ADVERTISEMENT

ಅಂಕುಶ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 19:30 IST
Last Updated 8 ಜೂನ್ 2014, 19:30 IST

ಗಣಿ ಗುತ್ತಿಗೆಗಳ ನವೀಕರಣ ಮಾಡುವ ಮುನ್ನ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯುವುದನ್ನು ಕಡ್ಡಾಯ­ಗೊಳಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಪ್ರಭಾವಕ್ಕೆ ಮಣಿಯದೆ, ಎಚ್ಚರದ ಹೆಜ್ಜೆ ಇಡುವುದು ಅಗತ್ಯ.

ಗಣಿ ಗುತ್ತಿಗೆಗಳ ಮಂಜೂರು ಮತ್ತು ನವೀಕರಣದ ವಿಷಯದಲ್ಲಿ ತನ್ನ ಪಾತ್ರ ಹೆಚ್ಚು ಇರುವುದಿಲ್ಲ ಎಂಬ ಧೋರಣೆ ಈವರೆಗೆ ಕೇಂದ್ರ ಸರ್ಕಾರಕ್ಕೆ ಇತ್ತು. ರಾಜ್ಯ ಸರ್ಕಾರಗಳು ಕೂಡ ಹಾಗೆಯೇ ನಡೆದು­ಕೊಳ್ಳುತ್ತಾ ಬಂದಿವೆ. ಈಗ ಖನಿಜ ಸಂಪತ್ತಿನ ರಕ್ಷಣೆಯ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಸ್ವೇಚ್ಛಾಚಾರದ ನಿರ್ಣಯಗಳನ್ನು ಕೈಗೊಳ್ಳದಂತೆ ಅಂಕುಶ ಹಾಕಲು ಕೇಂದ್ರ ಮುಂದಾಗಿರುವುದು ಸರಿಯಾಗಿಯೇ ಇದೆ.

ಯಾವುದೇ ಗಣಿ ಗುತ್ತಿಗೆಯ ಅವಧಿ ಅಂತ್ಯಗೊಂಡರೆ, ಅದರ ನವೀಕರಣ ಪ್ರಕ್ರಿಯೆಯಲ್ಲಿ ಹೊಸ ಗುತ್ತಿಗೆ ಮಂಜೂರು ಮಾಡುವಾಗ ಅನುಸರಿಸುವ ವಿಧಾನವನ್ನೇ ಅಳವಡಿಸಿಕೊಳ್ಳಬೇಕು. ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಕಾರ ಗಣಿ ಗುತ್ತಿಗೆಗಳ ನವೀಕರಣದ ಸಂದರ್ಭದಲ್ಲೂ ಅರಣ್ಯ, ಪರಿಸರ ಮತ್ತು ಗಣಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.

ನೀರು ಮತ್ತು ವಾಯು ಸಂರಕ್ಷಣಾ ಕಾಯ್ದೆಯ ಅಡಿಯಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿ­ಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಆದರೆ, ರಾಜ್ಯದಲ್ಲಿ ಕೆಲವು ಗುತ್ತಿಗೆಗಳ ನವೀಕರಣದಲ್ಲಿ ಇಂತಹ ಕ್ರಮ ಅನುಸರಿಸದೇ ಇರುವುದು ರಾಜ್ಯ ಸರ್ಕಾರದ ದೊಡ್ಡ ಲೋಪ. ಗಣಿಗಾರಿಕೆಗೆ ಸಂಬಂಧಿಸಿದ ವಿಷಯಗಳನ್ನು ಉದ್ಯಮದ ದೃಷ್ಟಿಯಿಂದ ಮಾತ್ರವೇ ನೋಡುತ್ತಿರುವುದರಿಂದ ಇಂತಹ ತಪ್ಪುಗಳಾಗುತ್ತಿವೆ.

ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗುವ ಹಾನಿ­ಯನ್ನು ತಡೆಯುವ ಬದ್ಧತೆಯನ್ನು ಅಧಿಕಾರಿಗಳು ಪ್ರದರ್ಶಿಸದೇ ಇರುವುದು ಕೂಡ ಇದಕ್ಕೆ ಕಾರಣ ಇದ್ದಂತಿದೆ. ಸುಪ್ರೀಂಕೋರ್ಟ್‌ನ ಕಣ್ಗಾವಲು ಇರುವಾ­ಗಲೂ  ಇಂತಹ ಅಕ್ರಮಗಳು ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಹಿಂದೆ ಗಣಿಗಾರಿಕೆಯ ಹೆಸರಿನಲ್ಲಿ ಏನು ನಡೆಯಿತು ಎಂಬುದು ಜಗಜ್ಜಾಹೀರಾಗಿದೆ.

ಕೆಲವು ಮಂದಿ ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣಿ ಉದ್ಯಮಿಗಳು ಕಾನೂನನ್ನು ಗಾಳಿಗೆ ತೂರಿ ನಿಸರ್ಗ ಸಂಪತ್ತನ್ನು ಲೂಟಿ ಮಾಡಿದರು. ಇದರಿಂದಾಗಿ ಗಣಿಗಾರಿಕೆ ಎಂದರೆ ಬರೀ ಅಕ್ರಮ ಎಂಬಂತಹ ಚಿತ್ರಣ ಮೂಡಿದೆ. ಗಣಿಗಾರಿಕೆಯ ವಿಷಯದಲ್ಲಿ ಒತ್ತಡಗಳಿಗೆ ಮಣಿದು ತಪ್ಪು ಹೆಜ್ಜೆಗಳನ್ನು ಇಟ್ಟ ಪರಿಣಾಮವಾಗಿ ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಮುಜುಗರ ಅನುಭವಿಸಿದೆ.

ಉದ್ಯಮ ಕೂಡ ಅದರ ಪರಿಣಾಮ­ವನ್ನು ಅನುಭವಿಸುತ್ತಿದೆ. ಗಣಿ ಗುತ್ತಿಗೆ ಮಂಜೂರು, ನವೀಕರಣ ಮತ್ತು ಗಣಿಗಾರಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ಹಲವು ಅಧಿಕಾರಿಗಳು ಜೈಲು ಸೇರಿದ್ದಾರೆ. ಆದರೂ ಮತ್ತೆ ಅಂತಹ ತಪ್ಪು­ಗಳು ಮರುಕಳಿಸುತ್ತಿರುವುದು  ಅಕ್ಷಮ್ಯ. ಇದಕ್ಕೆ ಕಾರಣ­ರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. 

ಸೂಕ್ತ ಅನುಮತಿ ಇಲ್ಲದೆ ನವೀಕರ­ಣ­ಗೊಂಡಿರುವ ಗಣಿ ಗುತ್ತಿಗೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು. ಮುಂದೆ ಇಂತಹ ತಪ್ಪು ನಿರ್ಧಾರಗಳು ಆಗದಂತೆ ಹದ್ದಿನ ಕಣ್ಣಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.