ADVERTISEMENT

ಕಬ್ಬು: ಕಷ್ಟ ಕೊನೆಗಾಣಿಸಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ರಾಜ್ಯದ ಕಬ್ಬು ಬೆಳೆಗಾರರ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಸಕ್ಕರೆ ಕಾರ್ಖಾನೆಗಳು ಮತ್ತು ಸರ್ಕಾರದ ನಿರ್ಲಕ್ಷ್ಯದ ಧೋರಣೆಯೇ ಇದಕ್ಕೆ ಕಾರಣ. ಕಾರ್ಖಾನೆಗಳು ಈ ಸಲ ಇದುವರೆಗೂ ಕಬ್ಬು ನುರಿಸುವ ಕಾರ್ಯ ಆರಂಭಿಸಿಲ್ಲ. ಅತ್ತ ಕಬ್ಬು ಬೆಳೆದು ನಿಂತಿದೆ. ಸಕಾಲಕ್ಕೆ ಕಟಾವು ಮಾಡ­­ದಿದ್ದರೆ ರೈತರಿಗೆ ಲುಕ್ಸಾನಾಗುತ್ತದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸಂಬಂಧ­­­­ಪಟ್ಟ ಸಚಿವರು ಇನ್ನೂ ಗಡುವು, ಎಚ್ಚರಿಕೆ ಕೊಡುವುದರಲ್ಲಿಯೇ ಇದ್ದಾರೆ.

ತಕ್ಷಣವೇ ಕಬ್ಬು ನುರಿಸುವುದನ್ನು ಪ್ರಾರಂಭಿಸದಿದ್ದರೆ ಕಾರ್ಖಾನೆ­ಗಳನ್ನು ವಶಕ್ಕೆ ತೆಗೆದುಕೊಂಡು ಸರ್ಕಾರವೇ ನಡೆಸಲಿದೆ ಎಂದು ಗುಡುಗು ಹಾಕಿದ್ದಾರೆ. ಆದರೆ ಅಂಥ ತಾಕತ್ತು ಸರ್ಕಾರಕ್ಕೆ ಇಲ್ಲ ಎಂಬುದು ಖಾಸಗಿ ಕಾರ್ಖಾನೆಗಳಿಗಂತೂ ಚೆನ್ನಾಗಿ ಗೊತ್ತು. ಏಕೆಂದರೆ ಹಿಂದೆ ಅನೇಕ ಸಂದರ್ಭ­ಗಳಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರವೇ ಸ್ವಾಧೀನಕ್ಕೆ ತೆಗೆದು­ಕೊಂಡು ಆಡಳಿತಾಧಿಕಾರಿಗಳ ಮೂಲಕ ನಿರ್ವಹಿಸುವ ಸಾಹಸಕ್ಕೆ ಇಳಿದಿತ್ತು. ಆಗ ಏನೇನೆಲ್ಲ ಎಡವಟ್ಟಾಯಿತು ಎಂಬುದನ್ನು ಮತ್ತೆ ನೆನಪಿಸುವ ಅಗತ್ಯವಿಲ್ಲ.

ಹೋದ ಹಂಗಾಮಿನಲ್ಲಿ ಸರ್ಕಾರ ನಿಗದಿ ಮಾಡಿದ ಟನ್‌ಗೆ ₨ 2,500ರ ಕನಿಷ್ಠ ಬೆಂಬಲ ಬೆಲೆಯನ್ನು ಬಹುತೇಕ ಕಾರ್ಖಾನೆಗಳು ರೈತರಿಗೆ ಕೊಟ್ಟೇ ಇಲ್ಲ. ಆ ದರ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಕಟ್ಟೆಯೇರಿವೆ. ಸರ್ಕಾರ ಕೂಡ ತನ್ನ ಪಾಲಿನ ಪ್ರೋತ್ಸಾಹಧನವನ್ನು ಪೂರ್ಣ ಬಿಡುಗಡೆ ಮಾಡಿಲ್ಲ. ಕಬ್ಬು ಪೂರೈಸಿದ ಬಾಬ್ತು ರೈತರಿಗೆ ನೂರಾರು ಕೋಟಿ ರೂಪಾಯಿ ಬಾಕಿ ಬರಬೇಕಾಗಿದೆ. ಹೋದ ವರ್ಷ ಸರ್ಕಾರದ ವಿಳಂಬದಿಂದ ಹತಾಶರಾದ ಕಬ್ಬು ಬೆಳೆಗಾರ ವಿಠಲ ಅರಭಾವಿ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುವಾಗ ಸುವರ್ಣ ವಿಧಾನಸೌಧದ ಎದುರು ಆತ್ಮಾಹುತಿ ಮಾಡಿಕೊಂಡಿದ್ದರು. ಇದರ ನಂತರ ಸರ್ಕಾರ ಎಚ್ಚೆತ್ತುಕೊಂಡು ದರ ನಿಗದಿ ಮಾಡಿತ್ತು. ಕಾರ್ಖಾನೆಗಳನ್ನು ಮಣಿಸುವ ವೀರಾವೇಶದ ಮಾತು ಆಡಿತ್ತು.  ಆದರೆ ಅದರಿಂದಲೂ ಪ್ರಯೋಜನ ಆಗಿಲ್ಲ. ಕಾರ್ಖಾನೆ­ಗಳು ಜಪ್ಪಯ್ಯ ಎಂದಿಲ್ಲ. ಈಗಂತೂ ಖಾಸಗೀಕರಣದ ಯುಗ. ಹೀಗಿರುವಾಗ ‘ಕಾರ್ಖಾನೆ ಸ್ವಾಧೀನ ಮಾಡಿಕೊಳ್ಳುತ್ತೇವೆ’ ಎಂಬ ಸರ್ಕಾರದ ಬೆದರಿಕೆ­ಯಾ­ಗಲಿ, ‘ಸಕ್ಕರೆ ಕಾರ್ಖಾನೆಗಳನ್ನು ರಾಷ್ಟ್ರೀಕರಿಸಿ’ ಎಂಬ ರೈತರ ಒತ್ತಾಯ­ವಾ­ಗಲೀ ಪ್ರಯೋಜನಕ್ಕೆ ಬರುವುದಿಲ್ಲ ಎಂಬುದನ್ನು ಎಲ್ಲರೂ ಮನ­ಗಾಣ­ಬೇಕು. 

ದೇಶದಲ್ಲಿಯೇ ಮೂರನೇ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯ ನಮ್ಮದು. 5.20 ಲಕ್ಷ ಹೆಕ್ಟೇರ್‌ನಲ್ಲಿ ಸುಮಾರು 410 ಲಕ್ಷ ಟನ್‌ ಕಬ್ಬು ಬೆಳೆ­ಯಲಾಗುತ್ತಿದೆ. ಖಾಸಗಿ ಮತ್ತು ಸಹಕಾರಿ ರಂಗದಲ್ಲಿ ಸುಮಾರು 60 ಕಾರ್ಖಾ­ನೆಗಳಿವೆ. ಇವುಗಳಲ್ಲಿ ಹೆಚ್ಚಿನವು ಪ್ರಬಲ ರಾಜಕಾರಣಿಗಳ ಕೈಯ­ಲ್ಲಿವೆ. ಹೀಗಾಗಿ ರಾಜ್ಯ ಸರ್ಕಾರಕ್ಕೂ ಇವುಗಳನ್ನು ಹದ್ದುಬಸ್ತಿನಲ್ಲಿ ಇಡಲು ಆಗುತ್ತಿಲ್ಲ. ಇದರ ಪರಿಣಾಮವಾಗಿ ಪ್ರತಿ ವರ್ಷವೂ ಸಕಾಲಕ್ಕೆ ಕಬ್ಬು ಅರೆ­ಯುವ ಕಾರ್ಯ ಪ್ರಾರಂಭಿಸಿ ಎಂದು ರೈತರು ಗೋಗರೆಯುವ ಸ್ಥಿತಿಯಿದೆ. ಕಬ್ಬಿನ ಬೆಳೆ ಎಷ್ಟಿದೆ, ಕಾರ್ಖಾನೆಗಳ ಸಾಮರ್ಥ್ಯ ಏನು, ನುರಿಸುವಿಕೆ ಯಾವಾಗ ಶುರುವಾಗಬೇಕು ಎಂಬುದು ಸರ್ಕಾರಕ್ಕೆ ಗೊತ್ತಿರಲೇಬೇಕು. ಅದ­ಕ್ಕೆಲ್ಲ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ರೈತರು ಪ್ರತಿಭಟ­ನೆಗೆ ಇಳಿದ ನಂತರವೇ ಎಚ್ಚೆತ್ತುಕೊಳ್ಳುವ ಧೋರಣೆಯೇ ಸರಿಯಲ್ಲ. ಕೂಡಲೇ ಕಾರ್ಖಾನೆಗಳು ಆರಂಭವಾಗುವಂತೆ ಕ್ರಮ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT