ADVERTISEMENT

ಎಲ್‌ಪಿಜಿ ಸಬ್ಸಿಡಿ ರದ್ದು; ಆರ್ಥಿಕ ಸುಧಾರಣೆಯ ಇನ್ನೊಂದು ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2017, 19:30 IST
Last Updated 2 ಆಗಸ್ಟ್ 2017, 19:30 IST
ಎಲ್‌ಪಿಜಿ ಸಬ್ಸಿಡಿ ರದ್ದು; ಆರ್ಥಿಕ ಸುಧಾರಣೆಯ ಇನ್ನೊಂದು ಹೆಜ್ಜೆ
ಎಲ್‌ಪಿಜಿ ಸಬ್ಸಿಡಿ ರದ್ದು; ಆರ್ಥಿಕ ಸುಧಾರಣೆಯ ಇನ್ನೊಂದು ಹೆಜ್ಜೆ   

ಅಡುಗೆ ಅನಿಲ ಸಿಲಿಂಡರ್‌ಗಳಿಗೆ (ಎಲ್‌ಪಿಜಿ) ನೀಡಲಾಗುತ್ತಿರುವ ಸಬ್ಸಿಡಿಯನ್ನು ಮುಂದಿನ ವರ್ಷದ (2018) ಮಾರ್ಚ್‌ ಒಳಗೆ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತೈಲ ಉತ್ಪನ್ನಗಳ ಬೆಲೆಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಸುಧಾರಣಾ ಕ್ರಮದ ಹಾದಿಯಲ್ಲಿನ ಇನ್ನೊಂದು ಮಹತ್ವದ ನಿರ್ಧಾರ ಇದಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ ₹ 25 ಸಾವಿರ ಕೋಟಿ ಉಳಿತಾಯವಾಗಲಿದೆ. ಈ ದೊಡ್ಡ ಮೊತ್ತವನ್ನು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. 5 ಕೋಟಿ ಬಡ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ಕಲ್ಪಿಸಲು ಮತ್ತು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಪೂರೈಸಲೂ ಈ ಹಣ ಬಳಸಬಹುದಾಗಿದೆ. ವಾಸ್ತವದಲ್ಲಿ ಸರ್ಕಾರದ ಈ ನಿರ್ಧಾರ ಜೂನ್‌ ತಿಂಗಳಿನಿಂದಲೇ ಜಾರಿಗೆ ಬಂದಿದೆ. ಬೆಲೆ ಏರಿಕೆಯ ಹಿಂದಿನ ಉದ್ದೇಶ ಈಗ ಬಹಿರಂಗಗೊಂಡಿದೆಯಷ್ಟೇ. ಸಬ್ಸಿಡಿ ಸೌಲಭ್ಯವನ್ನು ಏಕಾಏಕಿ ರದ್ದುಗೊಳಿಸದೆ, ಪ್ರತಿ ತಿಂಗಳೂ ಪ್ರತಿ ಸಿಲಿಂಡರ್‌ ಬೆಲೆ ಹೆಚ್ಚಿಸಿ, ₹ 87ರಷ್ಟು ಸಬ್ಸಿಡಿ ಹೊರೆ ಕೊನೆಗಾಣಿಸಲು ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ದೇಶದಲ್ಲಿ ಸದ್ಯಕ್ಕೆ 18.11 ಕೋಟಿ ಬಳಕೆದಾರರು ಎಲ್‌ಪಿಜಿ ಸಬ್ಸಿಡಿ ಪಡೆಯುತ್ತಿದ್ದಾರೆ. ಇದರಲ್ಲಿ ಪ್ರಧಾನಮಂತ್ರಿ ಉಜ್ವಲ್‌ ಯೋಜನೆಯಡಿ 2.6 ಕೋಟಿ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ನೀಡಿರುವುದೂ ಸೇರಿದೆ. 2.66 ಕೋಟಿ ಬಳಕೆದಾರರು ಈ ಸಬ್ಸಿಡಿ ವ್ಯಾಪ್ತಿಯ ಹೊರಗಿದ್ದಾರೆ ಇಲ್ಲವೇ ಸರ್ಕಾರದ ಮನವಿ ಮೇರೆಗೆ ಬಿಟ್ಟುಕೊಟ್ಟಿದ್ದಾರೆ. ಮುಂದಿನ ವರ್ಷದಿಂದ ಬಡ ಕುಟುಂಬದ ಮಹಿಳೆಯರು ಹೊರತುಪಡಿಸಿ ಉಳಿದೆಲ್ಲ ಬಳಕೆದಾರರು ಸಬ್ಸಿಡಿ ಸೌಲಭ್ಯದಿಂದ ಹೊರ ಬರಲಿದ್ದಾರೆ. ಸದ್ಯಕ್ಕೆ ಕುಟುಂಬವೊಂದಕ್ಕೆ ತಲಾ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗಳನ್ನು ವರ್ಷಕ್ಕೆ 12ರಂತೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಸಬ್ಸಿಡಿ ಮೊತ್ತವನ್ನು ಈಗಾಗಲೇ ಎಲ್ಲ ವರ್ಗದ ಬಳಕೆದಾರರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಜುಲೈ 1ರಂದು ಎಲ್‌ಪಿಜಿ ಬೆಲೆಯನ್ನು ₹ 32ರಷ್ಟು ಹೆಚ್ಚಿಸಲಾಗಿತ್ತು. ಒಂದು ವರ್ಷದ ಅವಧಿಯಲ್ಲಿ ಸಿಲಿಂಡರ್‌ ದರ ₹48ರಷ್ಟು ಹೆಚ್ಚಾಗಿದೆ. ಇವೆಲ್ಲವೂ ಸಬ್ಸಿಡಿ ರದ್ದತಿಯ ಮುನ್ಸೂಚನೆಗಳಾಗಿದ್ದವು. ಜನಸಾಮಾನ್ಯರು, ರೈತಾಪಿ ವರ್ಗ ಮತ್ತು ವೇತನ ವರ್ಗದ ಮೇಲೆ ಇದು ಹೊರೆಯಾಗಿ ಪರಿಣಮಿಸಲಿದೆ ಎನ್ನುವುದೂ ನಿಜ. ಆದರೆ, ಸಬ್ಸಿಡಿ ದುರ್ಬಳಕೆ ಮತ್ತು ಜನಪರ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕೊರತೆ ಮುಂದೆ ಈ ಹೊರೆಯ ತೀವ್ರತೆ ಗೌಣವಾಗಿದೆ. ನಮ್ಮಲ್ಲಿ ಸಬ್ಸಿಡಿಗಳ ದುರುಪಯೋಗ ಆಗಿರುವುದೇ ಹೆಚ್ಚು. ಪ್ರಯೋಜನವು ಫಲಾನುಭವಿಗಳ ಕೈಸೇರದೆ ಮಧ್ಯದಲ್ಲಿಯೇ ಕೈ ಬದಲಿಸಿ ಸೋರಿಕೆಯಾಗುತ್ತಿತ್ತು. ಇದರಿಂದ ಸಬ್ಸಿಡಿಯ ಮೂಲಉದ್ದೇಶವೇ ವಿಫಲವಾಗಿತ್ತು. ನಗರಗಳಲ್ಲಿ ಅನೇಕರು ಎರಡಕ್ಕಿಂತ ಹೆಚ್ಚು ಎಲ್‌ಪಿಜಿ ಸಂಪರ್ಕ ಹೊಂದಿದ ನಿದರ್ಶನಗಳಿವೆ. ಅನೇಕ ಕುಟುಂಬಗಳು ವರ್ಷಕ್ಕೆ ಸಬ್ಸಿಡಿ ಒಳಗೊಂಡ 12 ಸಿಲಿಂಡರುಗಳನ್ನು ಬಳಸುವುದೂ ಇಲ್ಲ. ಇಂತಹ ಹೆಚ್ಚುವರಿ ಸಿಲಿಂಡರ್‌ಗಳು ಹೋಟೆಲ್‌ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಸಬ್ಸಿಡಿ ದುರ್ಬಳಕೆ ಎಗ್ಗಿಲ್ಲದೆ ನಡೆದಿರುತ್ತದೆ. ಇನ್ನು ಮುಂದೆ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.

ಸಬ್ಸಿಡಿ ರದ್ದು ಜತೆಗೆ ಸರ್ಕಾರವು ಎಲ್‌ಪಿಜಿ ವಹಿವಾಟಿನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಏಕಸ್ವಾಮ್ಯ ಕೊನೆಗೊಳಿಸಲೂ ಮುಂದಾಗಬೇಕಾಗಿದೆ. ಎಲ್‌ಪಿಜಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿದಷ್ಟೂ ದಕ್ಷತೆ ಹೆಚ್ಚಲಿದೆ, ಸ್ಪರ್ಧಾತ್ಮಕ ಬೆಲೆ ವ್ಯವಸ್ಥೆಯೂ ರೂಢಿಗೆ ಬರಲಿದೆ. ಖಾಸಗಿ ವಲಯದ ಇನ್ನಷ್ಟು ಪಾಲ್ಗೊಳ್ಳುವಿಕೆಯಿಂದ ಪೂರೈಕೆ ಹೆಚ್ಚಲಿದೆ. ಬೆಲೆ ನಿಗದಿ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲೂ ಸಾಧ್ಯವಾಗಲಿದೆ. ಸಿಲಿಂಡರ್‌ ಬದಲಿಗೆ, ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಪೂರೈಸುವುದು ಅಗ್ಗವಾಗಿರಲಿದೆ. ಸರ್ಕಾರ ಈ ನಿಟ್ಟಿನಲ್ಲಿಯೂ ಹೆಚ್ಚು ಆಸಕ್ತಿ ತೋರಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.