ADVERTISEMENT

‘ಬೇಕು–ಬೇಡ’ ಹೋರಾಟ

ಅಮೆರಿಕದಲ್ಲಿನ ಪ್ರತಿಸ್ಪಂದನದ ಸುತ್ತ...

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST
‘ಬೇಕು–ಬೇಡ’ ಹೋರಾಟ
‘ಬೇಕು–ಬೇಡ’ ಹೋರಾಟ   

ಮುಕ್ತ ಅಂತರ್ಜಾಲ ವ್ಯವಸ್ಥೆ ಜಾರಿಗೆ ಭಾರತ ಅಡಿ ಇಡುತ್ತಿರುವ ಹೊತ್ತಿನಲ್ಲೇ ಅಮೆರಿಕದಲ್ಲಿ ಈಗಾಗಲೇ ಇರುವ ಈ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಅಮೆರಿಕದ ಕೇಂದ್ರ ಸಂವಹನ ಆಯೋಗದ (ಎಫ್‌ಸಿಸಿ) ಅಧ್ಯಕ್ಷ, ಭಾರತೀಯ ಸಂಜಾತ ಅಜಿತ್ ಪೈ ತಳೆದ ನಿಲುವು ಅಲ್ಲಿನ ಬಳಕೆದಾರರನ್ನು ಕೆರಳಿಸಿದೆ. ಅಧಿಕಾರದ ಸೂತ್ರ ಹಿಡಿಯುವ ಪಕ್ಷ ಬದಲಾದಂತೆ ಸರ್ಕಾರದ ನೀತಿಗಳು ಬದಲಾಗುವ ಪರಿಣಾಮ ಈಗ ಅಲ್ಲಿ ಮುಕ್ತ ಅಂತರ್ಜಾಲ ಮುಂದುವರಿಯಲಿದೆಯೇ ಅಥವಾ ರದ್ದಾಗಲಿದೆಯೇ ಎಂಬುದನ್ನು ಇಡೀ ಜಗತ್ತು ಕಾತರದಿಂದ ನೋಡುತ್ತಿದೆ. ಅಲ್ಲಿನ ನಿರ್ಧಾರ ಇತರ ರಾಷ್ಟ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ಮುಕ್ತ ಅಂತರ್ಜಾಲ ಜಾರಿಗೆ ಬಂದದ್ದು ಯಾವಾಗ?
2015ರಲ್ಲಿ ಡೆಮಾಕ್ರಟಿಕ್‌ ಪಕ್ಷ ಅಧಿಕಾರದಲ್ಲಿದ್ದಾಗ ಅಧ್ಯಕ್ಷ ಬರಾಕ್‌ ಒಬಾಮ ಮುಕ್ತ ಅಂತರ್ಜಾಲ ವ್ಯವಸ್ಥೆ ಜಾರಿಗೆ ಮುನ್ನುಡಿ ಬರೆದರು. ಆಧುನಿಕ ಸಂವಹನ ಕಾಲಘಟ್ಟದಲ್ಲಿ ಮುಕ್ತ ಅಂತರ್ಜಾಲ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದ ಅವರು, ‘ಮಾಹಿತಿ, ಮನರಂಜನೆ ಹಾಗೂ ವಾಣಿಜ್ಯ ಅವಕಾಶಗಳು ಮುಕ್ತವಾಗಿ ಎಲ್ಲರಿಗೂ ಸಿಗುವಂತಾಗಬೇಕು. ವಿದ್ಯುತ್‌ ಹಾಗೂ ದೂರವಾಣಿಯಂತೆಯೇ ಅಂತರ್ಜಾಲ ಸೇವೆಯೂ ಎಲ್ಲರಿಗೂ ಸಮಾನವಾಗಿ ಸಿಗಬೇಕು’ ಎಂಬ ನಿಲುವು ತಳೆದು ಎಫ್‌ಸಿಸಿ ಮೂಲಕ ಜಾರಿಗೆ ತಂದರು. ಆದರೆ ಅಲ್ಲಿನ ದೂರಸಂಪರ್ಕ ಸೇವಾ ಕಂಪೆನಿ ಎಟಿ ಅಂಡ್‌ ಟಿ ಮತ್ತು ಕಾಮ್‌ಕಾಸ್ಟ್‌ ಇದನ್ನು ಬಲವಾಗಿ ವಿರೋಧಿಸಿದ್ದವು. ‘ಈ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ಕೆಲಸಕ್ಕೆ ಸರ್ಕಾರದ ಮಧ್ಯಪ್ರವೇಶದಿಂದ ತೊಡಕಾಗಲಿದೆ. ಇದರ ಪರಿಣಾಮವಾಗಿ ದೀರ್ಘ ಕಾಲದಲ್ಲಿ ಸೇವಾ ವಲಯ ಇನ್ನಷ್ಟು ಸಮಸ್ಯೆಗೆ ಸಿಲುಕಲಿದೆ’ ಎಂದು ಎಚ್ಚರಿಸಿದ್ದವು.

ಈಗ ಮುಕ್ತ ಅಂತರ್ಜಾಲ ನೀತಿಯಿಂದ ಅಮೆರಿಕ ಏಕೆ ಹಿಂದೆ ಸರಿಯುತ್ತಿದೆ?
ಮುಕ್ತ ಅಂತರ್ಜಾಲದ ಬಗ್ಗೆ 2014ರಲ್ಲಿ ಚರ್ಚೆ ನಡೆಯುತ್ತಿದ್ದಾಗ ಟ್ವೀಟ್‌ ಮಾಡಿದ್ದ ಡೊನಾಲ್ಡ್ ಟ್ರಂಪ್‌ ‘ಇದು ಅಂತರ್ಜಾಲದ ಮೇಲಿನ ದಾಳಿ’ ಎಂದು ಆತಂಕ ವ್ಯಕ್ತಪಡಿಸಿದ್ದರು. ಈಗ ಅಮೆರಿಕದಲ್ಲಿ ಟ್ರಂಪ್ ಅವರೇ ಅಧ್ಯಕ್ಷರಾಗಿರುವುದರಿಂದ ಆಗಿನ ಚರ್ಚೆಗೆ ಮರುಜೀವ ಬಂದಿದೆ. ಮುಕ್ತ ಅಂತರ್ಜಾಲವನ್ನು ಆಗ ವಿರೋಧಿಸಿದ್ದ ಎಫ್‌ಸಿಸಿ ಈಗ ಮತ್ತೆ ಆ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಕಾಯ್ದೆಯನ್ನು ಮರು ಚಿಂತನೆಗೆ ಒಳಪಡಿಸಲು ಅದರ ಅಧ್ಯಕ್ಷ ಅಜಿತ್‌ ಪೈ ಆಗ್ರಹಿಸಿದ್ದಾರೆ.

ADVERTISEMENT

ಒಂದೊಮ್ಮೆ ಅಮೆರಿಕ ಮುಕ್ತ ಅಂತರ್ಜಾಲದಿಂದ ಹಿಂದೆ ಸರಿದರೆ ಏನಾಗಲಿದೆ?
ಸೇವಾದಾತ ತನಗೆ ಬೇಕಾಗಿದ್ದನ್ನು ಗ್ರಾಹಕನ ಮೇಲೆ ಹೇರಲು ಅವಕಾಶ ದೊರೆಯಲಿದೆ. ಇದರಿಂದ ಸೇವಾದಾತರಿಗೆ ಆರ್ಥಿಕವಾಗಿ ಲಾಭ ಸಿಗಲಿದೆ. ಮುಕ್ತ ಅಂತರ್ಜಾಲ ತೆಗೆದುಹಾಕಿದರೆ ಸೇವಾದಾತರಿಗೆ ಹೆಚ್ಚು ಹಣ ಕೊಡಲು ಗೂಗಲ್‌, ಫೇಸ್‌ಬುಕ್‌, ಅಮೆಜಾನ್‌ ಹಾಗೂ ನೆಟ್‌ಫ್ಲಿಕ್ಸ್‌ಗಳು ಸಿದ್ಧ ಎಂದು ಹೇಳಿವೆ. ಇದು ಅವುಗಳ ವ್ಯವಹಾರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದು. ಆದರೆ ಸ್ಟಾರ್ಟ್‌ ಅಪ್ ಕಂಪೆನಿಗಳಿಗೆ ದುಬಾರಿಯಾಗಲಿದೆ. ಉದಾಹರಣೆಗೆ ಪ್ರತಿಭಾವಂತನೊಬ್ಬ ತನ್ನ ಕಲೆಯನ್ನು ವಿಡಿಯೊ ಮಾಡಿ ಅಂತರ್ಜಾಲಕ್ಕೆ ಹರಿಬಿಟ್ಟ ಕೆಲವೇ ಕ್ಷಣಗಳಲ್ಲಿ ಅದು ವೈರಲ್‌ ಆಗಬಹುದು. ಆದರೆ ಮುಕ್ತ ಅಂತರ್ಜಾಲ ವ್ಯವಸ್ಥೆ ರದ್ದಾದರೆ ಇದರ ಮೇಲೆ ಕಡಿವಾಣ ಬೀಳಲಿದೆ ಎಂದು ಅಲ್ಲಿನ ಕಲಾಜಗತ್ತು ಪರಿತಪಿಸುತ್ತಿದೆ. ಅಜಿತ್‌ ಪೈ ಮನೆ ಎದುರು ಪ್ರತಿಭಟನೆಗಳು ನಡೆಯುತ್ತಿವೆ. ಸಾರ್ವಜನಿಕ ಹಿತಾಸಕ್ತ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಜನ ಈಗಾಗಲೇ ಎಫ್‌ಸಿಸಿಗೆ ಪತ್ರ ಬರೆದು ಮುಕ್ತ ಅಂತರ್ಜಾಲ ವ್ಯವಸ್ಥೆಯನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ಯಾರ ಮಾತು ನಂಬಬೇಕು ಎಂಬ ಚರ್ಚೆಗೆ ಇದು ವೇದಿಕೆಯಾಗಿದೆಯೇ?
ಡೆಮಾಕ್ರಟಿಕ್ ಪಕ್ಷದ ನಿರ್ಧಾರಗಳನ್ನೆಲ್ಲ ವಾಪಸ್‌ ಪಡೆಯುವ ಕನ್ಸರ್ವೇಟಿವ್‌ ಪಕ್ಷದ ತೀರ್ಮಾನ ಇದು ಎಂಬುದು ಕೊಲಂಬಿಯಾ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಟಿಮ್ ವೂ ಆರೋಪ. ಇದು ಅಮೆರಿಕನ್ನರ ಆತಂಕವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.