ADVERTISEMENT

ಅಸಹಿಷ್ಣುತೆ ಆತಂಕಕಾರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2015, 19:30 IST
Last Updated 22 ಫೆಬ್ರುವರಿ 2015, 19:30 IST

ಕಮ್ಯುನಿಸ್ಟ್ ನಾಯಕ ಗೋವಿಂದ್‌ ಪನ್ಸಾರೆ ಮತ್ತು ಅವರ ಪತ್ನಿಯ ಮೇಲೆ ಕೊಲ್ಹಾಪುರದಲ್ಲಿ ನಡೆದ ದಾಳಿ, ದೇಶದ ಧರ್ಮ ನಿರಪೇಕ್ಷತೆ ಹಾಗೂ ವೈಚಾ­ರಿಕತೆಯ ಮೇಲೆ  ಕರಿನೆರಳು ಕವಿಯುವಂತೆ ಮಾಡಿದೆ.  ಬೆಳ­ಗಿನ ವಾಕಿಂಗ್ ಮುಗಿಸಿ ಹಿಂದಿರುಗುತ್ತಿದ್ದ ದಂಪತಿ ಮೇಲೆ ಬೈಕ್‌ನಲ್ಲಿ ಬಂದ ದುಷ್ಕ­ರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ  ಪನ್ಸಾರೆ  ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಪತ್ನಿ ಆಸ್ಪ­ತ್ರೆಯ­ಲ್ಲಿದ್ದಾರೆ. ಪನ್ಸಾರೆ ಅವರ ಒಡನಾಡಿಯಾಗಿದ್ದ ಡಾ. ನರೇಂದ್ರ ದಾಭೋ­ಲ್ಕರ್‌ ಅವರನ್ನೂ 2013ರ ಆಗಸ್‌್ಟನಲ್ಲಿ ಇದೇ ರೀತಿ ಪುಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಆ ಪ್ರಕರಣದಲ್ಲೂ, ಬೆಳಗಿನ ವಾಕಿಂಗ್‌ ಮುಗಿಸಿ ಹಿಂದಿರು­ಗುತ್ತಿದ್ದ ದಾಭೋಲ್ಕರ್‌ ಅವರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ಅತಿ ಹತ್ತಿರದಿಂದ ಗುಂಡು ಹಾರಿಸಿ ಕೊಂದಿದ್ದರು. ಬಾಂಬೆ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಸಿಬಿಐ ಒಂಬತ್ತು ತಿಂಗಳ ಕಾಲ ಘಟ­ನೆಯ ತನಿಖೆ ನಡೆಸಿತು. ಆದರೂ  ಕೊಲೆಗಾರರನ್ನು ಬಂಧಿಸಲು ಸಾಧ್ಯ­ವಾಗಿಲ್ಲ.

ಈ ಇಬ್ಬರೂ ಪ್ರಗತಿಪರ ಹೋರಾಟಗಾರರ ಯಶಸ್ವಿ ವೈಚಾರಿಕ ನಡೆ ಬಲ­ಪಂಥೀಯರನ್ನು, ಅದರಲ್ಲೂ ಸಂಘ ಪರಿವಾರದೊಟ್ಟಿಗೆ ಗುರುತಿಸಿಕೊಂಡ­ವರನ್ನು ಕೆರಳಿಸಿತ್ತು.  ಈ ನಾಯಕರ ಮೇಲಿನ ದಾಳಿಯನ್ನು ಪ್ರಜಾಪ್ರಭುತ್ವ ಹಾಗೂ  ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಪರ್ಯಾಯವಾಗಿ ಆಲೋಚಿಸುವವರು ಹಾಗೂ ಮೂಲ­ಭೂತವಾದದ ವಿರುದ್ಧ ಮಾತನಾಡುವವರ ಬಗ್ಗೆ ಒಡ­ಮೂಡುವ ಅಸಹಿಷ್ಣುತೆಯು ಅಂತಹವರನ್ನು ಕೊಂದೇ ಹಾಕಿಬಿಡುವಂಥ ವಿಪ­ರೀತಕ್ಕೆ ಹೋಗುತ್ತಿರುವುದು ಆತಂಕಕಾರಿ. ಇಂತಹ ದಾಳಿಗಳನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು. ಈ ದಾಳಿಗಳು  ನಡೆದಿರುವುದು ಮಹಾ­ರಾಷ್ಟ್ರ­ದಲ್ಲಿ  ಮಾತ್ರ. ಹಾಗೆಂದು ಉಳಿದೆಡೆ ಶಾಂತಿ, ನೆಮ್ಮದಿ ನೆಲೆಸಿದೆ ಎಂದರ್ಥವಲ್ಲ. ನಾಗರಿಕ ಸಮಾಜ ಇದನ್ನು ಗಂಭೀರವಾಗಿ ಪರಿಗಣಿ­ಸದೇ ಹೋದರೆ ಇಂಥ ಕೃತ್ಯಗಳು ದೇಶದ ಇತರ ಭಾಗಗಳಿಗೂ ವ್ಯಾಪಿಸಲು ಹೆಚ್ಚು ಸಮಯ ಬೇಕಾಗದು.

ಮಹಾರಾಷ್ಟ್ರದಲ್ಲಿ ಹಿಂದೆ ಇದ್ದ ಕಾಂಗ್ರೆಸ್‌– ಎನ್‌ಸಿಪಿ ಸರ್ಕಾರವಾಗಲಿ, ಈಗಿನ ಬಿಜೆಪಿ ಮೈತ್ರಿಕೂಟದ ಸರ್ಕಾರವಾಗಲಿ ದಾಭೋಲ್ಕರ್‌ ಹಾಗೂ ಪನ್ಸಾರೆ ಅವರ ಕುಟುಂಬಕ್ಕೆ ಬಾಯಿಮಾತಿನ ಸಾಂತ್ವನ ಹೇಳಿದ್ದು ಬಿಟ್ಟರೆ ಹೆಚ್ಚಿನದೇನನ್ನೂ ಮಾಡಿಲ್ಲ. ಸಿಪಿಐಗೆ ಸೇರಿದ್ದರೂ ಇತರ ಸಾಮಾಜಿಕ ಹೋರಾಟಗಳಲ್ಲೂ ಸಕ್ರಿಯರಾಗಿದ್ದ ಪನ್ಸಾರೆ ಅಂತಹವರ ಕಾರ್ಯಸಾಧನೆ ಪಕ್ಷದ ವ್ಯಾಪ್ತಿಯನ್ನು ಮೀರಿದ್ದು. ತೋಟದ ಕಾರ್ಮಿಕರು, ಮನೆ ಕೆಲಸದವರು ಹಾಗೂ ಆಟೊ ರಿಕ್ಷಾ ಒಕ್ಕೂಟಗಳನ್ನು ಒಳಗೊಂಡ ಅಸಂಘಟಿತ ಕಾರ್ಮಿಕರ ಪರವಾಗಿದ್ದ ಅವರ ಹೋರಾಟಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. ದಾಭೋಲ್ಕರ್‌ ಜೊತೆ ಸೇರಿ ಮೂಢನಂಬಿಕೆಗಳ ವಿರುದ್ಧ ನಡೆಸಿದ ತೀವ್ರ ಹೋರಾಟ ವಿರೋಧಿಗಳ ಕಣ್ಣು ಕೆಂಪಾಗಿಸಿತ್ತು. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ಈ ರೀತಿ ಪದೇ ಪದೇ ಬೆದರಿಕೆ ಎದುರಾಗುತ್ತಿರುವುದು ಕಳವಳಕಾರಿ.  ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದ ಅತ್ಯಂತ ಮೌಲಿಕವಾದ ಆಸ್ತಿ. ಅದರ ಮೇಲೆ ಎಲ್ಲೇ ದಾಳಿ ಯತ್ನ ನಡೆದರೂ ಇಡೀ ದೇಶದ ನಾಗರಿಕ ಸಮಾಜ ಅದರ ವಿರುದ್ಧ ದನಿ ಎತ್ತಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.