ADVERTISEMENT

ಮೆಚ್ಚುಗೆ ಪಡೆದ ನಮ್ಮಮನೆ

ಜಿ.ಬಿ.ಕೃಷ್ಣಪ್ಪ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’... ಈ ಗಾದೆ ಇಂದು ನಿನ್ನೆಯದಲ್ಲ. ಇದು ಸಾರ್ವಕಾಲಿಕ ಸತ್ಯ. ಸ್ವಂತಕ್ಕೆ ಒಂದಾದರೂ ಮನೆ ಕಟ್ಟಿಕೊಳ್ಳಬೇಕೆಂದು ಎಲ್ಲರೂ ಕನಸು ಕಾಣುತ್ತೇವೆ. ನಮ್ಮ ಕುಟುಂಬವೂ ಕನಸು ಕಂಡಿತ್ತು. ಆ ಕನಸು ಈಗ ನನಸಾಗಿದೆ.

ಕಡೆಗೂ ಕನಸಿನ ಮನೆ ಹೊಂದಿದ್ದಕ್ಕೆ ಪೂರ್ಣವಾಗಿ ತೃಪ್ತಿ ಆಗಿದೆಯೇ? ಎಂದು ಕೇಳಿದರೆ ಉತ್ತರಿಸುವುದು ಸ್ವಲ್ಪ ಕಷ್ಟ. ಏಕೆಂದರೆ ಅಂತರ್ಜಾಲದಲ್ಲಿ ಒಂದು ಜೋಕ್‌ ಹರಿದಾಡುತ್ತಿದೆ. ಅದೇನೆಂದರೆ ಒಬ್ಬ ವ್ಯಕ್ತಿಗೆ ಈ ಕೆಳಗಿನ ನಾಲ್ಕರಲ್ಲಿ ಯಾವುದು ಎಷ್ಟೇ ಚೆನ್ನಾಗಿದ್ದರೂ ಸಮಾಧಾನವಿಲ್ಲ. ಅವುಗಳೆಂದರೆ ಮೊಬೈಲ್, ಆಟೋಮೊಬೈಲ್, ಟಿವಿ ಮತ್ತು ಸಂಗಾತಿ!

ಏಕೆಂದರೆ ಸ್ವಲ್ಪ ಕಾಯುತ್ತಿದ್ದರೆ ಮಾರ್ಕೆಟ್ಟಿನಲ್ಲಿ ಇನ್ನೂ ಚೆನ್ನಾಗಿರುವುದು ಸಿಗುತ್ತಿತ್ತೇನೋ ಎಂಬ ದುರಾಸೆ. ಮಹಾತ್ಮ ಗಾಂಧೀಜಿ ಹೇಳಿರುವಂತೆ ಆ ದೇವರು ಎಲ್ಲರ ಬೇಡಿಕೆಯನ್ನೂ ಈಡೇರಿಸುತ್ತಾನೆ, ದುರಾಸೆಯನ್ನಲ್ಲ. ಮನೆ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಕಟ್ಟಿದ ಮೇಲೆ ನಿಮಗೆ ತೃಪ್ತಿಯಾದರೂ ಜನರ ಹಿತನುಡಿ (?) ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಅದಿರಲಿ, ಬೆಂಗಳೂರಿನ ವಿಷಯಬಿಡಿ. ಈಗ ಮೈಸೂರಿನಲ್ಲೂ ನಿವೇಶನ ಖರೀದಿಸಿ ಮನೆ ಕಟ್ಟುವುದು ಅಷ್ಟು ಸುಲಭದ ಕೆಲಸ ಅಲ್ಲ. ಸಾಲ ಸೋಲ ಮಾಡಿ ಮನೆ ಕಟ್ಟೋಣ ಎಂದರೆ ಮರಳು ಸಿಗುವುದೂ ಒಂದೇ, ಸುಲಭದಲ್ಲಿ ಸಿ.ಎಂ ಭೇಟಿ ಯಾಗುವುದು ಒಂದೇ!
ಎಲ್ಲಾ ಹೇಗೋ ಆಗುತ್ತೆ ಅಂತ ಮನೆ ಕಟ್ಟುವ ಯೋಜನೆ ಮಾಡಿದಿರಿ ಅಂತಿಟ್ಟುಕೊಳ್ಳಿ. ಮೈಸೂರಿನಲ್ಲಿ ನಿವೇಶನವಿದ್ದು, ನೀವು ಹೊರ ಊರಿನಲ್ಲಿ ದುಡಿಯುತ್ತಿದ್ದರೆ ನೀವೇ ಮುಂದೆ ನಿಂತು ಮನೆ ಕಟ್ಟಿಸುವುದು ಕಷ್ಟಸಾಧ್ಯ.

ಹಾಗಾದರೆ ಯಾರಿಗೆ ಮನೆ ಕಟ್ಟುವ ಜವಾಬ್ದಾರಿ ಯಾರಿಗೆ ವಹಿಸಿಕೊಡಬೇಕು? ಎಂಬ ಪ್ರಶ್ನೆ ಮೂಡುವುದು ಸಹಜ. ನಿಮ್ಮ ಬಜೆಟ್ಟಿಗೆ ಅನುಗುಣವಾಗಿ ಮನೆ ಕಟ್ಟಿಕೊಡುವ, ನಿಮ್ಮ ನಂಬಿಕೆಗೆ ಅರ್ಹ ವ್ಯಕ್ತಿ ಸಿಕ್ಕರೆ ಅದುವೇ ನಿಮ್ಮ ಪುಣ್ಯ. ಮೈಸೂರಿನ ವಿಜಯನಗರದ ನಾಲ್ಕನೇ ಹಂತದಲ್ಲಿ ನಾವು ಮನೆ ಕಟ್ಟಿಸಲು ನಮ್ಮ ಅಣ್ಣ ನಾರಾಯಣ್ ಬಿ. ಅವರನ್ನು ಕೇಳಿದೆವು. ಅವರು ಸಿವಿಲ್ ಎಂಜಿನಿಯರ್ ಆಗಿದ್ದರಿಂದ ಪ್ಲಾನ್‌ ಬರೆಯುವುದರಿಂದ ಹಿಡಿದು ಎಲ್ಲಾ ಜವಾಬ್ದಾರಿಯನ್ನೂ ಅವರಿಗೇ ವಹಿಸಿದೆವು.


ಮನೆಗೆ ಅನಾವಶ್ಯಕವಾಗಿ ಯಾವುದೇ ಗಾರೆಯ ಶೃಂಗಾರ ಮಾಡಲು ಹೋಗಲಿಲ್ಲ. ಮನೆ ಹೊರಗಡೆಯಿಂದ ಸಾಮಾನ್ಯವಾಗಿ ಕಂಡರೂ ಒಳಗಡೆ ಎಲ್ಲವೂ ವಾಸ್ತು ಪ್ರಕಾರವೇ ಇದೆ. ಮನೆಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರೂ ಸಹ ನೋಡಿ ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಬೆಂಗಳೂರಿನ ಟಾಟಾ ನಗರದಲ್ಲಿನ ಅವರ ನಿವೇಶನದಲ್ಲಿಯೂ ಮನೆ ಕಟ್ಟಿಕೊಡುವಂತೆ ನಮ್ಮ ಅಣ್ಣನಿಗೇ ತಿಳಿಸಿದ್ದಾರೆ.

ಅಂದರೆ, ನಮ್ಮ ಕನಸಿನ ಮನೆಯನ್ನು ಕನಿಷ್ಠ ನಮಗಾದರೂ ಸಮಾಧಾನವಾಗುವಂತೆ ಕಟ್ಟಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇನ್ನು ಹೊರಗಿನ ಕೆಲವರಾದರೂ ನಮ್ಮ ಮನೆಯನ್ನು ಮೆಚ್ಚಿಕೊಳ್ಳುವಂತೆ ಆ ಮನೆ ನಿರ್ಮಾಣವಾಗಿದ್ದರೆ ಅದಕ್ಕಿಂತ ಖುಷಿ ಬೇರೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT