ADVERTISEMENT

ಗಡಿ ವಿವಾದ ಪರಿಹಾರವಾಗಲಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಚೀನಾದ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್‌ ಅವರು ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲೇ ಲಡಾಖ್‌ನ ಚುಮಾರ್ ಪ್ರದೇಶದ ಬಳಿ ಚೀನಾ ಸೇನೆಯ ಅತಿಕ್ರಮಣದಿಂದಾಗಿ ಈ ಭೇಟಿಗೆ ಕರಿ ನೆರಳು ಆವರಿಸಿತು. ಆ ನಂತ­ರವೂ ಭಾರತದ ಗಡಿಯೊಳಗೆ ಚೀನಾ ಅತಿಕ್ರಮಣ ಮುಂದುವರಿದಿದೆ. ಉಭಯ ದೇಶಗಳ ನಡುವಿನ ಗಡಿ ವಿವಾದದ ವಿಷಯವನ್ನು ಹೆಚ್ಚು ಕಾಲ  ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಎಚ್ಚರಿಕೆಯ ಗಂಟೆ.

ಕ್ಸಿ  ಜೊತೆ ನವ­ದೆಹ­ಲಿ­ಯಲ್ಲಿನ ಚರ್ಚೆಗಳು, ಗಡಿ ವಿವಾದ ಹಾಗೂ  ಲಡಾಖ್‌ನ ಚುಮಾರ್ ವಲ­ಯ­­ದಲ್ಲಿನ ಅತಿಕ್ರಮಣ ವಿಚಾರದ ಸುತ್ತವೇ ಕೇಂದ್ರೀಕೃತ­ವಾಗಿದ್ದವು. ಕೆಲವು ದಶಕಗಳ ಹಿಂದೆ ಗಡಿ ವಿವಾದವನ್ನು ಬದಿಗಿಟ್ಟು ಇತರ ಕ್ಷೇತ್ರಗಳಲ್ಲಿ ಸಹ­ಕಾರಕ್ಕೆ ಭಾರತ–ಚೀನಾ ಒತ್ತು ನೀಡಿದ್ದು ಸರಿಯಾಗಿಯೇ ಇತ್ತು. ಆರ್ಥಿಕ ಮತ್ತು ಇನ್ನಿತರ ಕ್ಷೇತ್ರಗಳ ಬಾಂಧವ್ಯದಿಂದ ಪರಸ್ಪರ ನಂಬಿಕೆ ಬೆಳೆದು ಅದರ ಮೂಲಕ ಗಡಿ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬಹುದು ಎಂಬುದು ಇದರ ಹಿಂದಿದ್ದ ತರ್ಕ.

ಹಾಗೆಯೇ ಈಗಲೂ ಗಡಿ ವಿವಾದ  ಕುರಿತ ಮಾತುಕತೆಗಳಿಗೆ ನೀಡಬೇಕಾದಷ್ಟು  ತುರ್ತು ಹಾಗೂ ಆದ್ಯತೆಯನ್ನು ನೀಡಲಾಗಿಲ್ಲ. ಇಂತಹ ಸಂದರ್ಭದಲ್ಲಿ ಉಭಯ ರಾಷ್ಟ್ರಗಳಿಗೂ ಒಪ್ಪಿಗೆ ಆಗುವ ಪರಿಹಾರ­ವೊಂ­ದನ್ನು  ಕಂಡುಕೊಳ್ಳಲು ಈಗ ಮುಂದಾಗಿರುವುದು ಹೊಸ ಹೆಜ್ಜೆ. ಕ್ಸಿ ಜಿನ್‌­ಪಿಂಗ್‌ ಅವರ ಭೇಟಿ ಸಮಯದಲ್ಲಿ ಭಾರತ– ಚೀನಾ ಹಲ­ವಾರು ಒಪ್ಪಂದ­ಗಳಿಗೆ ಸಹಿ ಹಾಕಿವೆ. ಚೀನಾ ಮುಂದಿನ 5 ವರ್ಷಗಳಲ್ಲಿ  ₨ 1. 20 ಲಕ್ಷ ಕೋಟಿ ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದೆ.

ಭಾರತದೊಡನೆ  ಅಣು ಸಂಬಂಧಿತ ಯಾವುದೇ ಮಾತು­ಕತೆಗೆ ಸಿದ್ಧವಿರದಿದ್ದ ಚೀನಾ ಈಗ ನಾಗರಿಕ ಅಣು ಸಹಕಾರ ಕುರಿತ ಮಾತು­ಕತೆ ಆರಂಭಿಸಲು ಮುಂದೆ ಬಂದಿರುವುದು  ಮಹತ್ವದ ಬದಲಾವಣೆ. ಬೀಜಿಂಗ್‌­ನಿಂದ ನ್ಯೂಕ್ಲಿಯರ್ ರಿಯಾಕ್ಟರ್‌ಗಳನ್ನು ಖರೀದಿಸುವ ವಿಚಾರ ಇನ್ನೂ ಮುಂದಿದೆ. ಆದರೆ  ಆಯ್ಕೆಗಳನ್ನು ಅನ್ವೇಷಿಸುವ  ಪ್ರಯತ್ನ ಸ್ವಾಗತಾರ್ಹ. ಅಣು ಪ್ರಸರಣ  ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರದಿದ್ದರೂ ಅಣು ವಿದ್ಯುತ್ ಉತ್ಪಾದಕ ರಾಷ್ಟ್ರವಾಗಿ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿ­ಕೊಳ್ಳುವ ಭಾರತದ ಯತ್ನಕ್ಕೆ ಚೀನಾ ಜತೆಗಿನ ಈ ಮಾತುಕತೆ ಮತ್ತಷ್ಟು ಚೇತನ ನೀಡಿದೆ.

ಜತೆಗೆ,   ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತದ  ಪೂರ್ಣ ಸದಸ್ಯತ್ವಕ್ಕೆ ತನ್ನ ಬೆಂಬಲವನ್ನು ಚೀನಾ ಪುನರುಚ್ಚರಿಸಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ  ಕ್ಸಿ ಜಿನ್‌ಪಿಂಗ್‌ ಅವರದ್ದು ಫಲಪ್ರದ ಭೇಟಿ ಎನ್ನಬಹುದು. ಆದರೆ ಗಡಿ ಸಮಸ್ಯೆ ಹದಗೆಟ್ಟರೆ ಈ ಆಶಾದಾಯಕ ಬೆಳವಣಿಗೆಗಳು ಮಂಜಿ­ನಂತೆ ಕರಗಬಹುದು.ಈ ಮಹತ್ವದ ಭೇಟಿಯ ಹಿನ್ನೆಲೆಯಲ್ಲಿ ಮೊದಲು ಗಡಿ ಸಮಸ್ಯೆಯನ್ನು ಆದ್ಯತೆಯಾಗಿ ಸ್ವೀಕರಿಸಿ ಬಗೆಹರಿಸಿಕೊಳ್ಳಬೇಕು.

ಗಡಿ­ವಿವಾದದ ಪರಿಹಾರಕ್ಕೆ ಸ್ಪಷ್ಟ ಕಾಲಮಿತಿಯಿರುವ ಕಾರ್ಯನೀತಿಯೊಂದನ್ನು ದ್ವಿಪಕ್ಷೀಯವಾಗಿ ರೂಪಿಸಬೇಕು. ಈ ಗಡಿ ವಿವಾದ  ಯಾವಾಗ ಬೇಕಾದರೂ ಸಿಡಿಯಬಹುದಾದ ಪ್ರೆಷರ್‌ ಕುಕ್ಕರಿನಂತೆ. ಅಧಿಕಾರವುಳ್ಳ ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳ ಮೂಲಕ ಈ ಪುರಾತನ ಗಡಿ ವಿವಾದವನ್ನು ಬಗೆ ಹರಿಸಿಕೊಳ್ಳುವುದು ಸದ್ಯದ ಆದ್ಯತೆ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.