ADVERTISEMENT

₨5.25 ಕೋಟಿಯ ವಿಲ್ಲಾ!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ದೇ ಶದ ರಿಯಲ್‌ ಎಸ್ಟೇಟ್‌ ಉದ್ಯಮದ ಪಾಲಿಗೆ 2012 ಮತ್ತು 2013   ಎರಡೂ ವರ್ಷಗಳು ನಿರಾಶಾದಾಯಕ ವರ್ಷಗಳೇ ಆಗಿದ್ದವು. ಮನೆಗಳ ಮಾರಾಟ ತೀವ್ರವಾಗಿ ಇಳಿಮುಖವಾಗಿತ್ತು. ಆದರೆ, ರಾಜ್ಯದ ರಾಜಧಾನಿ ಬೆಂಗಳೂರಿ ನಲ್ಲಿ ಮಾತ್ರ ಪ್ರತಿ ವರ್ಷವೂ ಹೊಸ ಹೊಸ ವಸತಿ ಸಂಕೀರ್ಣ ನಿರ್ಮಾಣದ ಯೋಜನೆ ಗಳು ಆರಂಭಗೊಳ್ಳುತ್ತಲೇ ಇವೆ. ಪುರವಂಕರ, ಶೋಭಾ, ಪ್ರೆಸ್ಟೀಜ್‌, ಓಜೋನ್‌ ಮೊದಲಾದ ರಿಯಲ್‌ ಎಸ್ಟೇಟ್‌ ಕಂಪೆನಿಗಳು ನಿರ್ಮಾಣ ಚಟುವಟಿಕೆಗೆ ವಿರಾಮ ಹೇಳದೇ ಹೊಸ ಹೊಸ ಯೋಜನೆಗಳನ್ನು ಪ್ರಕಟಿಸುತ್ತಲೇ ಇವೆ.

ಈ ಮಧ್ಯೆ, 2014ರಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಗರಿಗೆದರಲಿದೆ. ₨30 ಲಕ್ಷ ದಿಂದ ₨60 ಲಕ್ಷದವರೆಗಿನ ಫ್ಲ್ಯಾಟ್‌ಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಚೆನ್ನೈನಲ್ಲಿ ಕಳೆದ ವಾರ ಭವಿಷ್ಯ ನುಡಿದಿದೆ ‘ಕ್ರೆಡಾಯ್‌’.

ಹೊಸ ಕಂಪೆನಿಗಳ ಆಗಮನ
ದೇಶದ ಪ್ರಮುಖ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಪರಿಸ್ಥಿತಿ ಏನೇ ಇದ್ದರೂ, ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಇದ್ದುದರಲ್ಲಿಯೇ ಸ್ವಲ್ಪ ಆಶಾದಾಯಕವಾಗಿದೆ. ಹಾಗಾಗಿಯೇ ಐ.ಟಿ; ಬಿ.ಟಿ ರಾಜಧಾನಿ ಬೇರೆ ರಾಜ್ಯದ ರಿಯಲ್‌ ಎಸ್ಟೇಟ್‌ ಉದ್ಯಮಿಗಳನ್ನು ಆಕರ್ಷಿಸುತ್ತಿದೆ. ವರ್ಷಗಳು ಉರುಳಿದಂತೆ ಈ ಆಕರ್ಷಣೆಗೊಳಗಾಗುವ ಹೊಸ ಹೊಸ ಕಂಪೆನಿಗಳ ಆಗಮನ ಹೆಚ್ಚುತ್ತಲೇ ಇದೆ.

ಒಲಿಂಪಿಯಾ ಎಂಚಾಂಟ್‌
ಈವರೆಗೆ ಚೆನ್ನೈ ಮತ್ತು ಕೋಲ್ಕತ್ತದಲ್ಲಷ್ಟೇ ವಸತಿ ಸಂಕೀರ್ಣ ವಿಲ್ಲಾ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುತ್ತಿದ್ದ ‘ಒಲಿಂಪಿಯಾ ಸಮೂಹ’ ವೈಟ್‌ಫೀಲ್ಡ್‌ನಲ್ಲಿ 4.5 ಎಕರೆಯಲ್ಲಿ ಕೇವಲ 26 ಐಶಾರಾಮಿ ವಿಲ್ಲಾಗಳ ನಿರ್ಮಾಣ ಕಾರ್ಯವನ್ನು ‘ಎಂಚಾಂಟ್’  ಹೆಸರಿನಲ್ಲಿ ಆರಂಭಿಸಿದೆ.

ಒಟ್ಟು ₨೧೫೦ ಕೋಟಿ ಮೌಲ್ಯದ ಈ ಯೋಜನೆಯಲ್ಲಿ ೫೮೬೦ ಚದರ ಅಡಿಗಳಿಂದ ೬೧೫೦ ಚದರ ಅಡಿಗಳಷ್ಟು ವಿಸ್ತಾರದ 26 ವಿಲ್ಲಾಗಳು ನಿರ್ಮಾಣಗೊಳ್ಳಲಿವೆ.

ಪ್ರತಿ ವಿಲ್ಲಾಗೂ ಪ್ರತ್ಯೇಕ ಈಜುಕೊಳ  ಮತ್ತು ಸ್ಪಾ ಸ್ಥಳಾವಕಾಶವಿರಲಿದೆ. ಮೂರು ಮಹಡಿ ವಿಲ್ಲಾದ ಎಲ್ಲ ಕೊಠಡಿಗಳೂ ಹವಾನಿಯಂತ್ರಿತ. ಮಾಸ್ಟರ್‌ ಬೆಡ್‌ರೂಂ ‘ಸ್ಯೂಟ್‌’ ರೀತಿ 1500 ಚದರಡಿಗಳಷ್ಟು ವಿಶಾಲವಾಗಿರಲಿದೆ. ಮಹಡಿಗಳಿಗೆ ಒಳಗೇ ಎಲಿವೇಟರ್‌ ಇರುತ್ತದೆ. ಇಂತಹ ಐಶಾರಾಮಿ ವಿಲ್ಲಾಗಳ ಆರಂಭಿಕ ಬೆಲೆ ₨೫.೨೫ ಕೋಟಿ ಎನ್ನುತ್ತಾರೆ ಒಲಿಂಪಿಯಾ ಸಮೂಹದ ನಿರ್ದೇಶಕ ಅಜಿತ್ ಖರೋಡಿಯಾ.

ಹಸಿರು ಉಸಿರು
ವಿಶ್ವದೆಲ್ಲೆಡೆ ಈಗ ಏರುತ್ತಿರುವ ಜಾಗತಿಕ ತಾಪಮಾನದ ವಿಚಾರವೇ ಚರ್ಚೆಯಾ ಗುತ್ತಿದೆ. ಹಾಗಾಗಿ ನಾವೂ ಸಹ ಪರಿಸರ ಸ್ನೇಹಿ ವಸತಿ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ವಿದ್ಯುತ್‌ ಉಳಿತಾಯದ ಉಪಕರಣಗಳು, ಸೌರ ಶಕ್ತಿ ವಿದ್ಯುತ್‌ ಉತ್ಪಾದನೆ, ಮಳೆ ನೀರು ಸಂಗ್ರಹಕ್ಕೆ ವಿಶೇಷ ಆದ್ಯತೆ, ಸುತ್ತಲೂ ವಿಶಾಲ ಹಸಿರು ಪ್ರದೇಶ ಇರಲಿದೆ. ಪ್ರತಿ ವಿಲ್ಲಾ ನಡುವೆ ಕನಿಷ್ಠ 18 ಮೀಟರ್‌ ಅಂತರವಿರಲಿದೆ. ಸಿಂಗಪುರದ ವಾಸ್ತುಶಿಲ್ಪಿಗಳಿಂದ ವಿನ್ಯಾಸಗೊಂಡಿರುವ ಈ ‘ಗ್ರೀನ್ ಪ್ಲಾಟಿನಂ ಲೀಡ್’ ಶ್ರೇಣಿ ವಿಲ್ಲಾ  ಯೋಜನೆ 2015ರ ಜೂನ್‌ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಮತ್ತೊಬ್ಬ ನಿರ್ದೇಶಕ ಆದಿತ್ಯ ಕಂಕರಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.