ADVERTISEMENT

ಹಳತು ಹೊಸತಾದ ಬಗೆ

ಸುರೇಖಾ ಹೆಗಡೆ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST
ಲಿವಿಂಗ್‌ ರೂಂ
ಲಿವಿಂಗ್‌ ರೂಂ   

ಝಗಮಗಿಸುವ ಬೆಳಕು, ವಿನ್ಯಾಸ ತೇರು, ವಿಶೇಷ ಆಸನ, ಹೊಳೆವ ಇಟಾಲಿಯನ್‌ ಮಾರ್ಬಲ್‌ ನೆಲ, ಚಿತ್ರಚಿತ್ತಾರದ ಕೋಣೆಗಳು, ಅತ್ಯಾಧುನಿಕ ಅಡುಗೆ ಮನೆ,  ಮಹಡಿ ಮೇಲೆ ಈಜುಕೊಳ, ಹಿತ್ತಲು, 24 ಗಂಟೆ ನೀರಿನ ಜುಳುಜುಳು ನಾದ...

ಇದು ಬಸವನಗುಡಿಯಲ್ಲಿರುವ ಶಿವಕುಮಾರ್‌ ಅವರ ಮನೆಯ ಚಿತ್ರಣ. ಇವರ ಮನೆಯೊಳಗೆ ಅಡಿಯಿಟ್ಟರೆ ಅರಮನೆಗೆ ಕಾಲಿಟ್ಟ ಅನುಭವವಾಗುತ್ತದೆ. ದೊಡ್ಡದಾದ ಪ್ರಶ್ನಾರ್ಥಕ ಚಿಹ್ನೆಯ ಸ್ವಾಗತದೊಂದಿಗೆ ಮನೆಯೊಳಗೆ ಕಾಲಿಟ್ಟರೆ, ನಿಂತು ಮನೆಯೊಳಗಿನ ಚೆಲುವನ್ನು ಆಸ್ವಾದಿಸದೆ ಮುಂದೆ ಸಾಗಬೇಕು ಎನಿಸುತ್ತದೆ. ಪ್ರವೇಶದ್ವಾರದಿಂದ ಮನೆಯ ಎಲ್ಲಾ ಭಾಗವನ್ನೂ ಒಂದು ಚೌಕಟ್ಟಿನಲ್ಲಿ (ಫ್ರೇಮ್‌) ಹಿಡಿದಿಟ್ಟ ಅನುಭವವಾಗುತ್ತದೆ.

ಮನೆಯಲ್ಲಿ ಸದಾ ತಂಪಿರಲೆಂದು ಗಾಳಿ ಬರುವ ಕಡೆ ಅಂದರೆ ಬಲಭಾಗದಲ್ಲಿ 24 ಗಂಟೆಯೂ ನೀರಿನ ಹರಿವು ಇರುವಂತೆ ವಿನ್ಯಾಸ ಮಾಡಲಾಗಿದೆ. ಜಗ್‌ನಿಂದ ನೀರು ಬೀಳುವಂತೆ ಮಾಡಿರುವುದು ವಿನ್ಯಾಸಕಾರರ ಕೌಶಲಕ್ಕೆ ಹಿಡಿದ ಕನ್ನಡಿ.

ಹಾಲ್‌ನ ಸೀಲಿಂಗ್‌ನಲ್ಲಿ ಪಿಯಾನೊಗಳ ಚಿತ್ತಾರ ಮೂಡಿಸಲಾಗಿದೆ. ಮೆಟ್ಟಿಲುಗಳ ಅಂಚಿಗೆ ಬೆಳಕಿನ ವಿನ್ಯಾಸವಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಕೋಣೆಯಿದ್ದು, ಅವರವರ ಛಾಯಾಚಿತ್ರವನ್ನು ದೊಡ್ಡದಾಗಿ ಬಿತ್ತರಿಸಲಾಗಿದೆ.

ಬಾಗಿಲು, ಕಿಟಕಿ, ಕಪಾಟು, ಬಚ್ಚಲು ಮನೆ, ಹೋಮ್‌ ಥೀಯೇಟರ್‌ ಎಲ್ಲ ಸೌಲಭ್ಯವೂ ಇಲ್ಲಿದ್ದು ವೈಭವೋಪೇತವಾಗಿದೆ. ಅಂದಹಾಗೆ ಎ.ಆರ್‌.ರೆಹಮಾನ್‌ ಅವರ ಮ್ಯೂಸಿಕ್‌ ಸ್ಟುಡಿಯೊವನ್ನು ವಿನ್ಯಾಸಗೊಳಿಸಿದ ತಿರು ಪ್ರಭಾಕರ್‌ ಅವರೇ ಶಿವಕುಮಾರ್‌ ಅವರ ಮನೆಯ ಹೋಂ ಥಿಯೇಟರ್‌ ಅನ್ನು ವಿನ್ಯಾಸಗೊಳಿಸಿದ್ದಾರೆ. ಆದರೆ ಈ ಮನೆಗೆ ಬಳಸಲಾಗಿರುವ ಹೆಚ್ಚಿನ  ವಸ್ತುಗಳು ಮರುಬಳಕೆ ಮಾಡಿರುವುದು ಈ ಮನೆಯ ವೈಶಿಷ್ಟ್ಯ ಹೆಚ್ಚಿಸಿದೆ.

‘ನಾನು ಹಾಸನದವನು. ನಮ್ಮದೇ ಆದ ಹಳೆಯ ಕಲ್ಯಾಣ ಮಂಟಪವನ್ನು ಅನಿವಾರ್ಯವಾಗಿ ಕೆಡವಬೇಕಾಯಿತು. ಎಂದಾದರೂ ಸಹಾಯಕ್ಕೆ ಬರುತ್ತದೆ ಎಂದು ಅಲ್ಲಿ ಬಳಸಲಾಗಿದ್ದ ಮರದ ವಸ್ತುಗಳನ್ನು ಹಾಗೆಯೇ ಶೇಖರಿಸಿ ಇಟ್ಟಿದ್ದೆ. ಅದು ನಮ್ಮ ಮನೆ ನಿರ್ಮಾಣ ಮಾಡುವಾಗ ಸಹಾಯಕ್ಕೆ ಬಂದಿತು’ ಎನ್ನುವ ಶಿವಕುಮಾರ್‌ ಮನೆಯನ್ನು ವಾಸ್ತುಪ್ರಕಾರವಾಗಿಯೇ ಕಟ್ಟಿಸಿದ್ದಾರೆ.

ಮನೆಯ ಬಾಗಿಲು, ಮೆಟ್ಟಿಲುಗಳಿಗೆ ನೂರಾರು ವರ್ಷದ ಹಳೆಯ ಮರಗಳನ್ನೇ ಬಳಸಲಾಗಿದೆ. ಹೋಂ ಥೀಯೇಟರ್‌ನಲ್ಲಿಯೂ ಸಂಪೂರ್ಣವಾಗಿ ಹಳೆಯ ಮರಗಳ ಮೆರುಗಿದೆ.

ಹಿತ್ತಲು ತೋಟದ ಬಗ್ಗೆ ವಿಶೇಷ ಆಸಕ್ತಿ ಇರುವ ಶಿವಕುಮಾರ್‌ ತಮ್ಮ ಕೋಣೆಗೆ ಹೊಂದಿಕೊಂಡಂತೆ ವರ್ಟಿಕಲ್‌ ಗಾರ್ಡನ್‌ ವಿನ್ಯಾಸ ಮಾಡಿಕೊಂಡಿದ್ದಾರೆ. ಒಣಗಿದ ಮರವನ್ನೇ ಕೆತ್ತನೆ ಮಾಡಿ ಆಸನದ ರೂಪ ನೀಡಲಾಗಿದೆ. ಮೆಟ್ಟಿಲೇರಿ ಹೋಗುವ ಸ್ಥಳದ ಗೋಡೆ ವಿನ್ಯಾಸಕ್ಕೆ ಸಹ ಹೆಚ್ಚುಳಿದ ಗಾಜಿನ ತುಂಡುಗಳನ್ನು ಬಳಸಿಕೊಳ್ಳಲಾಗಿದ್ದು, ಇದು ಮನೆಯ ಒಳಗೆ ಬೆಳಕು ಸಾರಾಗವಾಗಿ ಹರಿಯಲು ಸಹಾಯವಾಗಿದೆ. 

ಇಡೀ ಮನೆಯ ಹೋಂ ಅಟೊಮೇಶನ್‌ ತಂತ್ರಜ್ಞಾನಕ್ಕೊಳಪಟ್ಟಿದ್ದು, ರಾತ್ರಿ ವೇಳೆ ಓಡಾಡಲೂ ದೀಪ ಉರಿಸಬೇಕೆಂದಿಲ್ಲ. ಹೆಜ್ಜೆಯ ದಿಶೆ ಗುರುತಿಸಿಯೇ ಸಾಗಬೇಕಾದ ದಾರಿಗೆ ಮಾತ್ರ ಬೆಳಕು ತನ್ನಿಂದ ತಾನೇ ಹೊತ್ತಿಕೊಳ್ಳುತ್ತದೆ. ಇದು ಅನಗತ್ಯವಾಗಿ ವಿದ್ಯುತ್‌ಶಕ್ತಿ ವ್ಯಯವಾಗುವುದನ್ನು ತಪ್ಪಿಸಲು ಕಂಡುಕೊಂಡ ಪರಿಹಾರ.

ಮೂರು ಮಹಡಿ ಇರುವ ಮನೆಗೆ ಲಿಫ್ಟ್‌ ಸೌಕರ್ಯವೂ ಇದೆ. 24 ಗಂಟೆಯೂ ಬಿಸಿನೀರು ಸೌಲಭ್ಯವಿದ್ದು, ಸೋಲಾರ್‌ ಹಾಗೂ ಹೀಟ್‌ ಪಂಪ್‌ ಅಳವಡಿಸಲಾಗಿದೆ. ಆರೊ ಸಿಸ್ಟಂ ಅಳವಡಿಸಲಾಗಿದ್ದು, ಮನೆಯ ಪ್ರತಿ ಬಳಕೆಯಲ್ಲಿ ಶುದ್ಧ ನೀರು ಲಭ್ಯವಿರುತ್ತದೆ.

ರೂಫ್‌ಟಾಪ್‌ನಲ್ಲಿ ಸ್ವಿಮಿಂಗ್‌ ಪೂಲ್‌, ಪಕ್ಕದಲ್ಲಿಯೇ ಬಾರ್‌ ಲಾಂಜ್‌ ಇದೆ. ಬೀಯರ್‌ ಬಾಟಲ್‌ಗಳಿಗೆ ಚಿಟ್ಟೆ ವಿನ್ಯಾಸ ನೀಡಿ ಬಾರ್‌ ಲಾಂಜ್‌ ಸೆಟಪ್‌ ಮಾಡಿರುವುದು ವಿಶೇಷ ಎನಿಸುತ್ತದೆ. ಅದರ ಪಕ್ಕದಲ್ಲಿಯೇ ರೂಫ್‌ಟಾಪ್‌ ಗಾರ್ಡನಿಂಗ್‌ ಮಾಡಲಾಗಿದೆ.

ಬೆಂಗಳೂರಿನಲ್ಲಿರುವ ಮನೆಗಳಿಗಿಂತ ವಿಭಿನ್ನವಾಗಿರಬೇಕು ಎನ್ನುವ ಶಿವಕುಮಾರ್‌ ಅವರ ಮನೆ ವಿನ್ಯಾಸ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಒಳಾಂಗಣ ವಿನ್ಯಾಸಕ ಸಂದೀಪ್‌ ಪರಾಂಜಪೆ. ‘ನೀಲನಕ್ಷೆಯನ್ನೇನೂ ಹಾಕಿಕೊಂಡಿಲ್ಲ.

ವಾಸ್ತು ಪ್ರಕಾರವಾಗಿರಬೇಕು ಹಾಗೂ ಈಗಾಗಲೇ ಇರುವ ವಸ್ತುಗಳನ್ನೇ ಹೆಚ್ಚು ಮರುಬಳಕೆ ಮಾಡಬೇಕು, ಪರಿಸರಸ್ನೇಹಿ ಮನೆಯಾಗಬೇಕು ಎಂಬುದು ಶಿವಕುಮಾರ್‌ ಅವರ ನಿರ್ದೇಶನವಾಗಿತ್ತು. ಹೀಗಾಗಿ ಸಮಯ ಹಾಗೂ ಅಗತ್ಯತೆಗೆ ತಕ್ಕಂತೆ ಮನೆಯ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಂಡೆವು’ ಎಂದು ಮಾಹಿತಿ ನೀಡುತ್ತಾರೆ ಸಂದೀಪ್‌.

ಹಳೆಯ ವಸ್ತುಗಳನ್ನು ಮರುಬಳಕೆ ಮಾಡಿಕೊಂಡೂ ವೈಭವೋಪೇತ ಮನೆ ನಿರ್ಮಿಸಬಹುದು ಎನ್ನುವುದಕ್ಕೆ ಶಿವಕುಮಾರ್‌ ಅವರ ಚಿಂತನೆ ಹಾಗೂ ಮನೆ ಉತ್ತಮ ಉದಾಹರಣೆಯಾಗಬಲ್ಲುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.