ADVERTISEMENT

ಚೇತರಿಕೆ ಹೊಸ್ತಿಲಲ್ಲಿ ಆರ್ಥಿಕ ವೃದ್ಧಿ ದರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಚೇತರಿಕೆ ಹೊಸ್ತಿಲಲ್ಲಿ ಆರ್ಥಿಕ ವೃದ್ಧಿ ದರ
ಚೇತರಿಕೆ ಹೊಸ್ತಿಲಲ್ಲಿ ಆರ್ಥಿಕ ವೃದ್ಧಿ ದರ   

ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್‌ಗೆ ಅಂತ್ಯಗೊಂಡ ಮೂರು ತಿಂಗಳ ಅವಧಿಯಲ್ಲಿ ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 7.2ರಷ್ಟು ಬೆಳವಣಿಗೆ ದಾಖಲಿಸಿದೆ. ಇದೊಂದು ತೃಪ್ತಿದಾಯಕ ಮತ್ತು ಆಶಾದಾಯಕ ವಿದ್ಯಮಾನವಾಗಿದೆ. ಒಂದೂವರೆ ವರ್ಷದಲ್ಲಿನ ಗರಿಷ್ಠ ಮಟ್ಟದ ವೃದ್ಧಿ ದರವೂ ಇದಾಗಿದೆ. ಹಿಂದಿನ ಎರಡು ತ್ರೈಮಾಸಿಕಗಳಲ್ಲಿನ ಬೆಳವಣಿಗೆ ದರ ಕ್ರಮವಾಗಿ ಶೇ 5.7 ಮತ್ತು ಶೇ 6.5ರಷ್ಟಿತ್ತು. ನೋಟು ರದ್ದತಿ ಮತ್ತು ಪೂರ್ವಸಿದ್ಧತೆ ಕೊರತೆಯ ಜಿಎಸ್‌ಟಿ ಜಾರಿಯ ಆಘಾತಗಳನ್ನು ಆರ್ಥಿಕತೆಯು ಮೆಟ್ಟಿ ನಿಂತಿರುವುದೂ ಇದರಿಂದ ಸ್ಪಷ್ಟಗೊಳ್ಳುತ್ತದೆ. ಆರ್ಥಿಕ ಚಟುವಟಿಕೆಗಳು ಗರಿಗೆದರಿ, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನೂ ಇದು ಬಿಂಬಿಸುತ್ತದೆ.  ಕೃಷಿ, ಕಟ್ಟಡ ನಿರ್ಮಾಣ ಮತ್ತು ತಯಾರಿಕಾ ವಲಯದಲ್ಲಿನ ಉತ್ತಮ ಪ್ರಗತಿ ಫಲವಾಗಿ ಜಿಡಿಪಿ ಚೇತರಿಕೆಯಾಗಿದೆ. ಜಿಎಸ್‌ಟಿ ಜಾರಿಯ ಮೊದಲ ವರ್ಷದಲ್ಲಿನ ತೆರಿಗೆ ಸಂಗ್ರಹ ಪ್ರಮಾಣವು ಹೆಚ್ಚಳಗೊಳ್ಳಲಿರುವುದು ಉತ್ತೇಜಕರ ಸಂಗತಿಯಾಗಿದೆ. ಅರ್ಥ ವ್ಯವಸ್ಥೆಯ ಚೇತರಿಕೆಯನ್ನು ಎಂಟು ಮೂಲಸೌಕರ್ಯ ವಲಯಗಳ ಪ್ರಗತಿ ಕೂಡ ಪುಷ್ಟೀಕರಿಸುತ್ತದೆ. ಇದು ಎಷ್ಟರಮಟ್ಟಿಗೆ ಸುಸ್ಥಿರವಾಗಿರಲಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಸ್ಪಷ್ಟಗೊಳ್ಳಲಿದೆ.

