ADVERTISEMENT

ಪೆಟ್ರೋಲ್‌, ಡೀಸೆಲ್‌ ದುಬಾರಿ ಶಾಶ್ವತ ಪರಿಹಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಪೆಟ್ರೋಲ್‌, ಡೀಸೆಲ್‌ ದುಬಾರಿ ಶಾಶ್ವತ ಪರಿಹಾರ ಅಗತ್ಯ
ಪೆಟ್ರೋಲ್‌, ಡೀಸೆಲ್‌ ದುಬಾರಿ ಶಾಶ್ವತ ಪರಿಹಾರ ಅಗತ್ಯ   

ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ದಿನೇ ದಿನೇ ದುಬಾರಿಯಾಗುತ್ತಿವೆ. ರಾಜ್ಯದಲ್ಲಿನ ಚುನಾವಣೆ ಕಾರಣಕ್ಕೆ ತಡೆಹಿಡಿಯಲಾಗಿದ್ದ, ಪ್ರತಿ ದಿನದ ದರ ಪರಿಷ್ಕರಣೆ ನೀತಿ ಮತ್ತೆ ಜಾರಿಗೆ ಬಂದಿದೆ. ಮೂರು ವಾರಗಳ ಹೊರೆಯನ್ನು ಈಗ ಏಕಾಏಕಿ ಗ್ರಾಹಕರ ಮೇಲೆ ಹೊರಿಸಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಬರೀ ಬಳಕೆದಾರರ ಜೇಬಿಗೆ ಭಾರವಾಗುವ ಸಂಗತಿ ಇದಲ್ಲ.

ಆರ್ಥಿಕತೆ ಮೇಲೂ ಇದು ಪ್ರತ್ಯಕ್ಷ ಮತ್ತು ಪರೋಕ್ಷ ರೀತಿಯಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ. ಸರಕು ಸಾಗಾಣಿಕೆ ವೆಚ್ಚ ಹೆಚ್ಚಳಕ್ಕೆ ಪುಷ್ಟಿ ನೀಡಿ ಅಗತ್ಯ ವಸ್ತುಗಳ ಬೆಲೆಗಳೂ ದುಬಾರಿಯಾಗಲಿವೆ.

ಇಂಧನ ಬೆಲೆ ನಿಯಂತ್ರಣವನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ ಎನ್ನುವುದು ಬರೀ ಬೂಟಾಟಿಕೆ ಎನ್ನುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದುಬಾರಿ ಮಟ್ಟದಲ್ಲಿ ಇದ್ದರೂ, ಮೂರು ವಾರಗಳ ಕಾಲ ಇಂಧನ ಬೆಲೆಗಳ ಪರಿಷ್ಕರಣೆಯನ್ನು ರಾಜಕೀಯ ಕಾರಣಕ್ಕಾಗಿ ತಡೆಹಿಡಿಯಲಾಗಿತ್ತು.

ADVERTISEMENT

ಇದರಿಂದ ತೈಲ ಮಾರಾಟ ಸಂಸ್ಥೆಗಳ ಲಾಭಕ್ಕೆ ಖೋತಾ ಬಿದ್ದಿತ್ತು. ₹ 500 ಕೋಟಿಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಈ ಕೊರತೆ ಭರ್ತಿ ಮಾಡಿಕೊಳ್ಳಲು ಈಗ ತರಾತುರಿಯಲ್ಲಿ ಪ್ರತಿದಿನ ಬೆಲೆ ಹೆಚ್ಚಿಸಲಾಗುತ್ತಿದೆ. ಒಂದು ವಾರದಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹ 1.61ರಂತೆ ತುಟ್ಟಿಯಾಗಿದೆ. 56 ತಿಂಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ದುಬಾರಿ ಇಂಧನವು ಹಣದುಬ್ಬರ ಹೆಚ್ಚಳಕ್ಕೂ ಕಾರಣವಾಗುತ್ತಿದೆ.

ಇನ್ನೊಂದೆಡೆ ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ₹ 68ರ ಗಡಿ ದಾಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಏರುಗತಿಯಲ್ಲಿಯೇ ಇದೆ. ಈ ಎಲ್ಲ ವಿದ್ಯಮಾನಗಳು ದೇಶಿ ಆರ್ಥಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ. ವಿತ್ತೀಯ ಶಿಸ್ತು ಕಾಯ್ದುಕೊಳ್ಳುವುದು ಭಾರಿ ಸವಾಲಿನ ಕೆಲಸ ಆಗಲಿದೆ. ಚೇತರಿಕೆಯ ಹಾದಿಯಲ್ಲಿ ಇರುವ ಆರ್ಥಿಕತೆಗೆ ಅಡಚಣೆಗಳು ಎದುರಾಗಲಿವೆ.

ಹಣಕಾಸು ನೀತಿಯ ದಿಕ್ಕು ತಪ್ಪಲಿದೆ. ಖಾಸಗಿ ಹೂಡಿಕೆಯೂ ಕಡಿಮೆಯಾಗಲಿದೆ. ಪ್ರತಿಕೂಲ ಹಣದುಬ್ಬರದ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಇಳಿಸುವುದಿಲ್ಲ. ಇದರಿಂದ ಆರ್ಥಿಕತೆಗೆ ಇನ್ನೊಂದು ಪೆಟ್ಟು ಬೀಳುತ್ತದೆ.

2014ರಲ್ಲಿ ಕಚ್ಚಾ ತೈಲದ ಬೆಲೆ ದಿಢೀರನೆ ಕುಸಿದಾಗ, ಅದರ ಲಾಭವನ್ನು ಸಂಪೂರ್ಣವಾಗಿ ಬಳಕೆದಾರರಿಗೇನೂ ಸರ್ಕಾರ ವರ್ಗಾಯಿಸಿರಲಿಲ್ಲ. ಆ ವರ್ಷ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆ ಪರಿಸ್ಥಿತಿಯ ಲಾಭ ಪಡೆದುಕೊಂಡಿತು. ಪೆಟ್ರೋಲ್  ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಶುಲ್ಕ ಏರಿಕೆಗೆ ಕಡಿಮೆ ತೈಲ ದರದ ಅನುಕೂಲವನ್ನು ಸರ್ಕಾರ ಬಳಸಿಕೊಂಡಿತು.

ಇದುವರೆಗೆ ಒಂಬತ್ತು ಬಾರಿ ಎಕ್ಸೈಸ್‌ ಶುಲ್ಕ ಹೆಚ್ಚಿಸಿರುವ ಕೇಂದ್ರ ಸರ್ಕಾರವು ಕಳೆದ ವರ್ಷ ಒಂದು ಬಾರಿ ಮಾತ್ರ ಕಡಿತ ಮಾಡಿತ್ತು. ಇದರಿಂದಾಗಿ 2016-17ರ ಅವಧಿಯಲ್ಲಿ ಕೇಂದ್ರ ಸರ್ಕಾರ ₹ 2.42 ಲಕ್ಷ ಕೋಟಿಗಳಷ್ಟು ಗಳಿಕೆ ಕಂಡಿತ್ತು. ಇಂಧನಗಳ ಮೇಲಿನ ತೆರಿಗೆಗಳು ಸರ್ಕಾರಗಳ ಬೊಕ್ಕಸ ಭರ್ತಿ ಮಾಡುವ ಪ್ರಮುಖ ಮೂಲಗಳಾಗಿವೆ. ಇದೇ ಕಾರಣಕ್ಕಾಗಿಯೇ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿಲ್ಲ.

ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ಆಗ್ರಹಕ್ಕೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಎಕ್ಸೈಸ್ ಶುಲ್ಕ ಕಡಿತ ಮಾಡಿದರೆ, ಗ್ರಾಹಕರ ಮೇಲಿನ ಅಷ್ಟಿಷ್ಟು ಹೊರೆಯನ್ನಾದರೂ ತಗ್ಗಿಸಬಹುದು. ಇದು ತಾತ್ಕಾಲಿಕ ಕ್ರಮವಷ್ಟೆ. ಇಂಧನ ಸುರಕ್ಷತೆಯ ದೀರ್ಘಾವಧಿ ರೂಪುರೇಷೆ ಸಿದ್ಧಪಡಿಸಿ, ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆಯೂ ಸರ್ಕಾರ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.