ADVERTISEMENT

ದುಡ್ಡು ಎಲ್ಲಿ ಬೇಗ ಬೆಳೆಯುತ್ತೆ...

ಬಾಲಚಂದ್ರ
Published 26 ಜನವರಿ 2017, 19:30 IST
Last Updated 26 ಜನವರಿ 2017, 19:30 IST
ದುಡ್ಡು ಎಲ್ಲಿ ಬೇಗ ಬೆಳೆಯುತ್ತೆ...
ದುಡ್ಡು ಎಲ್ಲಿ ಬೇಗ ಬೆಳೆಯುತ್ತೆ...   

ಹೂಡಿಕೆದಾರರು ಹಾಗೂ ಖರೀದಿದಾರರ ಪಾಲಿಗೆ 2016 ಭಾರೀ ನಿರೀಕ್ಷೆ ಹುಟ್ಟುಹಾಕಿದ ವರ್ಷ. ಕೆಲ ರಾಜಕೀಯ ಕಾರಣ ಹಾಗೂ ಮೂಲಸೌಕರ್ಯ ಒದಗಿಸುವ ವಿಚಾರವಾಗಿ ಕಾನೂನು ಹೋರಾಟಗಳು ವರ್ಷವಿಡೀ ನಡೆದವು. ಆದರೆ ಎರಡೂ ವರ್ಗಕ್ಕೆ ನಿರೀಕ್ಷಿತ ಫಲ ಸಿಗಲಿಲ್ಲ.

ಕಾವೇರಿ ನದಿ ನೀರು ಹಂಚಿಕೆ ಹೋರಾಟ, ಕೆರೆಗಳ ಜಾಗದ ವಿಚಾರವಾಗಿ ಬಫರ್‌ ಜೋನ್‌ಗೆ ಸಂಬಂಧಿಸಿದಂತೆ ಹಸಿರು ನ್ಯಾಯಾಧೀಕರಣ ನೀಡಿದ ಮಹತ್ವದ ತೀರ್ಪು, ಒತ್ತುವರಿ ಕುರಿತಂತೆ ಸರ್ಕಾರ ತೆಗೆದುಕೊಂಡು ನಿಲುವು  ಹಾಗೂ ಅಕ್ರಮ–  ಸಕ್ರಮ ನೀತಿಗಳು ಗೊಂದಲಗಳಿಗೆ ಮೂಲ ಕಾರಣಗಳಾದವು.

ಜೂನ್ ನಂತರ ರಿಯಲ್‌ ಎಸ್ಟೇಟ್‌ ಉದ್ಯಮವು ನಿಧಾನವಾಗಿ ಚೇತರಿಸಿಕೊಂಡಿತು. ಈ ಕ್ಷೇತ್ರದ ಉದ್ಯೋಗವೂ ಏರುಹಾದಿಯತ್ತ ಸಾಗಿತು.
‘ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕರಡು ಮಸೂದೆ’ (ರೆರಾ), ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯ ಘೋಷಣೆ  ರಿಯಲ್‌ ಎಸ್ಟೇಟ್ ಜಗತ್ತನ್ನು ತೀವ್ರವಾಗಿ ಪ್ರಭಾವಿಸಿತು. ಗರಿಷ್ಠ ಬೆಲೆಯ ನೋಟು ರದ್ದತಿಯಿಂದಾಗಿ ವಹಿವಾಟು ಕುಂಠಿತಗೊಂಡು ಬೆಲೆ ಕುಸಿತದ ಭೀತಿ ಮೂಡಿತು. ಇನ್ನೊಂದೆಡೆ ಇದು ಹೂಡಿಕೆದಾರರಿಗೆ ಸಕಾಲ ಎಂಬ ಮಾತೂ ಕೇಳಿ ಬಂತು.

ಈ ಹಿನ್ನೆಲೆಯಲ್ಲಿ ನಾವು 2017ರ ಬೆಳವಣಿಗೆಗಳನ್ನು ವಿಶ್ಲೇಷಿಸಬೇಕಾಗುತ್ತದೆ. ನಿರೀಕ್ಷೆಯ ಪ್ರಕಾರ, ಈ ವರ್ಷ ಬೆಂಗಳೂರಿನ ನಾಲ್ಕೂ ದಿಕ್ಕುಗಳು ಬೃಹತ್‌ ಪ್ರಮಾಣದಲ್ಲಿ ವಿಸ್ತಾರವಾಗಲಿದೆ. ಅದರಲ್ಲೂ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ಹೊಸ ಹೊಸ ಯೋಜನೆಗಳು ತಲೆಯೆತ್ತಲಿವೆ. ಅದೇ ರೀತಿ ಬೆಂಗಳೂರಿನ ಉತ್ತರ ಭಾಗದಲ್ಲಿ ಈಗಾಗಲೇ ಮುಗಿದಿರುವ ಯೋಜನೆಗಳು ಖರೀದಿದಾರರ ಕೈಸೇರಲಿವೆ. ಒಂದರ್ಥದಲ್ಲಿ ಉದ್ಯಮಿಗಳು ಹಾಗೂ ಖರೀದಿದಾರರ ಪಾಲಿಗೆ 2017 ಸಂತಸದ ವರ್ಷವಾಗಲಿದೆ.

ಹೂಡಿಕೆಗೆ ಸೂಕ್ತ
ಹೆಣ್ಣೂರು ರಸ್ತೆ:
ಕಳೆದ ಕೆಲವು ವರ್ಷಗಳಿಂದ ಹೆಣ್ಣೂರು ರಸ್ತೆಯು  ಪ್ರಮುಖ ವಸತಿ ವಲಯವಾಗಿ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಸಣ್ಣ ಹಾಗೂ ಮಧ್ಯಮ ಮಾರುಕಟ್ಟೆಯಾಗಿ ಗುರುತಿಸಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ತಂತ್ರಜ್ಞಾನ ಹಾಗೂ ಬ್ಯುಸಿನೆಸ್‌ ಪಾರ್ಕ್‌ಗಳು ತಲೆಯೆತ್ತಲಿವೆ. ವಸತಿ ಬೆಲೆಯೂ ನಿಧಾನವಾಗಿ ಏರಿಕೆಯಾಗಲಿದೆ. ನಿವೇಶನ ಹಾಗೂ ಬಾಡಿಗೆ ದರವು ತೀವ್ರತರದಲ್ಲಿ ಏರಿಕೆ ಕಾಣಲಿದೆ.

ಕೆ.ಆರ್‌.ಪುರ:  ಹಳೇ ಮದ್ರಾಸ್‌ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 75ನ್ನು ಸಂಪರ್ಕಿಸುವ ಹೊರವರ್ತುಲ ರಸ್ತೆಯು ಹಾದುಹೋಗುವ ಮೂಲಕ ಪ್ರಮುಖ ವ್ಯಾವಹಾರಿಕ ಸ್ಥಳವಾಗಿ ಗುರುತಿಸಿಕೊಂಡಿದೆ. ಪೂರ್ವ ಬೆಂಗಳೂರಿನಲ್ಲಿ ಬಹುಬೇಡಿಕೆಯ ವಸತಿ ಸ್ಥಳವಾಗಿ ಗುರುತಿಸಿಕೊಂಡಿದ್ದು, ವಸತಿ ಹಾಗೂ ವ್ಯಾವಹಾರಿಕವಾಗಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ದಾಖಲಿಸಿದೆ.  ಉಳಿದಂತೆ ವೈಟ್‌ಫೀಲ್ಡ್‌ ಹಾಗೂ ಮಾನ್ಯತಾಟೆಕ್‌ಪಾರ್ಕ್‌ ಸುತ್ತ ಐಟಿ ಉದ್ಯೋಗಿಗಳ ನೆಚ್ಚಿನ ವಸತಿ ಯೋಗ್ಯ ಸ್ಥಳಗಳಾಗಿವೆ.

ಏರ್‌ಪೋರ್ಟ್‌ ರಸ್ತೆ: ಕೆಲವು ವರ್ಷಗಳ ಹಿಂದಿನ ಮಾತು. ಅಭಿವೃದ್ಧಿಯಿಂದ ದೂರವೇ ಉಳಿದಿದ್ದ ಈ ಪ್ರದೇಶದಲ್ಲಿ ಭೂಮಿ ಖರೀದಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಈ ಕಾರಣದಿಂದಲೇ ನಿವೃತ್ತ ಉದ್ಯೋಗಿಗಳು ಹಾಗೂ ಕಡಿಮೆ ವೇತನ ಹೊಂದಿದ್ದ ಉದ್ಯೋಗಿಗಳೇ ಇಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿದ್ದರು.

ಸದ್ಯದ ಸ್ಥಿತಿಯಲ್ಲಿ ಈ ಭಾಗದಲ್ಲಿ ಜಾಗ ಹೊಂದಿರುವುದೇ ಪ್ರತಿಷ್ಠೆಯ ವಿಚಾರವಾಗಿದೆ. ಈಗಂತೂ ಶಾಪಿಂಗ್‌ ಮಾಡುವವರ ನೆಚ್ಚಿನ ತಾಣವೂ ಹೌದು.
ಇಂದಿರಾನಗರದ ಸುತ್ತಮುತ್ತಲಿರುವ ಹಲವು ರೀಟೆಲ್‌ ಸ್ಟೋರ್‌ಗಳು ಇಲ್ಲಿನ ಮೌಲ್ಯವನ್ನು ಹೆಚ್ಚಿಸಿವೆ. ಇಲ್ಲಿಂದಲೇ ಮೆಜೆಸ್ಟಿಕ್‌ಗೆ ನೇರ ಮೆಟ್ರೋ ರೈಲು ಸೌಲಭ್ಯ ಕೂಡ ಲಭ್ಯವಿದೆ. ಈ ಭಾಗದಲ್ಲಿ ಆಸ್ತಿ ಮೌಲ್ಯವೂ ಒಂದೇ ಸಮನೆ ಏರಿಕೆಯಾಗುತ್ತಿದೆ.

ಹಳೇ ಮದ್ರಾಸ್‌ ರಸ್ತೆ: ಈ ಭಾಗವೂ ಮೊದಲಿನಿಂದಲೂ ವಸತಿಯೋಗ್ಯ ಸ್ಥಳವಾಗಿ ಗುರುತಿಸಿಕೊಂಡಿದೆ. ವೈಟ್‌ಫೀಲ್ಡ್‌ ಹಾಗೂ ಐಟಿ ವಿಶೇಷ ಆರ್ಥಿಕ ವಲಯವೂ ಹಾದುಹೋಗಿದೆ. ಈ ಕಾರಣದಿಂದ ಈ ರಸ್ತೆಯ ಸುತ್ತಲೂ ಭೂಮಿಯ ಬೇಡಿಕೆ ನಿರಂತರ ಏರುಮುಖದಲ್ಲಿ ಸಾಗಿದೆ. ಬೈಯಪ್ಪನಹಳ್ಳಿಗೆ ಮೆಟ್ರೋ ಸೌಕರ್ಯವಿರುವುದು ನಿವೇಶನ ಮೌಲ್ಯದ ಏರಿಕೆಗೆ ಮುಖ್ಯ ಕಾರಣ.

ಬನ್ನೇರುಘಟ್ಟ ರಸ್ತೆ: ವಾಣಿಜ್ಯ ಹಾಗೂ ಐಟಿ ವಲಯಗಳನ್ನು ಹೊಂದಿರುವ ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲದೆಡೆಗೆ  ಸುಸಜ್ಜಿತ ಸಾರಿಗೆ ವ್ಯವಸ್ಥೆ ಹೊಂದಿದೆ. ‘ನಮ್ಮ ಮೆಟ್ರೋ’ ಯೋಜನೆಯ ಎರಡನೇ ಹಂತವೂ ಇದೇ ಮಾರ್ಗದಲ್ಲಿ ಹಾದುಹೋಗಲಿದ್ದು, ಇಲ್ಲಿನ ರಿಯಲ್‌ ಎಸ್ಟೇಟ್‌  ಮೌಲ್ಯ ಮತ್ತಷ್ಟು ಏರಿಕೆಯಾಗಲಿದೆ.

ಸರ್ಜಾಪುರ ರಸ್ತೆ: ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿಯಂತಹ ಐಟಿ ಕ್ಲಸ್ಟರ್‌ ಹಾಗೂ ಹೊರವರ್ತುಲ ರಸ್ತೆಗೆ ನೇರ ಸಂಪರ್ಕ ಹೊಂದಿರುವುದರಿಂದ ಬಂಡವಾಳ ಹೂಡಿಕೆಗೆ ಆಕರ್ಷಕ ತಾಣ.  ಈ ಭಾಗದಲ್ಲಿ ಬೃಹತ್‌ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರುತ್ತಿದ್ದು, ಕಚೇರಿ ಜಾಗವನ್ನು ಲೀಸ್‌ ನೀಡುವ ವ್ಯವಸ್ಥೆಯೂ ಹೆಚ್ಚು ಪ್ರಾಮುಖ್ಯ ಪಡೆದುಕೊಂಡಿದೆ.

ಹೊರವರ್ತುಲ ರಸ್ತೆ ಕಾರಣದಿಂದ ಹಲವು ಟೆಕ್‌ ಪಾರ್ಕ್‌ಗಳು ನಿರ್ಮಾಣ ಹಂತದಲ್ಲಿದ್ದು, ಸಣ್ಣ ಪ್ರಮಾಣದ ಉದ್ಯಮಗಳು ಗರಿಗೆದರಿವೆ. ಕಳೆದೆರಡು ವರ್ಷಗಳಲ್ಲಿ ರಿಯಲ್‌ ಎಸ್ಟೇಟ್ ವಲಯ ಯಥಾಸ್ಥಿತಿ ಕಾಯ್ದುಕೊಂಡಿದೆ. ಸಣ್ಣ ಮಾರುಕಟ್ಟೆಯೂ ಚೆನ್ನಾಗಿ ವೃದ್ಧಿಯಾಗಿದೆ. ಆದರೆ ದೊಡ್ಡ ಯೋಜನೆಗಳು ಹೆಚ್ಚು ಪ್ರಗತಿ ಸಾಧಿಸಲಿಲ್ಲ. 2017ರಲ್ಲಿ ಬೃಹತ್‌ ಯೋಜನೆಗಳು ಮುಕ್ತಾಯಗೊಂಡು ಖರೀದಿದಾರರಿಗೆ ಲಭ್ಯವಾಗಲಿವೆ. ಇದು ಒಟ್ಟಾರೆ ವಹಿವಾಟಿನ ಗಾತ್ರದ ಮೇಲೆ ಪರಿಣಾಮ ಬೀರಲಿದೆ.

ಭರವಸೆ ಹೆಚ್ಚಿದೆ
ರಿಯಲ್‌ ಎಸ್ಟೇಟ್‌ ಕ್ಷೇತ್ರದತ್ತ ಸರ್ಕಾರ ಗಮನ ಹರಿಸುತ್ತಿದೆ. ಕಾಯ್ದೆಗಳ ಸಮರ್ಪಕ ಅನುಷ್ಠಾನದಿಂದ ಏಕರೂಪದ ದರ ನಿಗದಿ, ಮಾರಾಟ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ. ಬೆಂಗಳೂರು ವೃತ್ತಿಪರರು, ಎನ್‌.ಆರ್‌.ಐ, ಹೂಡಿಕೆದಾರರು, ಖರೀದಿದಾರರ ಮೆಚ್ಚಿನ ಸ್ಥಾನ ಆಗಿದೆ.

ಕನಕಪುರ ರೋಡ್‌ ಕಾರಿಡಾರ್‌ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗುತ್ತಿದೆ. ತುಸು ದೂರ ಎನಿಸಿದರೂ ಮುಂದಿನ 5ರಿಂದ 7 ವರ್ಷದಲ್ಲಿ ಈ ಪ್ರದೇಶ ಉತ್ತಮ ಪ್ರಗತಿ ಕಾಣಲಿದೆ. ನೈಸ್‌ ಕಾರಿಡಾರ್‌, ಫೆರಿಪೆರಲ್‌ ರಿಂಗ್‌ ರಸ್ತೆ, ಕನಕಪುರ ರಸ್ತೆ ವಿಸ್ತರಣೆ, ಮೆಟ್ರೊ ಸಂಪರ್ಕ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ರಸ್ತೆಯ ವಿಸ್ತರಣೆ, ಮನರಂಜನಾ ಪಾರ್ಕ್‌ಗಳು ಈ ಭಾಗದ ಸ್ವರೂಪ ಬದಲಿಸಲಿವೆ. ಥಣಿಸಂದ್ರ– ಹೆಣ್ಣೂರು ರಸ್ತೆ, ಬೆಂಗಳೂರು ಸಿಟಿ ಸೆಂಟರ್‌ ಸಿಬಿಡಿ ಪ್ರದೇಶ, ಮೈಸೂರು ರಸ್ತೆಗಳಲ್ಲೂ ರಿಯಲ್‌ ಎಸ್ಟೇಟ್‌ಗೆ ಬೇಡಿಕೆ ಹೆಚ್ಚಲಿದೆ.
-ಆಶಿಶ್‌ ಪುರವಂಕರ
ವ್ಯವಸ್ಥಾಪಕ ನಿರ್ದೇಶಕರು, ಪುರವಂಕರ ಪ್ರಾಜೆಕ್ಟ್‌ ಲಿಮಿಟೆಡ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.