ADVERTISEMENT

ಗೊಂದಲಗಳ ಸರಮಾಲೆ

ಸುರೇಖಾ ಹೆಗಡೆ
Published 15 ಡಿಸೆಂಬರ್ 2016, 19:30 IST
Last Updated 15 ಡಿಸೆಂಬರ್ 2016, 19:30 IST
ಗೊಂದಲಗಳ ಸರಮಾಲೆ
ಗೊಂದಲಗಳ ಸರಮಾಲೆ   

ಸ್ವಂತಕ್ಕೊಂದು ಜಾಗಬೇಕು, ಅಲ್ಲೊಂದು ಸೂರು ನಿರ್ಮಿಸಬೇಕು, ತಮ್ಮದೇ ಮನೆಯಲ್ಲಿ ನೆಮ್ಮದಿಯಿಂದ ಜೀವಿಸಬೇಕು ಎನ್ನುವುದು ಬೆಂಗಳೂರಿನ ನೆಲ ಮೆಟ್ಟಿದ ಬಹುತೇಕರ ಕನಸು.

ಆಸ್ತಿ ಖರೀದಿಸಲು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದ ಜನರು ನೋಟ್‌ ನಿಷೇಧದ ನಂತರ ತುಸು ನಿಧಾನಿಸಿದ್ದಾರೆ. ಡಿಸೆಂಬರ್‌ 31ರ ನಂತರ ಇಲ್ಲವೇ ನೂತನ ಬಜೆಟ್‌ ಮಂಡನೆಯಾದ ನಂತರ ರಿಯಲ್‌ ಎಸ್ಟೇಟ್‌ನಲ್ಲಿ ಹೊಸದೊಂದು ತಲ್ಲಣ ಮೂಡುತ್ತದೆ, ಆಸ್ತಿ ಬೆಲೆ ಕಡಿಮೆಯಾಗುತ್ತದೆ, ಬ್ಯಾಂಕ್‌ ಬಡ್ಡಿದರದಲ್ಲಿ ಕೂಡ ಇಳಿಕೆಯಾಗಲಿದೆ,  ಆದಾಯ ತೆರಿಗೆಯಲ್ಲಿ ಕಡಿತ ಉಂಟಾಗಲಿದೆ ಜನಸಾಮಾನ್ಯರಿಗೂ ಭೂಮಿ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ ಎನ್ನುವ ನಿರೀಕ್ಷೆ ಹೆಚ್ಚಿದೆ.

ಹೀಗಾಗಿ ಅನೇಕರು ಸದ್ಯ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ. ಸರ್ಕಾರದಿಂದ ಹೊಸ ನೀತಿ ಘೋಷಣೆಯಾಗಬಹುದು ಎಂದು ಕಾತರದಿಂದ ಕಾಯುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಲ್ಲಿ ವ್ಯಾಪಾರ ತೀರಾ ಕುಸಿದಿದೆ. ‘ನೂತನ ಬಜೆಟ್‌ ಬರುವವರೆಗೆ ಕಾಯೋಣ’ ಎನ್ನುವ ಮನಸ್ಥಿತಿ ಕೆಲವರದ್ದು. ಇನ್ನೂ ಅನೇಕರು ಈಗಲೇ ಭೂ ದರ ಕಡಿಮೆ ಮಾಡಿ ಕೊಡಿ ಎನ್ನುವ ಬೇಡಿಕೆಯನ್ನೂ ಮುಂದಿಟ್ಟಿದ್ದಾರಂತೆ.

ಜನರ ನಿರೀಕ್ಷೆ ಹೆಚ್ಚಿದೆ
ಸ್ಫಟಿಕ ಡೆವಲಪರ್ಸ್‌ ಅಂಡ್‌ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಮಂದಪ್ಪ ಅವರ ಪ್ರಕಾರ ‘ನೋಟುಗಳ ನಿಷೇಧದ ನಿರ್ಧಾರ ಹೊರ ಬಂದ ಮೇಲೆ ಜನರು ಹಿಂಜರಿಯುತ್ತಿದ್ದಾರೆ. ಭೂಮಿಯ ಬೆಲೆ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿದೆ. ನೂತನ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಹಾಯವಾಗುವಂಥ ಭೂ ನೀತಿ ಬರುತ್ತದೆ, ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಎಂಬುದು ಅವರ ಅಪೇಕ್ಷೆ. ಹೀಗಾಗಿ ಅಪಾರ್ಟ್‌ಮೆಂಟ್‌ ಇಲ್ಲವೇ ಭೂಮಿ ಖರೀದಿಸುವವರು ಸರ್ಕಾರದ ಮುಂದಿನ ನಡೆಗಾಗಿ ಕಾಯುತ್ತಿದ್ದಾರೆ. ಇನ್ನು ರಿಯಲ್‌ ಎಸ್ಟೇಟ್‌ನಲ್ಲಿ ಬಂಡವಾಳ ಹೂಡುವವರೂ ಸದ್ಯಕ್ಕೆ ಮೌನ ವಹಿಸಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ಹೀಗಾಗಿ ಕಂಪೆನಿ ಕೂಡ, ಭೂ ಖರೀದಿ, ಮಾರಾಟ, ಹೊಸ ಬೆಲೆ ಮಾರ್ಪಾಡಿಗೆ ಸಂಬಂಧಿಸಿದಂತೆ ನೂತನ ಯೋಜನೆ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳ ಬೆಳವಣಿಗೆ ಗಮನಿಸಿಯೇ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಅನೇಕ ಬಿಲ್ಡರ್‌ಗಳದ್ದಾಗಿದೆ.

ಅತ್ಯಂತ ಲಾಭದಾಯಕ ಕ್ಷೇತ್ರವಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ ಚಿಕ್ಕಪುಟ್ಟ ಬಿಲ್ಡರ್‌ಗಳಿಗೆ ತೊಂದರೆ ಉಂಟು ಮಾಡಲಿದೆ. ಮುಂದೆ ಏನಾಗಬಹುದು ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಕಲ್ಪನೆ ಇಲ್ಲದೆ ಇರುವುದರಿಂದ ಚಿಕ್ಕಪುಟ್ಟ ಬಿಲ್ಡರ್‌ಗಳಿಗೆ ಸಮಸ್ಯೆಯಾಗಲಿದೆ. ಯಾವುದು ಕಪ್ಪುಹಣ/ಬಿಳಿಹಣ ತಳಹದಿಯ ಮೇಲೆ ನಿಂತಿರುವ ಆಸ್ತಿ ಎಂದು ತಿಳಿಯದೆ ಇರುವುದೂ ಅನೇಕರ ಗೊಂದಲಕ್ಕೆ ಕಾರಣವಾಗಿದೆ.

ಇನ್ನೆಲ್ಲವೂ ಆನ್‌ಲೈನ್‌ ಮೂಲಕವೇ ವ್ಯವಹಾರ ನಡೆಯಬೇಕು ಎನ್ನುವ ನಿಯಮ ಬಂದರೆ ಅನಿವಾರ್ಯವಾಗಿ ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಕೊಂಡವರು ಅದೇ ದಾರಿ ಹಿಡಿಯಬೇಕಾಗುತ್ತದೆ. ಸೇಲ್ಸ್‌ ಟ್ಯಾಕ್ಸ್‌, ಕನ್‌ಸ್ಟ್ರಕ್ಷನ್‌ ದರ ಕಡಿತ ಸೇರಿದಂತೆ ಕೆಲ ವ್ಯವಹಾರಗಳಲ್ಲಿ ಕಡಿತ ಸಿಕ್ಕಿದರೆ ಬಿಲ್ಡರ್‌ಗಳು ಕೂಡ ಮಾರಾಟ ದರವನ್ನು ಕಡಿತಗೊಳಿಸಬಹುದು.

ಉತ್ತರ ಪ್ರದೇಶ, ರಾಜಸ್ತಾನದಿಂದ ಕಾರ್ಮಿಕರು ಬಂದು ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅವರ ಬಳಿ ಬ್ಯಾಂಕ್‌ ಅಕೌಂಟ್‌ ಇಲ್ಲ, ಹಣವನ್ನೇ ನೀಡಿ ಎನ್ನುತ್ತಿದ್ದಾರೆ. ಇನ್ನು ಅವರಿಗೆ ಅಕೌಂಟ್‌ ಮಾಡಿಕೊಡುವುದು ಎಲ್ಲ ಬಿಲ್ಡರ್‌ಗಳಿಗೆ ದುಬಾರಿ ಕೆಲಸ. ಹಣವನ್ನೇ ನೀಡಬೇಕು ಎಂದರೆ ಬ್ಯಾಂಕ್‌ನಲ್ಲಿ ಬೇಕಾದಷ್ಟು ಹಣ ತೆಗೆಯಲಾಗುತ್ತಿಲ್ಲ. ಒಟ್ಟಿನಲ್ಲಿ ಇನ್ನಾರು ತಿಂಗಳು ಈ ಕ್ಷೇತ್ರ ಗೊಂದಲದ ಗೂಡಾಗೇ ಇರುತ್ತದೆ ಎನ್ನುವುದು ಅನೇಕರ ದೂರು.

