ADVERTISEMENT

ಪದತ್ಯಾಗವೊಂದೇ ದಾರಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2014, 19:30 IST
Last Updated 26 ಮಾರ್ಚ್ 2014, 19:30 IST

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ ಶ್ರೀನಿವಾಸನ್‌ ಅವರ ಬಂಡತನದ ವರ್ತನೆಗೆ ಸುಪ್ರೀಂ ಕೋರ್ಟ್‌ ಚಾವಟಿ ಬೀಸಿದ್ದು ಸರಿಯಾಗಿದೆ. ಐಪಿಎಲ್‌ ಆರನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತ ವಾತಾವರಣದಲ್ಲಿ ನಡೆಯಬೇಕಿದ್ದರೆ ಶ್ರೀನಿವಾಸನ್‌  ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಕೋರ್ಟ್‌ ತಾಕೀತು ಮಾಡಿದೆ.

ಚೆನ್ನೈ ಸೂಪರ್‌ಕಿಂಗ್ಸ್‌ನ ಅಧಿಕಾರಿ ಗುರುನಾಥ್‌ ಮೇಯಪ್ಪನ್‌ ಬೆಟ್ಟಿಂಗ್‌ ಹಗರಣದಲ್ಲಿ ಪಾಲ್ಗೊಂಡಿರುವುದಕ್ಕೆ ಸಾಕ್ಷಿಗಳಿವೆ ಎಂದು ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ನೇತೃತ್ವದ ಸಮಿತಿಯ ವರದಿಯಲ್ಲಿ  ಹೇಳಲಾಗಿದೆ. ಮೇಯಪ್ಪನ್‌ ಅವರು ಶ್ರೀನಿವಾಸನ್‌ ಅವರ ಅಳಿಯ. ಚೆನ್ನೈ ಸೂಪರ್‌ಕಿಂಗ್ಸ್‌ ತಂಡಕ್ಕೆ ಶ್ರೀನಿವಾಸನ್‌ ಮಾಲೀಕರು. ಪರಿಸ್ಥಿತಿ ಹೀಗಿರುವಾಗ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಅನುಕೂಲವಾಗುವಂತೆ ಶ್ರೀನಿವಾಸನ್‌ ತಮ್ಮ ಸ್ಥಾನವನ್ನು ತೊರೆಯಬೇಕು ಎಂದು ವರ್ಷದ ಹಿಂದೆ ಕ್ರಿಕೆಟ್‌ ವಲಯದಲ್ಲಿ ಭಾರೀ  ಜನಾಭಿಪ್ರಾಯ ಮೂಡಿ ಬಂದಿತ್ತು.

 ಶ್ರೀನಿವಾಸನ್‌ ಜಾಣ ಕಿವುಡು ಪ್ರದರ್ಶಿಸಿದ್ದರು. ಅಂದು ಅವರು ತಮ್ಮ ಸ್ಥಾನದಲ್ಲಿಯೇ ಮುಂದುವರಿಯಲು ನಡೆಸಿದ ತಂತ್ರಗಾರಿಕೆ ಅವರೊಬ್ಬ ಲಜ್ಜೆಗೇಡಿ ಎಂಬುದನ್ನು ಜಗಜ್ಜಾಹೀರು ಗೊಳಿಸಿತ್ತು. ಆದರೆ ಇದೀಗ   ನ್ಯಾಯಮೂರ್ತಿ­ಗಳಾದ ಎ.ಕೆ.ಪಟ್ನಾಯಕ್‌ ಮತ್ತು ಕಲೀಫುಲ್ಲಾ ಅವರು ಇರುವ ಪೀಠ, ‘ಕುರ್ಚಿಗೆ ಅಂಟಿಕೊಂಡಿರುವ ಶ್ರೀನಿವಾಸನ್‌ ವರ್ತನೆ ವಾಕರಿಕೆ ಬರಿಸು ವಂತಿದೆ’ ಎಂದಿದೆ. ಶ್ರೀನಿವಾಸನ್‌ ವರ್ತನೆಯಿಂದ ನ್ಯಾಯಮೂರ್ತಿಗಳೇ ರೋಸಿ ಹೋಗಿದ್ದಾರೆ. ಇದು ಈ ದೇಶದ ಕ್ರಿಕೆಟ್‌ ಕ್ಷೇತ್ರವೇ ನಾಚಿ ತಲೆತಗ್ಗಿಸುವಂತಹ ಸಂಗತಿಯಾಗಿದೆ.

ಭಾರತದಲ್ಲಿ ಕ್ರಿಕೆಟ್‌ ಅತ್ಯಂತ ಜನಪ್ರಿಯ ಕ್ರೀಡೆ. ಹೀಗಾಗಿ ಬಿಸಿಸಿಐನಲ್ಲಿ ಹಣದ ಹೊಳೆ ಹರಿಯುತ್ತಿದೆ. ಕ್ರಿಕೆಟ್‌ ಚಟುವಟಿಕೆ ಸಂಪೂರ್ಣವಾಗಿ ವಾಣಿಜ್ಯೀಕೃತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಬಹಳ ಎಚ್ಚರಿಕೆ ವಹಿಸಬೇಕಿತ್ತು.

ವಹಿವಾಟುಗಳೆಲ್ಲವೂ  ಪಾರದರ್ಶಕವಾಗಿರಬೇಕಿತ್ತು. ಆದರೆ ಹಾಗಾಗಿಲ್ಲ. ಆದುದರಿಂದಲೇ ಇಂತಹ ವಿವಾದಗಳ ಹುತ್ತ ಬೆಳೆದಿದೆ. ಬಿಸಿಸಿಐ ಒಂದು ಸಾರ್ವಜನಿಕ ಸಂಸ್ಥೆ. ಸರ್ಕಾರವೂ ಇದರ ಆಗುಹೋಗುಗಳ ಮೇಲೆ ಒಂದು ಕಣ್ಣಿಡಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಬಿಸಿಸಿಐ ಅನ್ನು ಆರ್‌ಟಿಐ ಕಾಯ್ದೆಯ ವ್ಯಾಪ್ತಿಯೊಳಗೆ ತರುವುದರಿಂದ ಕ್ರಿಕೆಟ್‌ ಆಡಳಿತ ಸ್ವಲ್ಪ ಮಟ್ಟಿಗಾದರೂ ಸುಧಾರಿಸಬಹುದು. ಕ್ರಿಕೆಟ್‌ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲದ್ದರಿಂದಲೇ ವರ್ಷದ ಹಿಂದೆಯೂ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಆದರೆ ಶ್ರೀನಿವಾಸನ್‌ ಗಾದಿ ಬಿಟ್ಟು ಏಳಲಿಲ್ಲ. ಸದ್ಯದಲ್ಲೇ ಅವರು ಅಂತರ­ರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥ ಪಟ್ಟವನ್ನೂ ಏರಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಆದರೆ ಇದೀಗ ಕೋರ್ಟ್‌ ‘ಶ್ರೀನಿವಾಸನ್‌ ಎರಡು ದಿನಗಳ ಒಳಗೆ ಅಧ್ಯಕ್ಷ ಸ್ಥಾನ ತ್ಯಜಿಸಬೇಕು’ ಎಂದು ಗಡುವು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಐಸಿಸಿ ಮುಖ್ಯಸ್ಥ ಸ್ಥಾನದತ್ತ ಹೆಜ್ಜೆ ಇಡಲು ಶ್ರೀನಿವಾಸನ್‌ ಅವರಿಗೆ ನೈತಿಕತೆ ಇದೆಯೇ ಎಂಬ ಪ್ರಶ್ನೆ ಏಳುತ್ತಿದೆ. ಅವರು ಮೊದಲು ಬಿಸಿಸಿಐ ಅಧ್ಯಕ್ಷ ಸ್ಥಾನ ತ್ಯಜಿಸಿ, ತನಿಖೆಗೆ ಸಹಕರಿಸಲಿ. ಪರಿಶುದ್ಧರಾಗಿ ಬಂದ ನಂತರ ಕ್ರಿಕೆಟ್‌ ಆಡಳಿತದತ್ತ ಹೆಜ್ಜೆ ಇಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.