ADVERTISEMENT

ಗೃಹಸಾಲ: ಯೋಜನೆಯೇ ಬಹುಮುಖ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:30 IST
Last Updated 2 ಮಾರ್ಚ್ 2017, 19:30 IST
ಗೃಹಸಾಲ: ಯೋಜನೆಯೇ ಬಹುಮುಖ್ಯ
ಗೃಹಸಾಲ: ಯೋಜನೆಯೇ ಬಹುಮುಖ್ಯ   

ವೇಶನ ಅಥವಾ ಮನೆ ಖರೀದಿ ಬಹು ದೊಡ್ಡ ಮೊತ್ತ ಬೇಕಾಗುವ ಸಂಗತಿಗಳು. ಮಧ್ಯಮ ವರ್ಗದ ಮಂದಿಗಂತೂ ವರ್ಷಾನುಗಟ್ಟಲೆ ಕೂಡಿಟ್ಟ ಹಣವೂ ಸಾಲುವುದಿಲ್ಲ. ಈ ಹೊರೆಯನ್ನು ಕಡಿಮೆ ಮಾಡುವ ಸಲುವಾಗೇ ಹುಟ್ಟಿಕೊಂಡದ್ದು ‘ಗೃಹಸಾಲ’ ಎಂಬ ಪರಿಹಾರ. ಆದರೆ ಗೃಹಸಾಲ ಎಂಬುದು ಸುಲಭವಾಗಿ ಕೈಗೆಟಕುವುದಿಲ್ಲ. ಸಾಲ ತೆಗೆದುಕೊಳ್ಳುವ ಪ್ರಕ್ರಿಯೆ ಯೋಜನಾಬದ್ಧವಾಗಿದ್ದರೆ ಮಾತ್ರ ಸುಸೂತ್ರವಾಗಿ ಸಾಲ ಪಡೆಯಬಹುದು.

ಹಾಗಿದ್ದರೆ ಸಾಲ ತೆಗೆದುಕೊಳ್ಳುವ ಮುನ್ನ ಯೋಚಿಸಬೇಕಾದ ಸಂಗತಿಗಳು ಯಾವುವು? ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಮಾನ ಮಾಸಿಕ ಕಂತು (ಇಎಂಐ) ತಿಳಿದಿರಲಿ: ಗೃಹ ಸಾಲ ತೆಗೆದುಕೊಳ್ಳಬೇಕು ನಿರ್ಧರಿಸಿದ ಮೇಲೆ ಸಾಲ ಪಾವತಿಯ ಕುರಿತೂ ತಿಳಿದುಕೊಳ್ಳಬೇಕು. ಸಾಲದ ಅವಧಿ ಹಾಗೂ ಕಟ್ಟಬೇಕಾದ ಇಎಂಐ ಬಗ್ಗೆ ಸ್ಪಷ್ಟತೆ ಇರಬೇಕು. ಹೀಗಿದ್ದರೆ ಮಾತ್ರ ಸಾಲದ ಸುಲಭ ನಿರ್ವಹಣೆ ಸಾಧ್ಯ.  ಸಾಲದ ಮೊತ್ತ ಹಾಗೂ ಅದಕ್ಕೆ ಪಾವತಿಸಬೇಕಾದ ಮಾಸಿಕ ಕಂತಿನ ಶೇಕಡಾವಾರಿನ ಕುರಿತು ತಿಳಿವಳಿಕೆ ಇರಲಿ.

ಬಜೆಟ್ ಬಗ್ಗೆ ಸ್ಪಷ್ಟತೆಯಿರಲಿ: ಸಾಲ ತೆಗೆದುಕೊಳ್ಳುವ ಮುನ್ನ ತಮ್ಮ ಹಣಕಾಸು ಸ್ಥಿತಿಗತಿ, ಪಡೆದುಕೊಳ್ಳಬಹುದಾದ ಸಾಲದ ಮೊತ್ತದ ಕುರಿತು ಸ್ಪಷ್ಟತೆಯಿರಬೇಕು. ಇದರಿಂದ ತಮ್ಮ ಬಜೆಟ್‌ಗೆ ಗರಿಷ್ಠ ಎಷ್ಟು ಸಾಲ ಪಡೆದುಕೊಳ್ಳಬಹುದು ಎಂಬುದರ ಸ್ಥೂಲ ಮಾಹಿತಿ ಲಭಿಸುತ್ತದೆ.

