ADVERTISEMENT

ದಿವಾಳಿ ಸಂಹಿತೆಯಡಿ ಕ್ರಮ ಪ್ರಮುಖ ಸುಧಾರಣಾ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2017, 20:15 IST
Last Updated 26 ಜೂನ್ 2017, 20:15 IST
ದಿವಾಳಿ ಸಂಹಿತೆಯಡಿ ಕ್ರಮ ಪ್ರಮುಖ ಸುಧಾರಣಾ ಹೆಜ್ಜೆ
ದಿವಾಳಿ ಸಂಹಿತೆಯಡಿ ಕ್ರಮ ಪ್ರಮುಖ ಸುಧಾರಣಾ ಹೆಜ್ಜೆ   

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲದ ಸಮಸ್ಯೆಗೆ (ಎನ್‌ಪಿಎ) ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ ಕೈಜೋಡಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ವರ್ಷಗಳಿಂದ ಹೆಚ್ಚುತ್ತಲೇ ಬಂದಿರುವ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ನಡೆದಿರುವ ಈ ಪ್ರಯತ್ನ ಬ್ಯಾಂಕಿಂಗ್‌ ವಲಯವನ್ನು ಸ್ವಚ್ಛಗೊಳಿಸಲಿದೆ.

ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದೆ ಎಂದು ಬಹುವಾಗಿ ನಿರೀಕ್ಷಿಸಬಹುದು. ದೇಶಿ ಹಣಕಾಸು ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಅಡಚಣೆ ಒಡ್ಡಿರುವ ಎನ್‌ಪಿಎ, ಹೊಸ ಬಂಡವಾಳ ಹೂಡಿಕೆಯನ್ನೂ ಸ್ಥಗಿತಗೊಳಿಸಿದೆ.

ಬ್ಯಾಂಕಿಂಗ್‌ ವಲಯದ ಸುರಕ್ಷತೆ ಮತ್ತು ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ನಿರ್ಬಂಧಿಸಲು ಇಂತಹ ಕಠಿಣ ಕಾನೂನು ಕ್ರಮ ಅನಿವಾರ್ಯವಾಗಿದೆ. ಬ್ಯಾಂಕ್‌ಗಳ ವಸೂಲಾಗದ ಸಾಲದ ಸಂಕೀರ್ಣ ಸಮಸ್ಯೆಗೆ ಹಲವಾರು ಮುಖಗಳಿವೆ.  ಬ್ಯಾಂಕ್‌ಗಳ ಎನ್‌ಪಿಎ  ಸದ್ಯಕ್ಕೆ  ಸ್ವೀಕಾರಾರ್ಹ ಮಟ್ಟದಲ್ಲಿ ಇಲ್ಲ.

ADVERTISEMENT

ಬ್ಯಾಂಕ್‌ಗಳ ಒಟ್ಟಾರೆ ಎನ್‌ಪಿಎ ₹ 8 ಲಕ್ಷ ಕೋಟಿಗಳಷ್ಟಿದ್ದು, ಸರ್ಕಾರಿ ಬ್ಯಾಂಕ್‌ಗಳಿಗೆ ₹ 6 ಲಕ್ಷ ಕೋಟಿಗಳಷ್ಟು ಸಾಲ ಮರುಪಾವತಿಯಾಗಬೇಕಾಗಿದೆ. ಆರ್‌ಬಿಐ, ಒಟ್ಟಾರೆ 55 ಎನ್‌ಪಿಎ ಖಾತೆಗಳನ್ನು ಗುರುತಿಸಿದ್ದು, ಅವುಗಳ ಪೈಕಿ 12 ಉದ್ದಿಮೆ ಸಂಸ್ಥೆಗಳ  ಬಾಕಿ ಸಾಲ ವಸೂಲಿಗೆ ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ನೀತಿ ಸಂಹಿತೆಯಡಿ (ಐಬಿಸಿ) ಕ್ರಮ ಕೈಗೊಳ್ಳಬೇಕು ಎಂದು ವಾಣಿಜ್ಯ ಬ್ಯಾಂಕ್‌ಗಳಿಗೆ ತಾಕೀತು ಮಾಡಿದೆ.

ಈ 12 ಉದ್ದಿಮೆ ಸಂಸ್ಥೆಗಳ ಸಾಲದ ಪ್ರಮಾಣವೇ ₹ 2 ಲಕ್ಷ ಕೋಟಿಗಳಷ್ಟಿದೆ. ಇವುಗಳಲ್ಲಿ ಉಕ್ಕು, ಜವಳಿ  ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಗಳು ಸೇರಿವೆ. ಜಾಗತಿಕ ವಿದ್ಯಮಾನಗಳಿಂದಾಗಿ ಉಕ್ಕು ಉದ್ಯಮ ಸಂಕಷ್ಟಕ್ಕೆ ಸಿಲುಕಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಮಾತನ್ನು ಇತರ ವಲಯಗಳಿಗೆ ಅನ್ವಯಿಸುವಂತಿಲ್ಲ.

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯಡಿ ಹೊರಡಿಸಲಾದ ಸುಗ್ರೀವಾಜ್ಞೆಯ ನೆರವಿನಿಂದ ಸಾಲ ವಸೂಲಾತಿ ಪ್ರಕ್ರಿಯೆ ತ್ವರಿತಗೊಳಿಸಲು ಆರ್‌ಬಿಐಗೆ ಹೆಚ್ಚು ಅಧಿಕಾರವೂ ಪ್ರಾಪ್ತವಾಗಿದೆ. ದೇಶಿ ಬ್ಯಾಂಕಿಂಗ್‌ ವ್ಯವಸ್ಥೆ ಎದುರಿಸುತ್ತಿರುವ ಈ ಬಿಕ್ಕಟ್ಟಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಆರ್‌ಬಿಐ, ಐವರು ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನೂ ರಚಿಸಿದೆ.

ಈ ಆಂತರಿಕ ಸಲಹಾ ಸಮಿತಿಯು (ಐಎಸಿ), ಐಬಿಸಿಯಡಿ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಮಂಡಳಿಗೆ (ಎನ್‌ಸಿಎಟಿ) ಶಿಫಾರಸು ಮಾಡಲಿದೆ. ಐಬಿಸಿಯಡಿ ಸಾಲ ವಸೂಲಿಗೆ ಕಾಲಮಿತಿ ನಿಗದಿಪಡಿಸಿರುವುದು ಉತ್ತಮ ನಿರ್ಧಾರವಾಗಿದೆ. ಆರು ತಿಂಗಳಲ್ಲಿ ಬ್ಯಾಂಕ್‌ಗಳು ಕಾರ್ಯಸಾಧ್ಯವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ಸುಸ್ತಿದಾರರ ವಿರುದ್ಧ ಅನಿವಾರ್ಯವಾಗಿ ದಿವಾಳಿ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ.

ಸಾಲ ವಸೂಲಿ ಪ್ರಕ್ರಿಯೆ ತೀವ್ರಗೊಳಿಸುವ ಹೊಣೆಗಾರಿಕೆ ಈಗ ಬ್ಯಾಂಕ್‌ಗಳಿಗೆ  ವರ್ಗಾವಣೆಗೊಂಡಿದೆ. ಸಾಲ ವಸೂಲಿ ಮಾಡುವಲ್ಲಿ ವಿಫಲವಾದರೆ, ಸಾಲದ ಮರು ಹೊಂದಾಣಿಕೆ ಮಾಡಲು ಇಲ್ಲವೇ ಪರಿಸಮಾಪ್ತಿ ಮಾಡಲು ಅವಕಾಶ ಇದೆ.

ಎನ್‌ಪಿಎ ಸಂಕೀರ್ಣವಾಗಿರುವುದರಿಂದ ಕಠಿಣ ಕ್ರಮ ಕೈಗೊಂಡರೆ ಉದ್ದಿಮೆಗಳನ್ನೇ ಮುಚ್ಚಬೇಕಾದ ಪರಿಸ್ಥಿತಿ ಉದ್ಭವಗೊಳ್ಳಲಿದೆ. ಇದರಿಂದ ಬ್ಯಾಂಕ್‌ಗಳ ಸಾಲ ವಸೂಲಿಯಾಗದೇ ಹೋಗುವ ಅಪಾಯ ಇದೆ. ಆದಕಾರಣ ಈ ವಿಷಯದಲ್ಲಿ ಎಚ್ಚರ ವಹಿಸಬೇಕಾಗಿದೆ.

ಸಾಲ ವಸೂಲಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದರೂ, ಅದು ಸಾಕಷ್ಟು ಕಠಿಣ ಸ್ವರೂಪದಲ್ಲಿ ಇರುವಂತೆ ಕಾಣುತ್ತಿಲ್ಲ. ಇದರಿಂದ ಉದ್ದೇಶಿತ ಫಲಿತಾಂಶ ಪಡೆಯಲು ಸಾಧ್ಯವೇ ಎನ್ನುವುದಕ್ಕೆ ಸರ್ಕಾರ ಮತ್ತು ಆರ್‌ಬಿಐ ಸೂಕ್ತ ಸಮಜಾಯಿಷಿ ನೀಡಬೇಕಾಗಿದೆ.

ಸಾಲ ವಸೂಲಾತಿ ಮತ್ತು ದಿವಾಳಿ ಸಂಹಿತೆ  ವ್ಯವಸ್ಥೆ ಇನ್ನೂ ಆರಂಭಿಕ ಹಂತದಲ್ಲಿ ಇರುವುದರಿಂದ ಕಾಲಮಿತಿ ಒಳಗೆ ಸಾಲ ವಸೂಲಾತಿ ಪ್ರಕ್ರಿಯೆ ಪರಿಪೂರ್ಣಗೊಳ್ಳುವ ಕುರಿತ ಅನುಮಾನಗಳಿಗೂ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ನೆಪದಲ್ಲಿ ಸಾರ್ವಜನಿಕರ ಹಣ ವೃಥಾ ಪೋಲಾಗದಂತೆ,  ಬ್ಯಾಂಕ್‌ಗಳು ಠೇವಣಿದಾರರ ವಿಶ್ವಾಸಕ್ಕೆ ಎರವಾಗದಂತೆ ಎಚ್ಚರವನ್ನೂ ವಹಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.