ADVERTISEMENT

ಕಠಿಣ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅಧಿಕಾರಕ್ಕೆ ಬಂದ ತಿಂಗಳಲ್ಲಿ ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಏರಿಸಿದೆ. ಇದೊಂದು ಕಠಿಣ ನಿರ್ಧಾರವಾದರೂ ಅನಿವಾರ್ಯವಾಗಿತ್ತು. ದರ ಪರಿಷ್ಕರಣೆ ತೀರ್ಮಾನವಾಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲೇ. ಹೊಸ ಸರ್ಕಾರ ಅದನ್ನು ಜಾರಿಗೊಳಿಸಿದೆ.  ಏರಿಕೆ ಸ್ವಲ್ಪ ಹೊರೆಯೆನಿಸಿದರೂ ರೈಲ್ವೆಯನ್ನು ನಷ್ಟದಿಂದ ಹೊರತರಲು ಉಳಿದಿದ್ದ ಮಾರ್ಗ ಇದೊಂದೇ. ಪ್ರಯಾಣಿಕರ ವಿಭಾಗದಲ್ಲೇ ತಿಂಗಳಿಗೆ ₨ 900 ಕೋಟಿ ನಷ್ಟವಾಗುತ್ತಿದೆ.

ಪ್ರತಿ ಪ್ರಯಾಣಿಕ­ನಿಗೆ  ವೆಚ್ಚವಾಗುತ್ತಿರುವ ಪ್ರತಿ ರೂಪಾಯಿಗೆ ಮರಳಿ ಬರುತ್ತಿರು­ವುದು ಬರೀ 40 ಪೈಸೆ. ಉಳಿದ 60 ಪೈಸೆ ಖೋತಾ. ಕಾಲಕಾಲಕ್ಕೆ ದರ ಹೆಚ್ಚಳ ಮಾಡದ ಕಾರಣ ಆಗಿರುವ ಒಟ್ಟಾರೆ ನಷ್ಟ ಸುಮಾರು ₨ 26,000 ಕೋಟಿ.  ಪ್ರಯಾಣ ದರ ಹೆಚ್ಚಿಸಿದರೆ ಹೊರೆ ಆಗುವುದು ಪ್ರಯಾಣಿಕರಿಗೆ ಮಾತ್ರ. ಸರಕು ಸಾಗಣೆ ದರ ಏರಿಕೆ ಎಲ್ಲರಿಗೂ ಭಾರವಾಗಲಿದೆ. ಹಣದುಬ್ಬರಕ್ಕೆ ಕಾರಣವಾಗಿ, ಅಗತ್ಯ ವಸ್ತುಗಳ ಬೆಲೆಯೂ ದುಬಾರಿ ಆಗುತ್ತದೆ. ಲಾಲೂ ಪ್ರಸಾದ್‌, ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದಾಗ ಪ್ರಯಾಣ ದರ ಪರಿ­­ಷ್ಕರಿ­ಸಲಿಲ್ಲ. ದಿನೇಶ್‌ ತ್ರಿವೇದಿ ಅವಧಿಯಲ್ಲಿ ಈ ಕುರಿತು ಪ್ರಸ್ತಾಪವಿದ್ದರೂ ಅನು­­ಷ್ಠಾನಗೊಳ್ಳಲಿಲ್ಲ. ಯೋಜನೆಗಿಂತ ಯೋಜನೇತರ ವೆಚ್ಚಗಳೇ ಅಧಿಕ­ವಾಗಿ­­ರು­ವುದು ಭಾರತೀಯ ರೈಲ್ವೆ ದುಃಸ್ಥಿತಿಗೆ ಮತ್ತೊಂದು ಕಾರಣ.

ರೈಲ್ವೆ ಆದಾಯದ ಗಣನೀಯ ಪಾಲು ಇಂಧನ, ಸಂಬಳ, ಪಿಂಚಣಿಗೆ ಹೋಗು­ತ್ತಿದೆ.  ಸದ್ಯ  ಪ್ರಗತಿಯಲ್ಲಿರುವ ಯೋಜನೆಗಳಿಗೆ ₨ 4.5 ಲಕ್ಷ  ಕೋಟಿ ಅಗತ್ಯವಿದೆ. ರೈಲ್ವೆ ಆಧುನೀಕರಣಕ್ಕೆ ದೊಡ್ಡ ಮೊತ್ತದ ಹಣ ಬೇಕು. ಸ್ವಂತ ಸಂಪನ್ಮೂಲದಿಂದಲೇ ಎಲ್ಲವನ್ನೂ ನಿಭಾಯಿಸಬೇಕು.  ಸಿಗ್ನಲ್‌ಗಳನ್ನು ಮೇಲ್ದರ್ಜೆ­­ಗೇರಿಸಬೇಕು. ಶಿಥಿಲ ಕಂಬಿಗಳನ್ನು ಬದಲಿಸಬೇಕು. ಇದು ಆಗ­ದಿರು­ವುದರಿಂದಲೇ  ಪದೇ ಪದೇ ಅಪಘಾತಗಳು ಆಗುತ್ತಿರು­ವುದು. ಪ್ರಯಾ­ಣಿ­ಕರ ಭದ್ರತೆ, ಸುರಕ್ಷತೆ ಮೊದಲ ಆದ್ಯತೆಯಾಗಬೇಕು. ಕಾಲಕ್ಕೆ ತಕ್ಕಂತೆ ರೈಲ್ವೆ ಬದಲಾಗಬೇಕು. ಬುಲೆಟ್ ರೈಲು, ಹೈಸ್ಪೀಡ್‌ ರೈಲುಗಳನ್ನು ಓಡಿಸಬೇಕು. ಸಂಪನ್ಮೂಲ ಕ್ರೋಡೀಕರಿಸುವ ಕಡೆ ಗಮನ ಹರಿ­ಸ­ಬೇಕು.

ಕಾಲಕಾಲಕ್ಕೆ ಪ್ರಯಾಣ, ಸರಕು ಸಾಗಣೆ ದರಗಳನ್ನು ಹೆಚ್ಚಿಸಿದ್ದರೆ ಜನರಿಗೆ ದೊಡ್ಡ ಹೊರೆಯಾಗುತ್ತಿರಲಿಲ್ಲ. ಎಲ್ಲವನ್ನೂ ರಾಜ­ಕೀಯ ದೃಷ್ಟಿಯಿಂದ ನೋಡುತ್ತಿರುವುದು ಸಮಸ್ಯೆಗೆ ಕಾರಣ. ಯುಪಿಎ ಸರ್ಕಾರ ತನ್ನ ಕೊನೆ ದಿನಗಳಲ್ಲಿ ‘ರೈಲ್ವೆ ದರ ಪ್ರಾಧಿಕಾರ’ ಸ್ಥಾಪಿಸುವ ತೀರ್ಮಾನ ಕೈಗೊಂಡಿತು. ಇದೊಂದು ಅತ್ಯುತ್ತಮ ಹೆಜ್ಜೆ.  ದರ ಪರಿಷ್ಕರಣೆ ಕುರಿತು ಈ ಪ್ರಾಧಿ­ಕಾರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಶಿಫಾರಸು­ಗಳನ್ನು ಪರಿ­ಶೀಲಿಸಿ ಸರ್ಕಾರ ನಿರ್ಧಾರ ಮಾಡಲಿದೆ. ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಮೊನ್ನೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕಟುವಾಗಿ ಮಾತ­­ನಾಡಿದ್ದಾರೆ. ‘ದಕ್ಷತೆಯಿಂದ ಕೆಲಸ ಮಾಡಿ, ಇಲ್ಲವೆ ಮನೆಗೆ ಹೋಗಿ’ ಎಂದು ಗುಡುಗಿದ್ದಾರೆ. ಸುರಕ್ಷತೆ, ಸಮಯ ಪಾಲನೆ ಮತ್ತು ಒಳ್ಳೆಯ ಸೇವೆ ಕೊಡುವ ಕಡೆ ಗಮನ ಕೊಡಿ ಎಂದು ಸಲಹೆ ಮಾಡಿದ್ದಾರೆ. ಮೋದಿ ಸರ್ಕಾರ ರೈಲ್ವೆಗೆ ಹೊಸ ದಿಕ್ಕುದೆಸೆ ಕೊಡಲು ಹೊರಟಿರುವುದು ಸ್ವಾಗತಾರ್ಹ. ಆದರೆ, ಇದು ಆರಂಭ ಶೂರತ್ವ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.