ನಿಮ್ಮ ಅವಶ್ಯಕತೆಗಳನ್ನು ಅವಲಂಬಿಸಿ, ಅದಕ್ಕೆ ತಕ್ಕಂತೆ ಆಯ್ಕೆಗಳ ಕುರಿತು ತಿಳಿದುಕೊಳ್ಳಬೇಕು. ಮಾಸಿಕ ಆದಾಯ ಹಾಗೂ ಆಸ್ತಿಯ ಮೌಲ್ಯದ ಮೇಲೆ ಅರ್ಹತಾ ಮಾನದಂಡಗಳು ಅವಲಂಬಿತವಾಗಿರುತ್ತದೆ. ನಿಮ್ಮ ಮಾಸಿಕ ಆದಾಯದ ಶೇ60 ಹಾಗೂ ಆಸ್ತಿ ಮೌಲ್ಯದ ಶೇ 85ರಷ್ಟು ಮೊತ್ತದ ಆಧಾರದ ಮೇಲೆ ಸಾಲ ಸಿಗಬಹುದು. ಸಾಲದ ನಿಯಮಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾವಣೆಯಾಗುತ್ತವೆ.

ಗೃಹಸಾಲದ ಮಾಹಿತಿ ಅಗತ್ಯ: ಗೃಹ ಸಾಲದ ರೀತಿ ರಿವಾಜುಗಳ ಕುರಿತು ಮೊದಲೇ ಮಾಹಿತಿ ಕಲೆ ಹಾಕಬೇಕು. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು, ಮಾನದಂಡಗಳು, ಶುಲ್ಕಗಳು, ಸಾಲ ಮಂಜೂರು ಪ್ರಕ್ರಿಯಾ ಶುಲ್ಕ (ಪರಿಷ್ಕರಣ ಶುಲ್ಕ) ಹೀಗೆ ಪುಟ್ಟ ಪುಟ್ಟ ಮಾಹಿತಿಗಳು ಬಹುಮುಖ್ಯ ಅಂಶವಾಗಿರುತ್ತವೆ.

ಯಾವಾಗ ತೆಗೆದುಕೊಳ್ಳಬಹುದು: ಖರೀದಿ ಪ್ರಕ್ರಿಯೆ ಆರಂಭಗೊಂಡ ನಂತರ ಗೃಹಸಾಲ ತೆಗೆದುಕೊಳ್ಳಲು ತೀರ್ಮಾನಿಸಬಹುದು. ಒಪ್ಪಂದಕ್ಕೆ ಬಂದ ನಂತರ ಹಾಗೂ ಮಾರಾಟಗಾರರಿಗೆ ಮುಂಗಡ ಹಣವನ್ನು ಪಾವತಿಸಿದ ನಂತರ ಗೃಹಸಾಲದ ಅನುಮೋದನೆ ಪಡೆಯಬಹುದು.

ಬಡ್ಡಿಯ ಪ್ರಮಾಣ ಮುಖ್ಯ: ಸಿಗುವ ಸಾಲದ ಮೊತ್ತಕ್ಕಿಂತ, ಬ್ಯಾಂಕ್ ವಿಧಿಸುವ ಬಡ್ಡಿ ಎಷ್ಟು ಎಂಬುದರ ಬಗ್ಗೆ ಗ್ರಾಹಕರು ಹೆಚ್ಚು ಗಮನ ನೀಡಬೇಕು. ಮೊದಲು ಬಡ್ಡಿಯನ್ನೇ  ಗಮನದಲ್ಲಿಟ್ಟುಕೊಂಡು ಗೃಹಸಾಲದ ಮೊತ್ತವನ್ನು ನಿರ್ಧರಿಸಬೇಕು.

ಫಿಕ್ಸಡ್ ಮತ್ತು ಫ್ಲೋಟಿಂಗ್ ಎಂಬ ಎರಡು ವಿಧದ ಬಡ್ಡಿಗಳು ಇರುತ್ತವೆ. ಮುಂದಿನ ದಿನಗಳಲ್ಲಿ ಬಡ್ಡಿದರ ಇಳಿಕೆಯಾದರೆ ಅದರ ಪ್ರಯೋಜನ ನಿಮ್ಮ ಸಾಲದ ಖಾತೆಗೂ ಅನ್ವಯವಾಗುವ ಅನುಕೂಲ ಪಡೆದುಕೊಳ್ಳಿ.

ಬೇರೆ ಖರ್ಚೂ ಇರುತ್ತದೆ: ಸಾಲ ಪಡೆದುಕೊಳ್ಳುವುದರೊಂದಿಗೆ ಬೇರೆ ಖರ್ಚು ವೆಚ್ಚಗಳೂ ಇರುತ್ತವೆ.  ಪ್ರಕ್ರಿಯೆ ಶುಲ್ಕ (ಪರಿಷ್ಕರಣ ಶುಲ್ಕ) ಹಾಗೂ ಒಂದು ಬಾರಿ ಪಾವತಿಸಬೇಕಾದ ಶುಲ್ಕಗಳೂ ಸೇರಿರುತ್ತವೆ. ಚಿಕ್ಕದೆನಿಸಿದರೂ ಇದೇ ಮೊತ್ತ ಖರೀದಿದಾರರಿಗೆ ಹೊರೆಯಾಗುವ ಸಾಧ್ಯತೆಯೂ ಇರುತ್ತದೆ. ಪ್ರಕ್ರಿಯೆ ಶುಲ್ಕವು (ಪರಿಷ್ಕರಣ ಶುಲ್ಕ) ಸಾಲದ ಒಟ್ಟಾರೆ ಮೊತ್ತದ ಶೇ 0.25ರಿಂದ ಶೇ2ರವರೆಗೂ ಇರುತ್ತದೆ. ಮನೆ ಕಟ್ಟುವಾಗ ಚಿಕ್ಕಪುಟ್ಟ ಉಳಿತಾಯವೂ ಮುಖ್ಯವಾಗುತ್ತದೆ.
ಅನುಮೋದನೆ ಪ್ರಕ್ರಿಯೆ: ಸಾಲವು ಮಂಜೂರಾಗಲು ಕೆಲ ಸಮಯದ  ಅಗತ್ಯವಿರುತ್ತದೆ. ಸಾಲ ಪಡೆಯುವವರ ದೃಷ್ಟಿಕೋನದಲ್ಲಿ ನೋಡುವುದಾದರೆ, ಇದು ಅತಿ ಕಷ್ಟದ ಸಮಯ. ಮನೆ ಖರೀದಿಯ ಯಾವುದೇ ಹಂತದಲ್ಲೂ ಇದು ಅನ್ವಯಿಸುತ್ತದೆ. ಅರ್ಜಿ ಸಲ್ಲಿಕೆಯಿಂದ ಹಿಡಿದು ಅಂತಿಮ ಹಂತದವರೆಗೂ ಇದು ಮುಖ್ಯ. ನಿವೇಶನ ಖರೀದಿ ಮತ್ತು ಮನೆ ಕಟ್ಟಲು ಒಟ್ಟಿಗೆ ಸಾಲ ಪಡೆಯುವ ಸ್ಥಿತಿ ನಿಮ್ಮದಾದರೆ ಇಂಥ ನಿಯಮಗಳು ಇನ್ನಷ್ಟು ಬಿಗಿಯಾಗುತ್ತವೆ. ಯೋಜನೆಯ ಹಂತ ಹಂತದ ಪ್ರಗತಿಗೆ ತಕ್ಕಂತೆ ಹಣವನ್ನೂ ಪಾವತಿಸಬೇಕಾದ್ದರಿಂದ  ಅನುಮೋದನೆ ಕುರಿತು ತಿಳಿದಿರಬೇಕು.

ಗ್ರಾಹಕರ ಸೇವೆ: ಗೃಹಸಾಲ ಎನ್ನುವುದು ದೀರ್ಘಾವಧಿ ಪ್ರಕ್ರಿಯೆ. ಆದ್ದರಿಂದ ಪ್ರಕ್ರಿಯೆ ಪೂರ್ಣಗೊಳ್ಳುವುದರ ನಡುವೆ ಹಲವು ಅವಶ್ಯಕತೆಗಳು ಹುಟ್ಟಿಕೊಳ್ಳಬಹುದು. ಇದಕ್ಕಾಗಿ ಹಲವು ಸಲ ಬ್ಯಾಂಕ್ ಸಂಪರ್ಕಿಸಿ ಚರ್ಚಿಸುವ ಸಂದರ್ಭವೂ ಇರುತ್ತದೆ.  ಬ್ಯಾಂಕ್‌ ಸಿಬ್ಬಂದಿ ಗ್ರಾಹಕರಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಈ ನಿಟ್ಟಿನಲ್ಲಿ ಮುಖ್ಯ ಎನಿಸುತ್ತೆ.

ಬ್ರ್ಯಾಂಡ್ ಕೂಡ ಬೇಕು: ಮೇಲಿನ ಈ ಎಲ್ಲಾ ಅಂಶಗಳ ಹೊರತಾಗಿಯೂ ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ‘ಬ್ರ್ಯಾಂಡ್ ಇಮೇಜ್’. ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್ ಖರೀದಿಸುವವರಿಗೆ ಇದು ಹೆಚ್ಚು ಅನ್ವಯಿಸುತ್ತದೆ. ಗೃಹಸಾಲ ಅರ್ಜಿಯ ಪ್ರಕ್ರಿಯೆ ಸುಲಲಿತವಾಗಿಸುವುದರಲ್ಲಿ ಇದು ಮುಖ್ಯ ಪಾತ್ರ ನಿರ್ವಹಿಸುತ್ತದೆ.

- ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT