ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಳಿತ

ವಿಶ್ವನಾಥ ಎಸ್.
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಳಿತ
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಳಿತ   

ಪೆಟ್ರೋಲ್ ಮತ್ತು ಡೀಸೆಲ್‌ ದರ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈಗ ಅತ್ಯಂತ ದುಬಾರಿಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರುತ್ತಲೇ ಇರುವುದೊಂದೇ ಇದಕ್ಕೆ ಕಾರಣವಲ್ಲ. ಕೇಂದ್ರ ಸರ್ಕಾರ ವಿಧಿಸುತ್ತಿರುವ ಎಕ್ಸೈಸ್‌ ಸುಂಕ ಮತ್ತು ರಾಜ್ಯಗಳು ವಿಧಿಸುತ್ತಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕೂಡ ಕಾರಣ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಈಗ ನಿತ್ಯ ದರ ಪರಿಷ್ಕರಣೆ ಮಾಡುತ್ತಿವೆ. ಮುಂಚೆ 15 ದಿನಗಳಿಗೆ ಒಮ್ಮೆ ಪರಿಷ್ಕರಣೆ ಆಗುತ್ತಿತ್ತು. ಕಚ್ಚಾ ತೈಲ ದರ ಇಳಿಕೆಯಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಇಳಿಸದೇ ಇರುವುದರಿಂದ ಇಂಧನ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿಲ್ಲ.

ಅತಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಇದೆ. ತನ್ನ ಬೇಡಿಕೆಯ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ 2017ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಸುಮಾರು ₹ 5 ಲಕ್ಷ ಕೋಟಿ ಖರ್ಚಾಗಿದೆ. ಇದೇ ಅವಧಿಯಲ್ಲಿ ತೈಲ ಆಮದು ಪ್ರಮಾಣ ಶೇ 1.8 ರಷ್ಟು ಹೆಚ್ಚಾಗಿದ್ದು, 44 ಲಕ್ಷ ಬ್ಯಾರಲ್ ಆಮದು ಮಾಡಿಕೊಳ್ಳಲಾಗಿದೆ.

ಒಪೆಕ್ ರಾಷ್ಟ್ರಗಳ ಪಾತ್ರವೇನು?

ADVERTISEMENT

ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆಯು (OPEC) ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ನಿಗದಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 1965ರಲ್ಲಿ ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ ಸೇರಿ ಈ ಸಂಘಟನೆ ಸ್ಥಾಪಿಸಿದವು. ಉತ್ಪಾದನೆಯ ಪ್ರಮಾಣ ಆಧರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರ್ಧಾರವಾಗುತ್ತದೆ. ಸೌದಿ ಅರೇಬಿಯಾ, ಇರಾಕ್, ಇರಾನ್, ನೈಜೀರಿಯಾ, ಅಮೆರಿಕ, ವೆನೆಜುವೆಲಾ, ಕುವೈತ್, ಕತಾರ್‌... ಇವು ಕಚ್ಚಾ ತೈಲ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಾಗಿವೆ.

ಜಗತ್ತಿನ ಒಟ್ಟು ಕಚ್ಚಾ ತೈಲದಲ್ಲಿ ಶೇ 44ರಷ್ಟನ್ನು ಒಪೆಕ್‌ ಸದಸ್ಯ ದೇಶಗಳೇ ಉತ್ಪಾದನೆ ಮಾಡುತ್ತಿವೆ. ವಿಶ್ವದ ಒಟ್ಟು ಕಚ್ಚಾ ತೈಲ ಸಂಗ್ರಹದಲ್ಲಿ ಇವುಗಳ ಪಾಲು ಶೇ 73. 1970ರಲ್ಲಿ ತೈಲ ಬೆಲೆಯಲ್ಲಿ ದಿಢೀರನೆ ಭಾರಿ ಏರಿಕೆ ಕಂಡುಬಂದಿತು. ಇದರಿಂದ ಒಪೆಕ್‌ ರಾಷ್ಟ್ರಗಳ ವರಮಾನ ಮತ್ತು ಸಂಪತ್ತು ಗಮನಾರ್ಹವಾಗಿ ಹೆಚ್ಚಳಗೊಂಡು ಜಾಗತಿಕ ಆರ್ಥಿಕತೆ ಮೇಲೆ ದೂರಗಾಮಿ ಪರಿಣಾಮ ಬೀರಿತು. ಹೀಗಾಗಿ ಒಪೆಕ್ ತನ್ನ ಸದಸ್ಯ ರಾಷ್ಟ್ರಗಳಿಗೆ 1980ರಿಂದ ಉತ್ಪಾದನಾ ಗುರಿ ನಿಗದಿಪಡಿಸಲು ಆರಂಭಿಸಿತು. ಉತ್ಪಾದನೆ ತಗ್ಗಿಸಿದಾಗ ತೈಲ ಬೆಲೆ ಏರಿಕೆಯಾಗುತ್ತದೆ. ಉತ್ಪಾದನೆ ಹೆಚ್ಚಿಸಿದಾಗ ಬೆಲೆ ಇಳಿಕೆಯಾಗುತ್ತದೆ. ತೈಲ ಪೂರೈಕೆ ಹೆಚ್ಚಿದ್ದರಿಂದ 2008 ಮತ್ತು 2016ರಲ್ಲಿ ಉತ್ಪಾದನೆ ತಗ್ಗಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಕಚ್ಚಾ ತೈಲ ಉತ್ಪಾದನೆ ತಗ್ಗಲಿದೆ ಎನ್ನುವ ಸುದ್ದಿ ಬಂದರೆ ಸಾಕು ಮಾರುಕಟ್ಟೆಯಲ್ಲಿ ತಕ್ಷಣವೇ ಇಂಧನ ಬೆಲೆ ಏರಿಕೆ ಆಗುತ್ತದೆ.

ಭಾರತದಲ್ಲಿ ತೈಲ ಬೆಲೆ ನಿರ್ಧಾರ ಹೇಗೆ?

ದೇಶದಲ್ಲಿ 1948ರಿಂದ 2010ರವರೆಗೆ ಸರ್ಕಾರವೇ ತೈಲ ದರ ನಿಯಂತ್ರಿಸುತ್ತಿತ್ತು. 2010ರ ಜೂನ್‌ ತಿಂಗಳಿಂದ ಪೆಟ್ರೋಲ್‌ ಮತ್ತು 2014ರ ಅಕ್ಟೋಬರ್‌ನಿಂದ ಡೀಸೆಲ್‌ ದರವನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಯಿತು. ಈಗ ತೈಲ ಕಂಪನಿಗಳಿಗೆ ದರ ನಿಗದಿ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಇದೆ. ಹೀಗಿದ್ದರೂ ದರ ನಿಗದಿಯಲ್ಲಿ ರಾಜಕೀಯ ಅಂಶಗಳು ಕೆಲವೊಮ್ಮೆ ಪ್ರಭಾವ ಬೀರುತ್ತವೆ.

ನಿತ್ಯವೂ ದರ ಪರಾಮರ್ಶೆ...

ತೈಲ ಕಂಪನಿಗಳು 2017ರ ಜೂನ್ 16ರಿಂದ ದೇಶದಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿದಿನ ಪರಿಷ್ಕರಣೆ ಮಾಡಲಾರಂಭಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರಕ್ಕೆ ಅನುಗುಣವಾಗಿ ನಿತ್ಯವೂ ದರ ನಿಗದಿಪಡಿಸುತ್ತಿವೆ. ಪ್ರತಿನಿತ್ಯ ದರ ಏರಿಳಿತ ಆಗುವುದರಿಂದ ಅದು ಗ್ರಾಹಕರ ಗಮನ ಸೆಳೆಯುವುದು ಕಡಿಮೆ.

9 ಬಾರಿ ಸುಂಕ ಏರಿಕೆ

2014ರ ನವೆಂಬರ್‌ನಿಂದ 2016ರ ಜನವರಿವರೆಗೆ ಕೇಂದ್ರ ಸರ್ಕಾರ ಒಟ್ಟು ಒಂಬತ್ತು ಬಾರಿ ಎಕ್ಸೈಸ್‌ ಸುಂಕ ಹೆಚ್ಚಿಸಿದೆ. 2017ರ ಡಿಸೆಂಬರ್‌ 12ರಿಂದ ಇಂಧನ ದರ ಏರುಗತಿಯಲ್ಲಿದೆ. ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಲು ಸರ್ಕಾರಗಳು ಸುಂಕ ತಗ್ಗಿಸಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಿದೆ. ಆದರೆ ಅವು ಮಣಿಯುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿ ಒಮ್ಮೆ ಸುಂಕವನ್ನು ಪ್ರತಿ ಲೀಟರಿಗೆ ₹ 2 ಕಡಿತ ಮಾಡಿತ್ತು. 15 ತಿಂಗಳ ಅವಧಿಯಲ್ಲಿ ಪೆಟ್ರೋಲ್‌ ಮೇಲೆ ₹ 11.77 ಮತ್ತು ಡೀಸೆಲ್‌ ಮೇಲೆ ₹ 13.47 ರಂತೆ ಎಕ್ಸೈಸ್‌ ಸುಂಕ ಹೆಚ್ಚಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 2016–17ನೇ ಹಣಕಾಸು ವರ್ಷದಲ್ಲಿ ₹ 2.42 ಲಕ್ಷ ಕೋಟಿ ವರಮಾನ ಹರಿದು ಬಂದಿದೆ. 2014–15ರಲ್ಲಿ ಈ ಮೊತ್ತ ಬರೀ ₹ 99 ಸಾವಿರ ಕೋಟಿಗಳಷ್ಟಿತ್ತು.  2017ರ ಡಿಸೆಂಬರ್‌ 12ರಿಂದ ಇದುವರೆಗೆ ಪೆಟ್ರೋಲ್‌ ದರ ಪ್ರತಿ ಲೀಟರಿಗೆ ₹3.31 ಮತ್ತು ಡೀಸೆಲ್‌ ದರ ಪ್ರತಿ ಲೀಟರಿಗೆ ₹4.86ರಷ್ಟು ಏರಿಕೆಯಾಗಿದೆ.

ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ವಿರೋಧ ಏಕೆ?

ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇಂಧನದ ಮೇಲಿನ ಸುಂಕವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವರಮಾನದ ದೊಡ್ಡ ಮೂಲವಾಗಿದೆ. ಈ ಕಾರಣಕ್ಕಾಗಿ ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ರಾಜ್ಯಗಳು ವಿರೋಧಿಸುತ್ತಿವೆ. ಕೇಂದ್ರ ಸರ್ಕಾರಕ್ಕೂ ಸಂಪೂರ್ಣ ಮನಸ್ಸಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್ ಮತ್ತು ಡೀಸೆಲ್‌ ದರದಲ್ಲಿ ಭಾರಿ ಇಳಿಕೆ ಆಗಲಿದೆ.

ಬಜೆಟ್‌ ಕೊಡುಗೆ ಏನು?

2018-19ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ₹ 2 ಕಡಿತ ಮಾಡಲಾಗಿದೆ. ಆದರೆ, ಇದರ ಪ್ರಯೋಜನ ಗ್ರಾಹಕರಿಗೆ ಸಿಗುವುದಿಲ್ಲ. ಏಕೆಂದರೆ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಅನ್ನು ₹ 2ರಷ್ಟು ಹೆಚ್ಚಿಸಲಾಗಿದೆ (₹ 6ರಿಂದ 8ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.