ADVERTISEMENT

ಮೆಟ್ರೊ ಬಂತು ರೇಟು ಚಿಗುರಿತು

ಘನಶ್ಯಾಮ ಡಿ.ಎಂ.
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಮೆಟ್ರೊ ಬಂತು ರೇಟು ಚಿಗುರಿತು
ಮೆಟ್ರೊ ಬಂತು ರೇಟು ಚಿಗುರಿತು   

ಬೆಂಗಳೂರಿನ ಜನಜೀವನದ ಲಯ ನಿಧಾನವಾಗಿ ಮೆಟ್ರೊ ತಾಳಕ್ಕೆ ಹೊಂದಿಕೊಳ್ಳುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಬೈಯ್ಯಪ್ಪನಹಳ್ಳಿ– ಮೈಸೂರು ರಸ್ತೆ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾದಾಗಲೇ ಸಂಚಲನ ಉಂಟಾಗಿತ್ತು. ಇದೀಗ ಆರಂಭವಾಗಿರುವ ನಾಗಸಂದ್ರ– ಯಲಚೇನಹಳ್ಳಿ ಮಾರ್ಗ ಈ ಲಯದ ವೇಗವನ್ನು ಹೆಚ್ಚಿಸಿದೆ.

ಬೇರೆ ಊರುಗಳಿಂದ ಬೆಂಗಳೂರಿನಲ್ಲಿ ಕೆಲಸಕ್ಕೆ ಬರುವವರು ಮನೆಗಳನ್ನು ಹುಡುಕುವಾಗ, ‘ಸಮೀಪದಲ್ಲಿ ಮೆಟ್ರೊ ನಿಲ್ದಾಣ ಇದೆಯೇ?’ ‘ಮೆಟ್ರೊಗೆ ನಡೆದು ಹೋಗಲು ಸಾಧ್ಯವೇ?’ ‘ಆಫೀಸ್ ಹತ್ತಿರಕ್ಕೆ ಮೆಟ್ರೊ ಬರುತ್ತಾ?’ ಎಂದು ತೀರಾ ಸಹಜ ಎನ್ನುವಂತೆ ಬೇಡಿಕೆಗಳನ್ನು ಮುಂದಿಡುತ್ತಾರೆ.

ಮೆಟ್ರೊ ಮಾರ್ಗದುದ್ದಕ್ಕೂ ಸಹಜವಾಗಿಯೇ ರಿಯಲ್‌ ಎಸ್ಟೇಟ್ ಚಟುವಟಿಕೆ ಗರಿಗೆದರಿದೆ. ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಕ್ಷೇತ್ರಗಳಲ್ಲೂ ರಿಯಲ್‌ ಎಸ್ಟೇಟ್ ಮಾರುಕಟ್ಟೆ ಚುರುಕಿನ ವಹಿವಾಟಿನ ನಿರೀಕ್ಷೆಯಲ್ಲಿದೆ.

ADVERTISEMENT

ಬಾಡಿಗೆ ಹೆಚ್ಚಾಯ್ತು: ‘ನನ್ನ ಮನೆ ಇರುವುದು ಗಿರಿನಗರದಲ್ಲಿ. ಅಲ್ಲಿಂದ ದೀಪಾಂಜಲಿ ನಗರ ಮೆಟ್ರೊ ನಿಲ್ದಾಣಕ್ಕೆ ಸರಿಯಾಗಿ 1 ಕಿ.ಮೀ. ಆರಾಮಾಗಿ ನಡೆದೇ ಹೋಗಿಬರಬಹುದು. ಸಿಂಗಲ್ ಬೆಡ್‌ ರೂಂ ಮನೆಗೆ ಎರಡು ವರ್ಷದಿಂದ ₹ 6 ಸಾವಿರ ಬಾಡಿಗೆ ಕೊಡುತ್ತಿದ್ದೆ. ಮೆಟ್ರೊ ಆರಂಭವಾಗಿ ವರ್ಷವಾಗಿದೆ. ಈಗ ನಮ್ಮ ಮನೆ ಓನರ್ ಬಾಡಿಗೆಯನ್ನು  ₹ 8  ಸಾವಿರಕ್ಕೆ ಹೆಚ್ಚಿಸಿದ್ದಾರೆ. ನಾನು ಮರು ಮಾತನಾಡದೇ ತೆರುತ್ತಿದ್ದೇನೆ’ ಎನ್ನುವುದು ಅವಿವಾಹಿತ ಐಟಿ ಉದ್ಯೋಗಿ ಪ್ರಭಂಜನ ಅವರ ಮಾತು.

ಪ್ರಭಂಜನ ಅವರು ಕೆಲಸ ಮಾಡುವ ಕಂಪೆನಿ ವೈಟ್‌ಫೀಲ್ಡ್‌ನಲ್ಲಿದೆ. ಪರ್ಪಲ್‌ಲೈನ್ ಮೆಟ್ರೊ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವವರೆಗೆ ಅವರು ಬನಶಂಕರಿ ಮಾರ್ಗವಾಗಿ ಬೈಕ್‌ ಮೂಲಕ ಕಚೇರಿ ತಲುಪುತ್ತಿದ್ದರು. ಈಗ ಮೆಟ್ರೊದಲ್ಲಿ ಬೈಯಪ್ಪನಹಳ್ಳಿವರೆಗೆ ಹೋಗಿ ಅಲ್ಲಿಂದ ಬಸ್‌ನಲ್ಲಿ ಕಚೇರಿಗೆ ಹೋಗುತ್ತಿದ್ದಾರೆ. ಅವರ ಪ್ರತಿದಿನದ ಪ್ರಯಾಣದ ಅವಧಿಯಲ್ಲಿ ಕನಿಷ್ಠ 2 ತಾಸು ಉಳಿತಾಯವಾಗುತ್ತಿದೆ.

‘ಈಗ ಟೈಂ ಸೇವ್‌ ಆಗ್ತಿದೆ. ಸಂಜೆ ಗಿಟಾರ್ ಕ್ಲಾಸ್‌ಗೆ ಸೇರಿಕೊಂಡಿದ್ದೇನೆ. ಬೆಳಿಗ್ಗೆ ಹೊತ್ತು ಜಿಮ್‌ಗೂ ಹೋಗ್ತಿದ್ದೀನಿ. ಮೆಟ್ರೊ ಬಂತು ಅಂತ ಬಾಡಿಗೆ ಜಾಸ್ತಿ ಆಯ್ತು ಅನ್ನೋದು ನಿಜ. ಅದೇ ಹೊತ್ತಿಗೆ ನನಗೂ ದಿನಕ್ಕೆ 2 ತಾಸು ಎಕ್ಸ್‌ಟ್ರಾ ಸಿಗ್ತಾ ಇದೆ ಅಲ್ವಾ?’ ಎನ್ನುವುದು ಅವರು ಖುಷಿಯಿಂದ ಕೇಳುವ ಪ್ರಶ್ನೆ.

ಎಂ.ಜಿ.ರೋಡ್‌ ಟು ನಾಗಸಂದ್ರ: ‘ಆಫೀಸಿನ ತನಕ ಆರಾಮಾಗಿ ಹೋಗಬಹುದು, ಹಾರ್ಟ್‌ ಆಫ್‌ ದಿ ಸಿಟಿಗೆ ಹೋಲಿಸಿದರೆ ಬೆಲೆಯೂ ಕಡಿಮೆ ಅನ್ನೋ ಕಾರಣಕ್ಕೇ ನಾಗಸಂದ್ರ ಹತ್ತಿರ ಮನೆ ತಗೊಂಡ್ವಿ’ ಎನ್ನುವುದು ಶ್ರೀನಿಧಿ– ಪ್ರತಿಭಾ ದಂಪತಿಯ ಮಾತು.

ಇವರಿಗೆ ಮೂರು ವರ್ಷದ ಮಗು ಇದೆ. ಶ್ರೀನಿಧಿ ಅವರ ಕಚೇರಿ ಬೈಯಪ್ಪನಹಳ್ಳಿ ಸಮೀಪ ಇದ್ದರೆ, ಪ್ರತಿಭಾ ಅವರದು ಎಂ.ಜಿ.ರಸ್ತೆ. ಈ ಮೊದಲು ಮೆಟ್ರೊ– ಬಸ್– ಮೆಟ್ರೊ ಎಂದು ಬಿಎಂಟಿಸಿ ಫೀಡರ್‌ ಸೇವೆಯನ್ನು ಅವಲಂಬಿಸಿದ್ದ ದಂಪತಿ ಇದೀಗ ಗ್ರೀನ್‌ಲೈನ್‌ ಮೆಟ್ರೊದಿಂದ ಪರ್ಪಲ್‌ಲೈನ್ ಮೆಟ್ರೊಗೆ ಆರಾಮಾಗಿ ಮಾರ್ಗ ಬದಲಿಸಿಕೊಳ್ಳುತ್ತಿದ್ದಾರೆ. ಫೀಡರ್ ಬಸ್ ಅವಲಂಬನೆ ತಪ್ಪಿರುವುದರಿಂದ ಇವರಿಗೂ ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ.

‘ಈ ಮೊದಲು ಮನೆಯನ್ನು 8:30ಕ್ಕೆ ಬಿಡಬೇಕಿತ್ತು. ಈಗ 9:30ಕ್ಕೆ ಬಿಟ್ಟರೆ ಸಾಕು. ಸಂಜೆ ಮನೆಗೆ ಬರುವಾಗ 7 ಗಂಟೆ ಆಗುತ್ತಿತ್ತು. ಈಗ 6:30ಕ್ಕೆ ಬರುತ್ತಿದ್ದೇವೆ. ಹೆಚ್ಚುವರಿ ಅವಧಿಯನ್ನು ಮಗುವಿನೊಂದಿಗೆ ಕಳೆಯಲು ಸಾಧ್ಯವಾಗಿದೆ’ ಎನ್ನುವುದು ಈ ದಂಪತಿಯ ಖುಷಿ ಮಾತು. ಅಪಾರ್ಟ್‌ಮೆಂಟ್‌ನಲ್ಲಿ ಮೂರು ಬೆಡ್‌ರೂಂಗೆ ಮನೆಗೆ ₹ 60 ಲಕ್ಷ ತೆತ್ತಿದ್ದಾರೆ.

‘ಸಿಟಿಯಿಂದ ಇಷ್ಟು ದೂರಕ್ಕೆ ಇದು ದುಬಾರಿ ಅನಿಸಲ್ವಾ?’ ಎಂದು ಪ್ರಶ್ನಿಸಿದರೆ, ‘ಇಲ್ಲಿ ವಾತಾವರಣ ಚೆನ್ನಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮೆಟ್ರೊ ಇದೆಯಲ್ಲಾ ಸಾರ್. ಅದು ದೊಡ್ಡದು. ಅರ್ಧಗಂಟೆಯಲ್ಲಿ ಮೆಜೆಸ್ಟಿಕ್‌ಗೆ ಹೋಗಿ ಬರಬಹುದು. ನಮ್ಮ ಕುಟುಂಬದ ಸದಸ್ಯರು ಹಾವೇರಿಯಲ್ಲಿದ್ದಾರೆ. ಆ ಕಡೆಯಿಂದ ಬಂದು ಹೋಗುವ ಸಂಬಂಧಿಕರಿಗೂ ಅನುಕೂಲ’ ಎಂಬ ಉತ್ತರ ಸಿಕ್ಕಿತು.

ಬಹುಕಾಲದ ಆಸೆ ಈಡೇರಿತು: ತ್ಯಾಗರಾಜನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ನಿವೃತ್ತ ಟೆಲಿಕಾಂ ಉದ್ಯೋಗಿ ಗೋಪಾಲಕೃಷ್ಣ ಅವರದು ಸಾಂಪ್ರದಾಯಿಕ ಮನಸ್ಥಿತಿ.

‘ದೇವರಮನೆಯಲ್ಲಿ ಪ್ರತ್ಯೇಕ ಕೊಳಾಯಿ ಇರಬೇಕು. ಪಂಪ್ ಆನ್ ಮಾಡಿದಾಗ ಅಲ್ಲಿಂದಲೇ ಮಡಿ ನೀರು ಹಿಡಿಯುವ ವ್ಯವಸ್ಥೆ ಇರಬೇಕು. ಬಾಡಿಗೆಯೂ ದುಬಾರಿ ಆಗಬಾರದು’ ಎಂಬ ನಿರೀಕ್ಷೆಯಲ್ಲಿಯೇ ಎರಡು ವರ್ಷಗಳಿಂದ ಬಾಡಿಗೆ ಮನೆ ಹುಡುಕುತ್ತಿದ್ದರು. ಅವರ ನಿರೀಕ್ಷೆಯ ಮನೆ ಕೆಂಗೇರಿ ಹತ್ತಿರ ಸಿಕ್ಕಿತು. ಆದರೆ ಮನೆಗೂ– ಸಕಲೆಂಟು ಮಠಗಳೂ ಇರುವ ಗಾಂಧಿ ಬಜಾರ್‌ಗೂ ಬಲುದೂರ. ಹಸಿರು– ನೇರಳೆ ಮೆಟ್ರೊ ಲೈನ್‌ಗಳು ಬೆಸೆದುಕೊಂಡಿದ್ದು ಇವರ ಸಮಸ್ಯೆಗೆ ಸುಲಭದ ಪರಿಹಾರ ಹುಡುಕಿಕೊಟ್ಟಂತೆ ಆಗಿದೆ.