ಹೊಸ ಬಂಡವಾಳ ಹೂಡಿಕೆಯು ಶೇ 12ರಷ್ಟು ಏರಿಕೆ ಕಂಡಿರುವುದು ಆಸಕ್ತಿದಾಯಕ ಬೆಳವಣಿಗೆಯಾಗಿದೆ. ಹೂಡಿಕೆ ಹೆಚ್ಚುತ್ತ ಹೋದಂತೆ ಸಹಜವಾಗಿಯೇ ಆರ್ಥಿಕ ಬೆಳವಣಿಗೆಯು ಸಹ ಏರುಗತಿಯಲ್ಲಿ ಸಾಗಲಿದೆ. ಆರ್ಥಿಕ ಬೆಳವಣಿಗೆಯು ಪ್ರಮುಖವಾಗಿ ಹಣಕಾಸು ವಲಯ, ವ್ಯಾಪಾರ, ಹೋಟೆಲ್‌, ಸಾರಿಗೆ ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳಿಂದ ಪ್ರಭಾವಿತಗೊಂಡಿರುತ್ತದೆ. ಆರ್ಥಿಕ ಚೇತರಿಕೆಯ ಪ್ರಮುಖ ಚಾಲಕ ಶಕ್ತಿಯಾಗಿರುವ ಖಾಸಗಿ ವೆಚ್ಚದ ಬೆಳವಣಿಗೆಯು (ಶೇ 5.6) ಮಾತ್ರ ಮಂದಗತಿಯಲ್ಲಿ ಇದೆ. ಉದ್ಯೋಗ ಅವಕಾಶಗಳ ಸೃಷ್ಟಿಯಲ್ಲಿ ನಾವು ಹಿಂದೆ ಬಿದ್ದಿರುವುದನ್ನೂ ಇದು ಸೂಚಿಸುತ್ತದೆ. ವರ್ಷಾಂತ್ಯದಲ್ಲಿನ ವೃದ್ಧಿ ದರ ಶೇ 6.6ರಷ್ಟು ಇರುವುದು, ಆರ್‌ಬಿಐನ ಅಂದಾಜು (ಶೇ 6.7) ಮತ್ತು  ಹಿಂದಿನ ವರ್ಷದ ಶೇ 7.1ರಷ್ಟಕ್ಕೆ ಹೋಲಿಸಿದರೆ ಕಡಿಮೆ ಇರಲಿದೆ. ಬ್ಯಾಂಕಿಂಗ್‌ ವಲಯದಲ್ಲಿನ ವಸೂಲಾಗದ ಸಾಲದ ಪ್ರಮಾಣವು ಬೆಳವಣಿಗೆ ಹಾದಿಯಲ್ಲಿನ ಅತಿದೊಡ್ಡ ಅಡಚಣೆಯಾಗಿದೆ. ದಿವಾಳಿ ಸಂಹಿತೆ ಮತ್ತು ಬಂಡವಾಳ ಪುನರ್ಧನ ಕಾರ್ಯಕ್ರಮಗಳ ಮೂಲಕ ಬ್ಯಾಂಕ್‌ಗಳನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಸರ್ಕಾರ ಹರಸಾಹಸ ಮಾಡುತ್ತಿರುವಾಗಲೇ ಕೋಟ್ಯಂತರ ರೂಪಾಯಿಗಳ ಹಗರಣಗಳು ಬೆಳಕಿಗೆ ಬರುತ್ತಿರುವುದು ನಿರಾಶೆ ಮೂಡಿಸುತ್ತವೆ.

ಕೃಷಿ (ಶೇ 3) ಮತ್ತು ತಯಾರಿಕಾ ವಲಯದ(ಶೇ 5.1) ಬೆಳವಣಿಗೆಯು ಅಷ್ಟೇನೂ ಆಶಾದಾಯಕ ಆಗಿರದಿರುವುದು ಕೂಡ ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಏಪ್ರಿಲ್‌ನಿಂದ ಡಿಸೆಂಬರ್‌ ಅವಧಿಯಲ್ಲಿನ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಮತ್ತು ತಯಾರಿಕಾ ಸೂಚ್ಯಂಕ ಕುಂಠಿತಗೊಂಡಿರುವುದೂ ಚಿಂತೆಗೆ ಕಾರಣವಾಗಿವೆ. ಕೇಂದ್ರ ಸರ್ಕಾರವು ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡುವುದರ ಜತೆಗೆ ಬಾಂಡ್‌ಗಳ ಮಾರುಕಟ್ಟೆಗೂ ಗಮನ ನೀಡಬೇಕಾಗಿದೆ. ಜಾಗತಿಕ ವಾಣಿಜ್ಯ ಬೇಡಿಕೆ ಮಂದಗತಿಯಲ್ಲಿ ಇರುವುದರಿಂದ ರಫ್ತುದಾರರು ವಹಿವಾಟಿನ ಚೇತರಿಕೆ ನಿರೀಕ್ಷೆಯಲ್ಲಿ ಇದ್ದಾರೆ. ಆರ್ಥಿಕತೆಯು ಪ್ರಗತಿ ಹಾದಿಯಲ್ಲಿ ಮುನ್ನಡೆಯಲು  ಇಂತಹ ಇನ್ನೂ ಅನೇಕಪ್ರತಿಕೂಲಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ. 2018–19ರಲ್ಲಿ ಜಿಡಿಪಿಯು ಶೇ 7.5ರಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡುತ್ತಿದೆ ಎನ್ನಬಹುದು. ಕಚ್ಚಾ ತೈಲದ ಬೆಲೆ ಏರಿಕೆ, ಜಾಗತಿಕ ಮಟ್ಟದಲ್ಲಿ ಬಡ್ಡಿ ದರ ಹೆಚ್ಚಳ ಮತ್ತು ಮುಂಗಾರು ಏರುಪೇರು ಈ ನಿರೀಕ್ಷಿತ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಸುಲಲಿತ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಸೂಚ್ಯಂಕದಲ್ಲಿ 30 ಶ್ರೇಯಾಂಕದಷ್ಟು ಬಡ್ತಿ ಪಡೆದಿರುವ ದೇಶಿ ಆರ್ಥಿಕತೆಯು, ಬ್ಯಾಂಕ್‌ಗಳ ಆಡಳಿತ ನಿರ್ವಹಣೆಯಲ್ಲಿನ ದೋಷಗಳನ್ನೆಲ್ಲ ಆದ್ಯತೆ ಮೇರೆಗೆ ನಿವಾರಿಸಬೇಕಾಗಿದೆ. ಸುಧಾರಣಾ ಕಾರ್ಯಸೂಚಿಯನ್ನು ಮುಂದುವರೆಸಿಕೊಂಡು ಹೋಗುವುದು ಈಗ ಸರ್ಕಾರದ ಆದ್ಯತೆ ಆಗಿರಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.