ADVERTISEMENT

ನೋಟಾ: ಬಯಲಿಗೆ ಬಂತು ಅನುಕೂಲಸಿಂಧು ರಾಜಕಾರಣ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2017, 19:30 IST
Last Updated 4 ಆಗಸ್ಟ್ 2017, 19:30 IST
ನೋಟಾ: ಬಯಲಿಗೆ ಬಂತು ಅನುಕೂಲಸಿಂಧು ರಾಜಕಾರಣ
ನೋಟಾ: ಬಯಲಿಗೆ ಬಂತು ಅನುಕೂಲಸಿಂಧು ರಾಜಕಾರಣ   

ಈ ರಾಜಕೀಯ ಪಕ್ಷಗಳೇ ಹೀಗೆ. ತಮಗೆ ಲಾಭ ಆಗುವುದಾದರೆ ಒಂದು ನಿಲುವು; ತೊಂದರೆ ಆಗುವುದಾದರೆ ಇನ್ನೊಂದು ನಿಲುವು. ಅವುಗಳ ಈ ಅನುಕೂಲಸಿಂಧು ನೀತಿಗೆ ಸುಪ್ರೀಂ ಕೋರ್ಟ್ ಸರಿಯಾಗಿಯೇ ಚಾಟಿ ಬೀಸಿದೆ. ಇದೇ 8ರಂದು ಗುಜರಾತ್‌ನಿಂದ ರಾಜ್ಯಸಭೆಗೆ ನಡೆಯಬೇಕಿರುವ ಚುನಾವಣೆ ಮುಂದೂಡಬೇಕು ಅಥವಾ ಅಲ್ಲಿ ‘ನೋಟಾ’ (ಯಾರಿಗೂ ಮತ ಇಲ್ಲ) ಚಲಾಯಿಸುವ ಹಕ್ಕು ರದ್ದು ಮಾಡಬೇಕು ಎಂಬ ಕಾಂಗ್ರೆಸ್ ಅರ್ಜಿಯನ್ನು ಅದು ತಿರಸ್ಕರಿಸಿದೆ. ‘ರಾಜ್ಯಸಭೆ ಚುನಾವಣೆಗಳಲ್ಲಿ ಈ ಅವಕಾಶ 2014ರಿಂದಲೂ ಇದೆ. ಆಗ ಸುಮ್ಮನಿದ್ದು ಈಗೇಕೆ ಪ್ರಶ್ನಿಸುತ್ತಿದ್ದೀರಿ’ ಎಂದೂ ತರಾಟೆಗೆ ತೆಗೆದುಕೊಂಡಿದೆ. ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ‘ನೋಟಾ’ ಬೇಡ ಎಂದು ಬಿಜೆಪಿ ಕೂಡ ಚುನಾವಣಾ ಆಯೋಗಕ್ಕೆ ಮೊರೆ ಇಟ್ಟಿದೆ. ಇವನ್ನೆಲ್ಲ ನೋಡಿದರೆ ಎರಡೂ ಪಕ್ಷಗಳಿಗೂ ಈಗ ‘ನೋಟಾ’ ಬೇಕಿಲ್ಲ. ಏಕೆಂದರೆ ಗುಜರಾತ್‌ನಲ್ಲಿ ತಮ್ಮ ತಮ್ಮ ಪಕ್ಷದ ಸದಸ್ಯರೇ ಚುನಾವಣೆಯಲ್ಲಿ ಕೈಕೊಡಬಹುದು ಎಂಬ ಭಯ.

ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಸಾರವಾಗಿ ನೋಟಾ ಜಾರಿಗೆ ಬಂದದ್ದು 2013ರ ಅಕ್ಟೋಬರ್‌ನಿಂದ. ಆಗ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ಅವಕಾಶ ಇತ್ತು. ಇವರೆಡೂ ಗುಪ್ತ ಮತದಾನ ಪದ್ಧತಿಯಲ್ಲಿ ನಡೆಯುವ ನೇರ ಚುನಾವಣೆಗಳು. ಮುಂದೆ 2014ರ ಜನವರಿ 24ರ ನಂತರ ರಾಜ್ಯಸಭೆ ಚುನಾವಣೆಗಳಲ್ಲೂ ಈ ಹಕ್ಕು ಚಲಾವಣೆಯ ಅವಕಾಶ ಕಲ್ಪಿಸಲಾಯಿತು. ಇದು ಪರೋಕ್ಷ ಚುನಾವಣೆ. ಇಲ್ಲಿ ಶಾಸಕರಿಗೆ ಮಾತ್ರ ಮತದಾನದ ಹಕ್ಕಿದೆ. ಅಲ್ಲದೆ ಇವರು ತಮ್ಮ ಪಕ್ಷದ ಪ್ರತಿನಿಧಿಗೆ ಮತಪತ್ರ ತೋರಿಸುವುದು ಕಡ್ಡಾಯ. ಒಂದು ವೇಳೆ ಪಕ್ಷದ ವಿಪ್‌ ಉಲ್ಲಂಘಿಸಿ ಬೇರೆ ಅಭ್ಯರ್ಥಿಗೆ ಮತ ಹಾಕಿದರೂ ಅಥವಾ ‘ಯಾರಿಗೂ ಮತ ಇಲ್ಲ’ ಎಂದು ನಮೂದಿಸಿದರೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ. ಸದಸ್ಯತ್ವ ರದ್ದಾಗುವುದಿಲ್ಲ. ಹೆಚ್ಚೆಂದರೆ ಅಂತಹವರನ್ನು ಪಕ್ಷದಿಂದ ಹೊರ ಹಾಕಬಹುದು.

ನೋಟಾ ಜಾರಿ ನಂತರ ರಾಜ್ಯಸಭೆಗೆ ಎಲ್ಲ ರಾಜ್ಯಗಳಿಂದ ದ್ವೈವಾರ್ಷಿಕ ಚುನಾವಣೆಗಳು ಮತ್ತು 25 ಉಪ ಚುನಾವಣೆಗಳು ನಡೆದಿವೆ. ನಮ್ಮ ರಾಜ್ಯದಲ್ಲಿಯೂ ಕಳೆದ ವರ್ಷದ ಜೂನ್‌ 11ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಐವರು ಅಭ್ಯರ್ಥಿಗಳಿದ್ದರು. ಇಲ್ಲಿಯೂ ಮತಪತ್ರದಲ್ಲಿ ನೋಟಾ ಅವಕಾಶ ಇತ್ತು. ಜೆಡಿಎಸ್‌ನ 8 ಸದಸ್ಯರು ಕಾಂಗ್ರೆಸ್‌ ಪರವಾಗಿ ಅಡ್ಡಮತ ಚಲಾಯಿಸಿದ್ದರು. ಜೆಡಿಎಸ್‌ ಅಭ್ಯರ್ಥಿಯ ನಾಮಪತ್ರಕ್ಕೆ ಸಹಿ ಹಾಕಿದ್ದ 10 ಮಂದಿ ಪಕ್ಷೇತರ ಮತ್ತು ಸಣ್ಣ ಪಕ್ಷಗಳ ಶಾಸಕರು ಬೆಳಗಾಗುವುದರಲ್ಲಿ ಕಾಂಗ್ರೆಸ್ ಕಡೆ ವಾಲಿದ್ದರು. ಇಷ್ಟೆಲ್ಲ ನಡೆದರೂ ಯಾವ ಪಕ್ಷವೂ ನೋಟಾ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಏಕೆಂದರೆ ಅವಕ್ಕೇನೂ ತೊಂದರೆ ಆಗಿರಲಿಲ್ಲ. ಯಾರೂ ನೋಟಾ ಚಲಾಯಿಸಿರಲಿಲ್ಲ. ಈಗ ಕಾಂಗ್ರೆಸ್– ಬಿಜೆಪಿ ಎರಡಕ್ಕೂ ಏಕಾಏಕಿ ನೋಟಾ ಅಪಥ್ಯವಾಗಿದೆ. ಇದಕ್ಕೆ ಕಾರಣ ಬಹಳ ಸ್ಪಷ್ಟ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರಮಾಪ್ತ ಅಹ್ಮದ್‌ ಪಟೇಲ್‌ರನ್ನು ಈ ಸಲವೂ ಗುಜರಾತ್‌ನಿಂದ ರಾಜ್ಯಸಭೆಗೆ ಕಳಿಸಲೇಬೇಕು ಎಂದು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ, ಅವರನ್ನು ಸೋಲಿಸಲೇಬೇಕು ಎಂದು ಹಟ ತೊಟ್ಟು ಆ ಪಕ್ಷದ ಕೆಲ ಶಾಸಕರನ್ನು ತನ್ನೆಡೆ ಸೆಳೆದುಕೊಂಡ ಬಿಜೆಪಿ, ಉಳಿದವರಿಗೂ ಗಾಳ ಹಾಕಿದೆ. ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌, ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿ ಅವರನ್ನೆಲ್ಲ ತಂದು ಇಟ್ಟಿದೆ. ಅತ್ತ ಗುಜರಾತ್‌ ಬಿಜೆಪಿಯೂ ಭಿನ್ನಮತದಿಂದ ಮುಕ್ತವಾಗಿಲ್ಲ. ಹೀಗಾಗಿ ಎರಡೂ ಪಕ್ಷಗಳಿಗೂ ‘ನೋಟಾ’ ಗುಮ್ಮನ ಹೆದರಿಕೆ.

ADVERTISEMENT

ಆದರೂ ನೋಟಾ ಕುರಿತ ಸಂವಿಧಾನಾತ್ಮಕ ಪ್ರಶ್ನೆಗಳೂ ಇವೆ. ‘ಕೋರ್ಟ್ ಹೇಳಿರುವುದು ನೇರ ಚುನಾವಣೆಗೆ ಮಾತ್ರ; ಪರೋಕ್ಷ ಚುನಾವಣೆಗೆ ಅಲ್ಲ. ಅಲ್ಲದೆ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ಇಲ್ಲದೆ ಚುನಾವಣಾ ಆಯೋಗ ಇದನ್ನು ಆದೇಶವೊಂದರ ಮೂಲಕ ಜಾರಿಗೊಳಿಸಿರುವುದು ತಪ್ಪು’ ಎಂಬ ಆಕ್ಷೇಪವನ್ನು ಪರಿಶೀಲನೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿದೆ. ಮುಂದಿನ ವಿಚಾರಣೆಯನ್ನು ಸೆ. 18ಕ್ಕೆ ನಿಗದಿ ಮಾಡಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ಸಮಾಧಾನಪಟ್ಟುಕೊಳ್ಳಬಹುದು. ಇನ್ನಾದರೂ ಇಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳು ಅನುಕೂಲಸಿಂಧು ಧೋರಣೆ ಬಿಡಬೇಕು. ನ್ಯಾಯಾಂಗದ ಮೊರೆ ಹೋಗುವ, ಶಾಸನಾತ್ಮಕ ಲೋಪಗಳ ಆಶ್ರಯ ಪಡೆಯುವ ಬದಲು ತಮ್ಮ ತಮ್ಮ ಶಾಸಕರನ್ನು ಹೇಗೆ ಒಟ್ಟಾಗಿ ಇಟ್ಟುಕೊಳ್ಳಬೇಕು ಎಂಬುದರ ಕಡೆಗೆ ಗಮನ ಕೊಡಬೇಕು. ಭಿನ್ನಮತ, ಪಕ್ಷಾಂತರ, ವಿಪ್‌ ಉಲ್ಲಂಘನೆಗಳಿಗೆ ಜನತಂತ್ರದಲ್ಲಿ ಅದೇ ಶಾಶ್ವತ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.