ADVERTISEMENT

ಮೊಬೈಲ್‌ ಕರೆ ಸಂಪರ್ಕ ಶುಲ್ಕ ಕಡಿತ

​ಕೇಶವ ಜಿ.ಝಿಂಗಾಡೆ
Published 22 ಸೆಪ್ಟೆಂಬರ್ 2017, 20:06 IST
Last Updated 22 ಸೆಪ್ಟೆಂಬರ್ 2017, 20:06 IST
ಮೊಬೈಲ್‌ ಕರೆ ಸಂಪರ್ಕ ಶುಲ್ಕ ಕಡಿತ
ಮೊಬೈಲ್‌ ಕರೆ ಸಂಪರ್ಕ ಶುಲ್ಕ ಕಡಿತ   

ಮೊಬೈಲ್‌ ಕರೆ ಸಂಪರ್ಕ ಶುಲ್ಕವನ್ನು (interconnect user charges– IUC) ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಪ್ರತಿ ನಿಮಿಷಕ್ಕೆ 14 ಪೈಸೆಗಳಿಂದ 6 ಪೈಸೆಗಳಿಗೆ (ಶೇ 57ರಷ್ಟು ಕಡಿತ) ತಗ್ಗಿಸಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಎಂದಿನಿಂದ ಜಾರಿ?
ಹೊಸ ಐಯುಸಿ ಇದೇ ಅಕ್ಟೋಬರ್‌ 1 ರಿಂದ ಜಾರಿಗೆ ಬರಲಿದೆ.  2020ರ ಜನವರಿ 1 ರಿಂದ ಐಯುಸಿ ಸಂಪೂರ್ಣವಾಗಿ ರದ್ದಾಗಲಿದೆ.

ಪರಿಣಾಮ ಏನು?
ಈ ನಿರ್ಧಾರ ಜಾರಿಗೆ ಬರುತ್ತಿದ್ದಂತೆ, ಹಳೆಯ ಸಂಸ್ಥೆಗಳ ಲಾಭಕ್ಕೆ ಕತ್ತರಿ ಬೀಳಲಿದೆ. ಹೊಸ ಸಂಸ್ಥೆ ರಿಲಯನ್ಸ್ ಜಿಯೊ ಇನ್ಫೊಕಾಂ ಮಾತ್ರ ಲಾಭ ಬಾಚಿಕೊಳ್ಳಲಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊ ಮತ್ತು ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಹೊರತುಪಡಿಸಿ ಉಳಿದೆಲ್ಲ ಮೊಬೈಲ್‌ ಸೇವಾ ಸಂಸ್ಥೆಗಳು ಟ್ರಾಯ್‌ ನಿರ್ಧಾರವನ್ನು ಕಟುವಾಗಿ ಟೀಕಿಸಿವೆ. ಮೂರು ವರ್ಷಗಳ ಮೊದಲೇ ಈ ನಿರ್ಧಾರ ಜಾರಿಗೆ ಬರಬೇಕಾಗಿತ್ತು ಎನ್ನುವುದು ರಿಲಯನ್ಸ್‌ ಕಮ್ಯುನಿಕೇಷನ್ಸ್‌ನ ವಾದವಾಗಿದೆ.

ADVERTISEMENT

ರಿಲಯನ್ಸ್‌ ಜಿಯೊಗೆ ಏನು ಲಾಭ?
ರಿಲಯನ್ಸ್‌ ಜಿಯೊಗೆ ಪ್ರತಿ ವರ್ಷ ₹3,900 ಕೋಟಿಯಷ್ಟು ಹಣ ಉಳಿಯಲಿದೆ. 2018ರ ಮಾರ್ಚ್‌ಗೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಭಾರ್ತಿ ಏರ್‌ಟೆಲ್‌, ಐಡಿಯಾ ಮತ್ತು ವೊಡಾಫೋನ್‌ಗೆ ತೆರಿಗೆ ಪಾವತಿ ಮುಂಚಿನ ಲಾಭವು ಶೇ 3 ರಿಂದ 6 ರಷ್ಟು ಕುಸಿಯಲಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಫಿಚ್‌ ಅಂದಾಜಿಸಿದೆ.

ರಿಲಯನ್ಸ್‌ ಜಿಯೊ ಏನು ಹೇಳುತ್ತದೆ?
ಹೊಸ ತಂತ್ರಜ್ಞಾನದಲ್ಲಿ ಕರೆಗಳನ್ನು ಗ್ರಾಹಕರಿಗೆ ತಲುಪಿಸುವ ವೆಚ್ಚವು ಅಗ್ಗವಾಗಿದೆ. ಸಂಪರ್ಕ ಜಾಲ ಮೂಲ ಸೌಕರ್ಯಕ್ಕೆ ಮಾಡಿದ ವೆಚ್ಚ ಮರಳಿ ಬಂದಿದ್ದರೂ ಮೊಬೈಲ್‌ ಸಂಸ್ಥೆಗಳು ಐಯುಸಿ ನೆಪದಲ್ಲಿ ನಿರಂತರವಾಗಿ ಲಾಭ ಮಾಡಿಕೊಳ್ಳುತ್ತಿವೆ.

