ADVERTISEMENT

ಕುದುರೆ ಲಾಯದಲ್ಲಿ ಕೂಲಿ ವಿಷ್ಣು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2014, 19:30 IST
Last Updated 18 ಅಕ್ಟೋಬರ್ 2014, 19:30 IST

‘ನಾಗರಹೊಳೆ’ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿತು. ಕನ್ನಡ ಚಿತ್ರರಂಗದಲ್ಲೇ ಒಂದು ಹೊಸ ಅಲೆ ಸೃಷ್ಟಿಸಿದ ಸಿನಿಮಾ ಅದು. ಅದೊಂದು ಮಕ್ಕಳ ಚಿತ್ರ. ಭಾರತದ ಎಲ್ಲಾ ಭಾಷೆಗಳಿಗೂ ಅದು ಡಬ್ ಆಯಿತಷ್ಟೇ ಅಲ್ಲದೆ ರಷ್ಯಾ ಮಾರುಕಟ್ಟೆಗೂ ಹೋಯಿತು. ಇದು ವಿಷ್ಣು ಮತ್ತು ನನ್ನ ಎಲ್ಲಾ ಸ್ನೇಹಿತರ, ತಂತ್ರಜ್ಞರ ಹಾಗೂ ಎಲ್ಲಾ ಕಲಾವಿದರ ಬೆವರಿನ ಬೆಲೆ. ಅಷ್ಟೇ ಅಲ್ಲ, ಈ ಸಿನಿಮಾ ಬಂದಮೇಲೆ ನನ್ನ, ವಿಷ್ಣು ಸಿನಿಮಾಗಳಿಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡು ಕಾಯಲಾರಂಭಿಸಿದರು.

ಮನಮೋಹನ್ ದೇಸಾಯಿ ಅವರ ಸಿನಿಮಾಗಳು ಬಹಳ ಯಶಸ್ವಿಯಾಗುತ್ತಿದ್ದ ಕಾಲ ಅದು. ಅಂಥದ್ದೇ ಒಂದು ಕಥೆ ಮಾಡಿಕೊಡಿ ಎಂದು ಎಚ್.ವಿ. ಸುಬ್ಬರಾವು ಅವರನ್ನು ಕೇಳಿಕೊಂಡೆ. ಅದರ ಫಲವೇ ಕಿಲಾಡಿ ಜೋಡಿ. ವಿಷ್ಣು ಹಾಗೂ ಶ್ರೀನಾಥ್ ಆಗ ಬಹು ಬೇಡಿಕೆಯಲ್ಲಿದ್ದ ನಟರು. ಇಬ್ಬರನ್ನೂ ಹಾಕಿಕೊಂಡು ಆ ಸಿನಿಮಾ ಪ್ರಾರಂಭಿಸಲು ನಿರ್ಧರಿಸಿದೆ. ಇನ್ನೊಂದು ಪಾತ್ರದಲ್ಲಿ ಅಂಬಿ ನಟಿಸಬೇಕಿತ್ತು. ಆದರೆ, ನನಗೆ ಕೊಟ್ಟಿದ್ದ ಡೇಟ್‌ಗಳನ್ನು ಪುಟ್ಟಣ್ಣನವರಿಗೆ ಕೊಟ್ಟುಬಿಟ್ಟಿದ್ದ. ನನ್ನನ್ನು ಕೇಳದೆಯೇ ಅವರಿಗೆ ಡೇಟ್ಸ್ ಕೊಟ್ಟಿದ್ದರಿಂದ ಸಹಜವಾಗಿ ನನಗೆ ಕೋಪ ಬಂದಿತ್ತು. ಅವನಿಗೆ ಕೊಟ್ಟಿದ್ದ ಪಾತ್ರವನ್ನು ವಜ್ರಮುನಿಗೆ ಕೊಟ್ಟೆ. 

ಮೈಸೂರಿನ ಲಲಿತ ಮಹಲ್‌ನಲ್ಲಿ ಚಿತ್ರ ಬಹಳ ಅದ್ದೂರಿ ಮುಹೂರ್ತದೊಂದಿಗೆ ಪ್ರಾರಂಭವಾಯಿತು. ಕಥೆ ಕೇಳಿ ವಿಷ್ಣು, ಶ್ರೀನಾಥ್ ಇಬ್ಬರೂ ಮೆಚ್ಚಿಕೊಂಡೇ ಡೇಟ್ಸ್ ಕೊಟ್ಟಿದ್ದರು. ಹಾಡುಗಳ ಧ್ವನಿ ಮುದ್ರಣ ಮುಗಿದ ಮೇಲೆ, ಅನೇಕರಿಗೆ ಅವು ಇಷ್ಟವಾದವು. ನಾನು ವಿಷ್ಣುವಿಗೆ ಹೇಳದೆಯೇ ಜೂಲಿ ಲಕ್ಷ್ಮಿಯನ್ನು ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದೆ. ಆಗ ಜೂಲಿ ಲಕ್ಷ್ಮಿ ಒಂದು ತರಹದ ಚೆಲುವೆ. ಆದರೆ, ಅವಳಿಗೆ ಬಹಳ ಸಿಟ್ಟು ಎಂಬ ಅಭಿಪ್ರಾಯವಿತ್ತು. ಅವಳನ್ನು ಸಾಕೋದು ಬಹಳ ಕಷ್ಟ. ನಾವು ಅವಳ ಬಗ್ಗೆ ಕೇಳಿದೀವಿ.

ಯಾವುದೋ ಸಿನಿಮಾದಲ್ಲಿ ಮೊಸರು ಸರಿಯಾಗಿ ಇರಲಿಲ್ಲ ಅಂತ ವಿಗ್ ಬಿಚ್ಚಿ ನಿರ್ಮಾಪಕರ ಕೈಗೆ ಕೊಟ್ಟು ಹೊರಟುಬಿಟ್ಟಿದ್ದಳು ಅಂತ ಸುದ್ದಿ ಎಂದು ಕೆಲವರು ನನ್ನ ಕಿವಿಯಲ್ಲೂ ಉಸುರಿದ್ದರು. ಆದರೂ ನಾನು ಚೆನ್ನೈಗೆ ಹೋಗಿ, ಜೂಲಿ ಲಕ್ಷ್ಮಿಗೆ ಕಥೆ ಹೇಳಿದೆ. ನನ್ನ ಜೊತೆ ಪಾಲುದಾರರಾದ ವೆಂಕಟೇಶ ದತ್ತು ಅವರು ಬಂದಿದ್ದರು. ದತ್ತು ಅವರು ನಮ್ಮ ಕುಟುಂಬಕ್ಕೆ ಸುಮಾರು ೪೦ ವರ್ಷಗಳಷ್ಟು ಹಳೆಯ ಪರಿಚಯ. ನನ್ನ ತಂದೆ ಹಾಗೂ ತಾತ ಅರಸೀಕೆರೆ ವೆಂಕಟಸ್ವಾಮಿಯವರಿಗೆ ಬಹಳ ಹತ್ತಿರ. ನಮ್ಮ ತಾತ ಆಯುರ್ವೇದಿಕ್ ಡಾಕ್ಟರ್ ಆಗಿದ್ದರು. ವೆಂಕಟಸ್ವಾಮಿಯವರಿಗೆ ಅವರೇ ಔಷಧ ಕೊಡುತ್ತಿದ್ದುದು. ಈ ಸಂಬಂಧ ಚಿತ್ರರಂಗದವರೆಗೆ ಮುಂದುವರಿದುಕೊಂಡು ಬಂದಿತು.

ಸರಿ, ನಾನು ಜೂಲಿ ಲಕ್ಷ್ಮಿಗೆ ಮುಂಗಡ ಹಣ ಕೊಟ್ಟು, ಡೇಟ್ಸ್ ಬುಕ್ ಮಾಡಿಕೊಂಡು ಬಂದೆ. ವಿಷ್ಣುವಿಗೆ ಹೇಳಿದಾಗ ಬಹಳ ಸಂತೋಷಪಟ್ಟ. ಆದರೆ, ಗಾಂಧಿನಗರದಲ್ಲಿ, ಜೂಲಿ ಲಕ್ಷ್ಮಿ ಅಲ್ಲ ರೀ... ಬಾಬು ಆದವಾನಿ ಲಕ್ಷ್ಮಿ ಅವರನ್ನು ಕರೆದುಕೊಂಡು ಬರುತ್ತಾ ಇರೋದು ಎಂದು ಕೆಲವರು ಗೇಲಿ ಮಾಡಿದರು. ಕೆಲವರಿಗೆ ಅದೇ ಕೆಲಸ. ನಮ್ಮ ಕೆಲಸ ನಾವು ಮಾಡುವುದು ಮುಖ್ಯ ಎಂದುಕೊಂಡು ಆ ಮಾತನ್ನು ನಿರ್ಲಕ್ಷಿಸಿದೆ. 

