ADVERTISEMENT

ಪ್ರಜಾಪ್ರಭುತ್ವದ ಚೈತನ್ಯ ಎಂದಿಗೂ ಕುಂದದಿರಲಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2015, 19:30 IST
Last Updated 25 ಜೂನ್ 2015, 19:30 IST

ಸಾಂಸ್ಕೃತಿಕ ರಾಷ್ಟ್ರೀಯವಾದದ ಪರಿಕಲ್ಪನೆ  ದೊಡ್ಡ ಮಟ್ಟದಲ್ಲಿ ತಲೆಎತ್ತುತ್ತಿರುವುದು ಆತಂಕಕಾರಿ.
ತುರ್ತುಪರಿಸ್ಥಿತಿಯ  ನಂತರದ ನಲವತ್ತು ವರ್ಷಗಳಲ್ಲಿ ನಮ್ಮ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಸ್ಥಿತ್ಯಂತರಗಳಾಗಿವೆ. ಹೀಗಿದ್ದೂ ನಾಲ್ಕು ದಶಕಗಳ ಹಿಂದೆ ರಾಷ್ಟ್ರ ಅನುಭವಿಸಿದ್ದ ತುರ್ತುಪರಿಸ್ಥಿತಿಯ ಕರಾಳ ನೆನಪುಗಳನ್ನು ಮರೆಯುವುದು ಅಸಾಧ್ಯ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಗಳಿಗೆ, ಆಲೋಚನೆಗಳಿಗೆ ಈ ಕರಾಳ ನೆನಪುಗಳು ಪ್ರೇರಕವಾಗಿರಬೇಕು ಎಂಬುದು ಮುಖ್ಯ.

ಬಹುಸಂಸ್ಕೃತಿಯ ನಾಡಾಗಿರುವ ಭಾರತ, ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ  ಪ್ರಜಾಪ್ರಭುತ್ವ ಪರಂಪರೆಯ ಬಗ್ಗೆ ನಮಗಿರುವ  ಹೆಮ್ಮೆ ಸರಿಯಾದುದು. ನಮ್ಮ ನೆರೆ ರಾಷ್ಟ್ರಗಳು ಅಥವಾ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ವಿವಿಧ ರೀತಿಗಳಲ್ಲಿ ಸರ್ವಾಧಿಕಾರದ ಆಳ್ವಿಕೆಗಳನ್ನು ಕಾಣುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಇದು ಹೆಗ್ಗಳಿಕೆಯ ವಿಚಾರವೇ ಹೌದು. ನಿಜ, ತುರ್ತುಪರಿಸ್ಥಿತಿಯ ಯುಗದಿಂದ ಹೊರ ಬಂದ ನಂತರ ಅಂತಹ ಸ್ಥಿತಿ ಮರುಕಳಿಸದಂತೆ  ಪ್ರಯತ್ನಗಳನ್ನೂ ಮಾಡಲಾಗಿದೆ. ಸಾಂವಿಧಾನಿಕ ಹಾಗೂ ಸಾಂಸ್ಥಿಕ ವ್ಯವಸ್ಥೆಗಳನ್ನು ಗಟ್ಟಿಗೊಳಿಸಲಾಗಿದೆ. ಸದ್ಯದ ಸಮಕಾಲೀನ ವ್ಯವಸ್ಥೆಯಲ್ಲಿ ಮಾಧ್ಯಮಗಳನ್ನು ಹತ್ತಿಕ್ಕುವುದೂ  ಕಷ್ಟ. ಏಕೆಂದರೆ ಮಾಧ್ಯಮದ ಸ್ವರೂಪವೇ ಬದಲಾಗಿದೆ.

1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳನ್ನು  ನಿಯಂತ್ರಿಸಿದಂತೆ ಇಂದಿನ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವುದು ಕಷ್ಟ. ಆದರೂ ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲೂ ಅನೇಕ ರಾಷ್ಟ್ರಗಳಲ್ಲಿ  ಈಗಲೂ ಸರ್ವಾಧಿಕಾರ ಆಡಳಿತ ವ್ಯವಸ್ಥೆಗಳಿವೆ ಎಂಬುದನ್ನು ಮರೆಯಲಾಗದು. ಉದ್ಯಮ ಸಂಸ್ಥೆಗಳ ಹಿಡಿತದಲ್ಲಿರುವ ಮಾಧ್ಯಮಗಳನ್ನು ತಮಗೆ ಬೇಕಾದಂತೆ ನಿರ್ವಹಿಸಿಕೊಳ್ಳುವ ವಿಚಾರವೂ ಇಂದಿನ ದಿನಗಳಲ್ಲಿ ಸಾಧ್ಯವಿದೆ ಎಂಬುದು ಕಹಿ ವಾಸ್ತವ.  ನ್ಯಾಯಾಂಗದ ಸ್ವಾತಂತ್ರ್ಯಕ್ಕೂ ಬೆದರಿಕೆ ಇದೆ. ಹೀಗಾಗಿಯೇ ತುರ್ತುಪರಿಸ್ಥಿತಿ ಸಂದರ್ಭದ ದಿನಗಳು ಮರುಕಳಿಸದಿರಲು ಸದಾ ಎಚ್ಚರಿಕೆ ಇರಬೇಕಾದುದು ಅಗತ್ಯ.

ಸಾಂವಿಧಾನಿಕ ಹಾಗೂ ಕಾನೂನು ಸುರಕ್ಷತೆಯ  ಹೊರತಾಗಿಯೂ ಪ್ರಜಾಪ್ರಭುತ್ವವನ್ನು ನಾಶಮಾಡುವ  ಶಕ್ತಿಗಳು ಬಲವಾಗಿವೆ ಎಂಬ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಇತ್ತೀಚೆಗೆ ನೀಡಿರುವ ಎಚ್ಚರಿಕೆ  ಗಮನ ಸೆಳೆಯುವಂತಹದ್ದು.  ಈ ಮಾತು, ಈಗಿನ ಕೇಂದ್ರ ಸರ್ಕಾರದ ನಾಯಕತ್ವದ ಬಗ್ಗೆ ಅಡ್ವಾಣಿ ಅವರು ಮಾಡುತ್ತಿರುವ ಪರೋಕ್ಷ ಟೀಕೆ ಎಂಬಂತಹ ವ್ಯಾಖ್ಯಾನಗಳು ಏನಾದರೂ ಇರಲಿ, ಈ ಮಾತು ಧ್ವನಿಸುತ್ತಿರುವ ಎಚ್ಚರಿಕೆಯನ್ನಂತೂ ತಳ್ಳಿಹಾಕುವುದು ಸಾಧ್ಯವಿಲ್ಲ. ಅಧಿಕಾರದ ಕೇಂದ್ರೀಕರಣ ಹಾಗೂ ವ್ಯಕ್ತಿಪೂಜೆಯ ಪ್ರವೃತ್ತಿ ಇಂದು ಹೆಚ್ಚಾಗುತ್ತಿದೆ. ಈ ಪ್ರವೃತ್ತಿ  ಪ್ರಜಾಪ್ರಭುತ್ವದ ಆಶಯಗಳಿಗೆ ತದ್ವಿರುದ್ಧವಾದುದು ಎಂಬುದು ನೆನಪಿರಬೇಕು.

 ರಾಷ್ಟ್ರದ ಜನಸಂಖ್ಯೆಯ ಒಂದು ವರ್ಗ ಪರಕೀಯಪ್ರಜ್ಞೆ ಅನುಭವಿಸುವಂತಹ  ಸ್ಥಿತಿ ಪ್ರಜಾಪ್ರಭುತ್ವಕ್ಕೆ ಪೂರಕವಾದುದಲ್ಲ.  ರಾಜಕೀಯ, ಸಂಸ್ಕೃತಿ ಹಾಗೂ ಸಮಾಜವನ್ನು ಏಕರೂಪದ ಸಂಸ್ಕೃತಿಗೆ ಒಗ್ಗಿಸುವ ಪ್ರಯತ್ನಗಳು ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ತೀವ್ರವಾಗಿಸುವಂತಹದ್ದು. ಸಾಂಸ್ಕೃತಿಕ ರಾಷ್ಟ್ರೀಯವಾದದ ಪರಿಕಲ್ಪನೆ  ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿರುವುದು ಆತಂಕಕಾರಿ. ವಿರೋಧಿಗಳನ್ನು ದೇಶ ಬಿಟ್ಟು ಹೋಗಿ ಎಂದು ಕರೆ ನೀಡುವುದು  ಅಥವಾ  ಪ್ರತಿಪಕ್ಷವೇ ಇರಬಾರದೆಂದು ಸರ್ಕಾರ ಹಾಗೂ ರಾಜಕೀಯ ನಾಯಕರು ಬಯಸುವಂತಾದಲ್ಲಿ ಅಲ್ಲಿ  ಪ್ರಜಾಪ್ರಭುತ್ವ ಅರಳುವುದು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ, 1975ರಲ್ಲಾದಂತೆ  ತುರ್ತು ಪರಿಸ್ಥಿತಿಯ  ಘೋಷಣೆ ಆಗಬೇಕೆಂದೇನೂ ಇಲ್ಲ.  ಒಂದಲ್ಲ ಒಂದು ರೀತಿಯಲ್ಲಿ ಜನರ  ಸ್ವಾತಂತ್ರ್ಯವನ್ನು  ಅಥವಾ ಆಯ್ಕೆಗಳನ್ನು ಹತ್ತಿಕ್ಕುವ ಪರಿಸ್ಥಿತಿ  ಸಮಾಜದಲ್ಲಿ ಸೃಷ್ಟಿಯಾದಲ್ಲಿ ಅಲ್ಲಿ ತುರ್ತು ಪರಿಸ್ಥಿತಿಯ ನೆರಳು ಹಾಯುತ್ತಿದೆ ಎಂದೇ ಅರ್ಥ.

ಹೀಗಿದ್ದೂ 2015ರಲ್ಲಿ 1975ರ ರೀತಿಯ ತುರ್ತುಪರಿಸ್ಥಿತಿ ಸಾಧ್ಯವಿಲ್ಲ ಎಂದು ನಾವು ವಾದಿಸಬಹುದು. ಅದು ನಿಜವೂ ಇರಬಹುದು. ಆದರೆ ತುರ್ತುಪರಿಸ್ಥಿತಿಯನ್ನು ವಿಸ್ತೃತ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಲು ಯತ್ನಿಸಿದಲ್ಲಿ ಜನರ ಆತಂಕ ಸಹಜವಾದದ್ದು. ಪ್ರತಿರೋಧವನ್ನು ಹತ್ತಿಕ್ಕುವುದು ಅಥವಾ ಏಕರೂಪದ ಸಂಸ್ಕೃತೀಕರಣ ಆತಂಕಕಾರಿ.  ಈ ಬಗ್ಗೆ ಎಚ್ಚರ ನಿರಂತರವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT