ADVERTISEMENT

ಪತ್ರಕರ್ತರಿಗೆ ಜೈಲು ಶಿಕ್ಷೆ: ಸದನದ ಏಕಪಕ್ಷೀಯ ತೀರ್ಮಾನ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 19:30 IST
Last Updated 27 ಜೂನ್ 2017, 19:30 IST
ಪತ್ರಕರ್ತರಿಗೆ ಜೈಲು ಶಿಕ್ಷೆ: ಸದನದ ಏಕಪಕ್ಷೀಯ ತೀರ್ಮಾನ ಸರಿಯಲ್ಲ
ಪತ್ರಕರ್ತರಿಗೆ ಜೈಲು ಶಿಕ್ಷೆ: ಸದನದ ಏಕಪಕ್ಷೀಯ ತೀರ್ಮಾನ ಸರಿಯಲ್ಲ   

ಇದು ಕಾಕತಾಳೀಯವಂತೂ ಇರಲಿಕ್ಕಿಲ್ಲ. 1975ರ ಜೂನ್‌ 25ರಂದು ದೇಶದ ಮೇಲೆ ತುರ್ತು ಸ್ಥಿತಿ ಹೇರಿ ಪತ್ರಿಕಾ ಸ್ವಾತಂತ್ರ್ಯ  ಕಸಿದುಕೊಂಡು ಪತ್ರಕರ್ತರಿಗೆ ಜೈಲು, ಶಿಕ್ಷೆಯ ಬೆದರಿಕೆ ಹಾಕುವಾಗ ಕೇಂದ್ರದಲ್ಲಿ ಇದ್ದದ್ದು ಕಾಂಗ್ರೆಸ್‌ ಸರ್ಕಾರ.  ಈಗ ನಮ್ಮ ರಾಜ್ಯದಲ್ಲಿ ಇರುವುದೂ ಕಾಂಗ್ರೆಸ್ ಪಕ್ಷದ ಸರ್ಕಾರ. ಅದೇ ಪಕ್ಷ ಬಹುಮತ ಹೊಂದಿರುವ ವಿಧಾನಸಭೆಯು, ಇಬ್ಬರು ಪತ್ರಕರ್ತರನ್ನು ಜೈಲಿಗೆ ಹಾಕುವ ನಿರ್ಣಯ ತೆಗೆದುಕೊಂಡಿದೆ. ಆ ನಿರ್ಣಯ ಜಾರಿಗೆ  ಸರ್ಕಾರ ಎಲ್ಲಿಲ್ಲದ ಉತ್ಸಾಹ ತೋರಿಸುತ್ತಿದೆ. ಇದು, ಆಗಿನ ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಈಗಲೂ ನೆನಪು  ಮಾಡಿಕೊಡುತ್ತಿದೆ.  ಅಂದರೆ, ‘ಆಳುವವರ ಧೋರಣೆ ಯಾವಾಗಲೂ ಒಂದೇ ರೀತಿ. ಕಾಲಮಾನದ ಜತೆಗೆ ಇವರು ಬದಲಾಗುವವರೂ ಅಲ್ಲ; ಇತಿಹಾಸದ ತಪ್ಪಿನಿಂದ ಪಾಠ ಕಲಿಯುವವರೂ ಅಲ್ಲ’.

