ADVERTISEMENT

ತತ್ವ–ಸಿದ್ಧಾಂತಕ್ಕೆ ತಿಲಾಂಜಲಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಲೋಕಸಭೆ ಚುನಾವಣೆ ಕಣ ಕಾವೇರುತ್ತಿರುವಂತೆಯೇ ರಾಜಕೀಯ ಪಕ್ಷಗಳಲ್ಲಿ ಅತೃಪ್ತಿ, ಅಸಮಾಧಾನ ಕಟ್ಟೆಯೊಡೆದಿದೆ. ಟಿಕೆಟ್‌ ಹಂಚಿಕೆ,  ಪ್ರಧಾನ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಟಿಕೆಟ್‌ ಕೈ­ತಪ್ಪಿ­ದರೆ ಒಂದೋ ಬಂಡಾಯ, ಇಲ್ಲವಾದರೆ  ಬೇರೊಂದು ಪಕ್ಷಕ್ಕೆ ನೆಗೆತ ಎನ್ನುವ­ಮಟ್ಟಿಗೆ ರಾಜಕೀಯ ವಾತಾವರಣ ಕಲುಷಿತವಾಗಿದೆ.

ಅನ್ಯ ಪಕ್ಷಗಳ ಅತೃಪ್ತ­ರನ್ನು ಅಪ್ಪಿಕೊಳ್ಳಲು  ಕೆಲವೊಂದು ಪಕ್ಷಗಳು ಬೇಟೆ ನಾಯಿಯಂತೆ ಹೊಂಚು ಹಾಕಿವೆ. ಸಿನಿಮಾ ಹಾಗೂ ಕಿರುತೆರೆ  ನಟ–ನಟಿಯರು, ಕ್ರಿಕೆಟ್ ತಾರೆ­ಯ­ರನ್ನು ಕಣಕ್ಕೆ ಇಳಿಸಿ ಮತದಾರರನ್ನು ಮರುಳು ಮಾಡಲು ಪಕ್ಷಗಳ ನಡುವೆ ಪೈಪೋಟಿಯೇ ನಡೆದಿದೆ! ಗೆಲ್ಲುವುದೇ  ಮುಖ್ಯ ಎಂಬಂತಿದೆ ಪಕ್ಷಗಳ ನಡೆ.

ತತ್ವ, ಸಿದ್ಧಾಂತಗಳು ಮರೆಗೆ ಸರಿದಿವೆ. ವಿಷಯಕ್ಕಿಂತ ವ್ಯಕ್ತಿಗೆ ಪ್ರಾಧಾನ್ಯ ನೀಡಿ ಮೆರೆಸುವ ಪರಿಪಾಠ ತುದಿ ಮುಟ್ಟಿದೆ. ಒಂದು ಬದಿಯಲ್ಲಿ ‘ನಮೋ’ ಜಪ, ಮತ್ತೊಂದು ನೆಲೆಯಲ್ಲಿ ‘ರಾಗಾ’ ಆಲಾಪ. ಬಿಜೆಪಿಯ ನರೇಂದ್ರ ಮೋದಿ, ಕಾಂಗ್ರೆ­­ಸ್ಸಿನ ರಾಹುಲ್‌ ಗಾಂಧಿ ಬಿಟ್ಟರೆ ಬೇರೆ ವಿಷಯವೇ ಇಲ್ಲ ಎನ್ನುವ ಹಂತಕ್ಕೆ ಇವರ ಇತಿ–ಮಿತಿ, ಸಾಮರ್ಥ್ಯಗಳ ಸುತ್ತ ಚರ್ಚೆ ಗಿರಕಿ ಹೊಡೆ­ಯು­ತ್ತಿದೆ.

ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಕವಡೆ ಕಾಸಿನ ಕಿಮ್ಮ­ತ್ತಿಲ್ಲ ಎಂಬುದು ಕಣ್ಣಿಗೆ ರಾಚುವಷ್ಟು ಪ್ರಖರವಾಗಿ ಗೋಚರಿಸುತ್ತಿದೆ. ಎಲ್.ಕೆ. ಅಡ್ವಾಣಿ, ಮುರಳಿಮನೋಹರ ಜೋಷಿ ಅವರಂತಹ ಹಿರಿಯ ನಾಯಕರಿಗೆ ಅವರು ಬಯಸಿದ  ಕ್ಷೇತ್ರಗಳು ದೊರೆತಿಲ್ಲ. ಮತ್ತೊಬ್ಬ ಹಿರಿಯ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಅಹ­ಮದಾಬಾದ್‌ ಪೂರ್ವ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಆಯ್ಕೆ­ಯಾ­ಗಿರುವ ಹರೇನ್ ಪಾಠಕ್‌ ಅವರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. ಈ ಹಿರಿಯರು ಮೋದಿ ಮುನಿಸಿಗೆ ಒಳಗಾಗಿರುವುದೇ ಟಿಕೆಟ್‌ ಕೈತಪ್ಪಲು ಕಾರಣ ಎನ್ನ­ಲಾ­ಗಿದೆ.  ಮೋದಿ ರಾಜಕಾರಣದ ಮಾದರಿಗೆ ಇವೆಲ್ಲ ನಿದ­ರ್ಶನ. ಭಾರತೀಯ ಸಂಸ್ಕೃತಿ ಬಗ್ಗೆ ಬೀಗುವ ಬಿಜೆಪಿಗೆ ಪಕ್ಷ ಕಟ್ಟಿದ ಹಿರಿಯ­ರನ್ನು ಗೌರವದಿಂದ ನಡೆಸಿ­ಕೊಳ್ಳಬೇಕು ಎಂಬ ಸೌಜನ್ಯ ಮರೆತುಹೋಯಿತೆ?

ಬಿಎಸ್ಆರ್‌ ಕಾಂಗ್ರೆಸ್ ಸಂಸ್ಥಾಪಕ  ಬಿ.ಶ್ರೀರಾಮುಲು ಅವರನ್ನು ಬಿಜೆಪಿಗೆ ಸೇರಿ­ಸಿಕೊಂಡು ಅವರನ್ನು ಬಳ್ಳಾರಿಯಿಂದ ಕಣಕ್ಕೆ ಇಳಿಸುವ ಪ್ರಸ್ತಾವಕ್ಕೆ ಸುಷ್ಮಾ ಸ್ವರಾಜ್ ವಿರೋಧ ವ್ಯಕ್ತಪಡಿಸಿದ್ದರು. ಅವರ ವಿರೋಧವನ್ನು ಲೆಕ್ಕಿ­ಸದೆ ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಲಾಗಿದೆ. ಶ್ರೀರಾಮಸೇನೆಯ ಸಂಸ್ಥಾ­ಪಕ ಪ್ರಮೋದ ಮುತಾಲಿಕ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು, ಕೆಲ ತಾಸುಗಳಲ್ಲೇ ಸೇರ್ಪಡೆ ನಿರ್ಧಾರವನ್ನು ರದ್ದುಗೊಳಿಸಿದ್ದು ಪಕ್ಷವನ್ನು ಮುಜು­­ಗರಕ್ಕೆ ಈಡುಮಾಡಿದೆ.

ಹೇಗಾದರೂ ದೆಹಲಿ ಗದ್ದುಗೆ ಹಿಡಿಯ­ಬೇಕು ಎಂಬ ತಹತಹ ಬಿಜೆಪಿ ನಾಯಕರ ವಿವೇಚನಾಶಕ್ತಿಯನ್ನು ಕುಂದಿಸಿ­ದಂತಿದೆ. ಇದರಿಂದಾಗಿ, ವ್ಯಕ್ತಿಯ ಹಿನ್ನೆಲೆ, ಪರಿಣಾಮಗಳು  ಕಣ್ಣಿಗೇ ಕಾಣಿಸು­ತ್ತಿಲ್ಲ. ಟಿಕೆಟ್ ಹಂಚಿಕೆ ಗೊಂದಲ ಬಿಜೆಪಿಯಲ್ಲಿ  ಅಷ್ಟೇ ಅಲ್ಲ, ಕಾಂಗ್ರೆಸ್‌ ಸೇರಿ­ದಂತೆ ಎಲ್ಲ ಪಕ್ಷಗಳಲ್ಲಿಯೂ ಉಂಟಾಗಿದೆ. ಬೀದರ್‌ನಲ್ಲಿ ಬಿಜೆಪಿಗೆ, ಶಿವ­ಮೊಗ್ಗ­­ದಲ್ಲಿ ಕಾಂಗ್ರೆಸ್‌ಗೆ  ಬಂಡಾಯದ ಬಿಸಿ ಎದುರಾಗಿದೆ. ಜಾಫರ್‌ ಷರೀಫ್ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದಾರೆ. ಇದರ ಲಾಭ ಪಡೆಯಲು ಪರಾವಲಂಬಿ ಜೆಡಿಎಸ್‌ ತುದಿಗಾಲ ಮೇಲೆ ನಿಂತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT