ADVERTISEMENT

ಕಾನೂನು ಕೈಗೆತ್ತಿಕೊಳ್ಳುವ ಕ್ರಮದ ಸಲಹೆ ಖಂಡನೀಯ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಕಾನೂನು ಕೈಗೆತ್ತಿಕೊಳ್ಳುವ ಕ್ರಮದ ಸಲಹೆ  ಖಂಡನೀಯ
ಕಾನೂನು ಕೈಗೆತ್ತಿಕೊಳ್ಳುವ ಕ್ರಮದ ಸಲಹೆ ಖಂಡನೀಯ   
ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಹೇಳಿರುವ ಮಾತು ಕಳವಳಕಾರಿಯಾದುದು. ತಾವು 2003–04ರಲ್ಲಿ  ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ, ಪೊಲೀಸ್ ವಶದಲ್ಲಿದ್ದ ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿದ್ದುದಾಗಿಯೂ ಹೇಳಿಕೊಂಡಿದ್ದಾರೆ. ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಅವರು ನೀಡಿರುವ ಸಲಹೆ ಹೇಯವಾದುದು.
 
ಅತ್ಯಾಚಾರ ಆರೋಪಿಗಳನ್ನು ತಲೆ ಕೆಳಗಾಗಿ ನಿಲ್ಲಿಸಬೇಕು. ಚರ್ಮ ಸುಲಿದು ಗಾಯಗಳ ಮೇಲೆ ಉಪ್ಪು, ಮೆಣಸಿನ ಖಾರ ಸವರಿ ಅವರು ಚೀರಾಡುವಂತೆ ಮಾಡಬೇಕು. ಇದನ್ನು ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಅಮ್ಮಂದಿರು, ಸೋದರಿಯರು ಪೊಲೀಸ್ ಠಾಣೆಯ ಕಿಟಕಿಯಿಂದ ನೋಡಿ ತಮಗೆ ನ್ಯಾಯ ಸಿಕ್ಕ ನಿರಾಳತೆ ಅನುಭವಿಸಬೇಕು ಎಂಬುದು ಸಚಿವೆಯ ಸಲಹೆ. ಕಳೆದ ವರ್ಷ ಬುಲಂದ್‌ಶಹರ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ  ತಾಯಿ– ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾತನಾಡುತ್ತಾ  ಉಮಾಭಾರತಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಅದೂ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ  ಸಭೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಇಂತಹ ಶಿಕ್ಷೆ ವಿಧಿಸುವ ಬಗ್ಗೆ  ಪೊಲೀಸ್ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದುದನ್ನೂ ಅವರು ಸಭೆಯಲ್ಲಿ ಹೇಳಿದ್ದಾರೆ.  ‘ದಾನವನ ರೀತಿ ವರ್ತಿಸಿದವನಿಗೆ ಯಾವ ಮಾನವ ಹಕ್ಕುಗಳೂ ಇರುವುದಿಲ್ಲ. ರಾವಣನಿಗಾದಂತೆ ಅವನ ತಲೆ ಕಡಿಯಬೇಕು’ ಎಂಬಂಥ ಆವೇಶದ ಮಾತುಗಳನ್ನು ಸಚಿವೆ ಹೇಳಿರುವುದು ಆತಂಕಕಾರಿ. 
 
ಅತ್ಯಾಚಾರದಂತಹ ಗಂಭೀರ ಆರೋಪಕ್ಕೆ ಶಿಕ್ಷೆ ವಿಧಿಸುವ ಮುನ್ನ  ಸಮರ್ಪಕ ವಿಚಾರಣೆ ನಡೆಯಬೇಕಾದುದು ಅವಶ್ಯ. ಆದರೆ ಅಂತಹ ವಿಚಾರಣೆಯ ವಿಚಾರವನ್ನೇನೂ  ಪ್ರಸ್ತಾಪಿಸದೆ ನೇರವಾಗಿ ಶಿಕ್ಷೆ ಅದೂ ಮೃಗೀಯ ಶಿಕ್ಷೆ ಬಗ್ಗೆ  ಸಚಿವೆ ಮಾತನಾಡಿರುವುದು ಅವರು ಹೊಂದಿರುವ ಸ್ಥಾನಕ್ಕೆ ಅರ್ಹವಾದುದಲ್ಲ. ತಾವು  ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ  ಇಂತಹ ಕ್ರೂರ ಶಿಕ್ಷೆಯನ್ನು ಅತ್ಯಾಚಾರ ಆರೋಪಿಗಳಿಗೆ ನೀಡಲಾಗಿತ್ತು ಎಂದು ಸ್ವತಃ ಅವರೇ ಮಾಡಿಕೊಂಡಿರುವ ಪ್ರತಿಪಾದನೆಯನ್ನು ಮಧ್ಯಪ್ರದೇಶ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.
 
ಹೀಗಾಗಿ ಇದನ್ನು ಕೇವಲ ಚುನಾವಣಾ ಪ್ರಚಾರ ಭಾಷಣವಾಗಿಯೂ ಪರಿಭಾವಿಸಬಹುದು. ಆದರೆ ಮಹಿಳೆ ಮೇಲಿನ ಅಪರಾಧಗಳು ಹೆಚ್ಚುತ್ತಿರುವ ಇಂತಹ ದಿನಗಳಲ್ಲಿ ಈ ಬಗೆಯ ಮಾತು ಮಹಿಳೆ ಮೇಲಿನ ಅಪರಾಧವನ್ನು ತೃಣೀಕರಿಸುವಂತಹದ್ದಾಗುತ್ತದೆ. ಮಹಿಳೆ ಮೇಲಿನ ಅಪರಾಧಗಳನ್ನು ನಿರ್ವಹಿಸುವಲ್ಲಿನ ಸವಾಲುಗಳಿಗೂ ಇದು ದ್ಯೋತಕ. 
 
ಅತ್ಯಾಚಾರ ಅಪರಾಧವನ್ನು ಮಟ್ಟ ಹಾಕಲು ಈಗ ಕಾನೂನುಗಳು ಬಿಗಿಯಾಗಿವೆ. ಆದರೆ ಸಮಸ್ಯೆ ಇರುವುದು ಅನುಷ್ಠಾನದಲ್ಲಿ. ಆಡಳಿತ ವ್ಯವಸ್ಥೆಯ ಈ ದೋಷದ ಬಗ್ಗೆ ಸಚಿವೆ ಚಕಾರ ಎತ್ತಿಲ್ಲ. ಬದಲಿಗೆ ಕಾನೂನು ಕೈಗೆತ್ತಿಕೊಳ್ಳುವ ವಿಚಾರ ಮಾತನಾಡಿರುವುದು ಖಂಡನೀಯ. ಅತ್ಯಾಚಾರ ಆರೋಪದ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಆದ್ಯತೆಯಾಗಬೇಕು. ಅತ್ಯಾಚಾರಕ್ಕೆ  ಶೀಘ್ರವೇ  ಶಿಕ್ಷೆಯಾದಲ್ಲಿ ಅದು ಸಮಾಜಕ್ಕೆ ರವಾನಿಸುವ ಸಂದೇಶ ಗಟ್ಟಿಯಾದುದಾಗಿರುತ್ತದೆ. ಅತ್ಯಾಚಾರ ಅಪರಾಧ ನಿಯಂತ್ರಣಕ್ಕೆ  ಈ ಕ್ರಮ ಅಗತ್ಯ. ಬದಲಾಗಿ ಕಾನೂನನ್ನೇ ಕೈಗೆತ್ತಿಕೊಳ್ಳುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ  ವಿರುದ್ಧವಾದದ್ದು.  ಅತ್ಯಾಚಾರ ಅಪರಾಧಗಳನ್ನು ನಿಯಂತ್ರಿಸಲು ಮಹಿಳೆಯ ಸುರಕ್ಷತೆ ಹಾಗೂ ಭದ್ರತೆಗಾಗಿ ಯೋಜನೆಗಳನ್ನು ರೂಪಿಸಲು ‘ನಿರ್ಭಯಾ ನಿಧಿ’ ಸ್ಥಾಪಿತವಾಗಿದೆ. ಆದರೆ ಈ ನಿಧಿಯ ಹಣವನ್ನು ಈವರೆಗೆ ಬಳಸಿಲ್ಲ ಎಂಬುದೂ ಆಡಳಿತಯಂತ್ರದ ನಿಷ್ಕ್ರಿಯತೆಯನ್ನು ಎತ್ತಿ ಹೇಳುತ್ತದೆ.  ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆಯೂ ನಿರ್ಭಯವಾಗಿ ಸಂಚರಿಸಲು ಅನುಕೂಲವಾಗುವಂತೆ ಬೀದಿ ದೀಪಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದೂ ಆದ್ಯತೆಯಾಗಬೇಕು. ಮಹಿಳೆಯರ ಸುರಕ್ಷತೆ ಬಗ್ಗೆ ಉಮಾಭಾರತಿಯಂತಹ ಹಿರಿಯ ಸಚಿವೆಗೆ ನಿಜವಾದ ಕಳಕಳಿ ಇದ್ದಲ್ಲಿ ಈ ಬಗ್ಗೆ ಗಮನ ಹರಿಸಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.