ADVERTISEMENT

ಕ್ಯಾನ್ಸರ್ ಕಡೆಗಣಿಸುವಂತಹದ್ದಲ್ಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಭಾ‌ರತದಲ್ಲಿ ಕ್ಯಾನ್ಸರ್ ಕಾಯಿಲೆ ದೊಡ್ಡ ಪ್ರಮಾಣದಲ್ಲಿ  ಹರಡು­‌ತ್ತಿದೆ. ಪ್ರತಿ ವರ್ಷ 10 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆ­ಯಾಗುತ್ತಿವೆ ಎಂದರೆ ಅದು ಕಡೆಗಣಿಸುವ ಸಂಗತಿಯಲ್ಲ. ಈ ಪೈಕಿ ಆರ­ರಿಂದ ಏಳು ಲಕ್ಷ ಮಂದಿ ಪ್ರತಿ ವರ್ಷ ಸಾಯುತ್ತಿದ್ದಾರೆ ಎಂಬಂತಹ ಅಂಕಿ ಸಂಖ್ಯೆ­ಗಳನ್ನು ಬ್ರಿಟಿಷ್ ವೈದ್ಯಕೀಯ ಪತ್ರಿಕೆ ‘ಲ್ಯಾನ್‌ಸೆಟ್’ ನೀಡಿರುವುದು ಆತಂಕ­ಕಾರಿ.

ಬರಲಿರುವ ದಶಕಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಲಿದೆ. ಇದೇ ವರ­ದಿಯ ಪ್ರಕಾರ, 2035ರೊಳಗೆ 10.7 ಲಕ್ಷದಷ್ಟು ಹೊಸ ಕ್ಯಾನ್ಸರ್ ಪ್ರಕರಣ­ಗಳು ಪ್ರತಿ ವರ್ಷ ಪತ್ತೆಯಾಗಲಿದ್ದು ಸಾಯುವವರ ಸಂಖ್ಯೆ 10.2 ಲಕ್ಷದ­ಷ್ಟಾ­ಗಲಿದೆ. ಎಂದರೆ ಈ ಬಗ್ಗೆ ತುರ್ತು ಅವಲೋಕನ ಅಗತ್ಯ. ಕ್ಯಾನ್ಸರ್ ನಿಂದ ಸಾಯುವವರ ಸಂಖ್ಯೆಯನ್ನು ತಗ್ಗಿಸಲು ಮೊದಲಿಗೆ ಕ್ಯಾನ್ಸರ್ ಬರದಂತೆಯೇ ಮುಂಜಾಗ್ರತೆ ವಹಿಸುವ ವಿಚಾರದಲ್ಲಿ ಜಾಗೃತಿ ಮೂಡಿಸಬೇಕಾದುದು ಆದ್ಯತೆಯಾಗಬೇಕು.

ಆರಂಭದಲ್ಲೇ ಕಾಯಿಲೆಯ ಪತ್ತೆ ಹಾಗೂ ದೀರ್ಘ ಕಾಲದ ಚಿಕಿತ್ಸೆಯನ್ನು ಸರಿಯಾಗಿ ತೆಗೆದು­ಕೊಳ್ಳು­ವುದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮುಖ್ಯವಾದದ್ದು. ಬಹಳಷ್ಟು ಸಂದರ್ಭಗಳಲ್ಲಿ ಕಾಯಿಲೆ­ಯನ್ನು ಆರಂಭದಲ್ಲೇ ಪತ್ತೆ ಹಚ್ಚಲಾಗುವುದಿಲ್ಲ. ಪತ್ತೆಯಾದರೂ ಪರಿ­ಣಾ­ಮ­ಕಾರಿಯಾದ ಚಿಕಿತ್ಸೆಗೆ  ಮೊರೆಹೋಗುವವರ ಸಂಖ್ಯೆ ಕಡಿಮೆ. ಏಕೆಂದರೆ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆ ಸಾಮಾನ್ಯವಾಗಿ  ಅನೇಕ ತಿಂಗಳುಗಳ ಕಾಲ  ಹಿಡಿಯುವಂತಹದ್ದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ತೋರುವ ನಿರ್ಲಕ್ಷ್ಯವೂ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ.

ಕ್ಯಾನ್ಸರ್ ಚಿಕಿತ್ಸೆ ಇತ್ತೀಚಿನ ವರ್ಷಗಳಲ್ಲಿ ಅಪಾರ ಸುಧಾರಣೆ ಕಂಡಿದೆ. ಅನೇಕ ವಿಧದ ಕ್ಯಾನ್ಸರ್‌ಗಳನ್ನು ಬೇಗನೆ ಪತ್ತೆ ಮಾಡುವ ವೈದ್ಯಕೀಯ ತಂತ್ರ­ಜ್ಞಾನ­ಗಳಲ್ಲೂ ಸುಧಾರಣೆಯಾಗಿದೆ. ಆದರೇನು, ಚಿಕಿತ್ಸಾ ಸೌಲಭ್ಯಗಳು ಎಲ್ಲೆಡೆ ಲಭ್ಯವಿಲ್ಲ. ನಗರ ಪ್ರದೇಶಗಳಿಗೆ ಇವು ಸೀಮಿತವಾಗಿವೆ ಎಂಬುದು ಕಟು ಸತ್ಯ. ಜೊತೆಗೆ ಚಿಕಿತ್ಸಾ ವೆಚ್ಚವೂ ಅತ್ಯಂತ ದುಬಾರಿ. ಗ್ರಾಮೀಣ ಜನರು ಹಾಗೂ ನಗರ ಪ್ರದೇಶಗಳ ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ಕೈಗೆಟುಕಿಸಿಕೊಳ್ಳು­ವುದು ಅತ್ಯಂತ ಕಷ್ಟದಾಯಕ ಎಂಬ ಸ್ಥಿತಿ ಇದೆ. ಸಹಜವಾಗಿ ಚಿಕಿತ್ಸೆಯನ್ನೇ ಕೈ­ಬಿಡು­ವುದು ಅಥವಾ ಅಗ್ಗದ ಪರ್ಯಾಯ ವಿಧಾನಗಳಿಗೆ ಮೊರೆ ಹೋಗುವ ಪ್ರವೃತ್ತಿ ಸಾಮಾನ್ಯ. ಹೀಗಾಗಿ ಎಲ್ಲರಿಗೂ ಕೈಗೆಟುಕುವ ದರಗಳಲ್ಲಿ ಚಿಕಿತ್ಸೆ ಲಭ್ಯವಾಗುವಂತಹ ವ್ಯವಸ್ಥೆ ಸೃಷ್ಟಿಯಾಗಬೇಕಾದುದು ತುರ್ತು ಅಗತ್ಯ.

ಶೇ 40ರಷ್ಟು ಕ್ಯಾನ್ಸರ್ ಕಾಯಿಲೆಗಳಿಗೆ ತಂಬಾಕು ಕಾರಣ ಎಂಬುದನ್ನೂ ಮತ್ತೊಮ್ಮೆ ಈ ವರದಿ ಎತ್ತಿ ಹೇಳಿದೆ. ಹೀಗಾಗಿ, ಧೂಮಪಾನವಷ್ಟೇ ಅಲ್ಲ, ತಂಬಾಕು ಜಗಿಯುವುದೂ ಅಪಾಯಕಾರಿ ಎಂಬ ಬಗ್ಗೆ ಜನಮಾನಸದಲ್ಲಿ ಅರಿವು ಮೂಡಿಸಲು ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಅಗತ್ಯ.  ಬದಲಾದ ಜೀವನ ಶೈಲಿಗಳೂ  ಕ್ಯಾನ್ಸರ್‌ಗೆ ಕಾರಣವಾಗುತ್ತಿರುವುದು ಜನರ ಮನದಾಳ­ಕ್ಕಿ­ಳಿ­ಯಬೇಕು.

ಹಳ್ಳಿಗಳಿಗಿಂತ ನಗರ ಪ್ರದೇಶಗಳ ಮಹಿಳೆಯರಲ್ಲಿ ಸ್ತನ  ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದು ಇದಕ್ಕೆ ದ್ಯೋತಕ. ಕ್ಯಾನ್ಸರ್‌ನಿಂದ  ರಾಷ್ಟ್ರಕ್ಕೆ ಆಗಬಹುದಾದ ಮಾನವ ಸಂಪನ್ಮೂಲ  ಹಾಗೂ ಆರ್ಥಿಕ ನಷ್ಟ­ಗಳು ಅಪಾರ. ಈ ಬಗ್ಗೆ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.