ADVERTISEMENT

‘ಕೃಷ್ಣ’ನ ನೆಲೆಯಲ್ಲಿ ನೆಮ್ಮದಿ ಕಂಡಾಗ...

ಸುಮಲತಾ ಎನ್, ಪದ್ಮನಾಭ ಭಟ್ಟ
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST
ಅರುಣಾ ಬಾಲರಾಜ್, ಚಿತ್ರಗಳು: ಡಿ.ಸಿ. ನಾಗೇಶ್
ಅರುಣಾ ಬಾಲರಾಜ್, ಚಿತ್ರಗಳು: ಡಿ.ಸಿ. ನಾಗೇಶ್   

ಸಾಮಾನ್ಯವಾಗಿ ಸ್ವಂತ ಮನೆ ಇಲ್ಲದ ಸಮಯದಲ್ಲಿ, ಬೇರೆ ಮನೆಗಳನ್ನು ನೋಡಿದಾಗ, ಮನೆ ಕಟ್ಟಿಸಿದರೆ ಹೀಗೆ ಕಟ್ಟಿಸಬೇಕು, ಹಾಗೆ ಮಾಡಿಸಬೇಕು ಎಂದುಕೊಳ್ಳುವುದು ಸಹಜ. ಹಾಗೇ ನಾನೂ ಕೆಲವು ಮನೆಗಳನ್ನು ನೋಡಿದಾಗ ಅಂದುಕೊಂಡಿದ್ದೆ. ಆದರೆ ಆಗೆಲ್ಲಾ ವಿನ್ಯಾಸ ಕ್ಷೇತ್ರ ಈಗಿರುವಂತೆ ಇರಲಿಲ್ಲ. ಜೊತೆಗೆ ಅನುಕೂಲಕ್ಕೊಂದು ಮನೆ ಇರಬೇಕು ಎಂಬ ಲೆಕ್ಕಾಚಾರವೇ ಇದ್ದಿದ್ದು.

ಬನ್ನೇರುಘಟ್ಟ ರಸ್ತೆ ಅರಕೆರೆಯಲ್ಲಿ 2002ರಲ್ಲಿ ನಮ್ಮ ಮನೆ ಕಟ್ಟಿದ್ದು. ಇದಕ್ಕೂ ಮುನ್ನ ಬಸವನಗುಡಿ, ಅಶೋಕ ನಗರಗಳಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಒಂದು ಮನೆಯಿಂದ ಇನ್ನೊಂದು ಮನೆಗೆ ಬದಲಾಯಿಸಿ ಹೋಗುವಾಗೆಲ್ಲಾ, ನಮ್ಮದೂ ಸ್ವಂತ ಮನೆ ಇದ್ದರೆ ಎಷ್ಟು ಚೆಂದ ಅಲ್ಲವೇ ಎಂದು ಅನ್ನಿಸುತ್ತಿತ್ತು. ಮನೆಯೇ ಎಲ್ಲಕ್ಕೂ ಬುನಾದಿ ಅಲ್ಲವೇ?

ಈ ಬೆಂಗಳೂರಿನಲ್ಲಿ ನಮ್ಮದೇ ಒಂದು ನೆಲೆ ಎಂದು ಕಂಡುಕೊಂಡರೆ ಸಾಕು, ಮುಂದಿನ ಬೆಳವಣಿಗೆ ಬಗ್ಗೆ ಯೋಚಿಸಬಹುದು ಎಂದು  ನಾನು, ನನ್ನ ಪತಿ ತೀರ್ಮಾನಿಸಿದೆವು. ಹಾಗೆ ನೋಡಿದರೆ ಮನೆ ಕಟ್ಟುವಾಗ ನಮ್ಮಿಬ್ಬರಿಗೂ ಚಿಕ್ಕ ವಯಸ್ಸೇ. ಆ ವಯಸ್ಸಿಗೆ ಮನೆ ಕಟ್ಟುವುದು ಆಗ ಸುಲಭವೂ ಆಗಿರಲಿಲ್ಲ. ಅನುಭವವೂ ಕಡಿಮೆಯೇ ಇತ್ತು.

ಆದರೆ ಮನೆ ಕಟ್ಟುವ ಆಲೋಚನೆ ಮಾತ್ರ ಸಡಿಲಗೊಳ್ಳಲಿಲ್ಲ. ಮನೆ ಎಂದರೆ ಅತಿ ದೊಡ್ಡ ಮನೆ, ಬಂಗಲೆಯಂತೆ ಕಟ್ಟಿಸಬೇಕು ಎನ್ನುವುದು ನಮ್ಮ ಆದ್ಯತೆಯಾಗಿರಲಿಲ್ಲ.

ಪುಟ್ಟ ಮನೆಯಲ್ಲಿ ನಮ್ಮ ಅನುಕೂಲಗಳನ್ನು ಒಟ್ಟುಗೂಡಿಸುವುದು ನಮ್ಮ ಯೋಜನೆ ಆಗಿತ್ತು. ಕೈಗೆಟುಕುವ ಬಜೆಟ್‌ನಲ್ಲಿ ನಮ್ಮ ಅಭಿರುಚಿಗೆ ಒಪ್ಪುವಂತೆ ಇದ್ದರೆ ಸಾಕಿತ್ತು. ಮೈಮೇಲೆ ದುಬಾರಿ ಸಾಲ ಹೇರಿಕೊಂಡು ಮನೆಯಲ್ಲಿ ವಾಸಿಸುವ ಸುಖವನ್ನು ಕಳೆದುಕೊಳ್ಳುವುದು ಇಷ್ಟವಿರಲಿಲ್ಲ. ಫ್ರೆಂಚ್ ಶೈಲಿಯ ಕಿಟಕಿಗಳು ಇರುವ, ಲಿವಿಂಗ್ ರೂಂ, ಅಡುಗೆ ಮನೆಗೆ ಹೊಂದಿಕೊಂಡಂತೆ ಗಾರ್ಡನ್ ಇರುವ ಮನೆ ಕಟ್ಟಿಸಬೇಕು ಎಂಬ ಆಸೆ ಇತ್ತು. ಜಾಗ, ಭದ್ರತೆ ದೃಷ್ಟಿಯಿಂದ ಅವುಗಳನ್ನು ಕೈಬಿಡಬೇಕಾಯಿತು.

ಆಗ ನಿವೇಶನ ಕೊಂಡು ಲೋನ್ ತೆಗೆದುಕೊಂಡು ಮನೆ ಕಟ್ಟಲು ಆರಂಭಿಸಿದೆವು. ಮೊದಲು ನಮ್ಮ ಬಜೆಟ್ ನಿರ್ಧರಿಸಿಕೊಂಡೆವು. ಪ್ಲಾನಿಂಗ್‌ಗೆ ಸಹಾಯಕ್ಕೆ ಬಂದಿದ್ದು ನಮ್ಮ ಸೋದರಮಾವ. ನಾನೂ ದಿಕ್ಕುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದ ಯಾವ ದಿಕ್ಕಿನಲ್ಲಿ ಯಾವ ಕೋಣೆ ಇರಬೇಕು ಎಂದು ನಾವೇ ಯೋಜಿಸಿದ್ದೆವು.

ಮನೆ ಒಳಗೆ ಬರುತ್ತಿದ್ದಂತೆ ಪುಟ್ಟ ವರಾಂಡ ಸ್ವಾಗತಿಸುತ್ತದೆ. ಅದಕ್ಕೆ ಹೊಂದಿಕೊಂಡಂತೆ ಒಂದು ಕೋಣೆ. ವರಾಂಡಕ್ಕೆ ತೆರೆದುಕೊಂಡಂತೆ ಹಾಲ್‌, ಡೈನಿಂಗ್ ಟೇಬಲ್, ಅಡುಗೆ ಮನೆ, ದೇವರ ಕೋಣೆ. ಮನೆ ನೋಡಲು ವಿಶಾಲವಾಗಿ ಕಾಣುವಂತೆ ಜಾಗವನ್ನು ಜಾಣ್ಮೆಯಿಂದ ಬಳಸಿಕೊಳ್ಳಲಾಗಿದೆ.

ಡ್ಯೂಪ್ಲೆಕ್ಸ್ ಮನೆಯಾಗಿದ್ದು, ಅವಶ್ಯಕತೆ ಹೆಚ್ಚು ಇಲ್ಲದ್ದರಿಂದ ಮೇಲೆ ಒಂದೇ ರೂಮನ್ನು ಕಟ್ಟಿಕೊಂಡೆವು. ಅಲ್ಲಿ ಬಾಲ್ಕನಿಯೂ ಇದೆ. ಒಂದೇ ಕೋಣೆ
ಕಟ್ಟಿದ್ದರಿಂದ ಇನ್ನೊಂದಷ್ಟು ಜಾಗ ಉಳಿದುಕೊಂಡಿತ್ತು. ಮನೆಯಲ್ಲಿ ಯಾರಿಲ್ಲದಿದ್ದರೂ ಮನೆ ಕೆಲಸದವರು ಕೆಲಸ ಮಾಡಿಕೊಂಡು ಹೋಗಲಿ ಎಂದು ಮನೆಯ ಹಿಂದೆ ಪ್ರತ್ಯೇಕ ಜಾಗ ಬಿಡಲಾಗಿದೆ.

ಆದರೆ ಇಷ್ಟು ವರ್ಷಗಳಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಾಯಿತು. ನಾವು ಮನೆ ಕಟ್ಟುವ ಸಮಯದಲ್ಲಿ ಮೂರೇ ಮನೆ ಇದ್ದಿದ್ದು. ಗಾಳಿ, ಬೆಳಕು ಸಾಕೆನ್ನಿಸುವಷ್ಟಿತ್ತು. ಈಗ ಅಕ್ಕಪಕ್ಕ, ಎದುರುಗಡೆ ಎಲ್ಲಾ ಕಡೆ ಕಟ್ಟಡಗಳು ಎದ್ದವು. ಎಲ್ಲವೂ ಮೂರು ಮಹಡಿಗಳು. ಬೆಳಕು ಕಡಿಮೆಯಾಯಿತು. ಆದ್ದರಿಂದ ಮನೆಯ ಒಂದು ಗೋಡೆಯನ್ನು ಸ್ವಲ್ಪ ಕೆಡವಿ ಕಿಟಕಿಯನ್ನು ಇರಿಸಬೇಕಾಯಿತು.

ಟೈಲ್‌ಗಳಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಂಡೆವು. ಆದರೆ ಮೂಲ ವಿನ್ಯಾಸದಲ್ಲೇನೂ ವ್ಯತ್ಯಾಸವಾಗಲಿಲ್ಲ. ಮೊದಲ ಮಹಡಿಯಲ್ಲಿ ಉಳಿದ ಜಾಗದಲ್ಲಿ ಒಂದು ಪುಟ್ಟ ಕೋಣೆಯಿರುವ ಮನೆ ಕಟ್ಟಿದೆವು. ಅದಕ್ಕೆ ಹೊರಗಿನಿಂದ ಬರಲು ಜಾಗ ಮಾಡಿಕೊಡಲೆಂದು ನನಗಿಷ್ಟವೆಂದು ಮನೆ ಹೊರಗೆ ಮಾಡಿಕೊಂಡಿದ್ದ ಪುಟ್ಟ ಕೈತೋಟವನ್ನು ಕೆಡವಿ ಮೆಟ್ಟಿಲುಗಳನ್ನು ಕಟ್ಟಬೇಕಾಯಿತು.

ಮನೆಯಲ್ಲಿ ಕೆಲವು ಗಿಡಗಳನ್ನು ಬೆಳೆಸಿಕೊಂಡಿದ್ದೇನೆ. ನನಗೆ ಗಿಡಗಳೊಂದಿಗೆ ಒಡನಾಡುವುದೆಂದರೆ ತುಂಬಾ ಇಷ್ಟ. ಅದಕ್ಕೆಂದೇ ಟೆರೇಸ್ ಗಾರ್ಡನ್ ಮಾಡುವ ಆಲೋಚನೆ ಇದೆ. ಮನೆಯ ಅಲಂಕಾರಕ್ಕೆ ಕೆಲವು ಲೈಟಿಂಗ್‌ಗಳನ್ನು, ವಾಲ್ ಹ್ಯಾಂಗಿಂಗ್‌ಗಳನ್ನು ಹೊರತುಪಡಿಸಿದರೆ  ವಿಶೇಷ ವಿನ್ಯಾಸವನ್ನೇನೂ ಮಾಡಿಸಿಲ್ಲ. ಆಗ ಆ ಪರಿಕಲ್ಪನೆಗಳ ಕುರಿತು ಗೊತ್ತೂ ಇರಲಿಲ್ಲ.

ಒಟ್ಟಿನಲ್ಲಿ ಮನೆ ಕಟ್ಟುವುದು ಒಂದು ವಿಶೇಷ ಅನುಭವ ನೀಡಿತ್ತು. ಅವಶ್ಯಕತೆಗೆ ತಕ್ಕಂತೆ ಮನೆ ರೂಪು ಪಡೆಯಿತು. ಮನೆ ಕಟ್ಟುವುದು ತಾಪತ್ರಯದ ಕೆಲಸ ಎಂದು ಅನ್ನುವುದನ್ನು ಕೇಳಿದ್ದೇನೆ. ಆದರೆ ನಮಗೆ ಹಾಗನ್ನಿಸಲಿಲ್ಲ. ಅದೊಂದು ಸುಂದರ ಅನುಭವ. ಎಲ್ಲೇ ಹೋಗಿ ಮನೆಗೆ ಬಂದು ಬಾಗಿಲು ತೆರೆದಾಕ್ಷಣ ಆರಾಮ ಎನ್ನಿಸುವಂಥ ಒಂದು ಭಾವ ಮೂಡುತ್ತದಲ್ಲ, ಅದು ಇನ್ನೆಲ್ಲಿ ಸಿಕ್ಕಲು ಸಾಧ್ಯ?

ಕಟ್ಟಿದ ಕೆಲಸ ಮುಗಿದ ಮೇಲೆ ಮುಂದಿನದ್ದೇನು? ಮನೆಗೆ ಹೆಸರಿಡುವ ಸರದಿ. ಮನೆಗೆ ಏನು ಹೆಸರಿಡಬಹುದು ಎಂದು ಕೇಳುತ್ತಿದ್ದಂತೆ, ನಾನು ಹಾಗೂ ನನ್ನ ಪತಿ ಬಾಲರಾಜ್ ಅವರು ಒಟ್ಟಿಗೇ ‘ಕೃಷ್ಣ’ ಎಂದೆವು. ಪತಿ ಬಾಲರಾಜ್‌ಗೆ ಕೃಷ್ಣ ಎಂದರೆ ಇಷ್ಟ. ಇಬ್ಬರ ಬಾಯಲ್ಲೂ ಒಂದೇ ಹೆಸರು ಒಟ್ಟಿಗೆ ಬಂದ ಮೇಲೆ ಬೇರೆ ಮಾತಿನ್ನೇನು? ಕೃಷ್ಣ ಎಂದು ಹೆಸರಿಟ್ಟು, ಆ ನೆಲೆಯಲ್ಲೇ ನೆಮ್ಮದಿ ಕಾಣುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT