ADVERTISEMENT

ಬದಲಾಗಲಿದೆ ರಿಯಾಲ್ಟಿ ಭವಿಷ್ಯ

ಗಣಪತಿ ಶರ್ಮಾ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST
ಬದಲಾಗಲಿದೆ ರಿಯಾಲ್ಟಿ ಭವಿಷ್ಯ
ಬದಲಾಗಲಿದೆ ರಿಯಾಲ್ಟಿ ಭವಿಷ್ಯ   

ನಗರ ಬೆಳೆಯುತ್ತಾ ಹೋದಂತೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬೇಡಿಕೆ ಹೆಚ್ಚುವುದು ಸಹಜ. ಉತ್ತಮ ಮೂಲಸೌಕರ್ಯ ಇರುವ ಪ್ರದೇಶಗಳಲ್ಲಿ ವಸತಿ ಹೊಂದಲು ಜನ ಬಯಸುವುದು ಸಾಮಾನ್ಯ. ಹೀಗಾಗಿ ಮೂಲಸೌಕರ್ಯ ಯೋಜನೆಗಳು ರಿಯಲ್ ಎಸ್ಟೇಟ್ ಉದ್ಯಮದ ಭವಿಷ್ಯದ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಬೆಂಗಳೂರು ಮಹಾನಗರವೂ ಇದಕ್ಕೆ ಹೊರತಲ್ಲ.

ಹೌದು, ಪ್ರಸ್ತುತ ಹಮ್ಮಿಕೊಳ್ಳಲಾಗಿರುವ ಕೆಲವು ಪ್ರಮುಖ ಯೋಜನೆಗಳು ನಗರದ ರಿಯಲ್ ಎಸ್ಟೇಟ್ ಉದ್ಯಮದ ಭವಿಷ್ಯವನ್ನು ಬದಲಾಯಿಸುವ ಸಾಧ್ಯತೆ ಇದೆ. ಯೋಜನೆಗಳ ಕಾಮಗಾರಿ ಅಂತಿಮಗೊಳ್ಳುವ ಹೊತ್ತಿಗೆ ಕೆಲ ಪ್ರದೇಶಗಳಲ್ಲಿ ವಸತಿಗಾಗಿ ಬೇಡಿಕೆ ಹೆಚ್ಚಾಗಬಹುದು.

ಇವುಗಳಲ್ಲಿ ಪ್ರಮುಖವಾದದ್ದು ಹೆಣ್ಣೂರು ಮೇಲ್ಸೇತುವೆ ಯೋಜನೆ. ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಲಿಂಗರಾಜಪುರ ಮತ್ತು ಹೆಣ್ಣೂರು ಮಧ್ಯೆ ಸಿಗ್ನಲ್ ಮುಕ್ತ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಯೋಜನೆ ಹಮ್ಮಿಕೊಂಡಿದೆ. 920 ಮೀಟರ್ ಉದ್ದದ ಮೇಲ್ಸೇತುವೆಯ ಕಾಮಗಾರಿ 2011ಕ್ಕೇ ಪೂರ್ಣಗೊಳ್ಳಬೇಕಿತ್ತು.

ಆದರೆ, ಭೂಸ್ವಾಧೀನಕ್ಕೆ ತೊಡಕಾಗಿರುವುದರಿಂದ ಯೋಜನೆ ಸ್ಥಗಿತಗೊಂಡಿದೆ. ಮೂಲಗಳ ಪ್ರಕಾರ, ಯೋಜನೆಗೆ ಕರ್ನಾಟಕ ವಿದ್ಯುತ್ ನಿಗಮದ ಅನುಮತಿ ಬೇಕಿದ್ದು, ಇನ್ನೂ ದೊರೆತಿಲ್ಲ. ಆದಾಗ್ಯೂ, ಶೀಘ್ರ ಕಾಮಗಾರಿ ಆರಂಭಿವುದಾಗಿ ಬಿಡಿಎ ಇತ್ತೀಚೆಗೆ ಘೋಷಿಸಿತ್ತು. ಯೋಜನೆ ಪೂರ್ಣಗೊಂಡಲ್ಲಿ ಹೆಣ್ಣೂರು ಮತ್ತು ಲಿಂಗರಾಜಪುರಕ್ಕೆ ಹೊಂದಿಕೊಂಡಿರುವ ಹೊರ ವರ್ತುಲ ರಸ್ತೆಯ ಪ್ರದೇಶಗಳಲ್ಲಿ ಉದ್ಯಮ ಚಟುವಟಿಕೆಗಳು ಹೆಚ್ಚಾಗಲಿವೆ.

ನಮ್ಮ ಮೆಟ್ರೊ: ಗಾತ್ರ ಮತ್ತು ನಿಲ್ದಾಣಗಳ ಆಧಾರದಲ್ಲಿ ‘ನಮ್ಮ ಮೆಟ್ರೊ’ ದೇಶದ ಎರಡನೇ ಅತಿ ದೊಡ್ಡ ಮೆಟ್ರೊವಾಗಿದೆ. ಎರಡು ಹಂತಗಳಲ್ಲಿ ಇದರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ಎರಡನೇ ಹಂತ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಎಂ.ಜಿ. ರಸ್ತೆ ಮೂಲಕ ಹಾದುಹೋಗುವ ಗೊಟ್ಟಿಗೆರೆ–ನಾಗವಾರ ನಡುವಣ ಮಾರ್ಗ 2020ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್.ಪುರ ನಡುವಣ 18 ಕಿ.ಮೀ. ಮೆಟ್ರೊ ಮಾರ್ಗ ಪ್ರಮುಖ ಸಂಪರ್ಕ ಸೇತುವಾಗಲಿದೆ. ಇದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. 2ಎ ಹಂತದ ಕಾಮಗಾರಿಯಲ್ಲಿ ಹೊರವರ್ತುಲ ರಸ್ತೆ ಬಳಿ 13 ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಎರಡನೇ ಹಂತದ ಮೆಟ್ರೊ ಕಾಮಗಾರಿ ಪೂರ್ಣಗೊಂಡ ಬಳಿಕ ವಿಶೇಷವಾಗಿ ಉತ್ತರ ಬೆಂಗಳೂರಿಗೆ ಪ್ರಯೋಜನವಾಗಲಿದೆ. ನಾಗವಾರ, ವಿದ್ಯಾರಣ್ಯಪುರ, ಹೆಗ್ಡೆ ನಗರ, ಎಚ್‌ಎಸ್‌ಆರ್ ಲೇಔಟ್, ಬೆಳಂದೂರು, ಮಾರತ್ತಹಳ್ಳಿ, ದೊಡ್ಡಾನೆಕುಂಡಿ ಮತ್ತು ಮಹದೇವಪುರ ನಿವಾಸಿಗಳಿಗೆ ಅನುಕೂಲವಾಗಲಿದ್ದು, ಆ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಚಟುವಟಿಕೆಗಳು ಗರಿಗೆದರಿಕೊಳ್ಳಲಿವೆ.

ಸ್ಯಾಟಲೈಟ್ ಟೌನ್ ವರ್ತುಲ ರಸ್ತೆ ಯೋಜನೆ: ಒಟ್ಟು 364 ಕಿ.ಮೀ. ಉದ್ದದ, 8 ಪಥಗಳ ಪ್ರಸ್ತಾವಿತ ಸ್ಯಾಟಲೈಟ್ ಟೌನ್ ವರ್ತುಲ ರಸ್ತೆ ಯೋಜನೆ ನಗರದ ಸ್ಯಾಟಲೈಟ್ ಟೌನ್‌ಗಳ ನಡುವೆ ಸಂಪರ್ಕ ಸೇತುವಾಗಲಿದೆ. ಇದರಿಂದ ಹೊಸಕೋಟೆ, ದೇವನಹಳ್ಳಿ, ರಾಮನಗರ ಮತ್ತು ದೊಡ್ಡಬಳ್ಳಾಪುರದ ನಡುವಣ ಸಂಚಾರ ಸುಗಮವಾಗಲಿದೆ.

ಇದುವರೆಗೆ, ನಗರದ ರಿಯಲ್ ಎಸ್ಟೇಟ್ ಉದ್ಯಮವು ಹೊರ ವರ್ತುಲ ರಸ್ತೆಯನ್ನು ಹೆಚ್ಚಾಗಿ ಅವಲಂಬಿಸಿತ್ತು. ಆದರೆ, ಇದೀಗ ಉದ್ಯಮಿಗಳ ಚಿತ್ತ ಸ್ಯಾಟಲೈಟ್ ಟೌನ್ ವರ್ತುಲ ರಸ್ತೆ ಯೋಜನೆಯತ್ತ ನೆಟ್ಟಿದೆ. ಯೋಜನೆ ಹಮ್ಮಿಕೊಳ್ಳಲಾಗಿರುವ ಪ್ರದೇಶಗಳಲ್ಲಿ ಈಗಾಗಲೇ ಹಲವು ಉದ್ಯಮಿಗಳು ಭೂಮಿ ಖರೀದಿಸಿರುವುದೂ ಬೆಳಕಿಗೆ ಬಂದಿದೆ.

