ADVERTISEMENT

ಬಾಬಾಸಾಹೇಬರ ತೀವ್ರವಾದಿ ವಾದ

ಪೃಥ್ವಿ ದತ್ತ ಚಂದ್ರ ಶೋಭಿ
Published 21 ಏಪ್ರಿಲ್ 2016, 19:30 IST
Last Updated 21 ಏಪ್ರಿಲ್ 2016, 19:30 IST

ಕಳೆದ ವಾರ ಆಧುನಿಕ ಭಾರತದ ಇತಿಹಾಸದಲ್ಲಿ ಡಾ. ಅಂಬೇಡ್ಕರರ ವೈಶಿಷ್ಟ್ಯದ ಬಗ್ಗೆ ಬರೆದಿದ್ದೆ. ಅವರ ತೀವ್ರಗಾಮಿ (ರ್‍ಯಾಡಿಕಲ್) ಚಿಂತನೆಯ ಬಗ್ಗೆ ಈ ವಾರ ಮತ್ತೆ ಬರೆಯಬೇಕು ಎಂದೆನಿಸುತ್ತಿದೆ. ಇದಕ್ಕೆ ಕಾರಣ ಕಳೆದ ಕೆಲವು ದಿನಗಳಲ್ಲಿ ಡಾ. ಅಂಬೇಡ್ಕರರ ಬಗ್ಗೆ ಎಲ್ಲರೂ ಬರೆಯುತ್ತಿರುವ, ಮಾತನಾಡುತ್ತಿರುವ ರೀತಿ.

ಕೆಲವು ದಿನಗಳ ಹಿಂದೆ ಮಧ್ಯ ಕರ್ನಾಟಕದಲ್ಲಿ ಪ್ರಯಾಣಿಸುತ್ತಿರುವಾಗ ಅಲ್ಲಿನ ಸ್ಥಳೀಯ ರೇಡಿಯೊ ಕೇಂದ್ರ ಡಾ. ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ನಡೆಸಿದ ಕಾರ್ಯಕ್ರಮದ ಬಾನುಲಿ ಪ್ರಸಾರವನ್ನು ಕೇಳುತ್ತಿದ್ದೆ. ಆಗ ಅಲ್ಲಿ ಭಾಷಣಕಾರರಾಗಿ ಮಾತನಾಡಿದವರು ಬಾಬಾಸಾಹೇಬರ ಕೃತಿಗಳನ್ನು ಓದಿದ್ದಾರೆ, ವಿಚಾರಗಳನ್ನು ಅರಿತಿದ್ದಾರೆ ಎನ್ನುವ ಭಾವನೆ ಮೂಡಲಿಲ್ಲ. ಭಾಷಣಕಾರರೆಲ್ಲರೂ ಅಂದಾಜಿನ ಮೇಲೆ ಸಾಮಾನ್ಯ ತಿಳಿವಳಿಕೆಯ ಮಾತುಗಳನ್ನು  ಅಂಬೇಡ್ಕರರ ಮೇಲೆ ಆಡುತ್ತಿದ್ದರು.

ಅಂದರೆ ಬಾಬಾಸಾಹೇಬರೊಂದು ಖಾಲಿ ಚಿತ್ರಪಟ. ಅದರ ಮೇಲೆ ಬೇಕಾದವರು ಬೇಕಾದಂತೆ ತಮಗೆ ತೋಚಿದ್ದನ್ನು ಹೇಳಿಕೊಳ್ಳುತ್ತಾ, ಚಿತ್ರಿಸಿಕೊಳ್ಳುತ್ತಿದ್ದಾರೆ. ಮತ್ತೂ ತಮಾಷೆಯೆಂದರೆ  ಅಂಬೇಡ್ಕರ್ ಅವರ ಕುರಿತಾಗಿ ಹೇಳುತ್ತಿರುವ ಮಾತುಗಳನ್ನು ಹೆಸರು ಬದಲಿಸಿ ಬಸವಣ್ಣ, ಗಾಂಧಿ ಅಥವಾ ಲೋಹಿಯಾರ ವಿಚಾರಗಳಾಗಿಯೂ ಹೇಳಬಹುದಿತ್ತು. ತುಂಬ ಖಚಿತ ಮತ್ತು ಖಂಡಿತವಾದಿ ಚಿಂತಕರಾದ ಬಾಬಾಸಾಹೇಬರಿಗೆ ಇದಕ್ಕಿಂತ ಹೆಚ್ಚಿನ ಅಪಚಾರ ಮಾಡಲು ಸಾಧ್ಯವಿಲ್ಲ ಎಂದು ಆ ಕ್ಷಣದಲ್ಲಿ ನನಗನ್ನಿಸಿತು.