‘ಹಾಯ್‌ ಬೆಂಗಳೂರು’ ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್’ ಸಂಪಾದಕ ಅನಿಲ್‌ ರಾಜ್‌ ಅವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ, ₹ 10 ಸಾವಿರ ದಂಡ ವಿಧಿಸಲು ವಿಧಾನಸಭೆಯ ಹಕ್ಕು ಬಾಧ್ಯತೆ ಸಮಿತಿ ಮಾಡಿದ ಶಿಫಾರಸು ಮತ್ತು ಅದಕ್ಕೆ ಒಪ್ಪಿಗೆ ನೀಡಿದ ವಿಧಾನಸಭೆಯ ತೀರ್ಮಾನವೇ ಚರ್ಚಾರ್ಹ. ಅದನ್ನು ಜಾರಿಗೊಳಿಸಲು, ಇಬ್ಬರೂ ಪತ್ರಕರ್ತರನ್ನು ಜೈಲಿಗೆ ಹಾಕಲು ಪೊಲೀಸರು ಭೂಮಿ ಆಕಾಶ ಒಂದು ಮಾಡುತ್ತಿದ್ದಾರೆ. ಆದರೆ ವಿಧಾನ ಪರಿಷತ್ತಿನ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ವಿ.ಆರ್‌. ಸುದರ್ಶನ್‌ ಅವರೇ ಹೇಳುವಂತೆ, ‘ಸದನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಜಾರಿ ಮಾಡುವ ಅಥವಾ ಬಿಡುವ ಅಧಿಕಾರ ಸರ್ಕಾರಕ್ಕಿದೆ. ಶಾಸಕಾಂಗದ ಕೆಲಸ ಶಾಸನ ಮಾಡುವುದೇ ಹೊರತು ಶಿಕ್ಷೆ ನೀಡುವುದಲ್ಲ’. ಈ ಹಿಂದೆಯೂ ಬೇರೆ ಬೇರೆ ವಿಷಯಗಳಿಗೆ ಸಂಬಂಧಪಟ್ಟಂತೆ ಸದನದ ಎಷ್ಟೋ ನಿರ್ಣಯಗಳನ್ನು ಸರ್ಕಾರ ಜಾರಿಗೆ ತಂದಿಲ್ಲ. ಈ ವಿಚಾರದಲ್ಲಿ ಮಾತ್ರ ಅದೆಂತಹ ಅವಸರವೋ ಗೊತ್ತಿಲ್ಲ.

ತಮ್ಮ ವಿರುದ್ಧ ಈ ಇಬ್ಬರೂ ಪತ್ರಕರ್ತರು ಅವಹೇಳನಕಾರಿ ಲೇಖನ ಪ್ರಕಟಿಸಿದ್ದಾರೆ ಎಂದು ಇಬ್ಬರು ಶಾಸಕರು ಸದನಕ್ಕೆ ದೂರು ಸಲ್ಲಿಸಿದ್ದರು. ಆದರೆ, ಲೇಖನ ಪ್ರಕಟಣೆಯಿಂದ ಸದನದ ಒಳಗೆ ಶಾಸಕರ ಕಾರ್ಯ ನಿರ್ವಹಣೆಗೆ  ಏನೂ ಅಡ್ಡಿಯಾಗಿರಲಿಲ್ಲ.  ವಾಸ್ತವವಾಗಿ ಇದು ಹಕ್ಕುಚ್ಯುತಿಯೂ ಅಲ್ಲ, ಸದನದ ವ್ಯಾಪ್ತಿಗೆ ಬರುವ ವಿಷಯವೂ ಆಗಿರಲಿಲ್ಲ. ಲೇಖನದಿಂದ ನೋವಾಗಿದ್ದರೆ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹಾಕಲು ಕಾನೂನಿನಲ್ಲಿಯೇ ಅವಕಾಶ ಇದೆ. ಅದನ್ನು ಬಳಸಿಕೊಳ್ಳಬೇಕಾಗಿತ್ತು. ಅದನ್ನೆಲ್ಲ ಬಿಟ್ಟು ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲಾಯಿತು.

ADVERTISEMENT

ಸದನದ ನಿರ್ಣಯ ಅಂತಿಮ; ಅದನ್ನು ನ್ಯಾಯಾಲಯದಲ್ಲಿಯೂ ಪ್ರಶ್ನಿಸಲು ಬರುವುದಿಲ್ಲ ಎನ್ನುವ ವಾದ ಕೇಳಿಬರುತ್ತಿದೆ. ಹೀಗಿರುವಾಗ,   ಸಂವಿಧಾನದ ಚೌಕಟ್ಟಿನಲ್ಲಿ ಅಪರಿಮಿತ ಅಧಿಕಾರ ಇರುವ ಶಾಸನಸಭೆ ಅದನ್ನು ಚಲಾಯಿಸುವಾಗ ಬಹಳಷ್ಟು ಸಂಯಮ ಪ್ರದರ್ಶಿಸಬೇಕು.  ಅದು ನ್ಯಾಯ. ಸಮಿತಿಯ ಶಿಫಾರಸನ್ನು ಅಂಗೀಕರಿಸುವ ಮುನ್ನ ‘ಆರೋಪ ಎದುರಿಸುತ್ತಿರುವ ವ್ಯಕ್ತಿಗಳಿಗೆ’ ವಿವರಣೆ ನೀಡಲು ಅವಕಾಶವನ್ನು ಕೊಡಬೇಕಾಗಿತ್ತು. ಸಹಜ ನ್ಯಾಯ ತತ್ವವನ್ನು ಪಾಲಿಸಬೇಕಾಗಿತ್ತು. ಆದರೆ ಅದ್ಯಾವುದೂ ನಡೆಯಲೇ ಇಲ್ಲ. ಹಕ್ಕುಚ್ಯುತಿ ಎಂದರೆ ಏನು? ಈ ಪ್ರಕರಣದಲ್ಲಿ ಸದನದ ನಾಲ್ಕು ಗೋಡೆಗಳ  ಒಳಗೆ ಎಲ್ಲಿ, ಹೇಗೆ ಚ್ಯುತಿಯಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅಲ್ಲದೆ, ಶಿಕ್ಷೆಯ ವಿಚಾರದಲ್ಲಿ ಶಾಸಕರಲ್ಲಿಯೇ ಒಮ್ಮತ ಇಲ್ಲ ಎನ್ನುವುದು ಬಹಿರಂಗಕ್ಕೆ ಬಂದಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ, ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಬೆಲೆ ಕೊಡದೇ ಏಕಪಕ್ಷೀಯವಾಗಿ ಶಿಕ್ಷೆ ವಿಧಿಸುವುದು ಶಾಸಕಾಂಗದ ಅಧಿಕಾರದ ದುರುಪಯೋಗ, ಪ್ರಜಾಸತ್ತೆಯ ಮೂಲ ತತ್ವಗಳಿಗೇ ವಿರುದ್ಧ, ಮಾಧ್ಯಮಗಳ ತೋಳು ತಿರುಚುವ ಮತ್ತು ಬೆದರಿಕೆ ಹಾಕುವ ಯತ್ನ. ಸದನದ ಹೊರಗೆ ಶಾಸಕರೊಬ್ಬರ ನಡವಳಿಕೆ, ಅಕ್ರಮ, ಅವ್ಯವಹಾರಗಳನ್ನು ಪ್ರಶ್ನಿಸಿದರೆ ಅದಕ್ಕೂ ಹಕ್ಕುಚ್ಯುತಿ ಎಂಬ ಬ್ರಹ್ಮಾಸ್ತ್ರ ಬಳಸಿ ಬಾಯಿ ಮುಚ್ಚಿಸಲು ಯತ್ನಿಸುವುದು ಸರಿಯಲ್ಲ. ಮುಂದೊಂದು ದಿನ ಅದೇ ತಿರುಗುಬಾಣವಾದೀತು. ಆ ಅರಿವು, ಸೂಕ್ಷ್ಮತೆ ನಮ್ಮ ಜನಪ್ರತಿನಿಧಿಗಳಿಗೆ ಇರಬೇಕು. ತಪ್ಪನ್ನು ಯಾರೂ ಸಮರ್ಥಿಸುವುದಿಲ್ಲ. ಆದರೆ ಯಾವುದು ಸರಿ– ಯಾವುದು ತಪ್ಪು ಎಂದು ತೀರ್ಮಾನಿಸಲು ಕೆಲವೊಂದು ನೀತಿ ನಿಯಮಗಳಿವೆ.  ಈ ಪ್ರಕರಣದಲ್ಲಿ ಅವುಗಳ ಪಾಲನೆಯಂತೂ ಆಗಿಲ್ಲ ಎಂದೇ ಹೇಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.