿ ಅದು ಹಣ್ಣುಗಳನ್ನು ತುಂಬಿಕೊಂಡ ಬೃಹತ್ ಮರವಾಯಿತು. ಆಗ ಆನೆ ಮರದ ಕೆಳಗೆ ನಿಂತಾಗ ಅದರ ಮೇಲೆ ಕೋತಿ ನಿಲ್ಲುತ್ತಿತ್ತು. ತುಂಬ ರುಚಿಯಾದ, ಹಣ್ಣಾದ ಫಲಗಳನ್ನು ರುಚಿ ನೋಡಿ ಗಿಳಿ ಕತ್ತರಿಸಿ ಕೋತಿಗೆ ನೀಡುತ್ತಿತ್ತು. ಅದು ಕೆಳಗಿದ್ದ ಮೊಲಕ್ಕೆ ರವಾನಿಸುತ್ತಿತ್ತು. ನಂತರ ನಾಲ್ವರೂ ಕೂಡಿ ಹಣ್ಣಿನ ರುಚಿ ನೋಡುತ್ತಿದ್ದರು. ಅದು ತಾವೇ ಹಾಕಿ ಬೆಳೆಸಿದ ಮರ ಎಂಬ ವಿಚಾರದಿಂದ ಹಣ್ಣು ಇನ್ನೂ ಹೆಚ್ಚು ರುಚಿಯಾಗಿ ತೋರುತ್ತಿದ್ದವು.

ಸಮಾಜ­ದಲ್ಲಿ ಹೀಗೆಯೇ ಆಗುತ್ತದೆ. ಯಾರೋ ದಾರ್ಶನಿಕರು ಒಂದು ಒಳ್ಳೆಯ ವಿಚಾರದ ಬೀಜಗಳನ್ನು ಜನಮಾನಸ­ದಲ್ಲಿ ಬಿತ್ತುತ್ತಾರೆ. ಯಾರೋ ಅವುಗಳಿಗೆ ಹೊಸವಿಚಾರದ ನೀರೆರೆದು ಪೋಷಿಸುತ್ತಾರೆ, ಮತ್ತೆ ಕೆಲವರು ತಮ್ಮ ಚಿಂತನೆಯ ಗೊಬ್ಬರ ಹಾಕಿ, ಕೀಳು ವಿಚಾರದ ಕಸವನ್ನು ತೆಗೆದು ಪುಷ್ಟಿಗೊ­ಳಿಸುತ್ತಾರೆ. ಇನ್ನೂ ಕೆಲವರು ಆ ಚಿಂತನೆ ಕೆಡದಂತೆ ರಕ್ಷಣೆ ನೀಡಿ ಕಾಪಾಡುತ್ತಾರೆ. ಹೀಗೆ ಹಲವರ ಕೃಪೆಯಲ್ಲಿ ಬೆಳೆದ ಚಿಂತನೆ ಒಂದು ಸಂಸ್ಕೃತಿಯಾಗಿ ಬೆಳೆದು ಸಮಾಜವನ್ನು ಶತಮಾನಗಳ ಕಾಲ ಕಾಪಾಡುತ್ತದೆ, ಅದಕ್ಕೆ ಮಾರ್ಗದರ್ಶನ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.