ಮುಂದಿನ 10 ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ಉದ್ಯಮಕ್ಕೆ ಬೇಡಿಕೆ ಹೆಚ್ಚಲಿದೆ ಎಂಬುದು ಉದ್ಯಮಿಗಳ ಲೆಕ್ಕಾಚಾರ. ಯೋಜನೆ ಪೂರ್ಣಗೊಂಡಲ್ಲಿ ಭೂಮಿಯ ಬೆಲೆ ಹೆಚ್ಚುವುದು ಖಂಡಿತ ಎಂಬುದು ಉದ್ಯಮಿಗಳ ಅಂಬೋಣ.

ವೈಟ್‌ಫೀಲ್ಡ್ – ಬೈಯಪ್ಪನಹಳ್ಳಿ ಉಪನಗರ ರೈಲ್ವೆ: ವೈಟ್‌ಫೀಲ್ಡ್ ಮತ್ತು ಬೈಯಪ್ಪನಹಳ್ಳಿ ಮಧ್ಯೆ ಉಪನಗರ ರೈಲ್ವೆ ಆರಂಭಿಸಲು 2016ರ ನವೆಂಬರ್‌ನಲ್ಲಿ ರೈಲ್ವೆ ಇಲಾಖೆ ಹಸಿರುನಿಶಾನೆ ತೋರಿದೆ. ಮಂಡ್ಯ ಮತ್ತು ಕೆಂಗೇರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವವೂ ಈ ಯೋಜನೆಯಲ್ಲಿದೆ.ಮೊದಲ ಹಂತದ ಕಾಮಗಾರಿಗೆ ₹2,500 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.

ಯೋಜನೆಗೆ ಅರ್ಧ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಹೀಗಾಗಿ ರಾಜ್ಯ ಸಚಿವಸಂಪುಟದ ಅನುಮೋದನೆ ದೊರೆಯುವುದು ಬಾಕಿ ಇದೆ. ಈ ಯೋಜನೆ ಪೂರ್ಣಗೊಂಡಲ್ಲಿ ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ, ಕೆಂಗೇರಿ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇನ್ನಷ್ಟು ಉತ್ತೇಜನ ದೊರೆಯಲಿದೆ.

ADVERTISEMENT

ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ ಕಲ್ಪಿಸುವ ಯೋಜನೆಯಿಂದ ಥಣಿಸಂದ್ರ ಮುಖ್ಯರಸ್ತೆ ಮತ್ತು ಹೆಣ್ಣೂರು ರಸ್ತೆ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಅಭಿವೃದ್ಧಿ ಹೊಂದಲಿದೆ.

ಈ ಮಧ್ಯೆ, ಉಕ್ಕಿನ ಸೇತುವೆ ಯೋಜನೆ ರದ್ದಾಗಿರುವುದೂ ಪರಿಣಾಮ ಬೀರಲಿದೆ. ಒಂದು ವೇಳೆ, ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದರೆ ಹೆಬ್ಬಾಳ, ಥಣಿಸಂದ್ರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇನ್ನಷ್ಟು ಪ್ರಯೋಜನವಾಗುತ್ತಿತ್ತು.

ಒಟ್ಟಿನಲ್ಲಿ, ನಗರದ ರಿಯಲ್ ಎಸ್ಟೇಟ್ ಉದ್ಯಮ ಮತ್ತು ಉದ್ಯಮಿಗಳು ಮೂಲಸೌಕರ್ಯ ಯೋಜನೆಗಳನ್ನೇ ನೆಚ್ಚಿಕೊಂಡಿರುವುದು ದಿಟ. ವಸತಿ ಬೇಡಿಕೆ ಹೆಚ್ಚಿಸುವಲ್ಲಿ ಈ ಯೋಜನೆಗಳು ಹೇಗೆ ನೆರವಾಗಲಿವೆ ಎಂಬುದನ್ನು ಕಾದು ನೋಡಬೇಕು.
(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.