ಒಟ್ಟಿನಲ್ಲಿ ಈ ಕ್ಷೇತ್ರದ ಏಳು ಬೀಳಿನ ಬಗೆಗೆ ಜನರಲ್ಲಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳಲ್ಲಿ ಸ್ಪಷ್ಟ ಕಲ್ಪನೆ ಇಲ್ಲದೇ ಇರುವುದರಿಂದ ಮನೆ ಕೊಳ್ಳುವ, ಮಾರುವ, ಆಸ್ತಿ ಖರೀದಿಸುವ ಯೋಜನೆಯನ್ನು ಕೆಲ ದಿನಗಳ ಕಾಲ ಮುಂದೂಡುವುದು ಒಳಿತು. ಈ ಕ್ಷೇತ್ರದ ನಿಯಮಾವಳಿಗಳ ಕುರಿತು ಸ್ಪಷ್ಟತೆ ಸಿಕ್ಕ ಮೇಲೆಯೇ ಸ್ವಂತದ್ದೊಂದು ಸೂರು ಖರೀದಿಸಿ ವಾರಸುದಾರರಾಗಿ.

ಗಾಸಿಪ್‌ಗೂ ರಿಯಲ್‌ಗೂ ಅಜಗಜಾಂತರ
‘ಶೇ30ರಷ್ಟು ಬೆಲೆ ಕಡಿಮೆ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ಅದು ಹೇಗೆ ಸಾಧ್ಯ ಎಂದು ತಿಳಿಯುತ್ತಿಲ್ಲ. ನೋಟ್ ನಿಷೇಧದಿಂದ ಕಟ್ಟಡ ನಿರ್ಮಾಣ ವೆಚ್ಚ ಕಡಿಮೆ ಆಗುವುದಿಲ್ಲ. ಕಾರ್ಮಿಕರಿಗೆ ನೀಡುವ ಹಣದಲ್ಲಿಯೂ ಇಳಿಕೆ ಕಾಣುವುದಿಲ್ಲ. ಬದಲಾಗಿ ಹೆಚ್ಚೇ ಆಗುತ್ತದೆ. ಅಂದ ಮೇಲೆ ಬಿಲ್ಡರ್‌ ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡುವುದು ಸಾಧ್ಯವಿಲ್ಲ.

ನನ್ನ ಪ್ರಕಾರ ಅಪಾರ್ಟ್‌ಮೆಂಟ್‌ಗಳ ಬೆಲೆಯಲ್ಲಿ ಇಳಿಕೆ ಕಾಣುವುದಿಲ್ಲ. ಆದರೆ ಭೂಬೆಲೆಯಲ್ಲಿ ತುಸು ಕಡಿಮೆ ಆಗಬಹುದು. ಅದರಲ್ಲೂ ಸಟಿ ವ್ಯಾಪ್ತಿಯಲ್ಲಿ ದರ ಕಡಿಮೆ ಆಗದು. ಬ್ಯಾಂಕ್‌ಗಳಲ್ಲಿ ಬಡ್ಡಿದರ ಕಡಿಮೆ ಆಗಲಿದೆ ಎಂಬ ಗುಲ್ಲಿದೆ. ಆದರೆ ಅದು ಎಷ್ಟರ ಮಟ್ಟಿಗೆ ನಿಜ ಎನ್ನುವ ಬಗೆಗೆ ಯಾವ ಬ್ಯಾಂಕ್‌ಗಳೂ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಜನರು, ಬಿಲ್ಡರ್‌ಗಳು ಗೊಂದಲದಲ್ಲಿಯೇ ಇದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ವಿ2 ಹೋಲ್ಡಿಂಗ್‌ ಹೌಸಿಂಗ್‌ ಡೆವಲಪ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ನ ಪಿಎಲ್‌ ವೆಂಕಟರಾಮ ರೆಡ್ಡಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.