ADVERTISEMENT

ಉತ್ತೇಜಕ ಆರ್ಥಿಕ ಮುನ್ನೋಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2014, 19:30 IST
Last Updated 4 ಜೂನ್ 2014, 19:30 IST

ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ದ್ವಿತೀಯ ದ್ವೈಮಾಸಿಕ ಹಣ­ಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಥಾ­ಸ್ಥಿತಿ ಕಾಯ್ದು­ಕೊಂಡಿದೆ. ಇದೊಂದು ನಿರೀಕ್ಷಿತ ನಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದ ಮೊದಲ ಪರಾಮರ್ಶೆಯಲ್ಲಿ ಆರ್‌ಬಿಐ ಧೋರಣೆ ಏನು ಇರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಅವರು, ಸತತ 2ನೇ ಬಾರಿಗೆ  ಬಡ್ಡಿ ದರಗಳಲ್ಲಿ ಯಥಾ­ಸ್ಥಿತಿ ಕಾಯ್ದು­ಕೊಂಡಿ­ರು­ವುದು, ಸಾಲಗಳ ಮೇಲಿನ ಮಾಸಿಕ ಕಂತು ಕಡಿಮೆ­ಯಾಗುವ ಕೊಡುಗೆ ನಿರೀಕ್ಷಿಸಿದ ಕೈಗಾರಿಕೋದ್ಯಮಿ­ಗಳು ಸೇರಿದಂತೆ ಅನೇಕರಿಗೆ ನಿರಾಶೆ ಮೂಡಿ­ಸಿದೆ.

ಅರ್ಥವ್ಯವಸ್ಥೆಗೆ ಚೇತರಿಕೆ ನೀಡುವುದು ತನ್ನ ಮೊದಲ ಆದ್ಯತೆ­ಯಾ­ಗಿದೆ ಎಂದು ಮೋದಿ ಸರ್ಕಾರ ಘೋಷಿಸಿದೆ. ಹೀಗಾಗಿ, ಮುಂಬರುವ ದಿನ­ಗಳಲ್ಲಿ ಬಡ್ಡಿ ದರ ಕಡಿತಕ್ಕೆ ಆರ್‌ಬಿಐ ಪೂರ್ವ­ಭಾವಿ ಸಿದ್ಧತೆ ನಡೆಸಿರು­ವುದು ಮಾತ್ರ ಉತ್ತೇಜಕರ ಆರ್ಥಿಕ ಮುನ್ನೋಟ­ವಾಗಿದೆ. ಹಣದುಬ್ಬರ ಒತ್ತಡ ಕಡಿಮೆ­ಯಾ­ದರೆ ಬಡ್ಡಿ ದರ ಕಡಿಮೆ ಮಾಡುವುದಾಗಿ ರಾಜನ್‌  ಈ ಬಾರಿಯೂ ತಮ್ಮ ಹಿಂದಿನ ಹೇಳಿಕೆ­­ಯನ್ನೇ ಪುನರುಚ್ಚರಿಸಿದ್ದಾರೆ.

ವಾಣಿಜ್ಯ ಬ್ಯಾಂಕ್‌ಗಳು ಸರ್ಕಾರಿ ಬಾಂಡ್‌ಗಳ ರೂಪದಲ್ಲಿ ತಮ್ಮ ಬಳಿ ಇಟ್ಟು­ಕೊಳ್ಳುವ ಠೇವಣಿಗಳ ಅನು­ಪಾತ­ ಕಡಿಮೆ ಮಾಡುವ ಮೂಲಕ, ರಾಜನ್‌ ಅವರು ಹೂಡಿಕೆ­ದಾರರನ್ನು ಅಚ್ಚರಿ­ಗೊಳಿಸಿದ್ದಾರೆ. ಬ್ಯಾಂಕಿಂಗ್‌ ವಲ­ಯದ ದೀರ್ಘಾವಧಿ ಸುಧಾರಣಾ  ಕ್ರಮಗಳ  ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿ­­ಟ್ಟಿ­ದ್ದಾರೆ. ಹಣದುಬ್ಬರ ನಿಯಂತ್ರಣ ಮತ್ತು ಅರ್ಥ ವ್ಯವಸ್ಥೆ ಚೇತರಿ­ಕೆಗೆ ಕೇಂದ್ರೀಯ ಬ್ಯಾಂಕ್‌ ಕೈಗೊಳ್ಳುವ ಕ್ರಮಗಳಿಗೆ  ಕೇಂದ್ರ ಸರ್ಕಾರವು ಬೆಂಬ­ಲಕ್ಕೆ ನಿಲ್ಲಬೇಕಾಗಿದೆ. ಮುಂಗಾರು ಕೈಕೊಟ್ಟು ಕೃಷಿ ಉತ್ಪಾದನೆ ಕಡಿಮೆ­ಯಾ­ದರೆ ಕೈಗಾರಿಕಾ ರಂಗದ ಚೇತರಿಕೆಯೂ ವಿಳಂಬವಾಗ­ಲಿದೆ. ಇದ­ರಿಂದ ಹಣ­ದುಬ್ಬರ ತಗ್ಗುವ ಸಾಧ್ಯತೆ ಕ್ಷೀಣಿಸಿ ಆರ್‌ಬಿಐಗೆ ಮತ್ತೆ ಹೊಸ ಸವಾಲು ಎದು­ರಾ­ಗಲಿದೆ. ಅಂತಹ ಇಕ್ಕಟ್ಟಿನ ಸಂದರ್ಭ ಉದ್ಭವಿ­ಸಿದರೆ ವಿತ್ತೀಯ ಮತ್ತು ಚಾಲ್ತಿ ಖಾತೆ ಕೊರತೆ ತಗ್ಗಿಸುವ ಇನ್ನಷ್ಟು ಪರಿಣಾಮಕಾರಿ ಕ್ರಮ­­ಗಳನ್ನು  ಕೈ­ಗೊ­ಳ್ಳು­ವುದು ಅನಿವಾ­ರ್ಯವಾ­ಗ­ಲಿದೆ.

ದೇಶಿ ಅರ್ಥ ವ್ಯವಸ್ಥೆ­ಯಲ್ಲಿ ವಿದೇಶಿ ಬಂಡ­ವಾಳ ಹೂಡಿಕೆದಾರರ ವಿಶ್ವಾಸ­­ ಹೆಚ್ಚಿಸಲು ಸರ್ಕಾ­ರದ ಅನಗತ್ಯ ವೆಚ್ಚ ಖೋತಾ ಮಾಡಿ ವಿತ್ತೀಯ ಕೊರತೆ ತಗ್ಗಿಸಬೇಕಾ­ಗುತ್ತದೆ. ಆಹಾರ ಧಾನ್ಯ ಮತ್ತಿ­ತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಪೂರೈ­­ಕೆಗೆ ಸಂಬಂಧಿಸಿದ ಅಡಚಣೆಗಳನ್ನೂ ದೂರ ಮಾಡುವ, ಸರಕುಗಳ ಬೇಡಿಕೆ ಹೆಚ್ಚಿ­ಸುವ ಸಮಗ್ರ ನೀತಿ ಜಾರಿಗೆ ಒತ್ತು ನೀಡ­ಬೇಕಾಗಿದೆ. ಬಹು ಬ್ರಾಂಡ್‌ ಚಿಲ್ಲರೆ ವಹಿವಾಟು ರಂಗದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದ  ಕಗ್ಗಂಟು ಬಗೆಹರಿಸು­ವುದೂ  ಸೇರಿ­ದಂತೆ ಅನೇಕ ಹೊಸ ಸುಧಾರಣಾ ಕ್ರಮಗಳ ಜಾರಿಗೆ ಸರ್ಕಾ­ರವು ಸಕ್ರಿಯ­ವಾಗಿ ಕಾರ್ಯಪ್ರವೃತ್ತ­ವಾದರೆ ಅರ್ಥ ವ್ಯವಸ್ಥೆ ಆದಷ್ಟು ಬೇಗ ಸರಿದಾರಿಗೆ ಬಂದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.