ಏರ್‌ಟೆಲ್‌, ವೊಡಾಫೋನ್‌ ಟೀಕೆ ಏನು?
ಇದೊಂದು ಪ್ರತಿಗಾಮಿ ಕ್ರಮ. ಪಾರದರ್ಶಕತೆ ಇಲ್ಲ. ನಮಗೆ ಭಾರಿ ನಿರಾಶೆಯಾಗಿದೆ. ರಿಲಯನ್ಸ್‌ ಜಿಯೊಗೆ ಮಾತ್ರ ಇದರಿಂದ ಭಾರಿ ಪ್ರಯೋಜನ ದೊರೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ವಿಸ್ತರಿಸಲು, ‘ಡಿಜಿಟಲ್‌ ಇಂಡಿಯಾ’ಪರಿಕಲ್ಪನೆ ಸಾಕಾರಗೊಳಿಸಲು ಇದರಿಂದ ಅಡ್ಡಿಯಾಗಲಿದೆ. ದೂರಸಂಪರ್ಕ ವಲಯದ ಸುಸ್ಥಿರತೆ ಮತ್ತು ಸೇವೆ ವಿಸ್ತರಿಸುವ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಿಂಗಪುರದ ದೂರಸಂಪರ್ಕ ದೈತ್ಯ ಸಂಸ್ಥೆ ಸಿಂಗ್‌ಟೆಲ್‌ ಪ್ರತಿಕ್ರಿಯಿಸಿದೆ. ಏರ್‌ಟೆಲ್‌ನಲ್ಲಿ ಸಿಂಗ್‌ಟೆಲ್ ಶೇ 30ರಷ್ಟು ಪಾಲು ಹೊಂದಿದೆ.

ಕರೆ ದರ ಅಗ್ಗವಾಗುವುದೇ?
ಮೊಬೈಲ್‌ ಸಂಸ್ಥೆಗಳು ಇದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಕರೆ ದರಗಳು ಇನ್ನಷ್ಟು ಅಗ್ಗವಾಗಲಿವೆ. ಆದರೆ, ಬಹುತೇಕ ಸಂಸ್ಥೆಗಳು ತಳೆದಿರುವ ಧೋರಣೆ ಗಮನಿಸಿದರೆ ಸದ್ಯಕ್ಕಂತೂ ಅಂತಹ ಸಾಧ್ಯತೆ ಕಂಡು ಬರುತ್ತಿಲ್ಲ.

ಸಿಒಎಐ ನಿಲುವೇನು?
ಟ್ರಾಯ್‌ನ ಈ ನಿರ್ಧಾರವು ಮೊಬೈಲ್‌ ಸಂಸ್ಥೆಗಳಿಗೆ ಭಾರಿ ಹಾನಿ ಉಂಟು ಮಾಡಲಿದೆ ಎಂದು ಮೊಬೈಲ್ ಸೇವಾ ಸಂಸ್ಥೆಗಳ ಸಂಘವು (ಸಿಒಎಐ) ಪ್ರತಿಕ್ರಿಯಿಸಿದೆ. ಈ ನಿರ್ಧಾರದ ವಿರುದ್ಧ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ.

ಟ್ರಾಯ್‌ನ ಸಮರ್ಥನೆ ಏನು?
‘ಉದ್ಯಮ ಹಾಗೂ ಗ್ರಾಹಕರ ಹಿತಾಸಕ್ತಿ ರಕ್ಷಣೆ ಮತ್ತು ಹೊಸ ತಂತ್ರಜ್ಞಾನ ಅಳವಡಿಕೆಗೆ ಪೂರಕವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಂಪರ್ಕ ಜಾಲಕ್ಕೆ ಮಾಡಿದ ವೆಚ್ಚ ಆಧರಿಸಿ ಐಯುಸಿ ಲೆಕ್ಕ ಹಾಕಲಾಗಿದೆ. ಇದೊಂದು ಸಂಪೂರ್ಣ ಪಾರದರ್ಶಕ, ವಸ್ತುನಿಷ್ಠ, ಗಣಿತ ಲೆಕ್ಕಾಚಾರ ಆಧರಿಸಿದ ವೈಜ್ಞಾನಿಕ ನಿರ್ಧಾರವಾಗಿದೆ’ ಎಂದು ಟ್ರಾಯ್‌ ಅಧ್ಯಕ್ಷ ಆರ್‌.ಎಸ್. ಶರ್ಮಾ ಸಮರ್ಥಿಸಿಕೊಂಡಿದ್ದಾರೆ.

‘ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿರುವ, ತಮಗೆ ಆರ್ಥಿಕ ನಷ್ಟವಾಗಲಿದೆ ಎನ್ನುವ ಮೊಬೈಲ್ ಸೇವಾ ಸಂಸ್ಥೆಗಳು ಕೋರ್ಟ್‌ ಮೊರೆ ಹೋಗುವುದಾದರೆ ಹೋಗಲಿ. ನ್ಯಾಯ ಬಯಸಿ ಕೋರ್ಟ್‌ಗೆ ಹೋಗಲು ಪ್ರತಿಯೊಬ್ಬರಿಗೂ ಅವಕಾಶ ಇದೆ. ಕೋರ್ಟ್‌ನಲ್ಲಿ ತನ್ನ ನಿಲುವನ್ನು ಟ್ರಾಯ್‌ ಬಲವಾಗಿ ಸಮರ್ಥಿಸಿಕೊಳ್ಳಲಿದೆ’ ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಏನಿದು ‘ಐಯುಸಿ’?
ಮೊಬೈಲ್‌ ಸೇವಾ ಸಂಸ್ಥೆಯೊಂದರ ಸಂಪರ್ಕ ಜಾಲಕ್ಕೆ ಇನ್ನೊಂದು ಸಂಸ್ಥೆಯ ಗ್ರಾಹಕರಿಂದ ಬರುವ ಕರೆಗಳಿಗೆ ಪ್ರತಿ ನಿಮಿಷಕ್ಕೆ ವಿಧಿಸುವ ಶುಲ್ಕ ಇದಾಗಿದೆ.

ಉದಾಹರಣೆಗೆ – ಬಿಎಸ್‌ಎನ್‌ಎಲ್‌ ಗ್ರಾಹಕ, ಏರ್‌ಟೆಲ್‌ ಗ್ರಾಹಕನಿಗೆ ಕರೆ ಮಾಡಿದಾಗ ಆ ಕರೆ ಏರ್‌ಟೆಲ್‌ ಸಂಪರ್ಕ ಜಾಲದಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ಬಿಎಸ್‌ಎನ್‌ಎಲ್‌ ಏರ್‌ಟೆಲ್‌ಗೆ ಶುಲ್ಕ ಪಾವತಿಸುತ್ತದೆ. ಇದಕ್ಕೆ ಅಂತರ ಸಂಪರ್ಕ ಬಳಕೆ ಶುಲ್ಕ (Iinterconnect Usage Charge -IUC) ಎನ್ನುತ್ತಾರೆ. ಈ ಶುಲ್ಕವನ್ನು ಪ್ರತಿ ನಿಮಿಷಕ್ಕೆ ವಿಧಿಸಲಾಗುತ್ತಿದೆ.

ಸಂಸ್ಥೆಗಳು ಈ ಶುಲ್ಕದ ಹೊರೆಯನ್ನು ಗ್ರಾಹಕರಿಗೆ ಕರೆ ದರಗಳ ರೂಪದಲ್ಲಿ ವರ್ಗಾಯಿಸುತ್ತವೆ. ಅತಿ ಹೆಚ್ಚು ಸಂಖ್ಯೆಯ ಚಂದಾದಾರರನ್ನು ಹೊಂದಿರುವ ಸಂಸ್ಥೆಗೆ ಇದರಿಂದ ಹೆಚ್ಚು ಪ್ರಯೋಜನ ದೊರೆಯಲಿದೆ, ರಿಲಯನ್ಸ್‌ ಜಿಯೊ, ಆರಂಭದಿಂದಲೂ ಉಚಿತ ಧ್ವನಿ ಕರೆ ಸೌಲಭ್ಯ ಒದಗಿಸಿದ್ದರಿಂದ ಅದರ ಗ್ರಾಹಕರಿಂದ ಹೊರ ಹೋಗುವ ಕರೆಗಳು ಇತ್ತೀಚೆಗೆ ಗಮನಾರ್ಹ ಏರಿಕೆ ಕಂಡಿದ್ದವು. ಇದರಿಂದ ಇತರ ಮೊಬೈಲ್‌ ಸಂಸ್ಥೆಗಳಿಗೆ ‘ಐಯುಸಿ’ ಹೆಚ್ಚು ಲಾಭದಾಯಕವಾಗಿತ್ತು.

ಈಗ ‘ಐಯುಸಿ’ ಕಡಿಮೆಯಾಗುವುದರಿಂದ ಜಿಯೊ, ಇತರ ಸಂಸ್ಥೆಗಳಿಗೆ ಪಾವತಿಸುವ ಸೇವಾ ಶುಲ್ಕವೂ ಕಡಿಮೆಯಾಗಲಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಏರ್‌ಟೆಲ್‌, ಜಿಯೊದಿಂದ ಪಡೆದ ಸೇವಾ ಶುಲ್ಕದ ಮೊತ್ತ ₹ 480 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.