ADVERTISEMENT

ದಾಖಲಾತಿ ಹೆಚ್ಚಳಕ್ಕೆ ಇಂಗ್ಲಿಷ್‌ ಮಾಧ್ಯಮ ಪೂರಕವಾಗದು

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
ದಾಖಲಾತಿ ಹೆಚ್ಚಳಕ್ಕೆ ಇಂಗ್ಲಿಷ್‌ ಮಾಧ್ಯಮ ಪೂರಕವಾಗದು
ದಾಖಲಾತಿ ಹೆಚ್ಚಳಕ್ಕೆ ಇಂಗ್ಲಿಷ್‌ ಮಾಧ್ಯಮ ಪೂರಕವಾಗದು   

ಶಾಲಾಭಿವೃದ್ಧಿ ಸಮಿತಿಗಳು ಬೇಡಿಕೆ ಸಲ್ಲಿಸಿದರೆ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ಅನುಮತಿ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. 6ನೇ ತರಗತಿಯಿಂದ  ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಈ ಹಿಂದೆಯೇ ಆದೇಶ ಮಾಡಲಾಗಿದ್ದು 3,770 ಶಾಲೆಗಳಲ್ಲಿ  ಈಗಾಗಲೇ ಈ ವಿಭಾಗ  ಇದೆ.  ಹೀಗಾಗಿ ಮಾಧ್ಯಮಿಕ ಶಾಲೆಗಳಲ್ಲಿ  ಆಂಗ್ಲ ಮಾಧ್ಯಮವನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿರುವುದು ಇಲ್ಲಿ ಸ್ಪಷ್ಟ.  ರಾಜ್ಯದ ಎಲ್ಲಾ  ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ 2007–08ರಿಂದಲೇ ಪರಿಚಯಿಸಲಾಗಿದೆ.  ಜಾಗತೀಕರಣದ ಪರಿಣಾಮವಾಗಿ ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಇಂಗ್ಲಿಷ್  ಪ್ರಾಮುಖ್ಯ ಗಳಿಸಿಕೊಂಡಿರುವುದ ರಿಂದ ಈ ಕ್ರಮ ಸರಿಯಾದುದೇ ಆಗಿತ್ತು. ಆದರೆ ಎಷ್ಟು ಪರಿಣಾಮಕಾರಿಯಾಗಿ ಇಂಗ್ಲಿಷ್ ಕಲಿಸಲಾಗುತ್ತಿದೆ ಎಂಬ ಬಗ್ಗೆ ಅಧ್ಯಯನಗಳೇನೂ ನಡೆದಂತೆ ಇಲ್ಲ.  ಇಂಗ್ಲಿಷ್ ಭಾಷಾ ಶಿಕ್ಷಕರ ಕೊರತೆ ಇದ್ದು  ಕೊರತೆ ನೀಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದೂ ಸರ್ಕಾರ ಹೇಳುತ್ತಿದೆ. ಇಂತಹ ಸಂದರ್ಭದಲ್ಲಿ  ಈಗ ಇದ್ದಕ್ಕಿದ್ದಂತೆ, ಬೇಡಿಕೆ ಬಂದಲ್ಲಿ  ಇಂಗ್ಲಿಷ್ ಮಾಧ್ಯಮವನ್ನು  ಮಾಧ್ಯಮಿಕ ಶಾಲೆ ಹಂತದಲ್ಲೇ  ಅಳವಡಿಸಲು ಹೊರಟಿರುವ ಸರ್ಕಾರದ ನಿರ್ಧಾರ ಎಷ್ಟು ಸರಿ?  ಬರೀ ಇಂತಹ ಘೋಷಣೆಗಳಿಂದ ಸರ್ಕಾರಿ ಶಾಲೆಗಳಲ್ಲಿ  ಗುಣಮಟ್ಟದ  ಶಿಕ್ಷಣವನ್ನು ನೀಡುವುದು ಸಾಧ್ಯವೇ? 

ತಮ್ಮ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕೆಂದು ನಿರ್ಧರಿಸುವುದು ಪೋಷಕರ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೋಷಕರು ಒತ್ತು ನೀಡುತ್ತಿರುವುದೂ ಗೊತ್ತಿರುವಂತಹದ್ದೆ. ಆದರೆ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಆಯಾ ಭಾಷೆ, ಸಂಸ್ಕೃತಿ ಬೆಳೆಯಲು ಸಂವಿಧಾನ ಅವಕಾಶ ನೀಡಿರುವುದನ್ನು ನ್ಯಾಯಾಲಯ ಈ ವಿಚಾರದಲ್ಲಿ ಗಣನೆಗೆ ತೆಗೆದುಕೊಳ್ಳಲಿಲ್ಲ ಎಂಬುದೂ ದುರದೃಷ್ಟಕರ. ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಪಡೆದ ಅನೇಕ ಖಾಸಗಿ ಶಾಲೆಗಳು ಬೋಧಿಸುತ್ತಿರುವುದು ಇಂಗ್ಲಿಷ್ ಮಾಧ್ಯಮದಲ್ಲಿ ಎಂಬುದು ಗೊತ್ತಿರುವ ಸಂಗತಿಯೇ ಆಗಿದೆ.  ಆದರೆ ಇಂತಹ ಶಾಲೆಗಳ ಮಾನ್ಯತೆ ರದ್ದುಮಾಡದೆ ಬೇಕಾಬಿಟ್ಟಿ ಖಾಸಗಿ ಶಾಲೆಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದ್ದು ದೊಡ್ಡ ತಪ್ಪು. ಇಂತಹ ಅನೇಕ ಶಾಲೆಗಳನ್ನು ನಡೆಸುತ್ತಿರುವವರ ಪೈಕಿ ಸ್ವತಃ ರಾಜಕಾರಣಿಗಳೇ ಇದ್ದಾರೆ.  ಈಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ  ಕಡಿಮೆಯಾಗುತ್ತಿರುವುದನ್ನು ತಡೆಯಲು ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಮಾತನಾಡುತ್ತಿರುವ ಸರ್ಕಾರದ ದ್ವಿಮುಖ ಧೋರಣೆ ಖಂಡನಾರ್ಹ. 

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. ಇದರಿಂದ ಕಲಿಕೆ ಸೃಜನಾತ್ಮಕವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.  ಮುಂದುವರಿದ ರಾಷ್ಟ್ರಗಳಲ್ಲಿ ಇದೇ ನೀತಿ ಇದೆ. ಆದರೆ ನಮ್ಮಲ್ಲಿ ಕಲಿಕೆಯನ್ನು ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕೆ  ಸೀಮಿತಗೊಳಿಸುತ್ತಿದ್ದೇವೆ. ಇದು ಮಕ್ಕಳಲ್ಲಿ ಚಿಂತನಾಶಕ್ತಿಯನ್ನು ಬೆಳೆಸುವುದಿಲ್ಲ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಭಾಷೆ ಎನ್ನುವುದು ಸಂವಹನ ಮಾಧ್ಯಮ ಮಾತ್ರವಲ್ಲ. ನಾಡಿನ ಸಂಸ್ಕೃತಿ ಹಾಗೂ ಮೌಲ್ಯ ವ್ಯವಸ್ಥೆಯನ್ನು ಪರಿಚಯಿಸುವಂತಹದ್ದೂ ಆಗಿರುತ್ತದೆ. ಬಾಲ್ಯದಲ್ಲೇ ಇಂಗ್ಲಿಷ್ ಮಾಧ್ಯಮಕ್ಕೆ ಹೊರಳಿಕೊಳ್ಳುವ ಮೂಲಕ ನಮ್ಮ ದೇಸಿ ಜ್ಞಾನ ಸಂಪತ್ತು  ನಿರುಪಯುಕ್ತವಾಗುತ್ತಾ ಹೋಗಬಹುದು. ಇದು ಆಗಬಾರದು. ಸುತ್ತಲಿನ ಪರಿಸರದ ಭಾಷೆ ಬಿಟ್ಟು ಭಿನ್ನ ಭಾಷೆಯ ಮಾಧ್ಯಮ, ಮಕ್ಕಳಿಗೆ ಕಲಿಕೆಯ ಹೊರೆಯನ್ನೂ ಹೆಚ್ಚಾಗಿಸುತ್ತದೆ. ಇದರ ದೂರಗಾಮಿ ಪರಿಣಾಮಗಳನ್ನೂ ಅಧ್ಯಯನ ಮಾಡುವುದು ಒಳಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.