ADVERTISEMENT

ಬದುಕಿಗಾಗಿ ಹಣ

ಡಾ. ಗುರುರಾಜ ಕರಜಗಿ
Published 19 ಆಗಸ್ಟ್ 2014, 19:30 IST
Last Updated 19 ಆಗಸ್ಟ್ 2014, 19:30 IST

ಇದು ನಾನೆಲ್ಲೋ ಓದಿದ ಕಥೆ. ಒಂದು ಊರಿನಲ್ಲಿ ಒಬ್ಬ ಭಾರಿ ಜಿಪುಣನಿದ್ದ. ಅವನ ಹೆಸರೇನೋ ಸಂಪತ್ ಕುಮಾರ. ಅವನ ಜಿಪುಣತೆ ಇಡೀ ಊರಿನಲ್ಲಿ ಖ್ಯಾತಿ ಪಡೆದಿತ್ತು. ಆತನಿಗೆ ಯಾವುದಕ್ಕೂ ಹಣ ಖರ್ಚು­ಮಾಡಲು ಮನಸ್ಸು ಬಾರದು.  ಅವನು ತನ್ನ ಮನೆಯಲ್ಲಿ ಮನೆ ಮಂದಿಗೂ ಹೊಟ್ಟೆ ತುಂಬ ಊಟ ಮಾಡಲು ಬಿಡುತ್ತಿರಲಿಲ್ಲ. ‘ಇಷ್ಟು ಯಾಕೆ ತಿನ್ನುತ್ತೀರಿ? ಕಡಿಮೆ ಮಾಡಿ’ ಎನ್ನುತ್ತ ಎಲ್ಲರೂ ಬಹುತೇಕ ಉಪವಾಸ ಇರು­ವಂತೆ ನೋಡಿಕೊಳ್ಳುತ್ತಿದ್ದ.

ಒಂದು ದಿನ ಕೆಲಸದ ಮೇಲೆ ಪಕ್ಕದ ಊರಿಗೆ ಹೊರಟ. ಅವನು ಬಸ್ಸು, ರೈಲು ಯಾವುದರಲ್ಲಿಯೂ ಹೋಗುವವ­ನಲ್ಲ. ವೃಥಾ ಖರ್ಚು ಏಕೆ ಎಂದು ನಡೆದೇ ಹೋಗುತ್ತಿದ್ದ. ರಸ್ತೆಯ ಬದಿಯಲ್ಲೇ ಹೋಗುತ್ತಿದ್ದವನಿಗೆ ಅಡಿಕೆ ತೋಟ ಕಂಡಿತು. ಗೊನೆಗೊನೆಯಾಗಿ ನೇತಾಡು­ತ್ತಿದ್ದ ಅಡಿಕೆ ಫಸಲನ್ನು ಕಂಡು ಬಾಯಲ್ಲಿ ನೀರೂರಿತು. ಈಗ ಅಡಿಕೆಗೆ ಬಂಗಾರದ ಬೆಲೆ.  ಒಂದಿಷ್ಟು ಕಿತ್ತು ತುಂಬಿಕೊಂಡರೆ ಮನೆ ಬಳಕೆಗೂ ಆದೀತು ಮತ್ತು ಸಾಕಷ್ಟು ಹಣವೂ ದೊರಕೀತು ಎಂದು­ಕೊಂಡ. ಆಗ ತೋಟ ಕಾಯುವವರು ಯಾರೂ ಇರಲಿಲ್ಲ, ಇವನಿಗೆ ಮರ ಹತ್ತಿ ಗೊತ್ತಿಲ್ಲ, ಆದರೂ ಉಕ್ಕಿ ಬಂದ ಆಸೆ ಮರ ಹತ್ತಲು ಪ್ರೇರೇಪಿಸಿತು. ಮೇಲೆ ಅಡಿಕೆಯ ಗೊನೆಯನ್ನೇ ನೋಡುತ್ತ ಹೇಗೋ ಮೇಲೇರಿದ. ಶರ್ಟಿನ ಜೇಬಿನಲ್ಲಿ, ಏರಿಸಿ ಉಟ್ಟಿದ್ದ ಲುಂಗಿಯಲ್ಲಿ ಅಡಿಕೆಯನ್ನು ಕಿತ್ತು ತುಂಬಿಕೊಂಡ.

ನಂತರ ಕೆಳಗೆ ಬಗ್ಗಿ ನೋಡಿದಾಗ ಎದೆ ಝಲ್ಲೆಂದಿತು, ತಲೆ ತಿರುಗಿತು. ಸತ್ತೇ ಹೋಗುತ್ತೇನೆ ಎಂಬ ಭಯವಾಯಿತು. ತಕ್ಷಣವೇ ತನ್ನ ಕುಲದೇವರಾದ ಆಂಜನೇಯನ ನೆನಪಾಯಿತು. ‘ಅಪ್ಪಾ, ಹನುಮಂತಾ, ನನ್ನನ್ನು ಪಾರು ಮಾಡು. ನಿಧಾನಕ್ಕೆ ಕೆಳಗೆ ಇಳಿಸಿದರೆ ನಿನಗೆ ಬೆಣ್ಣೆ ಅಲಂಕಾರ ಮಾಡಿ ಸಾವಿರ ಜನಕ್ಕೆ ಊಟ ಹಾಕಿಸುತ್ತೇನೆ’ ಎಂದ. ಸ್ವಲ್ಪ ಧೈರ್ಯ ಬಂದಂತಾಯಿತು. ನಿಧಾನವಾಗಿ ಅರ್ಧ­ಮಟ್ಟಕ್ಕೆ ಇಳಿದ. ಆಮೇಲೆ ಎನ್ನಿಸಿತು, ತಾನು ಭಾವುಕನಾಗಿ ಸಾವಿರ ಜನಕ್ಕೆ ಊಟ ಹಾಕಿಸುತ್ತೇನೆ ಎನ್ನಬಾರ­ದಿತ್ತು. ಐದು ನೂರು ಜನಕ್ಕೆ ಹಾಕಿದರೆ ಸಾಕು ಎಂದುಕೊಂಡ. ಮತ್ತಷ್ಟು ಕೆಳಗೆ ಸರಿದ. ಆಮೇಲೆ ಐದು ನೂರು ಕೂಡ ತುಂಬ ಹೆಚ್ಚಾಯಿತು ಹತ್ತು ಜನಕ್ಕೆ ಹಾಕುತ್ತೇನೆ ಎಂದ.

ಕೊನೆಗೆ ನೆಲ ಮುಟ್ಟಿದ ಮೇಲೆ ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡುವುದು ತುಂಬ ಖರ್ಚಿನ ಬಾಬ್ತು. ಅಷ್ಟು ಬೆಣ್ಣೆ ಅವನೇನು ಮಾಡುತ್ತಾನೆ? ಬೆರಳ ತುದಿಗೆ ಹತ್ತುವಷ್ಟು ಬೆಣ್ಣೆಯನ್ನು ತೆಗೆದುಕೊಂಡು ವಿಗ್ರಹದ ಬಾಯಿಗೆ ಸವರಿದರಾ­ಯಿತು ಎಂದು ತೀರ್ಮಾನಿ­ಸಿದ. ಅದಲ್ಲದೇ ಹತ್ತು ಜನರಿಗೇಕೆ ಊಟ? ಒಬ್ಬರಿಗೆ ಹಾಕಿದರಾಯ್ತು. ಹೇಗಿದ್ದರೂ ತಾನೀಗ ನೆಲದ ಮೇಲಿ­ದ್ದೇನೆ, ಬೀಳುವ ಭಯ ದಾಟಿ ಹೋಗಿದೆ... ಹೀಗೆ ಯೋಚಿಸಿ ಊರಲ್ಲಿದ್ದ ತುಂಬ ತೆಳುವಾದ, ಅಶಕ್ತನಂತೆ ತೋರುವ ಕಿಟ್ಟಣ್ಣನನ್ನೇ ಕರೆದು ಊಟ ಹಾಕಿದರಾಯಿತು ಎಂದುಕೊಂಡು ಮಡದಿಗೆ ಹೇಳಿದ.

‘ನಾಳೆ ನಾನು ಊರಿನಲ್ಲಿರುವುದಿಲ್ಲ. ಆ ಕಿಟ್ಟಣ್ಣ ಊಟಕ್ಕೆ ಬರುತ್ತಾನೆ. ವಿಶೇಷ­ವೇನೂ ಮಾಡಬೇಡ.  ಬರೀ ಅನ್ನ, ನೀರು ಸಾರು ಮಾಡಿ ಎರಡು ತುತ್ತು ಹಾಕಿ ಕಳುಹಿಸು’ ಎಂದ. ಮರುದಿನ ಕಿಟ್ಟಣ್ಣ ಬಂದ.  ಅವನು ನೋಡುವುದಕ್ಕೆ ಬರಗಾಲ­ದಲ್ಲಿ ಒಣಗಿದ ಪ್ರಾಣಿಯಂತೆ ಕಂಡರೂ ಮೂರು ಸೇರು ಅಕ್ಕಿ ಅನ್ನ ಉಂಡ. ನಂತರ ಕಾಡಿ ಬೇಡಿ ಐದು ರೂಪಾಯಿ ದಕ್ಷಿಣೆ ತೆಗೆದು­ಕೊಂಡು ಹೋದ. ವಿಷಯ ತಿಳಿದು ಸಂಪತ್‌ಕುಮಾರ ಕೆಂಡವಾದ, ಕಿಟ್ಟಣ್ಣನ ಮನೆಯ ಕಡೆಗೆ ನುಗ್ಗಿದ.  ಇವನು ಬರುವುದನ್ನು ನೋಡಿ, ಇವನ ಸ್ವಭಾವ­ವನ್ನು ತಿಳಿದಿದ್ದ ಕಿಟ್ಟಣ್ಣ ಹೆಂಡತಿಗೆ ಏನೋ ಹೇಳಿ ಮುಸುಕೆಳೆದು ಮಲಗಿಬಿಟ್ಟ.

ಸಂಪತ್‌ಕುಮಾರ ಮನೆ­ಯೊಳಗೆ ಕಾಲಿಡುತ್ತಲೇ ಕಿಟ್ಟಣ್ಣನ ಹೆಂಡತಿ ಜೋರಾಗಿ ಅಳುತ್ತ, ‘ನಿಮ್ಮ ಮನೆಯಲ್ಲಿ ಅದಾವ ವಿಷ ಹಾಕಿಬಿಟ್ಟರೋ ತಿಳಿಯದು. ಆಸ್ಪತ್ರೆ ಸೇರಿಸಿದೆವು. ಅವರು ಏನೂ ಮಾಡಲಾಗುವುದಿಲ್ಲ ಎಂದು ಕಳಿಸಿಬಿಟ್ಟರು.  ನೀವು  ಸರಿಯಾದ ಸಮಯಕ್ಕೇ ಬಂದಿದ್ದೀರಿ. ಈಗ ಪೊಲೀಸರು ಬರುತ್ತಾರೆ ನಿಮ್ಮನ್ನು ಬಂಧಿಸಲು’ ಎಂದಳು. ಸಂಪತ್‌­ಕುಮಾರನ ಜೀವವೇ ಹಾರಿಹೋದಂತಾ­ಯಿತು. ಕಿಟ್ಟಣ್ಣನ ಹೆಂಡತಿಯನ್ನು ಸಮಾಧಾನಮಾಡಿ ಆಸ್ಪತ್ರೆಯ ಖರ್ಚು ಎಂದು ಆಕೆ ಹೇಳಿದಂತೆ ಸಾವಿರ ರೂಪಾಯಿ ಕೊಟ್ಟು ಮಂಗನಂತೆ ಮುಖ­ಮಾಡಿಕೊಂಡು ಮನೆಗೆ ಬಂದ. ಅಂದಿ­ನಿಂದ ಅಡಿಕೆ ತಿನ್ನುವುದನ್ನೇ ಬಿಟ್ಟನಂತೆ.

ದುಂದುವೆಚ್ಚ ಬೇಡ, ನಿಜ. ಆದರೆ ಜೀವ ಕೊರಗಿಸಿ ಉಳಿಸುವುದು ಬೇಡ.  ಹೆಚ್ಚಿನ ಜಿಪುಣತನ ನೀವು ಹೋದಮೇಲೆ ಉಳಿದವರಿಗೆ ನೀಡುವ ಬಳುವಳಿ. ಬದುಕಿಗಾಗಿ ಹಣ, ಆದರೆ ಹಣಕ್ಕಾಗಿ ಬದುಕಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.