ADVERTISEMENT

ಚಾವಣಿ ವಿನ್ಯಾಸದಲ್ಲಿ ಮನೆಸೌಂದರ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಚಾವಣಿ ವಿನ್ಯಾಸದಲ್ಲಿ ಮನೆಸೌಂದರ್ಯ
ಚಾವಣಿ ವಿನ್ಯಾಸದಲ್ಲಿ ಮನೆಸೌಂದರ್ಯ   

* ವೆಂಕಟ್ ಸುಬ್ರಹ್ಮಣ್ಯ

ಮನೆಯ ಚಾವಣಿ ಅಂದಾಕ್ಷಣ ಬಿಳಿ ಬಣ್ಣ ಮಾತ್ರವೇ ನೆನಪಿಗೆ ಬರುತ್ತದೆ. ಆದರೆ ಈಗ ಎಲ್ಲದರಲ್ಲಿಯೂ ಹೊಸತನ್ನು ಹುಡುಕುವ ಕಾಲ. ಚಾವಣಿಗೂ ಈ ಮಾತು ಅನ್ವಯಿಸುತ್ತದೆ. ರಂಗು, ರಂಗಿನ ಚಾವಣಿಗೂ ಇಂದು ಟ್ರೆಂಡ್‌ ಆಗಿದೆ.

ಮರದ ಚಾವಣಿ, ಬಣ್ಣಗಳಿಂದ ಚಾವಣಿ ವಿನ್ಯಾಸ, ಚಾವಣಿಗೆ ವಿವಿಧ ವಿನ್ಯಾಸಗಳ ದೀಪಗಳಿಂದ ಅಲಂಕಾರ ಹೀಗೆ ನೂರಾರು ವಿಧದ ಚಾವಣಿ ವಿನ್ಯಾಸಗಳು ಲಭ್ಯವಿವೆ. ಚಾವಣಿ  ಡಿಸೈನ್‌ ಒಳಾಂಗಣ ವಿನ್ಯಾಸದಲ್ಲಿ ಪ್ರಾಮುಖ್ಯ ಪಡೆಯುತ್ತಿದೆ. ಇನ್ನು ಮಲಗುವ ಕೋಣೆ, ಮಕ್ಕಳ ಕೋಣೆ, ಅಡುಗೆ ಕೋಣೆ... ಹೀಗೆ ಮನೆಯ ಒಂದೊಂದು ಭಾಗಕ್ಕೆ ಹೊಂದಿಕೊಳ್ಳುವ ಹಾಗೆ ಚಾವಣಿ ವಿನ್ಯಾಸ ಮಾಡಿ ಮನೆಯ ಒಟ್ಟು ಸ್ವರೂಪದಲ್ಲಿಯೇ ಬದಲಾವಣೆ ತರಲಾಗುತ್ತಿದೆ.

ADVERTISEMENT

ಈಗ ಸಾಂಪ್ರದಾಯಿಕ ಮನೆಗಳಿಗಿಂತ ಆಧುನಿಕ ವಿನ್ಯಾಸದ ಮನೆ ಕಟ್ಟಲು ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಮನೆ, ಕಚೇರಿ ಅಲಂಕಾರದಲ್ಲಿ ಡಿಸೈನರ್‌ ಚಾವಣಿ ಆಳವಡಿಕೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಕಾರ್ಪೊರೇಟ್‌ ಕಚೇರಿ, ಮನೆ, ಪಾರ್ಟಿ ಹಾಲ್‌ ವಿನ್ಯಾಸದಲ್ಲಿ ಶ್ರೀಮಂತ ಕಳೆಯನ್ನು ತಂದುಕೊಡುವಲ್ಲಿ ಈ ಡಿಸೈನರ್‌ ಚಾವಣಿಗಳು ಮುಖ್ಯ ಪಾತ್ರ ವಹಿಸುತ್ತವೆ.

ಮನೆ ನಿರ್ಮಾಣ ಸಮಯದಲ್ಲಿ ಅತ್ಯುತ್ತಮ ಚಾವಣಿ ವಿನ್ಯಾಸಗಳನ್ನು ಆಯ್ಕೆ ಮಾಡುವುದು ಒಂದು ಕಲೆ. ಚಾವಣಿ ಡಿಸೈನ್‌ ಎಂಬುದು ಭಾರತೀಯ ಮನೆಗಳಿಗೆ ಹೊಸ ವಿಚಾರವಲ್ಲ, ಆದರೆ ಈಗ ಹೊಸ ಹೊಸ ವಿನ್ಯಾಸಗಳು ಹಾಗೂ ಹೆಚ್ಚಾದ ಬೇಡಿಕೆಯಿಂದ ಮನೆ ಕಟ್ಟುವ ಪ್ರಕ್ರಿಯೆ ಬದಲಾಗಿದೆ. ಮನೆಯೊಳಗೆ ಹೆಚ್ಚು ಬೆಳಕು ಬರುವಂತೆ ಚಾವಣಿ ವಿನ್ಯಾಸ ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಬಿಲ್ಡರ್‌ಗಳು, ವಾಸ್ತುಶಿಲ್ಪಿಗಳಿಗಿಂತಲೂ ಮನೆ ಮಾಲೀಕರೇ ಡಿಸೈನರ್ ಸೀಲಿಂಗ್‌ಗಳನ್ನು ಆಯ್ಕೆ ಮಾಡಿದರೆ ಒಳ್ಳೆಯದು.

ಡಿಸೈನರ್‌ ಚಾವಣಿ ಆಳವಡಿಸುವುದು ಕೊಂಚ ದುಬಾರಿಯಂತೆ ಕಂಡರೂ ಇದು ಮನೆಯ ಸೌಂದರ್ಯದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಡಿಸೈನರ್‌ ಸೀಲಿಂಗ್‌ ಕೆಲ ಉಪಯೋಗಗಳು ಇಲ್ಲಿವೆ.

ವೇಗದ ನಿರ್ಮಾಣ

ಪ್ಲಾಸ್ಟರ್‌ ಬೋರ್ಡ್‌ಗಳನ್ನು ಅತಿ ಬೇಗ ಹಾಗೂ ಸುಲಭವಾಗಿ ಮನೆಯಲ್ಲಿ ಆಳವಡಿಸಬಹುದು. ಯಾವುದೇ ವಿನ್ಯಾಸ ಇಲ್ಲದ ಚಾವಣಿ ಪ್ಲಾಸ್ಟರ್‌ ಬೋರ್ಡ್‌ಗಳನ್ನು ಒಂದು ವಾರದಲ್ಲಿ ಮನೆಗೆ ಆಳವಡಿಸಬಹುದು. ಇದರಲ್ಲಿ ಹೆಚ್ಚು ವಿನ್ಯಾಸವಿರುವ ಶೈಲಿಯನ್ನು ಆಯ್ದುಕೊಂಡರೆ ಅಳವಡಿಕೆಗೆ ಸ್ವಲ್ಪ ತಡವಾಗುತ್ತದೆ. 

ಆಧುನಿಕ ವಿನ್ಯಾಸ

ಒಳಾಂಗಣ ವಿನ್ಯಾಸದಲ್ಲಿ ಚಾವಣಿ ವಿನ್ಯಾಸ ಮುಖ್ಯವಾದ ಹಂತ. ಹೀಗಾಗಿ ಜಾಗವನ್ನು ನೋಡಿಕೊಂಡು ವಿನ್ಯಾಸಕ್ಕೆ ಯಾವುದೇ ಧಕ್ಕೆಯಾಗದಂತೆ ಆಳವಡಿಸಬೇಕು. ಒಳಾಂಗಣಕ್ಕೆ ತಕ್ಕಂತೆ ವಿವಿಧ ಬಣ್ಣಗಳ ಲೈಟುಗಳನ್ನು ಬಳಸಿ ವಿನ್ಯಾಸ ಮಾಡಿಕೊಳ್ಳಬಹುದು. ಇದು ಮನೆಗೆ ಇನ್ನಷ್ಟು ಮೆರುಗು ನೀಡುತ್ತದೆ.

ಬೆಳಕು

ಉತ್ತಮವಾಗಿ ಯೋಜಿಸಿ ನಿರ್ಮಿಸಿದ ಚಾವಣಿ ವಿನ್ಯಾಸ ಆಳವಡಿಕೆಯಿಂದ ಒಂದು ಮನೆಯನ್ನು ಉಲ್ಲಾಸಿತವಾಗಿ ಇಟ್ಟುಕೊಳ್ಳಬಹುದು. ಮನೆಯೊಳಗೆ ಹೆಚ್ಚು ಬೆಳಕು ಹರಿಯುವಂತೆ ವ್ಯವಸ್ಥೆ ಮಾಡಬಹುದು. ಅಡುಗೆ ಕೋಣೆ, ಮಲಗುವ ಕೋಣೆ, ಹಾಗೂ ಮನೆಯ ಇತರ ಕೋಣೆಗಳಿಗೆ ಅನುಗುಣವಾಗಿ ಅವಶ್ಯಕತೆಗೆ ತಕ್ಕಂತೆ ದೀಪಗಳನ್ನು ಆಳವಡಿಸಿಕೊಳ್ಳಬಹುದು.

ಒಳಾಂಗಣ ವಿನ್ಯಾಸಕ್ಕೆ ತಕ್ಕಂತೆ ಸೀಲಿಂಗ್‌

ಕಿಟಕಿ ಮತ್ತು ಬಾಗಿಲುಗಳನ್ನು ಚಾವಣಿಯ ವಿನ್ಯಾಸಕ್ಕೆ ತಕ್ಕಂತೆ ರೂಪಿಸಿದರೆ ಮನೆ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಇದು ಕಪ್ಪು ಬಣ್ಣದಲ್ಲಿದ್ದರೆ ಮತ್ತಷ್ಟು ಮೆರುಗು ನೀಡಬಹುದು.  ಮರವನ್ನೂ ಬಳಸಿ ಈಗ ಚಾವಣಿ ವಿನ್ಯಾಸ ಮಾಡುತ್ತಾರೆ. ಮರದ ಸೀಲಿಂಗ್‌ ಬಳಸಿದಾಗ ಬೆಳಕನ್ನು ಸರಿಯಾಗಿ ಬಳಸಿಕೊಂಡರೆ ಕೋಣೆಯ ಅಂದವೇ ಬದಲಾಗುತ್ತದೆ. ಸೀಲಿಂಗ್‌ ಡಿಸೈನ್‌ ನಾವು ಆಯ್ಕೆ ಮಾಡಿಕೊಳ್ಳುವಾಗ ಒಳಾಂಗಣ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡರೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.