ADVERTISEMENT

ಮೀನು ಹಿಡಿಯಲು ಬೆಸ್ತನಿಗೆ ಮೀಸಲಾತಿ?

ವಸು ಮಳಲಿ
Published 3 ಫೆಬ್ರುವರಿ 2014, 19:30 IST
Last Updated 3 ಫೆಬ್ರುವರಿ 2014, 19:30 IST
ಮೀನು ಹಿಡಿಯಲು ಬೆಸ್ತನಿಗೆ ಮೀಸಲಾತಿ?
ಮೀನು ಹಿಡಿಯಲು ಬೆಸ್ತನಿಗೆ ಮೀಸಲಾತಿ?   

ಡೈನೋಸಾರ್ ಎಂಬ ಅತಿ ದೊಡ್ಡ ಪ್ರಾಣಿ ಸಂಕುಲ ಒಂದು ಕಾಲಕ್ಕೆ ಈ ಭೂಮಿ­ಯನ್ನು ಆವರಿಸಿತ್ತು. ಅಷ್ಟು ಬೃಹತ್‌ ಗಾತ್ರದ ಪ್ರಾಣಿಗೆ ಬಾಲ ಮುಟ್ಟಿದರೆ ಆ ಕೂಡಲೇ ಅರಿ­ವಾ­ಗು­ತ್ತಿರಲಿಲ್ಲ. ಆ ದೇಹದ ಗಾತ್ರಕ್ಕೆ ಹೋಲಿ­ಸಿ­ದರೆ  ಅದರ ಮಿದುಳು ಬಲು ಚಿಕ್ಕದು. ಹಾಗಾಗಿ ಬೇರೊಂದು ಪ್ರಾಣಿ ಅದನ್ನು ಕಚ್ಚಿದರೆ ಗೊತ್ತಾ­ಗುವ ಹೊತ್ತಿಗೆ ಆಪತ್ತು ಒದಗಿರುತ್ತಿತ್ತು. ಇಂದು ಭಾರ­ತದ ಆರ್ಥಿಕತೆ  ಡೈನೋಸಾರ್‌ನ ಹಾಗೆ ಬೃಹ­ದಾಕಾರವಾಗಿ ಬೆಳೆದು ನಿಂತಿದೆ. ಮಿದುಳು ಮಾತ್ರ ಹಿಡಿಗಾತ್ರ.

ಸ್ವಾಧೀನ ತಪ್ಪಿದ ತನ್ನ ಕಾಲು­ಗಳನ್ನು ತಾನೇ ಕಚ್ಚಿ ತಿನ್ನಲು ಹೊರಟಂತಿದೆ. ಖಾಸಗಿ ಒಡೆತನದ ಕೈಗಾರಿಕಾ ವಲಯ ತಿನ್ನುವ ಕೈ ಬಾಯಿ ಮಾತ್ರವೇ ಅದರ ಅಂಗಾಂಗವೆಂದು ಭಾವಿ­ಸಿದೆ. ದೇಹದ ಉಳಿದ ಭಾಗಗಳು ತಮ್ಮ ಯೋಗ­ಕ್ಷೇಮವನ್ನು ತಾವೇ ನೋಡಿಕೊಳ್ಳಬೇಕಾ­ಗಿದೆ. ಯೋಗ್ಯವಾದ ಹೃದಯವನ್ನೂ, ಮಿದು­ಳನ್ನೂ ರೂಪಿಸಬೇಕಾಗಿದೆ. ದೇಶದ ಆರ್ಥಿಕತೆ­ಯಲ್ಲಿ ಹಿಂದುಳಿದ ಸಮುದಾಯಗಳೇ ಈ ಜವಾಬ್ದಾರಿ­ಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.

ಯುಪಿಎ, ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದಾಗ ಖಾಸಗಿ ವಲಯದಲ್ಲಿ ಮೀಸಲಾತಿ­ಯನ್ನು ತರಲು ಯೋಚಿಸುತ್ತಿ­ದ್ದಂತೆಯೇ ಕಾರ್ಪೊ­ರೇಟ್ ಜಗತ್ತು   ಒಕ್ಕೊರಲಿ­ನಿಂದ ಅದನ್ನು ವಿರೋಧಿಸಿತು.  ಚೇಂಬರ್ ಆಫ್ ಕಾಮರ್ಸ್, ‘ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆ ಮಾಡಬೇಡಿ. ನಾವೇ ಎಲ್ಲರಿಗೂ ಅವ­ಕಾಶ­­ವಿರುವಂತೆ ನೋಡಿಕೊಳ್ಳುತ್ತೇವೆ’ ಎಂದು ಉತ್ತ­­ರಿಸಿತು.

ದಲಿತ ಮೀಸಲಾತಿಯನ್ನಾಗಲಿ, ಹಿಂದು­ಳಿದ ವರ್ಗಗಳಿಗೆ ಅವಕಾಶ ನೀಡು­ವುದ­ನ್ನಾಗಲಿ, ಮಹಿಳೆಯರೂ ದುಡಿಮೆಯ ಭಾಗ­ವಾಗಿ ಇರಲೇಬೇಕೆಂಬ ಸಾಮಾಜಿಕ ಕಾಳಜಿ­ಯನ್ನು ಅರ್ಥ ಮಾಡಿಕೊಳ್ಳುವುದು   ಖಾಸಗಿ ಬಂಡವಾಳಗಾರರಿಗೆ ಅಷ್ಟು ಸುಲಭ  ಸಾಧ್ಯವೇ? ಮೀಸಲಾತಿಯನ್ನು  ‘ಚಾರಿಟಿ’ ಎಂದು ಭಾವಿಸಿದವರೇ ಹೆಚ್ಚು. ಮೀಸಲಾತಿ­ಯಿಂದ ತಮ್ಮ ಅವಕಾಶಗಳನ್ನು  ಕಸಿದು ದಲಿತ­ರಿಗೆ, ಹಿಂದುಳಿದ ವರ್ಗದವರಿಗೆ  ಕೊಡು­ತ್ತಿ­ದ್ದಾ­ರೆಂದು ತಿಳಿದಿರುವ ಮೇಲ್ವರ್ಗದ ಗೊಣ­ಗಾಟ ಕಿವಿಯ ಮೇಲೆ ಬೀಳುತ್ತಲೇ ಇರುತ್ತದೆ.

ಖಾಸ­ಗೀ­ಕರಣವನ್ನು ಬೆಂಬಲಿಸುವ ಹಾಗೂ ಸ್ವಾಗತಿ­ಸುವ ಮಂದಿಯ ಮನದಾಳ­ದಲ್ಲಿ ಮೀಸ­ಲಾತಿಗೆ ಹೊಡೆತ ಕೊಡಬೇಕೆಂಬ ಹುನ್ನಾರ ಸದಾ ನಡೆದೇ ಇದೆ. ಆ ಮೂಲಕ ನಿಜವಾದ ಪ್ರತಿಭೆ­ಯು­­ಳ್ಳ­ವರು ಮಾತ್ರ ಉಳಿಯು­ತ್ತೇವೆ ಎಂಬ ಬಾಲಿ­­­ಶ­ವಾದ ನಂಬಿಕೆ ಈ ದೇಶದ ದುರಂತ­ವಾಗಿದೆ. ಈ ಚರ್ಚೆ ಹೊಸದೇನೂ ಅಲ್ಲ. ಹಾಗೆಂದು ಕೈ ಬಿಡಲು ಅದು ಕೊನೆಗೊಂಡಿಲ್ಲ. ಅದ­ರೊ­ಳಗಿನ ಸಣ್ಣತನ ಬಹಿರಂಗಗೊಳ್ಳುತ್ತಲೇ ಇರುತ್ತದೆ.

ಹಿಂದುಳಿದ ವರ್ಗಗಳ ಚಳವಳಿಯ ನಾಯಕ­ರೊ­ಬ್ಬರು, ‘ನಾವೇನೂ ಅವರ ಆಸ್ತಿ ಕೇಳುತ್ತಿಲ್ಲ. ನಾವು ದುಡಿಯುತ್ತೀವಿ. ಕೆಲಸ ಕೊಡಿ ಅಂತ ಮಾತ್ರ ಕೇಳುತ್ತಿದ್ದೇವೆ. ಅವರ ಆಸ್ತಿಯ ಪಾಲ­ನ್ನೇನೂ ಕೇಳುತ್ತಿಲ್ಲವಲ್ಲ’ ಎಂದು ಆಕ್ರೋಶವನ್ನು ವ್ಯಕ್ತಪ­ಡಿಸುತ್ತಿದ್ದರು. ಖಾಸಗಿ ಕಂಪೆನಿಗಳನ್ನು ಸ್ಥಾಪಿಸಲು ನೆಲ, ಜಲವನ್ನು ಬಳಸಿದ ಮೇಲೆ ಇಲ್ಲಿನ ಸಂವಿಧಾನಕ್ಕೆ ಬದ್ಧವಾಗಿರಬೇಕಾದುದು ಅವರ ಕರ್ತವ್ಯವಲ್ಲವೇ ಎಂದು ದಲಿತರ ಹಕ್ಕುಗಳ ಪರ ಮಾತನಾಡುವ  ಯುವಕರು ಕಂಪೆ­ನಿಗಳ ಮಾಲೀಕರನ್ನು  ಕೇಳುತ್ತಾರೆ.

ಸಾಮಾ­ಜಿಕ ನ್ಯಾಯದ ನೆಲೆಯಲ್ಲಿ ಮೀಸಲಾತಿ­ಯನ್ನು ಕೇಳಲಾಗುತ್ತಿದೆ. ಅಂದರೆ ಚಾರಿತ್ರಿಕವಾಗಿ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿದೂಗಿಸಲು ಮೀಸಲಾತಿಯನ್ನು ಕಾಯ್ದು­ಕೊಳ್ಳ­­ಬೇಕಾಗುತ್ತದೆ ಎಂಬ ಸಾಮಾನ್ಯವಾದ ತರ್ಕ­ವಿದ್ದೇ ಇದೆ. ಹೀಗೆ ವಾದಿಸುವಾಗಲೂ ಆಳ­ದಲ್ಲಿ ಅಸಹಾಯಕತೆ ಮನೆಮಾಡಿದೆ. ಚರಿತ್ರೆ­ಯುದ್ದಕ್ಕೂ ನಡೆದ ತಪ್ಪಿಗೆ ಅದನ್ನು ಸರಿದೂ­ಗಿಸಲು ಅವಕಾಶವನ್ನು ಕೇಳಲಾಗುತ್ತಿದೆ.

‘ಅದಕ್ಕಾಗಿ ಇಷ್ಟೂ ವರ್ಷ ಶಿಕ್ಷಣದಲ್ಲಿ, ಸಾರ್ವ­ಜನಿಕ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದೇವೆ. ಅವರನ್ನು ಇನ್ನೂ ಎಷ್ಟು ವರ್ಷ ಹೀಗೆ ಕಾಯಬೇಕು’ ಎಂಬ ಪ್ರತಿ ಉತ್ತರ ಸದಾ ಸಿದ್ಧವಾಗಿರುತ್ತದೆ. ಇಲ್ಲಿ ಅವರು ಎಂಬ ದನಿಯಲ್ಲೂ ಮೈಲಿಗೆಯ ಭಾವ ಅಂಟಿರುವು­ದನ್ನು ಕಾಣಬಹುದು. ‘ಅವರು ೩೫ ಅಂಕ ತೆಗೆದುಕೊಂಡರೂ ಕೆಲಸ ಸಿಗುತ್ತೆ, ನಾವು ೯೦ ಅಂಕ ತೆಗೆದುಕೊಂಡರೂ ಸಿಗುವುದಿಲ್ಲ’. ಹೀಗೆ ಸಮಾಜವನ್ನು ಅರಿಯದ ಮಕ್ಕಳೂ ಮಾತಾಡು­ವಂತಾ­ಗಿದೆ. ಇಲ್ಲಿ ಪ್ರತಿಭೆಗಿರುವ ಅಳತೆಗೋಲು ಅಂಕಪಟ್ಟಿ. ಕಲಿಸಿದ್ದಾದರೂ ಏನು? ಜೀವಶಾಸ್ತ್ರ ಓದಿ ‘ಕೋಳಿ ಮರಿ, ಮೊಟ್ಟೆಯಿಂದ ಹೊರ­ಬರಲು ಎಷ್ಟು ದಿನ ಬೇಕು’ ಎಂದು ಕೇಳಿದರೆ ಪುಸ್ತಕದಲ್ಲಿ ಉತ್ತರ ಹುಡುಕುತ್ತಾರೆ.

ಹೀರೆ­ಕಾಯಿ ಮರದಲ್ಲಿ ಬಿಡುತ್ತದೆ ಎಂದು ತಿಳಿದ ಸಸ್ಯ­ಶಾಸ್ತ್ರ ಬೋಧಿಸುವ ಪ್ರತಿಭಾವಂತ ಅಧ್ಯಾಪಕ­ರಿ­ದ್ದಾರೆ. ಇಂತಹ ಪ್ರತಿಭಾವಂತರ ಸಲಹೆಯ ಮೇರೆಗೆ ಶಾಲಾ ಮಕ್ಕಳಿಗೆ ಖನಿಜಾಂಶದ ಕೊರತೆಯನ್ನು ನಿವಾರಿಸಲು ಹಾಲು, ಹಣ್ಣು, ಮೊಟ್ಟೆ, ತರಕಾರಿಗೆ ಬದಲಾಗಿ ಕಬ್ಬಿಣಾಂಶ­ವಿರುವ ಮಾತ್ರೆ ಕೊಡಲು ಸರ್ಕಾರ ಮುಂದಾ­ಗುತ್ತದೆ. ಹೋಗಲಿ ಬಿಡಿ. ಪ್ರತಿಭಾವಂತರ ಖಾಸಗಿ ಕಂಪೆನಿಗಳಲ್ಲಿ  ಸಿದ್ಧವಾದ ಮಾತ್ರೆಗ­ಳಲ್ಲವೆ? ಈವರೆಗಿನ ಸಾರ್ವಜನಿಕ ಕ್ಷೇತ್ರ­ದಲ್ಲಾ­ಗಲಿ, ಶಿಕ್ಷಣ ಕ್ಷೇತ್ರದಲ್ಲಾಗಲಿ ವಾಸ್ತವದಲ್ಲಿ ಮೀಸಲಾತಿಯನ್ನು ಅನುಸರಿಸಲು ಸಾಧ್ಯವಾಗಿ­ದೆಯೇ ಎಂದೂ ಕೇಳಿಕೊಳ್ಳಬೇಕಾಗಿದೆ. ಜೀತ­ವಿಮುಕ್ತರಾಗಿ, ಹುಟ್ಟಿಗಂಟಿದ ಮೈಲಿಗೆಯಿಂದ ಹೊರ­ಬಂದು  ಶಾಲೆ ಮೆಟ್ಟಿಲು ಹತ್ತುವ ಹೊತ್ತಿಗೆ ಅರ್ಧ ಶತಮಾನವೇ ಕಳೆದು ಹೋಗಿತ್ತು. ಉದ್ಯೋಗದಲ್ಲಿ ಮೀಸಲಾತಿ ಕಾಗ­ದದ ಮೇಲಿತ್ತು.

ಆ ಎಲ್ಲಾ ಉದ್ಯೋಗಗಳಿಗೆ ಅರ್ಜಿ­ಗಳೇ ಇರಲಿಲ್ಲ.  ಆ ಹೊತ್ತಿಗೆ ಉಳಿದ ಸಮು­ದಾಯಗಳು ಮುಂದೆ ಹೋಗಿ ಇಂದು  ಬಂಡವಾಳಗಾರರಾಗಿದ್ದಾರೆ. ಉದ್ಯೋಗಪತಿ­ಗಳಾಗಿ­ದ್ದಾರೆ. ‘ನಮಗೂ ಅರ್ಹತೆ ಬಂದಿದೆ’ ಎಂದು ಅರ್ಜಿ ಹಿಡಿದು ಹೋಗುವ ಹೊತ್ತಿಗೆ ಸಾರ್ವ­ಜನಿಕ ವಲಯದ ಕೈಗಾರಿಕೆಗಳೇ ಮುಚ್ಚುತ್ತಾ ಬಂದಿವೆ. ಸಾರ್ವಜನಿಕ ವಲಯದಲ್ಲಿ ಬಹುಪಾಲು ನೇಮಕಾತಿ ನಿಂತು ಹೋಗಿದೆ. ಹಾಗಾಗಿ ಬರುವ ಹೊಸ ಪೀಳಿಗೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದು­ಕೊಳ್ಳಲಾಗುತ್ತದೆ. ಐವತ್ತು ಸಾವಿರ ರೂಪಾಯಿ ಸಂಬಳ ಕೊಡಬೇಕಾದ ಕಡೆ ಹತ್ತು ಸಾವಿರಕ್ಕೆ ದುಡಿಸಿಕೊಳ್ಳಲಾಗುತ್ತದೆ. ಕಂಪೆನಿಗೇನಾದರೂ ಆರ್ಥಿಕ ಮುಗ್ಗಟ್ಟು ಎದುರಾದಲ್ಲಿ ಮೊದಲು ಗೇಟ್ ಪಾಸ್ ತೆಗೆದುಕೊಳ್ಳುವವರು ಇವರೇ ಆಗಿರುತ್ತಾರೆ. ಯೂನಿಯನ್‌ಗಳು ಸಹ ಕಾಯಂ ನೌಕರರ ಕ್ಷೇಮವನ್ನೇ ನೋಡುತ್ತವೆ.

ದಿನಗೂಲಿಯವರ ಹಿತ ಕಾಯುವವರಾರು? ಗುತ್ತಿಗೆ ನೌಕರರು ಎನ್ನುವುದಕ್ಕಿಂತ ಅರೆಹೊಟ್ಟೆ ನೌಕರರೆನ್ನುವುದು ಹೆಚ್ಚು ಸಮಂಜಸ. ಈ ಸ್ಥಿತಿ ಬೃಹತ್ ಕಂಪೆನಿಗಳಾದ ಬಿಎಚ್‌ಇಎಲ್, ಎಚ್‌ಎಎಲ್‌ನಿಂದ  ಕೇಳಿಬರುವ ದಿನನಿತ್ಯದ ವೇದನೆಯಾಗಿದೆ.

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೇಳುವುದು ಸಾಮಾಜಿಕ ನ್ಯಾಯದ ವಾದ ಮಾತ್ರವಲ್ಲ, ಅದಕ್ಕೆ ಇನ್ನೂ ಹಲವು ಮುಖ­ಗಳಿವೆ. ಅಮೆರಿಕದಲ್ಲಿ ನಡೆದ ಸಂಶೋಧನೆಗಳಲ್ಲಿ ಕಂಡುಬಂದ ವಿಚಾರವೆಂದರೆ ಯಾವುದೇ ಕ್ಷೇತ್ರದಲ್ಲಿ ಮಿಶ್ರ ಸಮುದಾಯವನ್ನು ತೊಡಗಿಸಿಕೊಳ್ಳುವುದರಿಂದ ಸಿಗುವ ಪ್ರತಿಫಲ ಒಂದೇ ಹಿನ್ನೆಲೆಯ ಜನರಿಂದ ದೊರೆಯ­ಲಾರದು. ಇದು ಶಾಲಾ ಕಾಲೇಜುಗಳಾಗಿರ­ಬಹುದು ಅಥವಾ ಕಾರ್ಖಾನೆಗಳಾಗಿರಬಹುದು. ಎಲ್ಲದಕ್ಕೂ ಇದು ಅನ್ವಯಿಸುತ್ತದೆ. ಕರಿಯರಿಲ್ಲದ ತಂಡಗಳಿಗಿಂತ ಆಫ್ರಿಕಾದ ಅಮೆರಿಕನ್ನರು, ಲ್ಯಾಟಿನ್ ಅಮೆರಿಕನ್ನರು, ಏಷ್ಯನ್ನರು ಇರುವ ಕಡೆ ಅದರ ಸೊಗಸು ಏನೆಂದು ಅಮೆರಿಕನ್ನರಿಗೆ ಅರ್ಥವಾಗಿದೆ.

ಹಾಗಾಗಿಯೇ ಸರ್ಕಾರದ ಆಡಳಿತದಲ್ಲಿ ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡ­ಲಾಗಿದೆ. ಚಾರಿತ್ರಿಕ ದೋಷಗಳಿಗೆ ಕಂಡುಕೊ­ಳ್ಳುತ್ತಿ­ರುವ ಪರಿಹಾರವಾಗಿದೆ ಇದು. ಇದೇ ಖಾಸಗಿ ಕ್ಷೇತ್ರಕ್ಕೆ ಬಂದಾಗ ಯಾವ ಕೈಗಾರಿಕೆಗಳು  ಲಕ್ಷ ಡಾಲರ್‌ಗಿಂತ ಹೆಚ್ಚು ಮೊತ್ತದ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುತ್ತವೆಯೋ  ಆ ಎಲ್ಲಾ ಕಂಪೆನಿಗಳಲ್ಲೂ ಆಫ್ರಿಕನ್ ಅಮೆರಿಕನ್ನರಿಗೆ ಮತ್ತಿತರ ಹಿಂದುಳಿದ ಸಮುದಾಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಡ್ಡಾಯವಾಗಿ­ರುತ್ತದೆ. ಭಾರತದಲ್ಲಿರುವ ಮೀಸಲಾತಿ ಕುರಿತು ಕಿಡಿಕಾರುವ ಬಹುರಾಷ್ಟ್ರೀಯ  ಕಂಪೆನಿಗಳು ಅಮೆರಿಕದಲ್ಲಿ ತಮ್ಮ ಔದಾರ್ಯ  ಮೆರೆ­ಯುತ್ತವೆ. ಬಹುಶಃ ಭಾರತದಲ್ಲಿ ಅಂತಹ ಒತ್ತಡ­ವನ್ನು ಯಾರೂ ಹೇರಿರಲಾರರು.

ದೊಡ್ಡ ಖಾಸಗಿ ಕಂಪೆನಿಗಳು, ಖಾಸಗಿ ಶಾಲಾ ಕಾಲೇಜುಗಳು ತಳ ಸಮುದಾಯದಿಂದ ಬಂದ­ವರಿಗೆ ತೋರಿಕೆಗಾಗಿ ಕೆಲಸ ಕೊಡುವುದಿದೆ. ಹಾಗೆ ಕೊಡುವಾಗ ಕಸ ಗುಡಿಸುವ, ಇಲ್ಲ ಬಾಗಿಲು ಕಾಯುವ ನಾಲ್ಕನೇ ದರ್ಜೆ ನೌಕರಿ­ಯನ್ನು ಕೊಟ್ಟು ಸಮಜಾಯಿಷಿ ನೀಡುವುದಿತ್ತು. ‘ಔಟ್ ಸೋರ್ಸಿಂಗ್’ (ಹೊರ ಗುತ್ತಿಗೆ) ಎಂಬ ಹೊಸ ನಾಮಧೇಯದಲ್ಲಿ ಈ ಕೆಲಸಗಳನ್ನು ಕಾಂಟ್ರ್ಯಾಕ್ಟ್ ಕೊಡಲಾಗುತ್ತಿದೆ. ಎಂದೂ ಕಾಯಂ ಆಗದ ಕೆಲಸ. ನಾಲ್ಕನೇ ದರ್ಜೆ ಕೆಲ­ಸಕ್ಕೂ ಕಲ್ಲು. ಕಸ ಗುಡಿಸುವವನ ಮೇಲೆ ಜುಟ್ಟು ಹಿಡಿಯುವ ನೂರಾರು ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ. ಬಡವರನ್ನು  ಮಟ್ಟ ಹಾಕಲು ಏನೆಲ್ಲಾ ಯೋಜನೆ! ಇದರಲ್ಲಿ ಖಾಸಗಿ ವಲಯ ಮಾತ್ರವಲ್ಲ  ಸರ್ಕಾರಿ ಸಂಸ್ಥೆಗಳೂ ಹಿಂದೆ ಬಿದ್ದಿಲ್ಲ.

ಕಾಲೇಜು, ವಿಶ್ವವಿದ್ಯಾಲಯದ ಹಂತದಲ್ಲಿ  ಮೀಸಲಾತಿ ಅನ್ವಯ ಅರ್ಜಿ ಕರೆದರೆ ಒಂದು ಕಾಲದಲ್ಲಿ ಅರ್ಜಿಗಳೇ ಬರುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಆ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗುತ್ತಿತ್ತು. ಆನಂತರ­ದಲ್ಲಿ ಬದಲಾಯಿಸಲಾಗದಂತೆ ಕಾನೂನನ್ನು ತಂದಾಗ ಆ ಹುದ್ದೆಗಳನ್ನು ಹಾಗೇ ಖಾಲಿ ಉಳಿಸಿ­ಕೊಳ್ಳಲಾಗುತ್ತಿತ್ತು. ಆ ಮೂಲಕ ಅರೆಕಾಲಿಕ ಉದ್ಯೋಗಗಳನ್ನು ನೀಡಿ ತಮ್ಮ ಕುಲಜರು ಮಾತ್ರವೇ ಸಂಸ್ಥೆಗಳಲ್ಲಿ ಉಳಿಯುವಂತೆ ನೋಡಿ­ಕೊಳ್ಳ­ಲಾಗುತ್ತಿತ್ತು.

ಅವೆಲ್ಲಾ ಜಾತಿ ಹಿತಾಸಕ್ತಿ­ಯನ್ನು ಹೊಂದಿದ ಖಾಸಗಿ ಸಂಸ್ಥೆಗಳಾಗಿರುತ್ತವೆ, ಇಲ್ಲವೇ ಮಠಮಾನ್ಯಗಳ ಅಡಿಯಲ್ಲಿ ಬೆಳೆದು ನಿಂತಿರುತ್ತವೆ. ಇಂತಹ ಧೋರಣೆಯ ವಿಶ್ವ­ವಿದ್ಯಾಲಯದ ಪ್ರಾಧ್ಯಾಪಕರುಗಳು ದಲಿತ ಅಥವಾ ಮತ್ತಾವುದೇ ಹಿಂದುಳಿದ ವಿದ್ಯಾರ್ಥಿ ತೇರ್ಗಡೆ­ಯಾಗದಂತೆ ನೋಡಿಕೊಳ್ಳುತ್ತಿದ್ದರು. ಇಲ್ಲವೇ ಅರ್ಜಿ ಸಲ್ಲಿಸಲು ಬೇಕಾದ ಕನಿಷ್ಠ ಅಂಕಗಳೂ ಬರದಂತೆ ಕಾಯುತ್ತಿದ್ದರು. ಇಂತಹ ಪ್ರಾಧ್ಯಾಪಕರೊಬ್ಬರು ದಾಖಲೆ ಸೃಷ್ಟಿಸುವ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಮಾರ್ಗದರ್ಶನ ನೀಡಿದ್ದರು.

ಅದರಲ್ಲಿ ನೂರಕ್ಕೆ ನೂರು ಮಂದಿಯೂ ಅವರ ಜಾತಿಯವರೇ ಇದ್ದರು. ಹಾಗಾಗಿ ಆ ವಿಭಾಗಗಳಿಗೆ ಬೇರೆ ಜಾತಿಯ ಅಭ್ಯರ್ಥಿಗಳು ಅರ್ಜಿ ಹಾಕಲೂ ಸಾಧ್ಯ­ವಾಗುತ್ತಿರಲಿಲ್ಲ. ಹಿಂದುಳಿದ ವರ್ಗಗಳ ಮೀಸಲಾತಿಗೆ ನ್ಯಾಯ ಒದಗಿಸಲು,  ಇಂದಿಗೂ ಅಭ್ಯರ್ಥಿಗಳಿಲ್ಲದ ಪರಿಸ್ಥಿತಿಯೇ ಇದೆ.

ಸಂವಿಧಾನ ರಚನಾ ಸಭೆಯಲ್ಲಿ ಬಿ.ಆರ್.  ಅಂಬೇಡ್ಕರ್‌ ಅವರು ಮೀಸಲಾತಿಯನ್ನು ಕುರಿತು ಪ್ರಸ್ತಾವ ಮಂಡಿಸುವಾಗಲೂ ಅವರ ಉದ್ದೇಶ ಒಟ್ಟಾರೆ ಆಡಳಿತದಲ್ಲಿ ಎಲ್ಲರನ್ನೂ ಒಳಗೊಳ್ಳ­ಬೇಕೆಂಬುದಾಗಿತ್ತು. ಮತ್ತು ಅಲ್ಲಿ ಅವರು ಹಿಂದು­ಳಿದ ವರ್ಗದ ಪರಿಕಲ್ಪನೆಯನ್ನು ವಿವರಿಸು­ತ್ತಾರೆ. ಆ ವಾದದಲ್ಲೂ ಕೇವಲ ದಲಿತ ಮೀಸ­ಲಾತಿ­ಯನ್ನು ಚರ್ಚಿಸದೆ ಉಳಿದವರಿಗೆ ಬೇಸರವೇ ಆದರೂ ಹೇಳಲೇಬೇಕಾದ ಸಮು­ದಾಯ­ಗಳ ಹಿಂದುಳಿ­ಯುವಿಕೆಗೆ ಕಾರಣವನ್ನು ವಿವರಿಸು­ತ್ತಾರೆ. ಬಹುಶಃ ನಾವಿಂದು ಅರ್ಥ ಮಾಡಿಕೊಳ್ಳ­ಬೇಕಾಗಿ­ರುವುದು  ಎಲ್ಲರನ್ನೂ ಒಳಗೊಳ್ಳದ ಆಡ­ಳಿತ ನೀತಿ ಪ್ರಜಾ­ಪ್ರಭುತ್ವವಾಗಲಾರದು.

ಮೀಸ­ಲಾತಿ, ಸಮಾಜವಾದಿ ನೆಲೆಯ ಆಲೋಚನೆ­ಯಷ್ಟೇ ಅಲ್ಲ, ಪ್ರಜಾಪ್ರಭುತ್ವದ ಅರ್ಥಪರಿ­ಪೂರ್ಣ­ತೆಗೂ ಇದು ಅನಿವಾರ್ಯ. ಸಮಾಜದ ಎಲ್ಲ ಜನರನ್ನೂ ಒಳಗೊಳ್ಳದ ಆಡಳಿತ ಪ್ರಜಾ­ಪ್ರಭುತ್ವವಾಗಲು ಹೇಗೆ ಸಾಧ್ಯ? ಇದೇ ವಾದ ಉತ್ಪಾದನಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಮಹಿಳೆಯರನ್ನು, ದಲಿತರನ್ನು, ಹಿಂದುಳಿದವ­ರನ್ನು ಹೊರಗಿಟ್ಟು ಹಿಡಿ ಮಂದಿ ದೇಶ ಕಟ್ಟಬಲ್ಲರೆ? ಪ್ರತಿಭೆ, ಜ್ಞಾನ ಹತ್ತು ಹಲವು ನೆಲೆಗಳಿಂದ ಮೂಡಿಬರುತ್ತದೆ. ಅದನ್ನು ಅಳೆ­ಯುವ ಅಳತೆಗೋಲು ಅಂಕಪಟ್ಟಿ­ಯಾಗಲಾರದು.

ಕಾಡುಕುರುಬ, ಜೇನುಕುರುಬ, ಇರುಳಿಗ­ರನ್ನು ಹೊರಗಿಟ್ಟು ಭಾರತದ ಅರಣ್ಯನೀತಿಯನ್ನು ರೂಪಿಸುತ್ತೇವೆ. ರೈತರೇ ಇಲ್ಲದೆ ಬೆಳೆ ಬೆಳೆಯಲು ಬಂಡವಾಳಗಾರರು ಮುಂದಾಗಿದ್ದಾರೆ. ಕರಾ­ವಳಿಯ ಬೆಸ್ತರಿಲ್ಲದೆ ಕರಾವಳಿಯ ಯೋಜನೆಗಳು ರೂಪಿತವಾಗುತ್ತವೆ. ದೊಡ್ಡ ಬಂಡವಾಳವನ್ನು ಹೂಡಿ ಭಾರತ ಸರ್ಕಾರ  ಉಪಗ್ರಹವನ್ನು ಉಡಾ­ಯಿಸುತ್ತದೆ. ಅಲ್ಲಿ ದೊರೆಯುವ ಸಾಗ­ರದ ಜೀವಗಳ ಮಾಹಿತಿ ಚಿತ್ರಗಳು ಸಂಗ್ರ­ಹಾಲಯದಲ್ಲಿ ಶೇಖರಣೆಯಾಗಿವೆ. ಅದನ್ನು ಬಳಸುವವರೇ ಗತಿ ಇಲ್ಲ.

ಕರಾವಳಿಯಲ್ಲಿ ಅದರಲ್ಲೂ ಸಾಗರವೇ ಉಸಿರಾಗಿರುವ ಬೆಸ್ತರ ಅನುಭವದಿಂದ ಬಂದ ಜ್ಞಾನವನ್ನು ಪರಿಗಣಿ­ಸಲು ಪ್ರತಿಭಾವಂತ ವಿಜ್ಞಾನಿಗಳು ಸಿದ್ಧರಿಲ್ಲ. ಆ ಜ್ಞಾನವನ್ನು ಅಳೆದು ಸರ್ಟಿಫಿಕೇಟ್ ಕೊಡಲು ವಿಶ್ವವಿದ್ಯಾಲಯಗಳಿಲ್ಲ. ಇಲ್ಲಿ ಮೀಸಲಾತಿಯ ಅಗತ್ಯವಿರುವುದು ಸಮಾಜದ ಒಳಿತಿಗಾಗಿಯೇ ಹೊರತು ಬೆಸ್ತನಿಗಾಗಿಯಲ್ಲ. ಬಹುರಾಷ್ಟ್ರೀಯ ಕಂಪೆನಿಯ ದೊಡ್ಡ ಬಂಡವಾಳಗಾರ ಮೀಸಲಾತಿ­ಯಿಂದ ಬಂದ ಬೆಸ್ತನ ಸಹಜ ಪ್ರತಿಭೆಯಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದು.

ಅದಕ್ಕೆ ಪ್ರತಿಯಾಗಿ ಬೆಸ್ತನ ಕುಟುಂಬವೊಂದು ಸುಧಾರಿಸುತ್ತದೆ. ಅಲ್ಲಿಯೂ ಮೀನುಗಾರಿಕೆ­ಯನ್ನೇ ನಂಬಿ ಬದುಕಿದ್ದ ಜನರ ಸಾಗರದ ಮೇಲೆ ಲಗ್ಗೆ ಹಾಕಿದ್ದಕ್ಕೆ ಕೊಡಬಹುದಾದ ಸಣ್ಣ ಪರಿ­ಹಾರ. ಶತಮಾನಗಳ ಅನುಭವದ ಜ್ಞಾನ ಕಳೆದು ಹೋಗುವ ಮುನ್ನ ಸಮಾಜ ಅದರ ಲಾಭ ಪಡೆಯಲು ಮೀಸಲಾತಿಯನ್ನು ನೀಡ­ಬೇಕಾ­ಗಿದೆ. ಜ್ಞಾನದ ವಿಸ್ತರಣೆಗಾಗಿ ಮೀಸ­ಲಾತಿಯ ಅಗತ್ಯವಿದೆ. ಉತ್ಪಾದನಾ ಲೋಕಕ್ಕೆ ಖಾಸಗಿ ಬಂಡವಾಳಗಾರರು ನುಗ್ಗಿ ಬರಲು ದಾರಿ ಮಾಡಿ­ಕೊಂಡಿರುವ ಈ ಕಾಲದಲ್ಲಿ ಒತ್ತಾಯ ಪೂರ್ವ­ಕವಾಗಿಯಾದರೂ ಮೀಸಲಾತಿಯ ಮೂಲ­ಕ­ವಾದರೂ ಎಲ್ಲರೂ ದುಡಿಮೆಗೆ ಕೈಜೋಡಿ­ಸುವಂತೆ ಮಾಡುವುದು ಅನಿವಾರ್ಯ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT