ADVERTISEMENT

ಡಾ.ಕುರಿಯನ್‌ ಭವಿಷ್ಯವಾಣಿ ನಿಜವಾಗಿಸುವುದು ನಿಮ್ಮ ಕೈಯಲ್ಲಿದೆ!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2014, 19:37 IST
Last Updated 14 ಡಿಸೆಂಬರ್ 2014, 19:37 IST

ಆಳಂದ ಶಾಸಕ ಬಿ.ಆರ್‌.ಪಾಟೀಲರು ಕರೆ ಮಾಡಿದ್ದರು. ಮಹಾ­ನಗರಗಳಿಗೆ ದುಡಿ­ಯಲು ವಲಸೆ ಹೋಗುವವರ ಬಗ್ಗೆ ತಾವು ಹಲವು ಸಂದರ್ಭಗಳಲ್ಲಿ ಧ್ವನಿ ಎತ್ತಿರುವುದನ್ನು ಪ್ರಸ್ತಾ­­ಪಿಸಿ­ದರು. ಜನರು ದುಡಿಯಲು ವಲಸೆ ಹೋಗು­­ವುದನ್ನು ತಪ್ಪಿಸಲು ಸರ್ಕಾರ ಕೈಗಾ­ರಿಕೆ­ಗ­ಳನ್ನು ಸ್ಥಾಪಿಸಬೇಕು ಎನ್ನುವ ನನ್ನ ಸಲಹೆ­ಯನ್ನು ಒಪ್ಪದೆ ಸಣ್ಣಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಕೈಗಾರಿಕೆ ಸ್ಥಾಪನೆಯಿಂದ ಐಟಿಐ ಕಲಿತ­ವರು, ವಿದ್ಯಾವಂತರಿಗೆ ಉದ್ಯೋಗ ಸಿಗುತ್ತದೆ. ಆದರೆ, ದುಡಿಯಲು ಹೆಚ್ಚಾಗಿ ವಲಸೆ ಹೋಗು­ವ­ವರು ಅನಕ್ಷರ­ಸ್ಥರು. ಆದ್ದರಿಂದ ನಿಮ್ಮ ಸಲಹೆ­ಯನ್ನು ಪೂರ್ಣ­­ವಾಗಿ ಒಪ್ಪಲಾರೆ. ಆದರೆ, ಹೈನು­ಗಾರಿಕೆ ಇದೆಯಲ್ಲ; ಅದು ಅತ್ಯಂತ ಸೂಕ್ತ­ವಾ­ಗಿದೆ. ಅದರ ಬಗ್ಗೆಯೇ ಮಾತನಾಡು­ವು­ದಿದೆ’ ಎಂದು ಕಾಳಜಿ ತೋರಿಸಿದರು. ನಾನು ಅವರ ಮಾತಿಗೆ ಕಿವಿಯಾದೆ.

‘ನೋಡಿ, ಹೈನುಗಾರಿಕೆಗೆ ಉತ್ತೇಜನ ನೀಡುವುದರಿಂದ ವಲಸೆ ಹೋಗು­ವವರ ಸಂಖ್ಯೆ­ಯನ್ನು ಕಡಿಮೆ ಮಾಡಬಹುದು. ನಾನು ಈ ನಿಟ್ಟಿ­­ನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಕಲಬುರ್ಗಿ–ಯಾದ­ಗಿರಿ–ಬೀದರ್‌ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ತುಂಬಾ ಕಡಿಮೆ ಇದೆ. ನಾವು ದೂರದ ಶಿವಮೊಗ್ಗ, ಪಕ್ಕದ ವಿಜಯ­ಪುರ­­ದಿಂದ ಹಾಲು ತರಿಸಿಕೊಳ್ಳುತ್ತಿ­ದ್ದೇವೆ. ನಮ್ಮದು ಎಂಥಾ ಸ್ಥಿತಿ’ ಎಂದು ಬೇಜಾರು ಮಾಡಿ­ಕೊಂಡರು. ಈ ಸಂಗತಿಯನ್ನು ನಂಬಲು ಸಾಧ್ಯ­ವಾ­ಗಲೇ ಇಲ್ಲ. ಕಲಬುರ್ಗಿ–ಯಾದ­ಗಿರಿ –ಬೀದರ್‌ ಹಾಲು ಒಕ್ಕೂಟದ ಅಧಿಕಾರಿಯನ್ನು ಮಾತ­ನಾ­ಡಿ­­ಸಿದೆ. ‘ಬೇಡಿಕೆ ಹೆಚ್ಚಿದೆ. ಆದರೆ, ಉತ್ಪಾದನೆ ಕಡಿಮೆ ಇದೆ. ಆದ್ದ­ರಿಂದ ಹೊರಗಿನಿಂದ ಹಾಲು ತರಿಸಿ­ಕೊಳ್ಳುತ್ತಿದ್ದೇವೆ’ ಎಂದು ಸಮರ್ಥಿಸಿ­ಕೊಂಡರು.

ಬೇಡಿಕೆ ಇದ್ದರೂ ರೈತರು ಹಾಲು ಉತ್ಪಾದನೆ ಮಾಡಲು ಏಕೆ ಮುಂದೆ ಬರುತ್ತಿಲ್ಲ? ಎನ್ನುವ ಪ್ರಶ್ನೆ ನನ್ನಲ್ಲಿ ಜನ್ಮತಾಳಿತು. ಈ ಭಾಗದ ಜನರಿಗೆ ಹೈನು­ಗಾರಿಕೆ ಕುರಿತು ಹೆಚ್ಚಾಗಿ ಅರಿವು ಇಲ್ಲ. ಹಾಲು ಉತ್ಪಾದನೆಗಾಗಿ ರಾಸುಗಳನ್ನು ಸಾಕು­ವುದು ದೊಡ್ಡ ತಲೆನೋವಿನ ಕೆಲಸ ಎನ್ನುವ ಮನಸ್ಥಿತಿ ಇದೆ.

ಮಿಶ್ರತಳಿ ಹಸು, ಎಮ್ಮೆಗಳನ್ನು ಖರೀದಿಸಲು ದೊಡ್ಡ ಪ್ರಮಾಣ­ದಲ್ಲಿ ಹಣಬೇಕು. ಅಷ್ಟೊಂದು ಹಣವನ್ನು ಯಾರು ಕೊಡುತ್ತಾರೆ? ಬ್ಯಾಂಕಿ­­­ನ­ವರು ಸಾಲ ಕೊಟ್ಟರೂ, ಜರ್ಸಿ, ಎಚ್‌.ಎಫ್‌ ತಳಿಯ ಹಸು­ಗಳನ್ನು ಖರೀದಿಸಿ­ದರೂ, ಅವುಗಳನ್ನು ಸಾಕುವುದು ಹೇಗೆ? ಬೇಸಿಗೆ­­­ಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂ­ಶ­ವಿರು­ತ್ತದೆ. ಆಗ ಅವು­ಗಳನ್ನು ನಿಭಾಯಿಸುವುದು ಹೇಗೆ? ಅವುಗಳಿಗೆ ರೋಗ ಬಂದರೆ ತಿಳಿ­ಯು­ವುದು ಹೇಗೆ? ನಮ್ಮದು ಒಣಭೂಮಿ, ಹಸಿರು­ಹುಲ್ಲು ಸಿಗುವುದೇ ಕಷ್ಟ. ಹಸು, ಎಮ್ಮೆ ಸಾಕು­ವುದರಿಂದ ವರ್ಷಪೂರ್ತಿ ಆದಾಯ ಬರುವು­ದಿಲ್ಲ.

ಒಂದುವೇಳೆ ಇವೆಲ್ಲವನ್ನೂ ನಿವಾರಿಸಿ­ಕೊಂಡು ಹಾಲು ಉತ್ಪಾದಿಸಲು ಮುಂದಾದರೆ, ಖರೀದಿ­ಸು­ವವರು ಯಾರು?–ಹೀಗೆ ಒಲ್ಲದ ಗಂಡ­ನಿಗೆ ಮೊಸರಲ್ಲೂ ಕಲ್ಲು ಎನ್ನುವಂತೆ ಮಾತ­ನಾಡುತ್ತಾರೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಇಲ್ಲಿಗಿಂತ ನೀರಿನ ಲಭ್ಯತೆ ತುಂಬಾ ಕಡಿಮೆ ಇದೆ. 1200 ರಿಂದ 1500 ಅಡಿ­ಗ­ಳಷ್ಟು ಬಾವಿ ಕೊರೆಸಿ­ದರೆ ಅಲ್ಪ­ಸ್ವಲ್ಪ ನೀರು ಸಿಗು­ತ್ತದೆ. ಆದರೂ, ಹೈನು­­ಗಾರಿಕೆಯಲ್ಲಿ ರಾಜ್ಯ­ದಲ್ಲೇ ಎರಡನೇ ಸ್ಥಾನ ಪಡೆದಿದೆ. ದಿನಕ್ಕೆ 9 ಲಕ್ಷ ಲೀಟರ್‌ಗಳಷ್ಟು ಹಾಲನ್ನು ಉತ್ಪಾದಿ­ಸುತ್ತಿದೆ.

ಕೋಲಾರಕ್ಕಿಂತ ಭಿನ್ನವಾದ ವಾತಾ­ವರಣ ಹೊಂದಿರುವ ಬೀದರ್‌ ಜಿಲ್ಲೆಯು ಹೆಚ್ಚು ತೆರೆದ ಬಾವಿಗಳನ್ನು ಹೊಂದಿದೆ. ನೀರಾವರಿ ಯೋಜನೆ­ಗಳಿಗೆ ಕೊರತೆ ಇಲ್ಲ. 300 ರಿಂದ 400 ಅಡಿ­ಗಳಷ್ಟು ಬಾವಿ ಕೊರೆ­ದರೂ ನೀರು ಚಿಮ್ಮುತ್ತದೆ. ಇಷ್ಟೆಲ್ಲ ಅನುಕೂಲಗಳು ಇದ್ದರೂ ಜಿಲ್ಲೆಯಲ್ಲಿ ಪ್ರತಿದಿನ ಉತ್ಪಾದನೆ ಆಗುವುದು ಒಂದು ಲಕ್ಷ ಲೀಟರ್‌ ಹಾಲು ಮಾತ್ರ! ಇದರಲ್ಲಿ ಕಲಬುರ್ಗಿ ಹಾಲು ಒಕ್ಕೂಟಕ್ಕೆ ಬರುವುದು ಕೇವಲ 35 ಸಾವಿರ ಲೀಟರ್‌ಗಳು!

ಕಲಬುರ್ಗಿ ಜಿಲ್ಲೆಯ ಅಫಜಲಪುರ, ಆಳಂದ ತಾಲ್ಲೂಕುಗಳಲ್ಲಿ ಒಟ್ಟು 19 ಬ್ಯಾರೇಜುಗಳಿವೆ. ಜೇವರ್ಗಿ, ಯಾದಗಿರಿ, ಸುರಪುರ, ಶಹಾಪುರ­ದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯಿಂದಾಗಿ ರೈತರು ಭತ್ತ, ಕಬ್ಬು ಬೆಳೆಯುತ್ತಿದ್ದಾರೆ. ಹೀಗಿ­ದ್ದರೂ ಇವರೆಡೂ ಜಿಲ್ಲೆಗಳಿಂದ ಒಕ್ಕೂಟಕ್ಕೆ ಕೇವಲ 20 ಸಾವಿರ ಲೀಟರ್‌ ಹಾಲು ಮಾತ್ರ ಬರುತ್ತಿದೆ!

ಇಂತಹ ಅವಕಾಶವನ್ನು ಖಾಸಗಿ­ಯವರು ಸೊಗಸಾಗಿ ಬಳಸಿ­ಕೊ­ಳ್ಳುತ್ತಿ­­ದ್ದಾರೆ. ಮಹಾ­ರಾಷ್ಟ್ರ ಹಾಗೂ ಆಂಧ್ರಪ್ರದೇಶಗಳ ಖಾಸಗಿ ಡೇರಿ­ಯವರು ನಿತ್ಯ ಸಾವಿರಾರು ಲೀಟರ್‌­ಗಳಷ್ಟು ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವು ಭಾಗದಲ್ಲಿ ಖರೀದಿಯನ್ನೂ ಸಹ ಮಾಡು­ತ್ತಿ­ದ್ದಾರೆ. ಆದರೂ ಹಾಲು ಒಕ್ಕೂಟ­ದ­ವರು ಹಾಲು ಉತ್ಪಾ­ದನೆ ಹೆಚ್ಚಿಸಲು ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ. ಈ ಜಿಲ್ಲೆಗಳಲ್ಲಿ ಹೈನುಗಾರಿಕೆ ಕುರಿತು ಅತೀವ ಕಾಳಜಿ ಹೊಂದಿರು­ವವರು ಪದೇ ಪದೇ ‘ಕೋಲಾರ ಜಿಲ್ಲೆ ಮಾದರಿ’ಯ ಮಂತ್ರವನ್ನು ಜಪಿ­ಸುತ್ತಲೇ ಇರುತ್ತಾರೆ. ‘ಅವರಿಗೆ ಸಾಧ್ಯವಾ­ಗಿದ್ದು ನಮ್ಮ ಭಾಗದ ರೈತರಿಗೆ ಏಕೆ ಸಾಧ್ಯ­ವಾ­ಗುವುದಿಲ್ಲ’ ಎಂದು ನೊಂದುಕೊಳ್ಳುತ್ತಿ­ದ್ದಾರೆ.

ಬೀದರ್‌, ಕಲಬುರ್ಗಿ, ಯಾದಗಿರಿ ಜಿಲ್ಲೆ­ಗಳು ಹೈನುಗಾರಿಕೆಯಲ್ಲಿ ತುಂಬಾ ಹಿಂದೆ ಉಳಿ­ದಿವೆ. ಇದಕ್ಕೆ ಕಾರಣ: ರೈತರಲ್ಲಿ ಜಾಗೃತಿ ಕೊರತೆ. ಹೈನುಗಾರಿಕೆ ಉಪ ಕಸುಬಿಗೆ ಹೇಳಿ ಮಾಡಿ­ಸಿದ್ದು, ಇದರಿಂ­ದಲೇ ಐದಾರು ಮಂದಿ ಇರುವ ಕುಟುಂಬವೊಂದು ನೆಮ್ಮದಿಯಿಂದ ಬದುಕ­ಬಹುದು. ಇದನ್ನೇ ಉದ್ಯಮ­ವನ್ನಾಗಿ ಮಾಡಿ­­­­ಕೊಂಡರೆ ಆರ್ಥಿಕ ಸ್ಥಿತಿಯನ್ನು ಎತ್ತರಿಸಿ­ಕೊಳ್ಳ­ಬಹುದು ಎನ್ನುವುದೇ ಹೆಚ್ಚಿನವರಿಗೆ ತಿಳಿದಿಲ್ಲ.

ಹಸು, ಎಮ್ಮೆಗಳನ್ನು ಕಟ್ಟುವುದು, ಸಗಣಿ, ಗಂಜಲ ಬಾಚುವುದು, ಕೊಟ್ಟಿಗೆ ಸ್ವಚ್ಛಗೊಳಿಸು­ವುದು, ರಾಸುಗಳ ಪೋಷಣೆ ಮಾಡುವುದು, ಮುಂಜಾನೆ, ಸಂಜೆ ಹಾಲು ಹಿಂಡುವುದು ಯಾರಿಗೂ ಬೇಡ­ವಾಗಿದೆ. ಹೆಂಗಸರು ಟಿವಿ­ಯಲ್ಲಿ ಸೀರಿಯಲ್‌ಗಳನ್ನು ನೋಡುವು­ದನ್ನು, ಗಂಡಸರು ಚಹಾದಂಗಡಿ ಮುಂದಿನ ಹರಟೆ­ಯನ್ನು ತಪ್ಪಿಸಿ­ಕೊಳ್ಳಲು ಇಷ್ಟಪ­ಡುವುದಿಲ್ಲ! ಆದ್ದರಿಂದಲೇ ಎರಡೋ, ಮೂರೋ ದೇಸಿ ಹಸು ಇಲ್ಲವೆ ಎಮ್ಮೆ­ಗಳನ್ನು ಸಾಕುತ್ತಾರೆ. ಅವು­ಗಳನ್ನು ಮೇಯಲು ಬಯಲಿಗೆ ಬಿಟ್ಟು­ಬಿಡು­ತ್ತಾರೆ. ಸಂಜೆ ಅವು ಮನೆ ಮುಂದೆ ಬಂದಾಗ ಕೆಚ್ಚಲಿಗೆ ನೀರು ಚಿಮ್ಮಿಸಿ, ಕೊಟ್ಟಷ್ಟು ಹಾಲು ಕರೆದು ತೃಪ್ತಿಪಡುತ್ತಾರೆ.

ಇನ್ನು, ಜನಪ್ರತಿನಿಧಿಗಳ ಪ್ರಕಾರ, ಜನರ ಜೀವನ ಮಟ್ಟವನ್ನು ಹೆಚ್ಚಿ­ಸು­ವುದು ಎಂದರೆ–ರಸ್ತೆ, ಕಟ್ಟಡಗ­ಳನ್ನು ನಿರ್ಮಿಸುವುದೇ ಆಗಿದೆ. ರೈತರಲ್ಲಿ ಜಾಗೃತಿ ಮೂಡಿಸಿ, ಹಾಲು ಉತ್ಪಾದ­ನೆಯಲ್ಲಿ ತೊಡ­ಗಿ­ಸಿಕೊ­ಳ್ಳುವಂತೆ ಮಾಡ­ಬೇಕಿ­ರುವ ಹಾಲು ಒಕ್ಕೂಟ ಗಾಢ ನಿದ್ರೆ­ಯ­ಲ್ಲಿದೆ. ಬ್ಯಾಂಕು­ಗಳು ಸಾಲ ಕೊಡಲು ಹಿಂದು­ಮುಂದು ನೋಡು­­­ತ್ತಿವೆ. ರೈತರು ಹೈನು­ಗಾ­ರಿಕೆಗೂ ತಮಗೂ ಆಗಿಬರುವುದಿಲ್ಲ ಎಂಬ ಮೌಢ್ಯ­ದಲ್ಲಿ­ದ್ದಾರೆ. ಪರಿಸ್ಥಿತಿ ಹೀಗಿದ್ದರೂ, ಈ ಮೂರು ಜಿಲ್ಲೆ­ಗಳಲ್ಲಿ ಹಾಲು ಉತ್ಪಾ­ದನೆ ಹೆಚ್ಚಿಸು­ವು­ದಾ­ದರೂ ಹೇಗೆ? ಬಲ್ಲವರು ಹೇಳುತ್ತಾರೆ: ದೇಸಿ ಹಸು, ಎಮ್ಮೆಗಳ ಬದಲು ಮಿಶ್ರತಳಿ ಹಸು, ಎಮ್ಮೆ­ಗಳನ್ನು ಸಾಕಬೇಕು. ಅವು­ಗಳನ್ನು ಕೊಟ್ಟಿಗೆ­ಯಲ್ಲಿ ಕಟ್ಟಿ ಪಶುವೈದ್ಯರ ಸಲಹೆ–ಸೂಚನೆ ಪ್ರಕಾ­­ರವೇ ಪೋಷಣೆ ಮಾಡಬೇಕು. ಆಗ ಒಂದೇ ಹಸುವನ್ನು ಸಾಕಿದರೂ ಒಂದಿಷ್ಟು ದುಡ್ಡಿನ ಮುಖ ನೋಡಬ­ಹುದು.

ಇಲ್ಲಿ ನಿಮಗೆ ಇಬ್ಬರನ್ನು ಪರಿಚಯಿ­ಸುತ್ತಿದ್ದೇನೆ. ಇವರು ಸಿದ್ದರಾಮ ನಾಗಶೆಟ್ಟಿ. ಬೀದರ್‌ ಸಮೀಪವಿರುವ ಚಿಕ್ಕಪೇಟೆ­ಯವರು. ಕಲಿತಿರು­ವುದು ಐಟಿಐ. ಸರ್ಕಾರಿ ಉದ್ಯೋಗ ಅರಸಿ ಬೆಂಗ­ಳೂರಿಗೆ ಹೋಗಿದ್ದರು. ಉದ್ಯೋಗ ಸಿಗ­ಲಿಲ್ಲ. ವಾಹನ ಚಾಲನೆ ಗೊತ್ತಿದ್ದರಿಂದ ಕೆಲ ಕಾಲ ವಿಧಾನಸೌಧದಲ್ಲಿ ಗುತ್ತಿಗೆ ಆಧಾರ­ದಲ್ಲಿ ಚಾಲಕರಾಗಿ ಕೆಲಸ ಮಾಡಿ­ದರು. ಅವಧಿ ಮುಗಿ­ಯಿತು. ಬೆಂಗಳೂರು ಬಿಟ್ಟು ಊರಿಗೆ ಮರಳಿ­­ದರು. ಬೀದರ್‌ ಡೇರಿ ಬಳಿ ಇವರಿಗೆ ಐದು ಎಕರೆ ಜಮೀನು ಇದೆ. ಅಲ್ಲಿ ಮೂರು ವರ್ಷ­ಗಳ ಹಿಂದೆ ಹೈನುಗಾರಿಕೆ ಶುರು ಮಾಡಿದರು. ಈಗ ಇವರ ಬಳಿ 10 ಎಮ್ಮೆ, ಎರಡು ಹಸುಗಳು ಇವೆ. ಅವುಗಳಿಂದ ದಿನಕ್ಕೆ ಸರಾಸರಿ 130 ಲೀಟರ್‌ ಹಾಲು ಕರೆಯುತ್ತಿದ್ದಾರೆ.

ನಾಗುರಾವ್‌ ಅಗವಾಲೆ ಅವರು ಬೀದರ್‌ ಜಿಲ್ಲೆ ಕಮಲನಗರ ಸಮೀಪದ ಚಾಂಡೇಶ್ವರ ಗ್ರಾಮದ ರೈತ. ಎಂಟು ವರ್ಷಗಳ ಹಿಂದೆ 50 ಸಾವಿರ ರೂಪಾಯಿಗಳಿಗೆ ಎರಡು ಜರ್ಸಿ ಹಸು­ಗಳನ್ನು ಖರೀದಿಸಿದರು. ಅವುಗಳ ಹಾಲನ್ನು ಹಿಂಡಿ ಎರಡು ಕೊಡಗಳಲ್ಲಿ ತುಂಬಿಕೊಂಡು ತಮ್ಮೂರಿನಿಂದ ಕಮಲ­ನಗರಕ್ಕೆ ಕಾಲ್ನಡಿಗೆಯಲ್ಲಿ ಬಂದು ಮಾರಾಟ ಮಾಡುತ್ತಿದ್ದರು. ಈಗ ಇವರ ಬಳಿ ವಿವಿಧ ತಳಿಯ 20 ಕ್ಕೂ ಹೆಚ್ಚು ಹಸು, ಎಮ್ಮೆಗಳು ಇವೆ. ಪ್ರತಿನಿತ್ಯ ಸುಮಾರು 100 ಲೀಟರ್‌ ಹಾಲು ಕರೆಯುತ್ತಾರೆ. ಹಾಲು ಸಾಗಿಸಲು ಸ್ವಂತವಾಗಿ ಟೆಂಪೊ ಖರೀದಿಸಿದ್ದಾರೆ!

ಕ್ಷೀರಕ್ರಾಂತಿಯ ಪಿತಾಮಹ ಡಾ.ವರ್ಗಿಸ್‌ ಕುರಿಯನ್‌ 1983 ರಲ್ಲಿ ಬೀದರ್‌ಗೆ ಭೇಟಿ ಕೊಟ್ಟಿ­­­ದ್ದರು. ಅಲ್ಲಿ ಹೈನುಗಾರಿಕೆಗೆ ಇರುವ ಸಮೃದ್ಧ ಅವಕಾಶಗಳನ್ನು ಕಂಡವರು–‘ಇಲ್ಲಿನ ಜನರು ಹೈನುಗಾರಿಕೆಗೆ ಮುಂದಾದರೆ ಸಾಕು, ಹಾಲನ್ನು ಕ್ಯಾನುಗಳ ಬದಲು ಪೈಪ್‌ಲೈನ್‌ ಮೂಲಕ ಪೂರೈಕೆ ಮಾಡಬಹುದು’ ಎಂದು ಭವಿಷ್ಯ ನುಡಿದಿದ್ದರು. ಅವರ ಮಾತನ್ನು ಸಿದ್ದರಾಮ ನಾಗ­ಶೆಟ್ಟಿ ಹಾಗೂ ನಾಗುರಾವ್‌ ಅಗವಾಲೆ ಸತ್ಯವಾಗಿ­ಸು­ತ್ತಿ­ದ್ದಾರೆ. ಇನ್ನು ನೀವು ಮನಸ್ಸು ಮಾಡ­ಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.