ADVERTISEMENT

ಅಭಿವೃದ್ಧಿಗೆ ಅಧಿಕಾರಿಗಳಿಂದಲೇ ಅಡ್ಡಗಾಲು: ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:17 IST
Last Updated 27 ಮಾರ್ಚ್ 2017, 20:17 IST
ಅಭಿವೃದ್ಧಿಗೆ ಅಧಿಕಾರಿಗಳಿಂದಲೇ ಅಡ್ಡಗಾಲು: ಆರೋಪ
ಅಭಿವೃದ್ಧಿಗೆ ಅಧಿಕಾರಿಗಳಿಂದಲೇ ಅಡ್ಡಗಾಲು: ಆರೋಪ   

ಬೆಂಗಳೂರು: ತಲಘಟ್ಟಪುರ ಸಮೀಪದ ತಟ್ಟಗುಪ್ಪೆ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯ ಜಯನಗರ ವಿಭಾಗದ ಎಂಜಿನಿಯರ್‌ಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಗ್ಗಲಿಪುರದ ಕ್ರೈಸ್ಟ್‌ ಶಾಲೆಯ ಪ್ರಾಂಶುಪಾಲ ಫಾದರ್‌ ಎ. ಥಾಮಸ್‌ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಆದರೆ ಈ ಆರೋಪವನ್ನು ಇಲಾಖೆಯ ಎಂಜಿನಿಯರ್‌ಗಳು ತಳ್ಳಿ ಹಾಕಿದ್ದಾರೆ.

‘ಮೈಸೂರು ಮಹಾರಾಜರ ಕಾಲದಲ್ಲಿ ಈ ಕೆರೆ ನಿರ್ಮಾಣವಾಗಿತ್ತು. 111 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. 25 ವರ್ಷಗಳ ಹಿಂದೆ ಕೆರೆ ಸ್ಥಿತಿ ದಯನೀಯವಾಗಿತ್ತು. ಸ್ಥಳೀಯರ ಸಹಕಾರದಿಂದ 1993ರಲ್ಲಿ ಹೂಳೆತ್ತಲು ಆರಂಭಿಸಿದೆ. ಪ್ರತಿವರ್ಷ 15 ದಿನ ಈ ಕಾಮಗಾರಿ ಮಾಡುತ್ತೇವೆ. ಆದರೆ, ಈ ವರ್ಷ ಮಾತ್ರ ಅಧಿಕಾರಿಗಳಿಂದಲೇ ಸಮಸ್ಯೆ ಎದುರಾಗಿದೆ’ ಎಂದು ಫಾದರ್‌ ಥಾಮಸ್‌ ಆರೋಪಿಸಿದರು.

‘ಕೆರೆಯ ಏರಿ ಮೇಲೆ ಒಂದು ವಾಹನ ಹೋಗುವುದಕ್ಕೂ ಸ್ಥಳಾವಕಾಶ ಇರಲಿಲ್ಲ. ಈಗ ಮೂರು ವಾಹನಗಳು ಸಾಗಬಹುದು. ಇದು ನಮ್ಮ ಶ್ರಮದ ಫಲ. 12 ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಯಂತ್ರ ಹಾಗೂ 125 ರೈತರ ನೆರವಿನಿಂದ ಈ ಕಾರ್ಯ ಮಾಡುತ್ತಿದ್ದೇವೆ. ಇದಕ್ಕೆ ಪ್ರತಿವರ್ಷ ₹10 ಲಕ್ಷ ವ್ಯಯ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ADVERTISEMENT

‘ಈಗ ಕೆರೆಯಲ್ಲಿ 30 ಅಡಿ ನೀರು ಇದೆ. 600 ಎಕರೆ ಕೃಷಿ ಭೂಮಿಗೆ ನೀರು ಉಣಿಸಬಹುದು. ಈ ಹಿಂದೆ ಅಕ್ಕಪಕ್ಕದ ಕೊಳವೆಬಾವಿಗಳೆಲ್ಲ ಬತ್ತಿ ಹೋಗಿದ್ದವು. ಈಗ ಅವುಗಳಲ್ಲಿ 250 ಅಡಿಗೆ ನೀರು ಸಿಗುತ್ತಿದೆ. 19 ಗ್ರಾಮಗಳ ರೈತರಿಗೂ ಸಮೃದ್ಧ ನೀರು ಸಿಗುತ್ತಿದೆ’ ಎಂದು ಅವರು ತಿಳಿಸಿದರು.
‘ಸರ್ಕಾರ ಪ್ರತಿವರ್ಷವೂ ನೀರಾವರಿ ಹಾಗೂ ಕೆರೆ ಸಂರಕ್ಷಣೆಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ, ಈ ಕೆರೆಯ ಅಭಿವೃದ್ಧಿಗೆ ಮಾತ್ರ ಗಮನ ಹರಿಸಿಲ್ಲ. ಅದಕ್ಕಾಗಿ ಸ್ಥಳೀಯರೆಲ್ಲ ಸೇರಿ ಕೆರೆ ಸಂರಕ್ಷಣೆಗೆ  ಮುಂದಾಗಿದ್ದೇವೆ’ ಎಂದರು.

‘ನಮಗೆ ಇಲಾಖೆಯ ನೆರವು ಬೇಡ. ಅನುಮತಿ ಕೊಟ್ಟರಷ್ಟೇ ಸಾಕು. ಕೆರೆಯ ಏರಿಯನ್ನು ಒಂದೂವರೆ ಅಡಿ ಏರಿಸಲು ಅನುಮತಿ ಕೋರಿದ್ದೆವು. ಈ ಸಂಬಂಧ 300 ರೈತರು ಸಹಿ ಹಾಕಿ ಮಾರ್ಚ್‌ 19ರಂದು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಮನವಿ ಸಲ್ಲಿಸಿದ್ದರು. ಆದರೂ, ಅನುಮತಿ  ಕೊಟ್ಟಿಲ್ಲ. ಬದಲು, ಅನಗತ್ಯ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಗರದ ಬಹುತೇಕ ಕೆರೆಗಳು ಬತ್ತಿ ಹೋಗುತ್ತಿವೆ. ಕೊಳಚೆ ತಾಣಗಳಾಗಿವೆ. ಇಲಾಖೆಗಳು ಅಭಿವೃದ್ಧಿ ಮಾಡಲು ಮುಂದಾಗುತ್ತಿಲ್ಲ. ಸ್ಥಳೀಯರೇ ಅಭಿವೃದ್ಧಿ  ಮಾಡಲು ಹೋದರೆ ನೂರೆಂಟು ತಕರಾರು ಮಾಡುತ್ತಾರೆ’ ಎಂದು ರಫಾಯಲ್‌ ರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

‘ಅನುಮತಿ ಪಡೆಯದೆ ಕೆಲಸ’

‘ನಬಾರ್ಡ್ ಅನುದಾನದಲ್ಲಿ ₹1 ಕೋಟಿ ವೆಚ್ಚದಲ್ಲಿ ಈ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಈಗಾಗಲೇ ₹70 ಲಕ್ಷದ ಕಾಮಗಾರಿ ಮಾಡಲಾಗಿದೆ. ಕೆರೆಯ  ಸುತ್ತ ಏರಿ ನಿರ್ಮಿಸಲಾಗಿದೆ. ಅದರ ಮೇಲೆ ಈಗ ಸ್ಥಳೀಯರು  ಹೂಳು ಹಾಕುತ್ತಿದ್ದಾರೆ. ಇಲಾಖೆಯಿಂದ ಅನುಮತಿ ಪಡೆಯದೆ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಜಯನಗರ ವಿಭಾಗದ ಎಂಜಿನಿಯರ್‌ ಒಬ್ಬರು ಸ್ಪಷ್ಟನೆ ನೀಡಿದರು.

‘ಕೆರೆಯ ಪಕ್ಕದಲ್ಲಿ ಕೃಷಿ ಭೂಮಿ ಇದೆ.  ಏರಿಯನ್ನು ಇನ್ನಷ್ಟು ಹೆಚ್ಚಿಸಿದರೆ ಅಕ್ಕಪಕ್ಕದ ಕೃಷಿ ಭೂಮಿ ಮುಳುಗಡೆಯಾಗುತ್ತದೆ. ಆಗ ರೈತರಿಗೆ ಪರಿಹಾರ ನೀಡಬೇಕಾಗುತ್ತದೆ. ಈ ಸೂಕ್ಷ್ಮಗಳೆಲ್ಲ ಜನರಿಗೆ ಅರ್ಥವಾಗುವುದಿಲ್ಲ. ತಾಂತ್ರಿಕ ಮಾಹಿತಿ ಇಲ್ಲದೆ ಅವರು ವಾದ ಮಂಡಿಸುತ್ತಿದ್ದಾರೆ. ಅವರಿಗೆ ಮನವರಿಕೆ ಮಾಡಲು ಯತ್ನಿಸಿದ್ದೇವೆ’ ಎಂದರು.

‘ಫಾದರ್ ಅವರಿಗೆ ವಿದೇಶದಿಂದ ದುಡ್ಡು ಬರುತ್ತದೆ. ಅದನ್ನು ಬಳಸಿ ಈ ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಕಾಳಜಿ ಇದ್ದರೆ ನಮಗೆ ಸಹಯೋಗ ನೀಡಲಿ. ಪಾರದರ್ಶಕವಾಗಿ ಕಾಮಗಾರಿ ನಡೆಸುತ್ತೇವೆ’ ಎಂದು ಅವರು ಹೇಳಿದರು.
‘ಫಾದರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಆದರೆ, ಹಾಗೆ ಮಾಡಲು ಆಗುವುದಿಲ್ಲ. ಆಗ ಮತ್ತೊಂದು ಗಲಾಟೆ ಆಗುತ್ತದೆ. ಈ ವಿಚಾರವನ್ನು ಶಾಸಕರ ಗಮನಕ್ಕೆ ತರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.