ADVERTISEMENT

ತೆರಿಗೆ ದಾಳಿ: ರಾಜಕೀಯ ಅರ್ಥಗಳಿಗೆ ದಾರಿಮಾಡದಿರಲಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2017, 19:30 IST
Last Updated 3 ಆಗಸ್ಟ್ 2017, 19:30 IST
ತೆರಿಗೆ ದಾಳಿ: ರಾಜಕೀಯ ಅರ್ಥಗಳಿಗೆ ದಾರಿಮಾಡದಿರಲಿ
ತೆರಿಗೆ ದಾಳಿ: ರಾಜಕೀಯ ಅರ್ಥಗಳಿಗೆ ದಾರಿಮಾಡದಿರಲಿ   

ರಾಜ್ಯ ರಾಜಕಾರಣದಲ್ಲಿ ಮತ್ತು ಸಂಪುಟದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಅವರ ಆಪ್ತರಿಗೆ ಸೇರಿದ ಮನೆ, ಕಚೇರಿ ಒಳಗೊಂಡು 64 ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಕಾಂಗ್ರೆಸ್ಸಿಗರು ನಡೆಸಿದ ಪ್ರತಿಭಟನೆ, ಗದ್ದಲ, ಆ ಪಕ್ಷದ ವಿವಿಧ ನಾಯಕರ ಪ್ರತಿಕ್ರಿಯೆ... ಇದನ್ನೆಲ್ಲ ನೋಡಿದರೆ ಈ ದಾಳಿ ಕಾಂಗ್ರೆಸ್‌ ಪಕ್ಷದಲ್ಲಂತೂ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ಅದರಲ್ಲಿ ಎರಡು ಮಾತೇ ಇಲ್ಲ. ಏಕೆಂದರೆ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಇಟ್ಟಿರುವುದು ಮತ್ತು ಅವರ ಸಕಲ ಸೌಕರ್ಯಗಳ ಉಸ್ತುವಾರಿಯನ್ನು ಶಿವಕುಮಾರ್‌ ನೋಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ದಾಳಿ ನಡೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿ ರಾಜಕಾರಣದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹೀಗಾಗಿ ಇದಕ್ಕೆ ನಾನಾ ರಾಜಕೀಯ ಅರ್ಥಗಳು ಸೇರಿಕೊಂಡಿವೆ.

ನೋಟು ರದ್ದತಿಯ ನಂತರದ ದಿನಗಳಲ್ಲಿ ಭ್ರಷ್ಟಾಚಾರ ತಡೆ ಮತ್ತು ಕಪ್ಪು ಹಣ ಬಯಲಿಗೆಳೆಯುವ ಕಾರ್ಯಾಚರಣೆ ಚುರುಕುಗೊಂಡಿದೆ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ಹೆಚ್ಚು ಕ್ರಿಯಾಶೀಲವಾಗಿವೆ. ದೇಶದ ವಿವಿಧೆಡೆ ಸಾಕಷ್ಟು ದಾಳಿಗಳನ್ನು ನಡೆಸಿವೆ. ದೊಡ್ಡ ಮೊತ್ತದ ಹಣದ ವರ್ಗಾವಣೆ, ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿವೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನೆಲ್ಲ ಬಳಸಿಕೊಳ್ಳುತ್ತಿವೆ. ಶಿವಕುಮಾರ್‌ ಮತ್ತವರ ಪರಿವಾರದ ಮೇಲಿನ ದಾಳಿ ಕೂಡ ಇಂತಹುದೇ ಕಾರ್ಯತಂತ್ರದ ಭಾಗ ಎಂದು ಹೇಳಲಾಗುತ್ತಿದೆ. ತುಂಬ ವ್ಯವಸ್ಥಿತವಾಗಿ ನಡೆದ ಈ ದಾಳಿಯ ವಿಧಾನ, ವಿಸ್ತಾರ ನೋಡಿದರೆ ಇದು ಒಂದೆರಡು ದಿನಗಳಲ್ಲಿ ನಿರ್ಧಾರವಾದದ್ದಲ್ಲ; ಅಧಿಕಾರಿಗಳು ಸಾಕಷ್ಟು ಮಾಹಿತಿ ಕಲೆಹಾಕಿ ಪೂರ್ವಸಿದ್ಧತೆ ಮಾಡಿಕೊಂಡೇ ಹೆಜ್ಜೆ ಇಟ್ಟಿದ್ದಾರೆ ಎಂದು ಕಾಣುತ್ತದೆ.

