ADVERTISEMENT

ವಾಸನೆ ರಹಿತ ಶೌಚಾಲಯ!

ಸುಭಾಸ ಯಾದವಾಡ
Published 9 ಸೆಪ್ಟೆಂಬರ್ 2014, 19:30 IST
Last Updated 9 ಸೆಪ್ಟೆಂಬರ್ 2014, 19:30 IST

ಸಾಮಾನ್ಯವಾಗಿ ಶೌಚಾಲಯಗಳೆಂದರೆ ದುರ್ವಾಸನೆ ಬೀರುವ ಕೂಪಗಳು ಎಂದೇ ಎಲ್ಲರೂ ಭಾವಿಸುತ್ತಾರೆ.  ಅದು ಬಹಳ ಮಟ್ಟಿಗೆ ನಿಜವೂ ಹೌದು. ಮೂಗು ಮುಚ್ಚಿಕೊಂಡೇ ಅಲ್ಲಿಗೆ ಹೋಗಬೇಕು.  ಕಿರಿಕಿರಿ ಅನುಭವಿಸುತ್ತಲೇ ದೇಹದ ಬಾಧೆ ತೀರಿಸಿಕೊಳ್ಳಬೇಕು.  ಅದರಲ್ಲೂ ಸಾರ್ವಜನಿಕ ಶೌಚಾಲಯಗಳೆಂದರೆ ಮುಗಿದೇ ಹೋಯಿತು. ಸುತ್ತಮುತ್ತ ಎಲ್ಲಾ ದುರ್ವಾಸನೆಯನ್ನು ಎಗ್ಗಿಲ್ಲದೆ ಹರಡುತ್ತಿರುತ್ತವೆ.

ಈಗ ಇದಕ್ಕೊಂದು ಶಾಶ್ವತ ಪರಿಹಾರ ಸಿದ್ಧವಾಗುತ್ತಿದೆ. ಇದು ನಿಜಕ್ಕೂ ತುಂಬ ಖುಷಿಯ ವಿಚಾರ. ಇನ್ನು ಮುಂದೆ ನಮ್ಮ ಶೌಚಾಲಯಗಳು ದುರ್ವಾಸನೆಯಿಂದ ಮುಕ್ತಿ ಪಡೆಯಲಿವೆ!

‘ಪ್ರೆಶ್ ಏರ್ ಪ್ಲಸ್’ ಎಂಬ ಉಪಕರಣವೊಂದು ನಮಗೆ ಬೇಗನೇ ಲಭ್ಯವಾಗಲಿದೆ.  ಅದು ಶೌಚಾಲಯದ ಎಲ್ಲ ವಾಸನೆಗಳನ್ನು ಯಶಸ್ವಿಯಾಗಿ ಹೊರದೂಡುತ್ತದೆ.  ಅದಕ್ಕಾಗಿ ಬಹಳ ದಿನಗಳವರೆಗೆ ಕಾಯಬೇಕಾಗಿಲ್ಲ.  2015ರ ಮಾರ್ಚ್‌ ವೇಳೆಗೆ ಲಭ್ಯವಾಗಲಿದೆ ಎಂದು ಈ ಸಾಧನವನ್ನು ವಿನ್ಯಾಸಗೊಳಿಸಿದ ಕಂಪೆನಿ ಹೇಳಿಕೊಂಡಿದೆ.

ಈ ವಿಶಿಷ್ಟ ಸಾಧನಕ್ಕಾಗಿ ಪ್ರತ್ಯೇಕವಾದ ಶೌಚಾಲಯವನ್ನೇನೂ ಕಟ್ಟಬೇಕಾಗಿಲ್ಲ.  ಈಗಿರುವ ಶೌಚಾಲಯದ ಸೀಟಿನ ಸ್ಕ್ರೂಗಳನ್ನು ಬಿಚ್ಚಿ, ಅದರ ಸ್ಥಾನದಲ್ಲಿ ಹೊಸ ಪ್ರೆಶ್ ಏರ್ ಪ್ಲಸ್ ಉಪಕರಣವನ್ನು ಅಳವಡಿಸಿದರೆ ಸಾಕು. ಈ ಉಪಕರಣದಲ್ಲಿಯೇ ಒಂದು ಫ್ಯಾನ್‌ ಅಳವಡಿಸಲಾಗಿದೆ.  ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಜತೆಗೆ ಒಂದು ಹೋಸ್ ಪೈಪ್‌ ಜೋಡಿಸಿ ಶೌಚಾಲಯದ ಹೊರಗೆ ಬಿಡಬೇಕು.   ಶೌಚ ಪೀಠದ ಮೇಲೆ ವ್ಯಕ್ತಿ ಕುಳಿತಾಗ ಅದರಲ್ಲಿರುವ ಫ್ಯಾನ್‌ ತನ್ನಿಂತಾನೇ ಚಾಲನೆಗೊಳ್ಳುತ್ತದೆ. ಆಗ ಅದು ಶೌಚದ ಬೇಸಿನ್‌ನಲ್ಲಿನ ವಾಸನೆಯನ್ನು ಹೀರಿ, ಹೋಸ್ ಪೈಪ್‌ ಮೂಲಕ ಹೊರತಳ್ಳುತ್ತದೆ.

ಈಗಾಗಲೇ ಎಕ್ಸಾಸ್ಟ್‌ ಫ್ಯಾನ್‌ ಮೂಲಕ ಶೌಚಾಲಯದ ದುರ್ವಾಸನೆಯನ್ನು ಕಡಿಮೆ ಮಾಡುವ ಸಾಂಪ್ರದಾಯಿಕ ವಿಧಾನ ಬಳಕೆಯಲ್ಲಿದೆ.  ಅದು ದುರ್ವಾಸನೆಯನ್ನು ಕಡಿಮೆ ಮಾಡಬಲ್ಲದೇ ವಿನಃ, ಸಂಪೂರ್ಣವಾಗಿ ಇಲ್ಲವಾಗಿಸುವುದಿಲ್ಲ. 

ಪ್ರೆಶ್ ಏರ್ ಪ್ಲಸ್ ಉಪಕರಣ ವಾಸನೆಯನ್ನು ಶೌಚಾಲಯದ ಕೋಣೆಯಲ್ಲಿ ಹರಡುವ ಮುನ್ನವೇ ಸೆಳೆದು ಹೊರಗೆ ಅಟ್ಟಿಬಿಡುತ್ತದೆಯಂತೆ.  ಏರ್‌ಪ್ರೆಶ್ನರ್‌ಗಳು ದುರ್ವಾಸನೆಗೆ ಸುವಾಸನೆಯ ಮುಖವಾಡ ಹಾಕುವ ಕಾರ್ಯ ಮಾಡುತ್ತಿದ್ದವು.  ಈ ಹೊಸ ವಿಧಾನ ಮೊದಲಿನ ಎಲ್ಲ ವಿಧಾನಗಳಿಗಿಂತ ಭಿನ್ನ ಹಾಗೂ ಪರಿಣಾಮಕಾರಿ ಎಂಬುದು ಇದನ್ನು ಅಭಿವೃದ್ಧಿಪಡಿಸಿದವರ ಅಭಿಪ್ರಾಯ.

ಈ ಹೊಸ ಉಪಕರಣವನ್ನು ಸಿದ್ಧಪಡಿಸಿದ ವ್ಯಕ್ತಿ ಅಮೆರಿಕದ ಟೆನ್ನಿಸಿ ಪ್ರಾಂತ್ಯದ ಆಡಮ್ ಪೇಜ್. ಪ್ರೆಶ್ ಏರ್ ಪ್ಲಸ್ ಉಪಕರಣ ಕೂಡಲೇ ಎಲ್ಲರಿಗೂ ದೊರೆತು ದುರ್ವಾಸನೆ ಮುಕ್ತ ಶೌಚಾಲಯಗಳ ಸಂಖ್ಯೆ ಹೆಚ್ಚಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.