ADVERTISEMENT

ಕಾಶ್ಮೀರ: ಮಾನವ ಗುರಾಣಿ ವಿಚಾರಣೆ ತ್ವರಿತಗೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಕಾಶ್ಮೀರ: ಮಾನವ ಗುರಾಣಿ ವಿಚಾರಣೆ ತ್ವರಿತಗೊಳ್ಳಬೇಕು
ಕಾಶ್ಮೀರ: ಮಾನವ ಗುರಾಣಿ ವಿಚಾರಣೆ ತ್ವರಿತಗೊಳ್ಳಬೇಕು   
ಕಾಶ್ಮೀರದಲ್ಲಿ ಯುವಕನೊಬ್ಬನನ್ನು  ಸೇನಾ ಜೀಪ್‌ನ ಮುಂಭಾಗಕ್ಕೆ ಕಟ್ಟಿ ಮಾನವ ಗುರಾಣಿಯಂತೆ ಬಳಸಿಕೊಂಡ   ಸಂಗತಿ ದಿನ ಕಳೆದಂತೆ ದೊಡ್ಡ ವಿವಾದದ ರೂಪ ಪಡೆದುಕೊಳ್ಳುತ್ತಿದೆ. ಪರ– ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.
 
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಕೆಲವರು ಇದನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತ ಪರಸ್ಪರ ಕೆಸರೆರಚಾಟಕ್ಕೆ ನಿಂತಿದ್ದಾರೆ. ಇದು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಮತ್ತು ಸಹಜ ಸ್ಥಿತಿ ನೆಲೆಗೊಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತದೆ ಎನ್ನುವುದನ್ನು  ಇವರು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ.   
 
ಯುವಕನನ್ನು ಮಾನವ ಗುರಾಣಿ ಮಾಡಿಕೊಂಡಿದ್ದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದು ಅನೇಕರ ಆರೋಪ. ನಾವಿರುವುದು ಜನತಂತ್ರ ವ್ಯವಸ್ಥೆಯಲ್ಲಿ. ಇಂತಹ ಕೃತ್ಯಗಳಿಗೆ ಇಲ್ಲಿ ಜಾಗವಿಲ್ಲ ಎನ್ನುವ ವಾದವೂ ಇದೆ. ಆದರೆ ಯುವಕನನ್ನು ಜೀಪಿಗೆ ಕಟ್ಟಲು ಆದೇಶಿಸಿದ್ದ ಸೇನೆಯ ಮೇಜರ್‌ ಲೀತುಲ್‌ ಗೊಗೋಯ್‌ ಅವರು ಹೇಳುವಂತೆ ಇದು ‘ಅನಿವಾರ್ಯವಾಗಿತ್ತು’.  
 
ಅಲ್ಲಿ ಸೇನೆ ಮತ್ತು ಪೊಲೀಸರ ಮೇಲೆ ಯುವಕ– ಯುವತಿಯರು ಕಲ್ಲು ತೂರುವುದು ನಿತ್ಯದ ವಿದ್ಯಮಾನ.  ಹೀಗಿರುವಾಗ, ಕಲ್ಲೇಟಿನಿಂದ ರಕ್ಷಣೆ ಪಡೆಯಲು ಮತ್ತು ಪ್ರಾಣಹಾನಿ ತಪ್ಪಿಸಲು ಬೇರೆ ದಾರಿ ಇರಲಿಲ್ಲ ಎನ್ನುವುದು ಅವರ  ಸಮಜಾಯಿಷಿ. ‘ಅಲ್ಲಿನ ಮತಗಟ್ಟೆಯೊಂದರ ಬಳಿ 1200ಕ್ಕೂ ಹೆಚ್ಚು ಮಂದಿ ಕಲ್ಲುಗಳನ್ನು ಹಿಡಿದು ಜಮಾಯಿಸಿದ್ದರು. ಆ ವೇಳೆಗೆ ಅಲ್ಲಿದ್ದ   ಭದ್ರತಾ ಸಿಬ್ಬಂದಿ ಐವರು ಮಾತ್ರ.
 
ಜನರನ್ನು ಚದುರಿಸಲು ಗುಂಡು ಹಾರಿಸಿದರೆ ಸಾವುನೋವು ಆಗುತ್ತಿತ್ತು. ಆದ್ದರಿಂದ ಕಲ್ಲು ಹಿಡಿದು ನಿಂತಿದ್ದ ತಂಡದಲ್ಲಿದ್ದ ವ್ಯಕ್ತಿಯೊಬ್ಬನನ್ನು ಸೇನಾ ಜೀಪ್‌ಗೆ ಕಟ್ಟಿದ್ದರಿಂದ ಜನ ಸುಮ್ಮನಾದರು, ಭದ್ರತಾ ಸಿಬ್ಬಂದಿಗೆ ಏನೂ ಹಾನಿ ಮಾಡದೆ ಸುರಕ್ಷಿತವಾಗಿ ಹೋಗಲು ಬಿಟ್ಟರು’ ಎನ್ನುವುದು ಅವರ ವಿವರಣೆ.
 
ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳಿಗೆ ಅಧಿಕಾರ ಇದೆ ಎನ್ನುವುದೇನೋ ಸರಿ. ಆದರೆ ನಾಗರಿಕರನ್ನು ಮಾನವ ಗುರಾಣಿಯಂತೆ ಬಳಸಿಕೊಳ್ಳುವುದು ಎಷ್ಟರಮಟ್ಟಿಗೆ ಸಮರ್ಥನೀಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. 
 
ಈ ಪ್ರಕರಣದ ಬಗ್ಗೆ ಸೇನಾ ತನಿಖೆ ನಡೆಯುತ್ತಿದೆ. ಜಮ್ಮು ಕಾಶ್ಮೀರ  ಪೊಲೀಸರು ಕೂಡ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅದನ್ನು ರದ್ದು ಮಾಡಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಇದರ ನಡುವೆಯೇ, ಮೇಜರ್‌ ಗೊಗೋಯ್‌ ಅವರಿಗೆ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಪ್ರಶಂಸಾ ಪತ್ರ ನೀಡಿದ್ದಾರೆ. ಆದರೆ ತನಿಖೆ ಮುಗಿಯುವ ತನಕವಾದರೂ ಸೇನಾ ಮುಖ್ಯಸ್ಥರು ಕಾಯಬೇಕಾಗಿತ್ತು.
 
ರಾಜಕಾರಣಿಗಳು ಮತ್ತು ಮಾನವ ಹಕ್ಕು ಹೋರಾಟಗಾರರು ಕೂಡ ಈ ಪ್ರಕರಣ ಮುಂದಿಟ್ಟುಕೊಂಡು ಲಾಭ ಪಡೆಯುವ ಪ್ರಯತ್ನ ಬಿಡಬೇಕು.  ಭದ್ರತಾ ಪಡೆಗಳಂತೂ ಸಂಯಮ ವಹಿಸಿದಷ್ಟೂ ಕಡಿಮೆಯೇ. ಎರಡೂ ತನಿಖೆಗಳು ನಿಷ್ಪಕ್ಷಪಾತವಾಗಿ ನಡೆಯಬೇಕು. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಚರ್ಚೆ, ಮಾತುಕತೆ, ಮನವೊಲಿಕೆ ಮುಂದುವರಿಯಬೇಕು. ಅದಕ್ಕೆ ಈ ಪ್ರಕರಣ ಅಡ್ಡ ಬರಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.