ADVERTISEMENT

ಮನೆ–ಮನಗಳನ್ನು ಚೆಂದವಾಗಿಸುವ ಹಬ್ಬ

ಮನೆ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಮನೆ–ಮನಗಳನ್ನು ಚೆಂದವಾಗಿಸುವ ಹಬ್ಬ
ಮನೆ–ಮನಗಳನ್ನು ಚೆಂದವಾಗಿಸುವ ಹಬ್ಬ   

ಭಾರತೀಯರು ಆಧುನಿಕತೆಗೆ ಎಷ್ಟೇ ತೆರೆದುಕೊಂಡಿದ್ದರೂ ಹಬ್ಬ–ಹರಿದಿನ ಬಂದರೆ  ವಿಶೇಷ ಆಸ್ಥೆ, ಪ್ರೀತಿ ತೋರುತ್ತಾರೆ. ಹೀಗಾಗಿ ಕೆಲಸದ ಒತ್ತಡವಿದ್ದರೂ ಮನೆಯನ್ನು ಒಪ್ಪ ಓರಣವಾಗಿಸುತ್ತಾರೆ. ಮನೆಯ ಮೂಲೆ ಮೂಲೆಯ ಕಸ ತೆಗೆದು ಸ್ವಚ್ಛವಾಗಿಸಿದರೇ ಅವರ ಮನಸಿಗೆ ನಿರಾಳ.

ಅದರಲ್ಲೂ ಹೊಸ ವರ್ಷಕ್ಕೆ ನಾಂದಿಯಾಗುವ ಯುಗಾದಿಗೆ ವಿಶೇಷ ತಯಾರಿ ಮಾಡಲೇಬೇಕು. ಹೊಸವರ್ಷದ ಪ್ರಾರಂಭ ಪವಿತ್ರವೂ ಮಂಗಳಕರವೂ ಹೌದು. ಖುಷಿಯನ್ನು ಹೊತ್ತು ತರುವ ಈ ಹಬ್ಬಕ್ಕೆ ಮನೆಯನ್ನು ಸ್ವಚ್ಛಗೊಳಿಸಿ ಅಲಂಕರಿಸಬೇಕಾದುದು ಮುಖ್ಯ. ಮನೆಯ ಶುದ್ಧಿ ಹಾಗೂ ಅಲಂಕರಿಸುವ ಕೈಂಕರ್ಯಕ್ಕೆ ಇಲ್ಲೊಂದಿಷ್ಟು ಸಲಹೆಗಳಿವೆ.

* ಬಿಳಿಯ ಬಣ್ಣ ಶ್ರೇಷ್ಠ: ಮನಸಿನಿಂದ ಹಾಗೂ ಮನೆಯ ಸುತ್ತಮುತ್ತಲಿನ ಹಳೆಯ ಹಾಗೂ ನಕಾರಾತ್ಮಕ ಅಂಶಗಳನ್ನು ತೊಡೆದುಹಾಕಿ, ಹೊಸ ಧನಾತ್ಮಕ ಅಂಶಗಳನ್ನು ಸ್ವಾಗತಿಸುವ ಕಾಲವಿದು. ಹೀಗಾಗಿ ಮನೆಗೆ ಬಿಳಿಯ ಬಣ್ಣ ಹಚ್ಚಿ ಹೊಸತನದ ಲುಕ್‌ ನೀಡಿ.

ADVERTISEMENT

* ಅನಗತ್ಯ ವಸ್ತುಗಳಿಗೆ ಮುಕ್ತಿ ಕೊಡಿ: ಅವಶ್ಯಕತೆಯೇ ಇಲ್ಲದ ಅದೆಷ್ಟೋ ವಸ್ತುಗಳನ್ನು ನಾವು ಮನೆಯಲ್ಲಿಟ್ಟುಕೊಂಡಿರುತ್ತೇವೆ. ಕಪಾಟ್‌, ಡ್ರಾವರ್‌ಗಳಲ್ಲಿರುವ ಹಳೆಯ ಕೆಲಸಕ್ಕೆ ಬಾರದ ವಸ್ತುಗಳನ್ನು ಖಾಲಿ ಮಾಡಿ. ಹೆಚ್ಚೂ ಕಡಿಮೆ ಅರ್ಧ ಮನೆ ಇದರಿಂದಲೇ ಸ್ವಚ್ಛವಾಗಿಬಿಡುತ್ತದೆ.

* ಮುಂಬಾಗಿಲನ್ನು ಅಲಂಕರಿಸಿ: ಮುಂಬರಲಿರುವ ಸಂತೋಷ, ಅಭಿವೃದ್ಧಿಯನ್ನು ಸ್ವಾಗತಿಸಲು ಮನೆಯ ಮುಂಬಾಗಿಲನ್ನು ಸ್ವಚ್ಛ ಮಾಡಿ ಅಲಂಕರಿಸಬೇಕು. ಮಾವಿನ ಎಲೆಯಿಂದ ಬಾಗಿಲನ್ನು ಶೃಂಗರಿಸುವುದು ರೂಢಿ. ಬಾಗಿಲ ಎರಡೂ ಪಕ್ಕದಲ್ಲಿ ಬಾಳೆಗಿಡದಿಂದ ಅಲಂಕರಿಸುವ ಪರಿಪಾಠವೂ ಇದೆ. ಹೀಗೆ ಅಲಂಕರಿಸುವುದು ಮುಂದಿನ ಅದೃಷ್ಟವನ್ನು ಸ್ವಾಗತಿಸುವ ಪರಿ ಎಂದು ನಂಬಲಾಗುತ್ತದೆ.

* ಪ್ರಾಂಗಣವನ್ನೂ ಶುಚಿಯಾಗಿರಿಸಿ: ಹಳ್ಳಿ ಮನೆಗಳಲ್ಲಿ ಹಬ್ಬ–ಹರಿದಿನಗಳಲ್ಲಿ ಸೆಗಣಿಯಿಂದ ಸಾರಿಸಿ ಮನೆಯ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸುವ ರೂಢಿಯಿದೆ. ಆದರೆ ಬೆಂಗಳೂರಿನಂಥ ಮಹಾನಗರಗಳಲ್ಲಿ ಮನೆಯ ಮುಂದೆ ಅಂಗಳ ಇರುವುದೇ ಕಷ್ಟ. ಇದ್ದರೂ ಅದನ್ನು ನಿತ್ಯ ಸ್ವಚ್ಛಗೊಳಿಸುವುದು ಕಷ್ಟ.  ಅಪಾರ್ಟ್‌ಮೆಂಟ್‌ನಲ್ಲಿದ್ದರೆ ಇಂಥ ಕೆಲಸವನ್ನು ಮಾಡುವವರು ಕಡಿಮೆಯೇ. ಈ ಯುಗಾದಿಗಾದರೂ ಮನೆಯ ಮುಂಭಾಗವನ್ನು ಶುಚಿಯಾಗಿಸಿ ಚೆಂದದ ರಂಗೋಲಿ ಚಿತ್ತಾರ ಮೂಡಿಸಿ.

* ತಯಾರಿ ಬೇಗನೆ ಮಾಡಿ: ಸ್ವಚ್ಛತಾ ಕೆಲಸ ಎಂದ ಮೇಲೆ ಬೇಗ ಮುಗಿಯುವುದಿಲ್ಲ. ಹೀಗಾಗಿ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಮನೆಯ ಎಲ್ಲಾ ಭಾಗವನ್ನು ಸ್ವಚ್ಛ ಮಾಡುವುದು ಸಾಧ್ಯವಾಗದಿರಬಹುದು. ಹೀಗಾಗಿ ವಾರಕ್ಕೆ ಮುಂಚೆಯೇ ತಯಾರಿ ಪ್ರಾರಂಭಿಸಿ. ಇಲ್ಲವಾದರೆ ಹಬ್ಬದ ದಿನದ ಸಂದರ್ಭದಲ್ಲಿ ನೀವು ದಣಿದಿರುತ್ತೀರಿ.

* ಕರ್ಟನ್‌ ತೊಳೆಯಿರಿ: ವರ್ಷಗಳ ಕಾಲ ಕಿಟಕಿ–ಬಾಗಿಲುಗಳಿಗೆ ಆತುಕೊಂಡಿರುವ ಕರ್ಟನ್‌ಗಳ ದೂಳು ಕೊಡವಲು ಇದು ಸಕಾಲ. ಹಬ್ಬಕ್ಕಿಂತ 2–3 ದಿನ ಮುಂಚಿತವಾಗಿ ಇದನ್ನು ತೊಳೆಯಿರಿ. ಖಂಡಿತವಾಗಿಯೂ ಹಬ್ಬದ ಸಂಭ್ರಮಕ್ಕೆ ಕರ್ಟನ್‌ಗಳು ಬಣ್ಣದ ಮೆರುಗು ನೀಡಲಿವೆ.

* ಅಲಂಕಾರಿಕ ವಸ್ತು ಸ್ವಚ್ಛಗೊಳಿಸಿ: ಚಿಕ್ಕಪುಟ್ಟ ಅಲಂಕಾರಿಕ ವಸ್ತುಗಳನ್ನು ತೊಳೆದು ಇಲ್ಲವೆ ಒರೆಸಿ ಸ್ವಚ್ಛಗೊಳಿಸಿ. ಬಣ್ಣಬಣ್ಣದ ಕೃತಕ ಹೂವುಗಳನ್ನು ಜೋಡಿಸಿ. ಮನೆಯನ್ನು ಇನ್ನಷ್ಟು ಮತ್ತಷ್ಟು ಅಂದವಾಗಿಸಿ ಖುಷಿಪಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.