‘ಕಿಲಾಡಿ ಜೋಡಿ’ ಚಿತ್ರದ ಮೊದಲ ದಿನದ ಚಿತ್ರೀಕರಣ. ನಾನು ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಪ್ರಾರಂಭಿಸಿ, ಎಲ್ಲರಿಗೂ ಜೂಲಿ ಲಕ್ಷ್ಮಿಯನ್ನು ತೋರಿಸಿ, ಆಡಿದವರ ಬಾಯಿ ಮುಚ್ಚಿಸಬೇಕು ಎಂದುಕೊಂಡಿದ್ದೆ. ಆದರೆ, ವಿಷ್ಣು ಶೂಟಿಂಗ್ ಪ್ರಾರಂಭವಾದ ಮೇಲೆ ಅದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಸಲಹೆ ಕೊಟ್ಟ. ಹಾಗಾಗಿ ಮೊದಲ ದಿನದ ಚಿತ್ರೀಕರಣ ಬೆಂಗಳೂರಿನಿಂದ ಸುಮಾರು
೪೦ ಕಿ.ಮೀ. ದೂರದಲ್ಲಿ ನಿಗದಿಯಾಯಿತು.

ಮೊದಲ ದಿನವೇ ಹಾಡಿನ ಚಿತ್ರೀಕರಣಕ್ಕೆ ಅಣಿ ಮಾಡಿಕೊಂಡೆವು. ‘ಕೃಷ್ಣಸ್ವಾಮಿ ರಾಮಸ್ವಾಮಿ’ ಹಾಡು ಅದು. ವಿಷ್ಣು ಹಾಗೂ ಶ್ರೀನಾಥ್ ಕುದುರೆ ಲಾಯದಲ್ಲಿ ಕೆಲಸ ಮಾಡುವ ಕೂಲಿ ಆಳುಗಳ ವೇಷದಲ್ಲಿ ಅಭಿನಯಿಸಬೇಕಿತ್ತು. ಲಕ್ಷ್ಮಿ ಕುದುರೆ ಮೇಲೆ ಗತ್ತಿನಿಂದ ಕುಳಿತು, ಚಾಟಿ ಬೀಸುತ್ತಾ ಇವರಿಬ್ಬರೂ ಕೆಲಸ ಮಾಡುವಂತೆ ಶಿಕ್ಷಿಸಬೇಕಿತ್ತು. ನೃತ್ಯ ನಿರ್ದೇಶಕ ಜಯರಾಂ ಅವರು ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಸಿದ್ಧವಿದ್ದರು. ಕಾಸ್ಟ್ಯೂಮ್ ತೊಟ್ಟು ಬಂದ ಜೂಲಿ ಲಕ್ಷ್ಮಿ ಬಹಳ ಅಂದವಾಗಿ ಕಾಣುತ್ತಾ ಇದ್ದಳು. ವಿಷ್ಣುವಿಗೆ ಶೂಟಿಂಗ್ ಡ್ರೆಸ್‌ನಲ್ಲಿ ಅವಳನ್ನು ಹೇಗೆ ನೋಡುವುದು ಎಂದು ಸಂಕೋಚ. ‘ಮೊದಲು ಅವಳು ಒಬ್ಬಳೇ ಇರುವ ದೃಶ್ಯಗಳನ್ನು ಶೂಟ್ ಮಾಡು. ಆಮೇಲೆ ನನ್ನದು, ಶ್ರೀನಾಥ್‌ದು ಶೂಟ್ ಮಾಡುವೆಯಂತೆ’ ಎಂದು ವಿಷ್ಣು ಹೇಳಿದ. ಒಪ್ಪದೇ ವಿಧಿ ಇರಲಿಲ್ಲ. ಜಯರಾಂ ಅವರಿಗೆ ಹೇಳಿ, ಜೂಲಿ ಲಕ್ಷ್ಮಿ ಒಬ್ಬಳೇ ಇದ್ದ ಭಾಗಗಳ ಚಿತ್ರೀಕರಣ ಪ್ರಾರಂಭಿಸಿದೆವು. 


ಮಧ್ಯಾಹ್ನ ಊಟದ ಹೊತ್ತಾದರೂ ವಿಷ್ಣು, ಶ್ರೀನಾಥ್ ಪತ್ತೆ ಇಲ್ಲ. ಲಕ್ಷ್ಮಿ ಪದೇಪದೇ, ಎಲ್ಲಿ ನಿಮ್ಮ ಹೀರೊಗಳು ಕಾಣುತ್ತಾ ಇಲ್ಲ ಎಂದು ಕೇಳಲಾರಂಭಿಸಿದಳು. ಇಲ್ಲೇ ಎಲ್ಲೋ ಇದ್ದಾರೆ, ಬರುತ್ತಾರೆ ಎಂದು ಸಬೂಬು ಹೇಳಿ ಸುಮ್ಮನಾದೆ.  ‘ಅಲ್ಲಾ ಕಣೋ, ಮೊದಲ ದಿನ ಬೇರೆ ಯಾವುದಾದರೂ ಸ್ಮಾರ್ಟಾಗಿ ಡ್ರೆಸ್ ಹಾಕಿಕೊಳ್ಳುವ ದೃಶ್ಯ ಶೂಟ್ ಮಾಡಬಾರದಿತ್ತೆ. ಇದೆಂಥಾ ಅವಸ್ಥೆ. ಒಳ್ಳೆ ಕುದುರೆಲಾಯದಲ್ಲಿ ಗೊಬ್ಬರ ಎತ್ತೋ ಹಾಡನ್ನ ಇಟ್ಟಿದೀಯಲ್ಲ’ ಎಂದು ವಿಷ್ಣು ನನ್ನನ್ನು ಬೈದ. ಬೇರೆ ಹಾಡು ಮಾಡಲು ಅನುಮತಿ ಸಿಕ್ಕಿರಲಿಲ್ಲ. ಆ ಲಾಯದಲ್ಲಿ ಕುದುರೆಗಳು ಸಿಕ್ಕಿದ್ದು ಮೂರೇ ದಿನದ ಮಟ್ಟಿಗೆ. ಆಮೇಲೆ ಅವು ಪುಣೆಗೆ ಹೋಗಿಬಿಡುತ್ತಿದ್ದವು. ಅಷ್ಟರೊಳಗೆ ಹಾಡಿನ ಚಿತ್ರೀಕರಣ ಮುಗಿಸುವುದು ಅನಿವಾರ್ಯವಾಗಿತ್ತು. ಇದನ್ನೆಲ್ಲಾ ಹೇಳಿದ ಮೇಲೂ ವಿಷ್ಣು ಪೇಚಾಟ ನಿಲ್ಲಲಿಲ್ಲ. ಲಕ್ಷ್ಮಿಯನ್ನು ಪರಿಚಯ ಮಾಡಿಸಿಕೊಡುವಾಗ ಒಳ್ಳೆಯ ಶರ್ಟ್-ಪ್ಯಾಂಟ್ ಹಾಕಿಕೊಂಡು ಬನ್ನಿ. ಆಮೇಲೆ ಹಾಡಿನ ಕಾಸ್ಟ್ಯೂಮ್ ಹಾಕಿಕೊಳ್ಳಿ ಎಂದು
ನಾನು ಐಡಿಯಾ ಕೊಟ್ಟೆ. 

ಅದನ್ನು ಕೇಳಿ ವಿಷ್ಣುವಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ, ನಮ್ಮ ಸಂಭಾಷಣೆಯನ್ನು ಲಕ್ಷ್ಮಿ ಅಷ್ಟು ಹೊತ್ತಿಗಾಗಲೇ ಕದ್ದು ಕೇಳಿಸಿಕೊಂಡಿದ್ದಳು. ಅವಳದ್ದು ಚುರುಕು ಬುದ್ಧಿ. ಬುದ್ಧಿವಂತೆಯೂ ಹೌದು. ಖುದ್ದು ಅವಳೇ ಹೀರೊಗಳಿಗೆ ತನ್ನ ಪರಿಚಯ ಮಾಡಿಕೊಂಡಳು. ‘ಐ ಆಮ್ ಲಕ್ಷ್ಮಿ’ ಎಂದು ಅವಳು ತನ್ನನ್ನು ತಾನು ಪರಿಚಯಿಸಿಕೊಂಡಾಗ ವಿಷ್ಣು, ಶ್ರೀನಾಥ್‌ಗೆ ನಾಚಿಕೆಯಾಯಿತು. ಯಾಕೆಂದರೆ, ಅವರಿಬ್ಬರೂ ಹಾಡಿಗೆ ಅಗತ್ಯವಿದ್ದ ಚೆಡ್ಡಿ ಹಾಗೂ ಹರಕಲು ಅಂಗಿ ತೊಟ್ಟಿದ್ದರು. 

ಅದುವರೆಗೆ ಡ್ರೆಸ್ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿದ್ದ ವಿಷ್ಣು ಆಮೇಲೆ ಸುಮ್ಮನಾದ. ಇನ್ನೊಂದು ಸ್ನೇಹಕ್ಕೆ ಆ ಪರಿಚಯ ನಾಂದಿಯಾಯಿತು. ವಿಷ್ಣು, ಶ್ರೀನಾಥ್ ಆ ಕಾಸ್ಟ್ಯೂಮ್‌ನಲ್ಲೇ ಊಟ ಮಾಡಿದರು. ಹಾಡು ಅದ್ಭುತವಾಗಿ ಬಂದಿತು. ವಿಷ್ಣು, ಶ್ರೀನಾಥ್ ಬಹಳ ಬಿಚ್ಚು ಮನಸ್ಸಿನಿಂದ ಅಭಿನಯಿಸಿದ್ದರು. ಆ ಹಾಡು ಎಷ್ಟು ಯಶಸ್ವಿಯಾಯಿತೆಂದರೆ, ಒಂದು ರೀತಿಯಲ್ಲಿ ಮಹಿಳಾ ವಿಮೋಚನೆಯ ರೂಪಕದಂತೆ ಆಯಿತು. ಹುಡುಗಿಯೊಬ್ಬಳು ಠಾಕುಠೀಕಾಗಿ ಡ್ರೆಸ್ ಮಾಡಿಕೊಂಡು ಕುದುರೆ ಮೇಲೆ ಕುಳಿತು, ಚಾಟಿ ಬೀಸುತ್ತಾ ಗಂಡಸರ ಕೈಲಿ ಕೆಲಸ ಮಾಡಿಸುವುದು ಆವತ್ತಿನ ದಿನಗಳಲ್ಲಿ ಕಾಲೇಜು ಹುಡುಗಿಯರನ್ನು ಆಕರ್ಷಿಸಿತು. ಕೆಲವು ಹುಡುಗಿಯರು ತಾವೂ ಕೈಲಿ ಚಾಟಿ ಹಿಡಿದುಕೊಂಡು ಆ ಹಾಡನ್ನು ಗುನುಗುವ ಮಟ್ಟಿಗೆ ಅದು ಜನಪ್ರಿಯವಾಯಿತು. 

ಇದೇ ಜೂಲಿ ಲಕ್ಷ್ಮಿಯನ್ನು ನಾನು, ವಿಷ್ಣು ಮದ್ರಾಸ್‌ನಲ್ಲಿ ಆರು ವರ್ಷಗಳ ಹಿಂದೆ ನೋಡಿದ್ದೆವು. ನಾವು ಬ್ರೂಸ್ ಲೀಯ ‘ಎಂಟರ್ ದಿ ಡ್ರ್ಯಾಗನ್’ ಸಿನಿಮಾ ನೋಡಲು ಓಷನ್ ಥಿಯೇಟರ್‌ಗೆ ಹೋಗಿದ್ದೆವು. ಏನಮ್ಮಾ... ಏನ್ ಚೆನ್ನಾಗಿದಾಳೆ ಎಂದು ಆಗ ನಾವಿಬ್ಬರೂ ಅವಳ ಬಗ್ಗೆ ಮಾತನಾಡಿಕೊಂಡಿದ್ದೆವು. ಆಗ ಆಕೆ ನಮ್ಮ ಜೊತೆ ಒಂದು ಮಾತನ್ನೂ ಆಡಿರಲಿಲ್ಲ. ನಾವು ಅಂದು ಕಂಡಿದ್ದ ಅದೇ ಜೂಲಿ ಲಕ್ಷ್ಮಿ ಈಗ ನಮ್ಮ ಸಿನಿಮಾ ನಾಯಕಿ ಆಗಿದ್ದುದು ನಮಗೆಲ್ಲಾ ಹೆಮ್ಮೆಯ ಹಾಗೂ ಸೋಜಿಗದ ವಿಷಯವಾಗಿತ್ತು. ಇದನ್ನೇ ಬದುಕಿನ ಐರನಿ ಎನ್ನುವುದು!  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT