ADVERTISEMENT

ಜನರ ದುಡ್ಡು ಪೋಲು ಮಾಡದೆ ಸರಳ, ಅರ್ಥಪೂರ್ಣ ಆಚರಣೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಜನರ ದುಡ್ಡು ಪೋಲು ಮಾಡದೆ  ಸರಳ, ಅರ್ಥಪೂರ್ಣ ಆಚರಣೆ ನಡೆಯಲಿ
ಜನರ ದುಡ್ಡು ಪೋಲು ಮಾಡದೆ ಸರಳ, ಅರ್ಥಪೂರ್ಣ ಆಚರಣೆ ನಡೆಯಲಿ   

ಕರ್ನಾಟಕದ ಹೆಮ್ಮೆಯನ್ನು ದೇಶದೆಲ್ಲೆಡೆ ಪಸರಿಸಿರುವ ಅತ್ಯುತ್ತಮ ಶಿಲ್ಪವೈಭವವನ್ನು ಹೊಂದಿರುವ ವಿಧಾನಸೌಧ ಕಟ್ಟಡದ ವಜ್ರಮಹೋತ್ಸವವನ್ನು ಆಚರಿಸುವುದರಲ್ಲಿ ತಪ್ಪೇನೂ ಇಲ್ಲ. ವಜ್ರಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ವಿಧಾನಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವುದೂ ಒಳ್ಳೆಯದೇ. ಆದರೆ ಅದರ ಹೊರತಾಗಿಯೂ ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಬಗ್ಗೆ ಸಂಬಂಧಿಸಿದವರಿಗೆ ಸರಿಯಾದ ತಿಳಿವಳಿಕೆ ಇಲ್ಲದಿದ್ದರೆ ಹೇಗೆ? ವಿಧಾನಸಭೆಯ ಸ್ಪೀಕರ್‌ ಕೆ.ಬಿ.ಕೋಳಿವಾಡ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್‌.ಶಂಕರಮೂರ್ತಿಯವರಿಗೆ ಮುತ್ಸದ್ದಿತನದ ಅಥವಾ ಅನುಭವದ ಕೊರತೆಯೇನೂ ಇಲ್ಲ. ಹಾಗಿದ್ದೂ ವಜ್ರಮಹೋತ್ಸವದ ಆಚರಣೆಗೆ ಬಾಲಿಶವೆನ್ನಬಹುದಾದ ಕಾರ್ಯಕ್ರಮಗಳನ್ನು ಆಯೋಜಿಸಲು ಹೊರಟಿದ್ದು ಎಳ್ಳಷ್ಟೂ ಸರಿಯಲ್ಲ.

ಎಲ್ಲ 300 ಶಾಸಕರಿಗೆ ಒಂದೊಂದು ಚಿನ್ನದ ಬಿಸ್ಕತ್ತು, ಸಿಬ್ಬಂದಿಗೆ ಬೆಳ್ಳಿ ತಟ್ಟೆ, ಎಲ್ಲರಿಗೂ ಭರ್ಜರಿ ಭೂರಿ ಭೋಜನ, ಮನರಂಜನಾ ಕಾರ್ಯಕ್ರಮಗಳು– ಇವು ವಜ್ರಮಹೋತ್ಸವದ ಕಾರ್ಯಕ್ರಮಗಳು ಎನ್ನುವುದು ಬಹಿರಂಗವಾದಾಗ ಸಹಜವಾಗಿಯೇ ತೀವ್ರ ಟೀಕೆಗಳು ಕೇಳಿಬಂದಿವೆ. ಚಿನ್ನದ ಬಿಸ್ಕತ್ತು, ಬೆಳ್ಳಿ ತಟ್ಟೆ ಕಾಣಿಕೆಗಳಿಗೆ ಹಲವು ಶಾಸಕರೇ ವಿರೋಧ ವ್ಯಕ್ತಪಡಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎರಡು ದಿನಗಳ ಕಾರ್ಯಕ್ರಮಕ್ಕೆ ಸುಮಾರು ₹ 27 ಕೋಟಿ ಅಂದಾಜು ಖರ್ಚು ಪಟ್ಟಿಯನ್ನು ಸಲ್ಲಿಸಿರುವುದು ಪ್ರಜೆಗಳ ಹಣದ ದುರುಪಯೋಗವಲ್ಲದೆ ಇನ್ನೇನೂ ಅಲ್ಲ. ಇಂತಹ ಗಿಮಿಕ್‌ಗಳನ್ನು ಕೈಬಿಟ್ಟು ಶಾಸಕಾಂಗಕ್ಕೆ ಘನತೆ ತರುವಂತಹ ಗಂಭೀರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿತ್ತು. ಶಾಸನಸಭೆಗಳು ಕಾರ್ಯ ನಿರ್ವಹಿಸುವ ಅತ್ಯಂತ ಪವಿತ್ರ ತಾಣವಾಗಿರುವ ವಿಧಾನಸೌಧದ ವಜ್ರಮಹೋತ್ಸವವು ಮೋಜು–ಮಸ್ತಿಯ ಕಾರ್ಯಕ್ರಮ ಆಗಬಾರದು. ರಾಜ್ಯದ ಶಾಸಕಾಂಗದ ಇತಿಹಾಸವನ್ನು ನೆನಪಿಸುವ, ಅಲ್ಲಿಂದ ಆಳಿದ ಮುಖ್ಯಮಂತ್ರಿಗಳು ನಾಡಿಗೆ ಕೊಟ್ಟಿರುವ ಕೊಡುಗೆಗಳನ್ನು ಮನನ ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಯೋಜಿಸಬೇಕಿತ್ತು. ಜತೆಗೆ ಶಾಸಕಾಂಗ ಎದುರಿಸುತ್ತಿರುವ ಹಲವು ಬಿಕ್ಕಟ್ಟುಗಳ ಬಗ್ಗೆಯೂ ತಜ್ಞರನ್ನು ಕರೆಸಿ ಅರ್ಥಪೂರ್ಣ ಚರ್ಚೆ ನಡೆಸಬಹುದಿತ್ತು. ವಜ್ರಮಹೋತ್ಸವದ ನೆನಪಿಗಾಗಿ ಶಾಸನಸಭೆಯ ಅತ್ಯುತ್ತಮ ಚರ್ಚೆಗಳನ್ನು ಆಯ್ಕೆ ಮಾಡಿ ಪುಸ್ತಕಗಳನ್ನು ಪ್ರಕಟಿಸಬಹುದಿತ್ತು. ವಿಧಾನಸೌಧದ ಕುರಿತ ಸಾಕ್ಷ್ಯಚಿತ್ರ ನಿರ್ಮಾಣವೂ ಅಷ್ಟೊಂದು ಭಾರೀ ಖರ್ಚಿನ ಬಾಬ್ತು ಆಗಬೇಕಾಗಿರಲಿಲ್ಲ.

ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯನವರ ಕಾಲದಲ್ಲಿ, 1951ರಿಂದ 1956ರವರೆಗೆ ವಿಧಾನಸೌಧವನ್ನು ಕಟ್ಟುವ ಕೆಲಸ ನಡೆಯಿತು. ಆಗ ಕಟ್ಟಡ ನಿರ್ಮಾಣಕ್ಕೆ ₹ 1.75 ಕೋಟಿ ಖರ್ಚು ಮಾಡಲಾಗಿತ್ತು. ಆಗಿನ ಮೈಸೂರು ರಾಜ್ಯದ ಮುಖ್ಯ ವಾಸ್ತುಶಿಲ್ಪಿ ಬಿ.ಆರ್‌.ಮಾಣಿಕಂ, ಒಂದು ವಿಶಿಷ್ಟ ಶೈಲಿಯ ಕಟ್ಟಡದ ಆಶಯವನ್ನು ಸರಿಯಾಗಿಯೇ ಗ್ರಹಿಸಿ, ಡ್ರಾವಿಡ ಮತ್ತು ರಾಜಸ್ಥಾನಿ ಶೈಲಿಯಲ್ಲಿ ಅತ್ಯುತ್ತಮ ವಿನ್ಯಾಸವನ್ನೇ ರೂಪಿಸಿದರು. ಐದು ಸಾವಿರ ಕೈದಿಗಳ ಸಹಿತ ಸುಮಾರು 7000 ಕಾರ್ಮಿಕರು ಶ್ರಮ ಹಾಕಿ ಕಟ್ಟಿದ ಈ ಭವ್ಯಕಟ್ಟಡ, ಇವತ್ತಿಗೂ ಬೆಂಗಳೂರಿನ ಸೌಂದರ್ಯಕ್ಕೆ ಕಳಶಪ್ರಾಯವಾಗಿದೆ. ಇದು ದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಭವ್ಯ ಸೌಧವೂ ಹೌದು. ಇದರ ಸೌಂದರ್ಯವನ್ನು ಉಳಿಸಿಕೊಳ್ಳುವುದರ ಜತೆಗೆ ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಉಳಿಸಿಕೊಳ್ಳುವ ಕೇಂದ್ರವಾಗಿಯೂ ಈ ಸೌಧ ಉಳಿದುಕೊಳ್ಳಬೇಕು. ಸಂಭ್ರಮಾಚರಣೆಯ ವೆಚ್ಚವನ್ನು ₹ 10 ಕೋಟಿಗೆ ಮಿತಿಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸ್ವಾಗತಾರ್ಹ. ಇದಕ್ಕಿಂತ ಕಡಿಮೆ ಹಣದಲ್ಲೂ ಸರಳ ಮತ್ತು ಅರ್ಥಪೂರ್ಣ ಸಂಭ್ರಮಾಚರಣೆ ಸಾಧ್ಯ ಎನ್ನುವುದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.