ನಮ್ಮ ಸಮಾಜವನ್ನು ಕಾಡುತ್ತಿರುವ ಭ್ರಷ್ಟಾಚಾರ, ಕಾಳಧನದ ಪಿಡುಗನ್ನು ಮಟ್ಟ ಹಾಕಲೇಬೇಕು; ಅದು ಮತ್ತೆ ತಲೆ ಎತ್ತದಂತೆ ಮಾಡಲು ತೆರಿಗೆ ದಾಳಿಗಳು ಅನಿವಾರ್ಯ, ಸಮರ್ಥನೀಯ. ಆದರೆ ಇದು ರಾಜಕೀಯ ಪ್ರೇರಿತ ಆಗಿರಬಾರದು. ಇಡೀ ಪ್ರಕ್ರಿಯೆ ಪಾರದರ್ಶಕವಾಗಿ, ವೃತ್ತಿಪರವಾಗಿ ನಡೆಯಬೇಕು. ಇಲ್ಲದೆ ಹೋದರೆ ಎಂತಹ ಸದುದ್ದೇಶದಿಂದ ನಡೆಸಿದ ಶೋಧನಾ ಕಾರ್ಯಾಚರಣೆಗೂ ರಾಜಕಾರಣದ ರಾಡಿ, ಪಕ್ಷಪಾತದ ಕಳಂಕ ಮೆತ್ತಿಕೊಳ್ಳುವ ಅಪಾಯ ಇದೆ. ಐ.ಟಿ ಅಧಿಕಾರಿಗಳು ಈ ಸಲದ ದಾಳಿ ವೇಳೆ ರಾಜ್ಯ ಪೊಲೀಸರ ನೆರವು ಕೇಳದೇ ಕೇಂದ್ರೀಯ ಮೀಸಲು ಪೊಲೀಸ್‌ ಸಿಬ್ಬಂದಿಯ ಸೇವೆ ಬಳಸಿಕೊಂಡಿದ್ದಾರೆ. ಇದು ರಾಜ್ಯ ಪೊಲೀಸರ ಮೇಲೆ ವಿಶ್ವಾಸ ಇಲ್ಲವೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಇವಕ್ಕೆಲ್ಲ ಐ.ಟಿ ಅಧಿಕಾರಿಗಳು ಸೂಕ್ತ ಸಮಜಾಯಿಷಿ ಕೊಡಬೇಕು, ಪೂರ್ವನಿದರ್ಶನ ಇದ್ದಲ್ಲಿ ವಿವರಿಸಬೇಕು.

ADVERTISEMENT

ಐ.ಟಿ ದಾಳಿ, ಸಿ.ಬಿ.ಐ ದಾಳಿ, ಜಾರಿ ನಿರ್ದೇಶನಾಲಯದ ದಾಳಿಗಳು ನಡೆದಾಗ ಅಧಿಕಾರದಲ್ಲಿರುವ ಪಕ್ಷ ಸಮರ್ಥಿಸಿಕೊಳ್ಳುವುದನ್ನು, ‘ಇದು ಸೇಡಿನ ಕ್ರಮ’ ಎಂದು ವಿರೋಧ ಪಕ್ಷ ಆರೋಪಿಸುವುದನ್ನು ನೋಡುತ್ತಲೇ ಬಂದಿದ್ದೇವೆ. ಸಂದರ್ಭಾನುಸಾರ ಪಕ್ಷ, ವ್ಯಕ್ತಿಗಳು ಅದಲುಬದಲಾಗುತ್ತಾರೆ ಅಷ್ಟೆ. ಈಗಲೂ ಅದೇ ಆಗಿದೆ. ಎದುರಾಳಿಗಳ ತೋಳು ತಿರುಚಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗೆಂದು, ಎಲ್ಲವನ್ನೂ ಪೂರ್ವಗ್ರಹದಿಂದ ನೋಡುವುದು ಸರಿಯಲ್ಲ. ‘ರಾಜಕೀಯ ಪ್ರೇರಿತ’ ಎಂದು ವ್ಯಾಖ್ಯಾನಿಸುವುದು ತನಿಖಾ ಅಧಿಕಾರಿಗಳ ಸ್ಥೈರ್ಯ ಕುಗ್ಗಿಸಬಹುದು. ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಗೇ ಧಕ್ಕೆ ತರಬಹುದು. ಅದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ರಾಜಕಾರಣಿಗಳ ಮನೆ ಮೇಲೆ ತೆರಿಗೆ ದಾಳಿಗಳು ನಡೆಯಲೇಬಾರದೆ? ನಡೆದರೆ ಅದಕ್ಕೆ ರಾಜಕೀಯ ಲೇಪನ ಮಾಡುವುದರ ಹಿಂದಿನ ನೈಜ ಉದ್ದೇಶ ಏನು? ಅವರೆಲ್ಲರೂ ಪಕ್ಕಾ ಲೆಕ್ಕ ಕೊಡುತ್ತಾರೆಯೇ? ಇಂತಹ ಸಂದರ್ಭಗಳಲ್ಲಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ ಅಥವಾ ಅವು ತಮ್ಮ ಕರ್ತವ್ಯ ನಿಭಾಯಿಸಿವೆಯೇ ಎಂಬುದನ್ನು ತಿಳಿಯಲು ಶೋಧ ಮುಗಿದು ಫಲಿತಾಂಶ ಹೊರಬರುವವರೆಗೂ ಕಾಯುವ ವ್ಯವಧಾನ ಬೇಕು. ಪೂರ್ವಗ್ರಹಗಳು ಕೆಲಸ ಮಾಡಿವೆ ಎಂಬಂತಹ ಭಾವನೆ ಜನರಲ್ಲಿ ಬರದಂತೆ ಸ್ವತಂತ್ರವಾಗಿ, ದಿಟ್ಟವಾಗಿ ತನಿಖಾ ಸಂಸ್ಥೆಗಳೂ ಕಾರ್ಯನಿರ್ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.