ADVERTISEMENT

ವರ್ಷ ಮುಗಿಯಿತು, ವರ್ಷ ಶುರುವಾಯಿತು

ಹೂಡಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಮಾಸಲು ಬಣ್ಣ ಹೊದ್ದಿದ್ದ 2016ರ ಕ್ಯಾಲೆಂಡರ್‌ ಬದಲು, 2017ರ ಹೊಚ್ಚ ಹೊಸ ಕ್ಯಾಲೆಂಡರ್‌ ಗೋಡೆಯ ಮೇಲೆ ನಗುತ್ತಿದೆ. ಕ್ಯಾಲೆಂಡರ್ ಬದಲಾದ ಮಾತ್ರಕ್ಕೆ ಕನಸು ಬದಲಾಗಲು ಸಾಧ್ಯವೇ?
 
ಗಾಯತ್ರಿನಗರದ ಮೂಲೆ ಮನೆಯಲ್ಲಿರುವ ಅನಂತ ಹಳೆಯ ಕ್ಯಾಲೆಂಡರ್ ಬಿಸಾಡುವ ಮೊದಲು ಕಳೆದ ವರ್ಷದ ಹಾಳೆಗಳನ್ನು ತಿರುವಿ ಹಾಕಿದ. ಪ್ರತಿ ಹಾಳೆಯಲ್ಲೂ ಗುರುತು ಮಾಡಿಕೊಂಡಿದ್ದ ಸಂಗತಿಗಳು ಜೀವ ತಳೆದು ನಗುತ್ತಿದ್ದವು. ಈಡೇರದೇ ಇದ್ದ ಆಸೆಗಳಲ್ಲಿ ‘ಈ ವರ್ಷ ಏನಾದ್ರೂ ಆಗ್ಲಿ ಸೈಟ್ ಕೊಳ್ಳೋಕೆ ದುಡ್ಡು ಕೂಡಿಸಬೇಕು’ ಎಂಬ ಪಟ್ಟಿಯೂ ಇತ್ತು.
 
ನಿಜ ಅಂದ್ರೆ ಅನಂತನ ಮನದಲ್ಲಿ ಈ ಆಸೆ ಈಗಲೂ ಹೋಗಿರಲಿಲ್ಲ.ಗೆಳೆಯರ ಬಳಿ ಒಮ್ಮೆ ಈ ವಿಷಯ ಪ್ರಸ್ತಾಪಿಸಿದಾಗ, ‘ಅದೆಲ್ಲಾ ದುಡ್ಡಿದ್ದೋರಿಗೆ. ನಮ್ಮಂಥವರಿಗೆ ಅಲ್ಲ. ನಿಂಗ್ಯಾಕೋ ಮಗ ಅಂಥ ಹುಚ್ಚು ಆಸೆ. ಬಂದ ಸಂಬಳ ತಿಂದುಕೊಂಡು ನೆಮ್ಮದಿಯಾಗಿರು’ ಎಂದು ಬಿಟ್ಟಿ ಸಲಹೆಯನ್ನೂ ಕೊಟ್ಟಿದ್ದರು. ಅಂದು ಅನಂತ ಇದೇ ಗುಂಗಿನಲ್ಲಿ ಆಫೀಸಿಗೆ ಹೊರಟಿದ್ದ. ಬಿಎಂಟಿಸಿಯಲ್ಲಿ ಜೋಲಾಡುತ್ತಿದ್ದಾಗ ಎದುರು ಸೀಟ್‌ನಲ್ಲಿ ಕುಳಿತ ಹಿರಿಯರೊಬ್ಬರು ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಪಾಸ್ ಪುಸ್ತಕ ಹಿಡಿದಿದ್ದು ಕಣ್ಣಿಗೆ ಬಿತ್ತು. ಕುತೂಹಲ ಕೆರಳಿ ‘ಏನ್ ಸಾರ್ ಅದು, ಆರ್‌ಡಿನಾ’ ಎಂದು ಕೇಳಿದ.
 
ಅವರು ಪಿಪಿಎಫ್‌ ಕಥೆಯನ್ನು ತಾಳ್ಮೆಯಿಂದ ವಿವರಿಸಿದರು. ‘ಈಗ ಸಂಬಳ ಉಡೀಸ್ ಮಾಡಿದ್ರೆ ವಯಸ್ಸಾದ ಮೇಲೆ ಏನೂ ಸಿಗಲ್ಲ ಮಗಾ. ನಾನು 15 ವರ್ಷದ ಹಿಂದೆ ತಿಂಗಳ ಕೊನೆಗೆ ₹100ಕೈಲಿ ಉಳಿದ್ರೂ ಪಿಪಿಎಫ್‌ಗೆ ಹಾಕ್ತಿದ್ದೆ. ಈಗ ನನ್ನ ಹತ್ತಿರ ₹4 ಲಕ್ಷ ಇದೆ. ರಿಟೈರ್‌ಮೆಂಟ್ ಆದಾಗ ಒಂದಿಷ್ಟು ದುಡ್ಡು ಬಂತು. ಎಲ್ಲ ಒಟ್ಟು ಮಾಡಿ, ಮೇಲಿಷ್ಟು ಸಾಲ ಮಾಡಿ ಸ್ವಂತ ಫ್ಲಾಟ್ ಖರೀದಿ ಮಾಡೋಣ ಅಂತ ಇದ್ದೀನಿ’ ಎಂದು ಖುಷಿಯಿಂದ ಹೇಳಿದರು.
 
ಆರ್‌.ಟಿ.ನಗರ ಪೋಸ್ಟ್‌ಆಫೀಸ್‌ ಬೋರ್ಡ್‌ ಕಾಣಿಸಿದ ತಕ್ಷಣ ಅನಂತೂ ಬಸ್‌ನಿಂದ ಕೆಳಗೆ ಇಳಿದ. ಅದೇ ಕ್ಷಣ ಪಿಪಿಎಫ್ ಅಕೌಂಟ್ ತೆರೆದ. ಅಂದ ಹಾಗೆ ಮತ್ತೊಂದು ಮಾತು, ಎಸ್‌ಬಿಐನ ಶಾಖೆಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಪಿಪಿಎಫ್ ಖಾತೆ ತೆಗೆಯಬಹುದು. ನಮ್ಮ ದೇಶದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಅತ್ಯುತ್ತಮ ಉಳಿತಾಯ ಯೋಜನೆ ಎಂಬ ಶ್ರೇಯ ಪಿಪಿಎಫ್‌ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.