‘ನನ್ನ ಅಗತ್ಯಕ್ಕೆ ತಕ್ಕಂಥ ಮನೆಗೆ  ಚಾಮರಾಜಪೇಟೆ, ತ್ಯಾಗರಾಜನಗರ ಅಥವಾ ಪದ್ಮನಾಭನಗರದಲ್ಲಿ ಕನಿಷ್ಠ ₹ 20 ಸಾವಿರ ಬಾಡಿಗೆ ತೆರಬೇಕಾಗುತ್ತಿತ್ತು. ಈಗ ಕೆಂಗೇರಿಯಲ್ಲಿ ₹ 10 ಸಾವಿರಕ್ಕೆ ಮನೆ ಸಿಕ್ಕಿದೆ. ಸಂಜೆ ಹೊತ್ತು ಮಠಗಳಲ್ಲಿ ನಡೆಯುವ ಉಪನ್ಯಾಸ ಕೇಳುವುದು ನನ್ನ ಹವ್ಯಾಸ. ಮೆಟ್ರೊ ಆರಂಭವಾಗಿರುವುದರಿಂದ ಅದೂ ಸಾಧ್ಯವಾಗಿದೆ’ ಎಂದು ಗೋಪಾಲಕೃಷ್ಣ ಖುಷಿಯಿಂದ ಮಾತನಾಡುತ್ತಾರೆ. 

*

ಎಫ್‌ಎಆರ್‌ ಹೆಚ್ಚಳದಿಂದ ಅನುಕೂಲ
ಮೆಟ್ರೊ ಪ್ರಾರಂಭವಾಗಿರುವುದರಿಂದ ಬೆಂಗಳೂರಿನ ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕ ಸುಲಭವಾಗಿದೆ. ಹೊಸ ಮಾರ್ಗದಿಂದಾಗಿ ಕೈಗಾರಿಕಾ ನಗರ ಪೀಣ್ಯ ಕಡೆಗೆ ಒಡಾಟ ಅನುಕೂಲವಾಗಿದೆ. ಸಹಜವಾಗಿಯೇ ಈ ಅನುಕೂಲಗಳು ರಿಯಲ್‌ ಎಸ್ಟೇಟ್‌ ಉದ್ಯಮದ ಲಾಭಕ್ಕೆ ಕಾರಣವಾಗಿವೆ.

ಮೆಟ್ರೊ ಸಂಚಾರ ಆರಂಭವಾಗುವ ಮೊದಲು ಈ ಪ್ರದೇಶದಲ್ಲಿ ನಿವೇಶನ ಸ್ಥಳಗಳ ಬೆಲೆ ವರ್ಷಕ್ಕೆ ಶೇ 10ರಷ್ಟು ಹೆಚ್ಚಾಗಿತ್ತು. ಈಗ ದರ ಶೇ 20 ಏರಿಕೆಯಾಗುವ ನಿರೀಕ್ಷೆಯಿದೆ.

ಮೆಟ್ರೊ ಮಾರ್ಗದ 200 ಮೀಟರ್‌ ಅಂತರದಲ್ಲಿರುವ ಫ್ಲಾಟ್‌ಗಳಿಗೆ ಸರ್ಕಾರ ಎಫ್ಎಆರ್‌ (ಫ್ಲೋರ್‌ ಏರಿಯಾ ರೇಷಿಯೊ) ಹೆಚ್ಚಿಸಿದೆ. ಇದರಿಂದ ಒಂದೇ ಸೈಟ್‌ನಲ್ಲಿ ಹೆಚ್ಚು ಮನೆಗಳ ನಿರ್ಮಾಣ ಸಾಧ್ಯವಾಗಿದೆ. ಬಿಲ್ಡರ್‌ಗಳ ಲಾಭವನ್ನು ಇದು ಹೆಚ್ಚಿಸಲಿದೆ.
–ದರ್ಶನ್‌ ಗೋವಿಂದರಾಜು, ವೈಷ್ಣವಿ ಗ್ರೂಪ್‌ ನಿರ್ದೇಶಕ

*


ಇತ್ತೀಚೆಗೆ ರಿಯಲ್‌ ಎಸ್ಟೇಟ್‌ ಉದ್ಯಮ ಕುಸಿತ ಕಂಡಿದ್ದರಿಂದ ಚೇತರಿಕೆಗೆ ಸಮಯ ಹಿಡಿಯುತ್ತದೆ. ಮೆಟ್ರೊ ಆರಂಭವಾಗಿರುವ ಕಾರಣಕ್ಕೆ ಈ ಮಾರ್ಗದಲ್ಲಿ ನಿವೇಶನಗಳ ದರದಲ್ಲಿ ಶೇ 15ರಷ್ಟು ಏರಿಕೆ ಕಾಣುವುದು ಖಚಿತ.
–ಹರೀಶ್‌ ಆಚಾರ್‌ ಬ್ರಹ್ಮಾವರ್‌,
ಹೋಮ್ಸ್‌ ಅಂಡ್‌ ಸ್ಪೇಸ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.