ADVERTISEMENT

‘ಅಗ್ಗದ ಮನೆ’ ನೀತಿ ಉದ್ಯಮ ಉತ್ತೇಜಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

ಇತ್ತೀಚಿನ ಆರ್‌ಬಿಐ ಕ್ರಮದಿಂದ ಬ್ಯಾಂಕಿಂಗ್‌ ಗೃಹಸಾಲ ವಿತರಣೆ ಹೆಚ್ಚಲಿದೆ. ಮನೆ ಖರೀದಿಗೆ ಸಿಗುವ ಸಾಲ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ. ದೀರ್ಘಾವಧಿ ಗೃಹಸಾಲಕ್ಕೂ ಉತ್ತೇಜನ ನೀಡಿರುವುದರಿಂದ ‘ಇಎಂಐ’ ಮೊತ್ತವೂ ಶೇ 8ರಿಂದ 10ರಷ್ಟು ಕಡಿಮೆ ಆಗಲಿದೆ.

ಮಧ್ಯಮ ವರ್ಗದವರ ‘ಸ್ವಂತ ಮನೆ ಹೊಂದುವ’ ಕನಸಿಗೆ ನೀರೆರೆಯುವಂತೆ ಈ ಬಾರಿಯ ಬಜೆಟ್‌ನಲ್ಲಿ ಕೆಲವು ಅನುಕೂಲಕಾರಿ ಕೊಡುಗೆಗಳನ್ನೂ ಕೇಂದ್ರ ಸರ್ಕಾರ ಘೋಷಿಸಿದೆ. ಆದಾಯ ತೆರಿಗೆಯಲ್ಲಿ ವಿನಾಯ್ತಿ ಪಡೆಯಲು ಒಟ್ಟು ವಾರ್ಷಿಕ ವರಮಾನದಿಂದ ಗೃಹಸಾಲದ ಬಡ್ಡಿ ಕಡಿತಕ್ಕೆ ನಿಗದಿಗೊಳಿಸಿದ್ದ ಮಿತಿಯನ್ನೂ ರೂ1.50 ಲಕ್ಷ ದಿಂದ ರೂ2 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಇದು ಆದಾಯ ತೆರಿಗೆ ಪಾವತಿಸುತ್ತಿರುವ ದೊಡ್ಡ ಸಮುದಾಯ ದವರು ಗೃಹಸಾಲ ಪಡೆದು ಒಂದೆಡೆ ಸ್ವಂತ ಮನೆ’ ಕನಸನ್ನು ನನಸು ಮಾಡಿ ಕೊಳ್ಳುವುದಕ್ಕೂ, ಆದಾಯ ತೆರಿಗೆ ಪಾವತಿ ಹೊರೆಯನ್ನು ಗರಿಷ್ಠ ಪ್ರಮಾಣದಲ್ಲಿ ತಗ್ಗಿಸಿಕೊಳ್ಳುವುದಕ್ಕೂ ಬಹಳ ಪ್ರಯೋಜನ ಕಾರಿಯಾಗಿದೆ.

ADVERTISEMENT

ಇನ್ನೊಂದೆಡೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, ಸಿಸಿ, ಸಿಸಿಸಿ ಅಡಿಯಲ್ಲಿ ಉಳಿತಾಯಗಳ ಮೇಲಿನ ಹೂಡಿಕೆ ಮಿತಿಯನ್ನು ರೂ1 ಲಕ್ಷದಿಂದ ರೂ1.50 ಲಕ್ಷಕ್ಕೆ ವಿಸ್ತರಿಸುವುದರಿಂದ ಆದಾಯ ತೆರಿಗೆಯಲ್ಲಿ ಇನ್ನಷ್ಟು ಹೆಚ್ಚಿನ ಮೊತ್ತದ ಉಳಿತಾಯಕ್ಕೆ ಅವಕಾಶ ಮಾಡಿ ಕೊಡಲಿದೆ. ಈ ಸೆಕ್ಷನ್‌ಗಳಡಿ ‘ಉಳಿ ತಾಯ ಹೂಡಿಕೆ’ಗೆ ಗೃಹಸಾಲದ ಅಸಲು ಮೊತ್ತ ವನ್ನು ಸೇರ್ಪಡೆಗೊಳಿಸಲು ಅವಕಾಶವಿದೆ.
ಹಾಗಾಗಿ ಸದ್ಯ, ಗೃಹಸಾಲ ಪಾವತಿಸುತ್ತಿರುವವ ರಿಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸದಾಗಿ ಗೃಹಸಾಲ ತೆಗೆದುಕೊಳ್ಳುವವರಿಗೆ ಭಾರಿ ಪ್ರಯೋಜನವೇ ಇದೆ. ಅಸಲು ಮತ್ತು ಬಡ್ಡಿ ಪಾವತಿ ಮೂಲಕವೇ (ತೆರಿಗೆ ಮೇಲಿನ ಸೆಸ್ ಸೇರಿದಂತೆ) ಒಟ್ಟು ಕನಿಷ್ಠ ರೂ20,600 ರಿಂದ ಗರಿಷ್ಠ ರೂ31,400ರವರೆಗೂ ತೆರಿಗೆ ಹೊರೆ ತಗ್ಗಿಸಿಕೊಳ್ಳಲು ಅವಕಾಶವಿದೆ.

ಬ್ಯಾಂಕ್‌ಗಳು ಮನೆ ಖರೀದಿಗಾಗಿ ತಮ್ಮ ಗ್ರಾಹಕ ರಿಗೆ ನೀಡುತ್ತಿದ್ದ ಗೃಹಸಾಲ ವಿತರಣೆ ಮಿತಿಯನ್ನೂ ಈಗ ಆರ್‌ಬಿಐ ವಿಸ್ತರಿಸಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್‌ನಲ್ಲಿ ರೂ65 ಲಕ್ಷ ಬೆಲೆಯ ಮನೆಗಳಿಗೆ ರೂ50 ಲಕ್ಷದವರೆಗೆ, ಇತರೆ ನಗರಗಳಲ್ಲಿ ರೂ50 ಲಕ್ಷದ ಮನೆಗಳಿಗೆ ರೂ40 ಲಕ್ಷದವರೆಗೂ ಗೃಹಸಾಲವನ್ನು ಬ್ಯಾಂಕ್‌ಗಳು ನೀಡಬಹುದಾಗಿದೆ. ಅಲ್ಲದೆ, ಅಗ್ಗದ ಮನೆಗಳಿಗೆ ಹೆಚ್ಚು ಸಾಲ ನೀಡುವ ಸಲುವಾಗಿಯೇ ಕೇಂದ್ರ ಸರ್ಕಾರ ‘ನ್ಯಾಷನಲ್ ಹೌಸಿಂಗ್ ಬ್ಯಾಂಕ್’ಗೆ ಈ ಬಾರಿ ರೂ4000 ಕೋಟಿ ಒದಗಿಸಿದೆ. ಈ ಎಲ್ಲ ಅಂಶಗಳೂ ದೇಶದಲ್ಲಿನ ರಿಯಲ್ ಎಸ್ಟೇಟ್ ಅಭಿವೃದ್ಧಿ ಉದ್ಯಮದ ಪ್ರಗತಿಗೆ ಉತ್ತೇಜನಕಾರಿಯಾಗಿವೆ ಎನ್ನುತ್ತಾರೆ ಪುರವಂಕರ ಪ್ರಾಜೆಕ್ಟ್ಸ್ ‘ಸಿಇಒ’ ಜಾಕ್‌ಬಾಸ್ಟಿಯನ್ ನಝರತ್.

ಇದೇ ವೇಳೆ, ’ಅಗ್ಗದ ದರದ ಮನೆಗಳು’ ಎಂದರೆ ಯಾವ ಬಗೆಯವು? ಎಷ್ಟು ವೆಚ್ಚದವು? ಅವುಗಳ ಸ್ವರೂಪ ಹೇಗಿರುತ್ತದೆ? ಎಂಬ ವಿಚಾರಗಳಿಗೆ ಸಂಬಂದಿ ಸಿದಂತೆ ಕೇಂದ್ರ ಸರ್ಕಾರದಿಂದ ಈಗ ಹೊಸ ನೀತಿ ನಿರೂಪಣೆಯ ವ್ಯಾಖ್ಯಾನ ಪ್ರಕಟಗೊಂಡಿರುವುದು ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರಕ್ಕೆ ಮಾರ್ಗದರ್ಶಿಯಾಗಿದೆ.

ಜತೆಗೆ, ಕೇಂದ್ರದ ಈ ಬಾರಿಯ ಬಜೆಟ್ ಮೂಲ ಸೌಕರ್ಯ ಸೇರಿದಂತೆ ದೇಶದ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಮತ್ತು ಕೈಗೊಳ್ಳಲಿರುವ ಉತ್ತೇಜನ ಕ್ರಮಗಳು ದೇಶದ ಆರ್ಥಿಕ ಪ್ರಗತಿಯನ್ನು ವೇಗಗೊಳಿಸ ಲಿವೆ. ಜತೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಬ್ಯಾಂಕ್‌ಗಳು ಮುಂದಿನ ಏಳು ವರ್ಷಗಳಲ್ಲಿ ಮಾರುಕಟ್ಟೆಯಿಂದ ಅಗತ್ಯವಾದ ಹೆಚ್ಚು ವರಿ ಬಂಡವಾಳ ಸಂಗ್ರಹಿಸಲು ಅನುಮತಿ ನೀಡಿದೆ. ಇದೆಲ್ಲವೂ ದೇಶದ ಜನರಿಗೆ ಅಗ್ಗದ ದರದ ಮನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿಕೊಡಬೇಕು ಎಂಬ ಆಶಯಕ್ಕೆ ಪೂರಕವಾಗಿವೆ ಎಂಬುದು ನಝರತ್ ಅವರ ವಿಶ್ಲೇಷಣೆ.

‘ಮಧ್ಯಮ ಗಾತ್ರ’ದ ಮನೆಗಳಿಗಾಗಿ ಈಗ ದೇಶದಲ್ಲಿ ಬೇಡಿಕೆ ಹೆಚ್ಚುತ್ತಲೇ ಇದೆ. ಪುರವಂಕರದ ಅಂಗ ಸಂಸ್ಥೆ, ಅಗ್ಗದ ಮನೆಗಳನ್ನು ನಿರ್ಮಿಸುತ್ತಿರುವ ಪ್ರಾವಿಡೆಂಟ್ ಹೌಸಿಂಗ್ ಚಟುವಟಿಕೆಗೂ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕ್ರಮಗಳು ಬಹಳ ಪ್ರೋತ್ಸಾಹದಾಯ ಕವಾಗಿವೆ. ಚೆನ್ನೈನಲ್ಲಿ ಪ್ರಾವಿಡೆಂಟ್ ಕೊಮೊ ಸಿಟಿ, ನಂತರ ಬೆಂಗಳೂರು, ಕೊಯಮತ್ತೂರು ಮತ್ತು ಮಂಗಳೂರಿನಲ್ಲಿಯೂ ಅಗ್ಗದ ದರದ ಮನೆಗಳನ್ನು ಕಂಪೆನಿ ನಿರ್ಮಿಸುತ್ತಿದೆ. ‘ಪ್ರೀಫ್ಯಾಬ್’ ಎಂಬ ಆಧುನಿಕ ತಂತ್ರಜ್ಞಾನ ಬಳಸಿಯೇ ಕಟ್ಟಡ ನಿರ್ಮಿಸುತ್ತಿರುವುದ ರಿಂದ ವೆಚ್ಚ ತಗ್ಗಿದೆ. ಅಲ್ಲದೇ, ಕಂಪೆನಿ 2ನೇ ಶ್ರೇಣಿ ನಗರಗಳತ್ತಲೂ ಈಗ ಮುಖ ಮಾಡಿದೆ. ಅಗ್ಗದ ದರದ ಮನೆಗಳನ್ನು ಹೆಚ್ಚಿನ ಸಂಖ್ಯೆಯ ಲ್ಲಿಯೇ ನಿರ್ಮಿಸಲಿದೆ ಎನ್ನುತ್ತಾರೆ.

ಇತ್ತೀಚೆಗೆ ಆರ್‌ಬಿಐ ಕೈಗೊಂಡ ಕ್ರಮದಿಂದ ಬ್ಯಾಂಕಿಂಗ್‌ ಕ್ಷೇತ್ರದ ಗೃಹಸಾಲ ವಿತರಣೆ ಪ್ರಮಾಣ ಹೆಚ್ಚಲಿದೆ. ಮನೆ ಖರೀದಿಸುವವರಿಗೆ ಸಿಗುವ ಸಾಲದ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ. ಅಷ್ಟೇ ಅಲ್ಲದೆ, ದೀರ್ಘಾವಧಿಗೆ ಗೃಹಸಾಲ ವಿತರಿಸಲು ಉತ್ತೇಜನ ನೀಡಿರುವುದ ರಿಂದ ‘ಸಮಾನ ಮಾಸಿಕ ಕಂತು’ (ಇಎಂಐ) ಮೊತ್ತದಲ್ಲೂ ಶೇ 8ರಿಂದ 10ರಷ್ಟು ಕಡಿಮೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ‘ಕೆಪಿಎಂಜಿ’ಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ವಿಭಾ ಗದ ಮುಖ್ಯಸ್ಥ ನೀರಜ್‌ ಬನ್ಸಾಲ್‌.

ಬೆಂಗಳೂರಿನಲ್ಲಿ ರೂ65 ಲಕ್ಷ ಬೆಲೆ ಬಾಳುವ ಮನೆ ಖರೀದಿಸಲು ಇಚ್ಛಿಸುವ ವ್ಯಕ್ತಿಗೆ ಇನ್ನು ಮುಂದೆ ಬ್ಯಾಂಕ್‌ನಿಂದ ರೂ50 ಲಕ್ಷದವರೆಗೂ ಗೃಹಸಾಲ ದೊರೆ ಯಲಿದೆ ಎನ್ನುತ್ತಾರೆ ಬನ್ಸಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.