ಡಾ. ಅಂಬೇಡ್ಕರ್ ಬರಹಗಳು ಶೈಕ್ಷಣಿಕ (ಅಕಾಡೆಮಿಕ್) ಮತ್ತು ಬೌದ್ಧಿಕ ಶಿಸ್ತನ್ನು ಹೊಂದಿವೆ. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್‌ ಎಕನಾಮಿಕ್ಸ್ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವಾಗ ಗಳಿಸಿಕೊಂಡ ಶಿಸ್ತು ಇದು. ಆದರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ- ಸಂಶೋಧಕನಿಗಿಂತ ಭಿನ್ನವಾಗಿ ಅವರು ಭಾರತದ ವಾಸ್ತವದ ಬಗೆಗೆ ಅಧ್ಯಯನ ನಡೆಸಿದರು. ತಮ್ಮ ಕಾಲದ ಎಲ್ಲ ಪ್ರಮುಖ ರಾಜಕೀಯ, ಸಾಮಾಜಿಕ, ಆರ್ಥಿಕ ಸವಾಲುಗಳಿಗೆ ಅವರು ಬೌದ್ಧಿಕವಾಗಿ ಪ್ರತಿಕ್ರಿಯಿಸಿದರು.

ಇದು ಜಾತಿ ಮತ್ತು ಅಸ್ಪೃಶ್ಯತೆಯ ಸಮಸ್ಯೆಗಳು, ರೂಪಾಯಿಯ ಪ್ರಶ್ನೆ, ವಸಾಹತುಶಾಹಿ ಆಡಳಿತ, ದೇಶ ವಿಭಜನೆ, ಭಾಷಾವಾರು ಪ್ರಾಂತ್ಯಗಳ ರಚನೆ, ಸಂವಿಧಾನ, ಸಾಮಾನ್ಯ ನಾಗರಿಕ ಕಾನೂನು ಇಂತಹ ಹತ್ತಾರು ವಿಷಯಗಳಲ್ಲಿ ಸತ್ಯವಾದುದು. ಹೀಗೆ ಮಾಡುವಾಗ, ಅವರು ತಮ್ಮ ಹಾಗೂ ತಮ್ಮ (ಅಸ್ಪೃಶ್ಯ) ವರ್ಗದ ಸಾಮಾಜಿಕ ಅನುಭವಗಳನ್ನು ಕೇಂದ್ರದಲ್ಲಿಟ್ಟುಕೊಂಡು ಅಧ್ಯಯನ ನಡೆಸಿದರು.

ಹೀಗೆ ಅಸ್ಪೃಶ್ಯ ವರ್ಗಗಳ ಅನುಭವಗಳ ಮೂಲಕ ಭಾರತೀಯ ಸಮಾಜವನ್ನು ಅರಿಯಲು ಅವರು ಮಾಡಿದ ಪ್ರಯತ್ನ ಅಂಬೇಡ್ಕರರ ಚಿಂತನೆಗೆ ತೀವ್ರಗಾಮಿ ಮೊನಚನ್ನು ನೀಡಿತು.

125ನೆಯ ಜನ್ಮಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ  ಅಂಬೇಡ್ಕರರ ಬೌದ್ಧಿಕತೆಯ ಬಗ್ಗೆ, ಅದರಲ್ಲೂ ಅದರ ತೀವ್ರಗಾಮಿ ಆಯಾಮಗಳ ಕುರಿತಾಗಿ ಚರ್ಚೆಯಾಗುತ್ತಿಲ್ಲ. ಅವರನ್ನು ಸಂವಿಧಾನಶಿಲ್ಪಿ ಮಾಡಿ, ಸಾಧುವಾಗಿಸಿ ಎಲ್ಲ ಭಾರತೀಯರಿಗೂ ಒಪ್ಪಿಗೆಯಾಗುವಂತಹ ವ್ಯಕ್ತಿತ್ವವನ್ನಾಗಿ ಮಾಡುವ ಪ್ರಯತ್ನ ಇಲ್ಲಿ ಕಾಣುತ್ತಿದೆ.

ಬಾಬಾಸಾಹೇಬರ ಮಹತ್ವ ಅವರು ನಮ್ಮನ್ನು ಅಸ್ತವ್ಯಸ್ತರನ್ನಾಗಿಸುವ, ಹೊಸದನ್ನು ಹುಡುಕಲು ಪ್ರೇರೇಪಿಸುವ ಚಿಂತಕ ಎನ್ನುವುದರಲ್ಲಿದೆ. ಅವರ ಬೌದ್ಧಿಕತೆ ನಮಗೆ ಅನುಕರಣೀಯ ಆದರ್ಶವಾಗುವುದು ಅದರಲ್ಲಿರುವ ತೀವ್ರಗಾಮಿ ಮೊನಚಿನಿಂದ. ಕಳೆದ ವಾರದ ಎಲ್ಲ ಸಭೆಗಳಲ್ಲಿ ಅವರ ಅಧ್ಯಯನಶೀಲತೆ ಮತ್ತು ಪುಸ್ತಕ ಪ್ರೇಮ, ಅವರ ಬೌದ್ಧಿಕ ಆಸಕ್ತಿ ಹಾಗೂ ಸಂಶೋಧನೆಯ ವೈಶಾಲ್ಯ ವ್ಯಾಪಕವಾಗಿ ಪ್ರಸ್ತಾಪವಾದವು.

ಇಷ್ಟಾದರೂ ನಾನು ಮೇಲೆ ಹೇಳಿದ ಹಾಗೆ ಅವರ ನಿರ್ದಿಷ್ಟ ವಿಚಾರಗಳ ವೈಶಿಷ್ಟ್ಯವಾಗಲಿ, ಅವುಗಳು ಭಾರತದ ಕುರಿತಾದ ನಮ್ಮ ಗ್ರಹಿಕೆಯನ್ನೇ ಹೇಗೆ ಬದಲಿಸುತ್ತವೆ ಎನ್ನುವುದು ಚರ್ಚೆಯಾಗಲಿಲ್ಲ.  ಅಂಬೇಡ್ಕರರನ್ನು ಓದದೆ ಸುಮ್ಮನೆ ಅವರ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವ ಭಾವನೆ ಮೂಡುತ್ತಿದೆ.

ಈ ಅಂಶ ಸ್ಪಷ್ಟವಾಗಲು ಕೆಳಗಿನ ಎರಡು ಉದಾಹರಣೆಗಳನ್ನು ಗಮನಿಸಿ. ಮೊದಲಿಗೆ, ಭಾಷಾವಾರು ಪ್ರಾಂತ್ಯಗಳ ಕುರಿತಾಗಿ ಮಹಾರಾಷ್ಟ್ರವನ್ನು ರಚಿಸುವ ವಿವಾದವನ್ನು ಗಮನದಲ್ಲಿರಿಸಿಕೊಂಡು ‘ಭಾಷಾವಾರು ಪ್ರಾಂತ್ಯವಾಗಿ ಮಹಾರಾಷ್ಟ್ರ’ ಎಂಬ ದೀರ್ಘ ಪ್ರಬಂಧವನ್ನು ಡಾ. ಅಂಬೇಡ್ಕರ್ 1948ರಲ್ಲಿ ರಚಿಸಿದರು. ಭಾಷಾವಾರು ಪ್ರಾಂತ್ಯಗಳ ಸಮಸ್ಯೆಯನ್ನು ವಿವರವಾಗಿ ವಿಶ್ಲೇಷಿಸುತ್ತ, ಅವರು ಅವುಗಳ ರಚನೆಯಾಗಬೇಕೆಂಬ ವಾದಕ್ಕೆ ಮನ್ನಣೆ ನೀಡುತ್ತಾರೆ.

ಅವರ ನಿರೀಕ್ಷೆಯೆಂದರೆ ಅಂತಹ ಹೊಸ ಪ್ರಾಂತ್ಯವು ಕನಿಷ್ಠ ಜನಸಂಖ್ಯೆ ಮತ್ತು ತೆರಿಗೆಯ ಆದಾಯವನ್ನು ಹೊಂದಿರಬೇಕು ಎನ್ನುವುದು. ಆದರೆ ಹೊಸ ಪ್ರಾಂತ್ಯದ ಆಡಳಿತ ಭಾಷೆಯಾಗಿ ಸ್ಥಳೀಯ ಭಾಷೆಯಿರಬೇಕು ಎನ್ನುವುದನ್ನು ಅವರು ಒಪ್ಪುವುದಿಲ್ಲ. ಬದಲಿಗೆ ಭಾರತೀಯ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿ, ಎಲ್ಲ ಪ್ರಾಂತ್ಯಗಳಲ್ಲಿಯೂ ಆಡಳಿತ ಭಾಷೆಯಾಗಿ ಅದನ್ನೇ ಬಳಸಬೇಕೆಂದು ವಾದಿಸುತ್ತಾರೆ. ಇಲ್ಲದಿದ್ದರೆ ಭಾರತದ ರಾಷ್ಟ್ರೀಯತೆಗೆ ತೊಡಕಾಗುತ್ತದೆ ಎನ್ನುವ ಅನುಮಾನ ಅವರದು.

ಆಡಳಿತ ಸೀಮಿತವಾದ ಚಟುವಟಿಕೆ. ಹಾಗಾಗಿ ಆಡಳಿತಗಾರರ ಮತ್ತು ಸಾಮಾನ್ಯ ಜನರ ಭಾಷೆಗಳು ಭಿನ್ನವಾಗಿದ್ದರೂ ಅದು ದೊಡ್ಡ ತೊಡಕಲ್ಲ ಎನ್ನುತ್ತಾರೆ. ಆದರೆ ಇಂಗ್ಲಿಷನ್ನು ಆಡಳಿತ ಭಾಷೆಯನ್ನಾಗಿಸಲು ಅವರು ಒಪ್ಪುವುದಿಲ್ಲ ಎನ್ನುವುದು ಸಹ ಇಲ್ಲಿ ಗಮನಾರ್ಹ. ಅಲ್ಲದೆ ಸ್ಥಳೀಯ ಭಾಷೆಯ ಸಂಸ್ಕೃತಿಯನ್ನು ಪೋಷಿಸಲು ಅದು ಆಡಳಿತ ಭಾಷೆಯೇ ಆಗಬೇಕಿಲ್ಲ ಎಂದು  ಅಂಬೇಡ್ಕರ್ ಹೇಳುತ್ತಾರೆ.

ಅಂದರೆ ಆಡಳಿತ ಸ್ಥಳೀಯ ಭಾಷೆಯಲ್ಲಿ ನಡೆಯಬೇಕು ಎನ್ನುವ ಭಾಷಾವಾರು ಪ್ರಾಂತ್ಯಗಳ ರಚನೆಯ ಹಿಂದಿನ ಮೂಲ ಆಶಯವನ್ನು ಡಾ. ಅಂಬೇಡ್ಕರ್ ಪುರಸ್ಕರಿಸಿಲ್ಲ. ಇದರಿಂದ ಸಾಮಾನ್ಯ ಜನರೂ ಸರ್ಕಾರದ ಚಟುವಟಿಕೆಗಳಲ್ಲಿ ಭಾಗವಹಿಸುತ್ತ,  ಪ್ರಜಾಸತ್ತೆಯನ್ನೂ ಬಲಪಡಿಸುತ್ತಾರೆ ಎನ್ನುವುದನ್ನು ಅವರು ಒಪ್ಪಿಲ್ಲ. ಅವರ ಈ ಪ್ರಬಂಧದಲ್ಲಿ ಮತ್ತು ಇತರ ಬರಹಗಳಲ್ಲಿ ಅವರ ಭಾವಾತಿರೇಕಗಳಿಲ್ಲದ, ವ್ಯಾವ­ಹಾರಿಕವಾದ ಮತ್ತು ವಸ್ತುನಿಷ್ಠವಾದ ವಿಶ್ಲೇಷಣಾ ಶೈಲಿ ಸ್ಪಷ್ಟವಾಗಿ ಕಾಣುತ್ತದೆ.

ಉದಾಹರಣೆಗೆ ಪಾಕಿಸ್ತಾನದ ರಚನೆಯ ಬಗ್ಗೆ ಸಹ ಯಾವುದೇ ಭಾವುಕತೆಯಿಲ್ಲದೆ, ಇದೊಂದು ನಮಗೆ ಇಷ್ಟವಿಲ್ಲದಿದ್ದರೂ ಅಗತ್ಯವಿರುವ ಕ್ರಮ ಎನ್ನುವಂತೆ ಬರೆಯುತ್ತಾರೆ. ಅದೇ ಕಾಶ್ಮೀರದ ಪ್ರಶ್ನೆ ಉದ್ಭವಿಸಿದಾಗ, ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದರ ಬಗ್ಗೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸುತ್ತಾರೆ.

ಈ ಯಾವ ನಿಲುವುಗಳೂ ಬಹುಶಃ ಭಾರತದ ಪ್ರಗತಿಪರ ಗುಂಪುಗಳಿಗೆ ಪ್ರಿಯವಾಗುವುದಿಲ್ಲ. ಆದರೆ ಯಾವ ಗುಂಪನ್ನೂ ಖುಷಿಗೊಳಿಸಲು  ಅಂಬೇಡ್ಕರ್ ಬರೆದವರಲ್ಲ. ಹಾಗೆಂದ ಮಾತ್ರಕ್ಕೆ ತಮ್ಮ ಆಕ್ರೋಶ ಮತ್ತು ನೋವುಗಳನ್ನು ಅವರು ಬಚ್ಚಿಡಲಿಲ್ಲ. ಭಾರತೀಯ ಸಮಾಜದ ಕುರಿತಾದ, ಇಲ್ಲವೇ ಕಾಂಗ್ರೆಸ್, ಗಾಂಧಿ, ನೆಹರೂ ಮತ್ತು ಜಿನ್ನಾರ ಬಗೆಗಿನ ಅಂಬೇಡ್ಕರ್ ಅವರ ಬರಹಗಳಲ್ಲಿ ಚಾಟಿಯೇಟಿನ ಗುಣವಿದೆ. ಯಾರನ್ನೂ ಉಳಿಸದ, ಯಾರಿಗೂ ಮಣೆಹಾಕದ ನಿಷ್ಠುರತೆಯಿದೆ. 

ಇದು ಅತ್ಯಂತ ಸ್ಪಷ್ಟವಾಗುವುದು  ಅಂಬೇಡ್ಕರರ ಜಾತಿ ಪದ್ಧತಿ ಮತ್ತು ಹಿಂದೂ ಧರ್ಮದ ಮೇಲಿನ ಬರಹಗಳಲ್ಲಿ. 1916ರಲ್ಲಿ 25 ವರ್ಷ ವಯಸ್ಸಿನ ಅಂಬೇಡ್ಕರ್ ಕೊಲಂಬಿಯಾ ವಿಶ್ವವಿದ್ಯಾಲಯದ ಸೆಮಿನಾರಿನಲ್ಲಿ ಮಾತನಾಡಲು ಜಾತಿ ಪದ್ಧತಿಯ ಮೇಲಿನ ತಮ್ಮ ಮೊದಲ ಪ್ರಬಂಧವನ್ನು ಬರೆದರು. ಸಮಾಜಶಾಸ್ತ್ರದ ಸಂಶೋಧಕ ಬರವಣಿಗೆಯಂತಿರುವ ಈ ಪ್ರಬಂಧದಲ್ಲಿ ಆಗಲೇ ಹೊಸ ಹೊಳಹುಗಳು ಕಾಣುತ್ತವೆ.

ಉದಾಹರಣೆಗೆ, ಜಾತಿ ಪದ್ಧತಿಯ ಉಳಿಯುವಿಕೆ ಸಗೋತ್ರ ವಿವಾಹದ ಮೂಲಕವೇ ಎಂದು ಅವರು ವಾದಿಸುತ್ತಾರೆ. 20 ವರ್ಷಗಳ ನಂತರ, 1936ರಲ್ಲಿ ಜಾತಿ ವಿನಾಶ (ಅನ್ನಿಹಿಲೇಶನ್ ಆಫ್‌ ಕಾಸ್ಟ್) ಎನ್ನುವ ತಮ್ಮ ಬಹುಮುಖ್ಯ ಕೃತಿಯನ್ನು  ಅಂಬೇಡ್ಕರ್ ರಚಿಸಿದರು. ಆ ಹೊತ್ತಿಗಾಗಲೇ ಬಾಂಬೆ ಪ್ರಾಂತ್ಯದಲ್ಲಿ ಹಲವಾರು ಹೋರಾಟಗಳನ್ನು ಮುನ್ನಡೆಸಿದ್ದರಲ್ಲದೆ, ಮಹಾತ್ಮ ಗಾಂಧಿಯವರೊಡನೆ ಸಹ ತಮ್ಮ ಸಂಘರ್ಷವನ್ನು ನಡೆಸಿದ್ದರು, ಪೂನಾ ಒಪ್ಪಂದ ಮಾಡಿಕೊಂಡಿದ್ದರು.

ಈ ಎಲ್ಲ ಅನುಭವಗಳ ನಂತರ ಅವರು ಮುಂದಿಟ್ಟ ವಿಚಾರಗಳು ಕೆಳಗಿನಂತಿವೆ. ಭಾರತೀಯ ಸಮಾಜದ ಪುನಾರಚನೆಯನ್ನು ಹಿಂದೂ ಧರ್ಮದ ಸುಧಾರಣೆಯನ್ನು ಮಾಡುವುದರ ಮೂಲಕ ಮಾತ್ರ ಮಾಡಲು ಸಾಧ್ಯವಿಲ್ಲ. ಅದನ್ನು ಸಂಪೂರ್ಣವಾಗಿ ನಾಶಮಾಡಬೇಕು. ಇಲ್ಲದಿದ್ದರೆ ಭಾರತದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳ ಪ್ರಶ್ನೆಗಳನ್ನು ಪರಿಹರಿಸಲು ಸಾಧ್ಯವಿಲ್ಲ.

ತಮ್ಮ ಈ ನಿಲುವನ್ನು ಅವರು ಮುಂದಿನ 20 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಬದಲಿಸಲಿಲ್ಲ. ಅವರ ಸಮಕಾಲೀನ ರಾಷ್ಟ್ರೀಯವಾದಿಗಳು ಭಾರತೀಯ ಸಂಪ್ರದಾಯವನ್ನು ಸುಧಾರಣೆ ಮಾಡುವ ದಾರಿಗಳನ್ನು ಸೂಚಿಸುತ್ತಿದ್ದರೆ, ಅಂಬೇಡ್ಕರ್ ಅವರಿಗೆ ಈ ಸಂಪ್ರದಾಯದಲ್ಲಿ ಉಳಿಸಿಕೊಳ್ಳಬೇಕಿರುವ ಅಂಶಗಳು ಕಾಣಲಿಲ್ಲ.

ಹಾಗಾಗಿಯೇ ಇತಿಹಾಸವನ್ನೇ ಧಿಕ್ಕರಿಸುವ, ತ್ಯಜಿಸುವ ತೀವ್ರವಾದಿ ವಾದವೊಂದನ್ನು ಬಾಬಾಸಾಹೇಬರು ಮುಂದಿಟ್ಟರು. ಇಂತಹ ಸವಾಲೊಂದನ್ನು ಭಾರತೀಯ ನಾಗರಿಕತೆ ಎದುರಿಸಿರಲಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ.

ಭಾರತೀಯ ನಾಗರಿಕತೆಯನ್ನು ಮೌಲ್ಯಮಾಪನ ಮಾಡಲು  ಅಂಬೇಡ್ಕರ್ ಅವರೊಂದು ಮಾಪನ ಎಂದೇ ರಾಜಕೀಯ ವಿಶ್ಲೇಷಕ ಪ್ರತಾಪಭಾನು ಮೆಹ್ತಾ ಗುರುತಿಸುತ್ತಾರೆ.

ಹೊಸ ನಾಗರಿಕತೆಯನ್ನು, ಹೊಸ ಸಮಾಜವನ್ನು ಕಟ್ಟುವಾಗ ಸಮಾನತೆ ಮತ್ತು ನ್ಯಾಯ (ಜಸ್ಟಿಸ್) ಮೂಲಮಂತ್ರಗಳಾಗಬೇಕು ಎಂಬ ಅಂಬೇಡ್ಕರರ ಸವಾಲುಗಳು ಮತ್ತು ನಿರೀಕ್ಷೆಗಳು ಭಾರತೀಯ ನಾಗರಿಕತೆಯನ್ನೇ ಪರೀಕ್ಷೆಗೊಡ್ಡಿವೆ. ಇದಕ್ಕೆ ಪ್ರತಿಯಾಗಿ ಗಾಂಧಿ ಮೊದಲಾದವರು ತಮ್ಮ ನಾಗರಿಕತೆಯ ಅತ್ಯುನ್ನತ ಆದರ್ಶಗಳನ್ನು ಹೇಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ನಾವು ಪರೀಕ್ಷಿಸುತ್ತೇವೆ. ಮೆಹ್ತಾ ಸೂಚಿಸುವ ಈ ವ್ಯತ್ಯಾಸ ಮುಖ್ಯವಾದುದು.

ಅಂಬೇಡ್ಕರ್ ಅವರನ್ನು ಸಂವಿಧಾನಶಿಲ್ಪಿ ಎಂದು ಮಾತ್ರ ಗುರುತಿಸುತ್ತ, ಅವರ ಚಿಂತನೆಯ ತೀವ್ರಗಾಮಿ ಮೊನಚನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಅವರ ಬೌದ್ಧಿಕ ಶಿಸ್ತು, ಭಾವುಕತೆಯಿಲ್ಲದ ವಸ್ತುನಿಷ್ಠ ಹಾಗೂ ವ್ಯಾವಹಾರಿಕ (ಪ್ರಾಗ್ಮಾಟಿಕ್) ಚಿಂತನ ಕ್ರಮ ನಾವು ಮತ್ತೆ ಗಂಭೀರವಾಗಿ ಚರ್ಚಿಸಬೇಕಿರುವಂತಹವು. ಈ ನಿಟ್ಟಿನಲ್ಲಿ ಬಾಬಾಸಾಹೇಬರ ಬರಹಗಳ ಅಧ್ಯಯನ ಮುಂದುವರೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.