ADVERTISEMENT

ಫಲಿತಾಂಶ ಕುಸಿತ ಗಂಭೀರ ಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2017, 20:11 IST
Last Updated 14 ಮೇ 2017, 20:11 IST
ಫಲಿತಾಂಶ ಕುಸಿತ ಗಂಭೀರ ಕ್ರಮ ಅಗತ್ಯ
ಫಲಿತಾಂಶ ಕುಸಿತ ಗಂಭೀರ ಕ್ರಮ ಅಗತ್ಯ   

ರಾಜ್ಯದಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಎರಡರಲ್ಲೂ ಫಲಿತಾಂಶ ಗಣನೀಯವಾಗಿ ಕುಸಿದಿದೆ. ಪಿಯುಸಿ ಫಲಿತಾಂಶ 6 ವರ್ಷಗಳಲ್ಲೇ ಕಳಪೆ ಮಟ್ಟದ್ದಾಗಿದ್ದರೆ ಎಸ್ಎಸ್‌ಎಲ್‌ಸಿ ಫಲಿತಾಂಶ 7 ವರ್ಷದಲ್ಲೇ ಕಡಿಮೆ ಪ್ರಮಾಣದ್ದಾಗಿದೆ.

ಪರೀಕ್ಷಾ ಪದ್ಧತಿಯಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದ್ದು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಿದ್ದು ಫಲಿತಾಂಶ ಕುಸಿಯಲು ಕಾರಣ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಈ ಹಿಂದೆ ಫಲಿತಾಂಶ ಹೆಚ್ಚು ಬರುವುದಕ್ಕೆ ಅಕ್ರಮಗಳೇ ಕಾರಣವಾಗಿದ್ದವು ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೆ ಫಲಿತಾಂಶ ಕುಸಿಯಲು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಮತ್ತು ಪೋಷಕರನ್ನು ಹೊಣೆಯಾಗಿಸಿದ್ದಾರೆ. ಆದರೆ ಇದು ಅಷ್ಟು ಸರಳವಾಗಿಲ್ಲ.

ಪರೀಕ್ಷಾ ಪದ್ಧತಿ ಸುಧಾರಣೆ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಕರ್ತವ್ಯ ನಿಜ. ಆದರೆ ಫಲಿತಾಂಶ ಕುಸಿಯಲು ಬೇರೆ ಯಾವ ಕಾರಣಗಳು ಇವೆ ಎನ್ನುವುದನ್ನೂ ಪತ್ತೆ ಮಾಡಬೇಕಿದೆ. ಎರಡೂ ಫಲಿತಾಂಶಗಳು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 67.87ರಷ್ಟು ಫಲಿತಾಂಶ ಬಂದಿದೆ. ಆದರೆ, ಪಿಯುಸಿಯಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಾಗಿ ಶೇ 52.38ಕ್ಕೆ ಕುಸಿದಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನೂ ಪತ್ತೆ ಮಾಡಬೇಕು. ಹತ್ತನೇ ತರಗತಿ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮುಂದಿದ್ದಾರೆ. ಆದರೆ ಪಿಯುಸಿ ಫಲಿತಾಂಶದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಮುಂದಿದ್ದಾರೆ.

ಯಾಕೆ ಹೀಗಾಯಿತು? ಹತ್ತನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಾಲೇಜಿಗೆ ಬಂದಾಗ ಫೇಲ್ ಆಗುವುದಕ್ಕೆ ಕಾರಣ ಏನು?

ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಗಿದ್ದು ಕಾರಣವೇ ಅಥವಾ ಬೇರೆ ಕಾರಣಗಳು ಇವೆಯೇ ಎನ್ನುವುದನ್ನೂ ಪರಿಶೀಲಿಸಬೇಕಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎರಡರಲ್ಲೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದಿದೆ. ಬೀದರ್ ಕೊನೆಯ ಸ್ಥಾನವನ್ನು ಹೊಂದಿದೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಪಿಯುಸಿ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮುಂದಿರುತ್ತವೆ. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿ ಇರುತ್ತವೆ. ಇದಕ್ಕೆ ಕಾರಣವೇನು? ಪ್ರಾದೇಶಿಕ ಅಸಮಾನತೆಯೇ ಕಾರಣವೇ ಅಥವಾ ಬೇರೆ ಯಾವುದಾದರೂ ಕಾರಣಗಳು ಇವೆಯೇ ಎನ್ನುವುದನ್ನೂ ಗಂಭೀರವಾಗಿ ಪರಿಶೀಲಿಸಬೇಕಿದೆ.

ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಪಿಯುಸಿ ಅತ್ಯಂತ ಮಹತ್ವದ ಹಂತ. ಪಿಯುಸಿಯಲ್ಲಿ ಶೇ 52ರಷ್ಟು ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಅಂದರೆ ಶೇ 48ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಸಾಧ್ಯತೆಯನ್ನು ಸದ್ಯದ ಮಟ್ಟಿಗೆ ಕಳೆದುಕೊಂಡಿದ್ದಾರೆ. ಇದು ಒಂದು ಪೀಳಿಗೆಯೇ  ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಇದು ಯಾವುದೇ ನಾಗರಿಕ ಸಮಾಜಕ್ಕೆ ಒಳ್ಳೆಯ ಸಮಾಚಾರ ಅಲ್ಲ.

ಶಿಕ್ಷಣ ಮೂಲಭೂತ ಹಕ್ಕು ಎಂದು ಪರಿಗಣಿಸಿರುವ ದೇಶದಲ್ಲಿ ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ಹೊರಗೆ ಇರುವುದು ಆರೋಗ್ಯಪೂರ್ಣ ಸಮಾಜದ ದೃಷ್ಟಿಯಿಂದ ಸರ್ವಥಾ ಸಲ್ಲ. ಬಹುದೊಡ್ಡ ಯುವ ಸಮುದಾಯ ಹೀಗೆ ಶಿಕ್ಷಣದಿಂದ ವಂಚಿತರಾದರೆ ಅವರು ಏನೇನಾಗಬಹುದು ಎಂದು ಊಹಿಸುವುದು ಕಷ್ಟವೇನಲ್ಲ.

ADVERTISEMENT

ಈಗ ನಪಾಸಾದವರಿಗೆ ಜೂನ್ ತಿಂಗಳಿನಲ್ಲಿ ಪೂರಕ ಪರೀಕ್ಷೆ ಇದ್ದು ಅಲ್ಲಿ ಪಾಸಾಗುತ್ತಾರೆ ಎನ್ನುವುದು ಕಣ್ಣೊರೆಸುವ ಉತ್ತರವಾಗಬಹುದೇ ವಿನಾ ಶಾಶ್ವತ ಪರಿಹಾರವಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಇರುವ ತಾರತಮ್ಯವನ್ನು ಹೋಗಲಾಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಕಾಣಬೇಕಾದೀತು. ‘ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡುವುದು ಅನಿವಾರ್ಯ’ ಎಂದು ಸಚಿವರು ಹೇಳಿದ್ದಾರೆ.

ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸಬೇಕು ಎಂದರೆ ಪರಿಣತ ಶಿಕ್ಷಕರಿಂದ ಹಿಡಿದು ಎಲ್ಲ ಮೂಲ ಸೌಲಭ್ಯಗಳನ್ನೂ ಒದಗಿಸಬೇಕು. ಇದು ಸರ್ಕಾರದ್ದೇ  ಜವಾಬ್ದಾರಿ. ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು ಸ್ಪರ್ಧೆ ನಡೆಸುತ್ತೇವೆ ಎಂದರೆ ಅದು ಎಂದಿಗೂ ಸಾಧ್ಯವಾಗದು.

ಪರೀಕ್ಷಾ ಪದ್ಧತಿ ಸುಧಾರಣೆಯ ಜೊತೆಗೇ ಸರ್ಕಾರಿ ಶಾಲೆಗಳ ಸುಧಾರಣೆಗೂ ಸರ್ಕಾರ ಗಮನ ಕೊಡಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಎಲ್ಲ ತೊಂದರೆಗಳನ್ನೂ ನಿವಾರಿಸಬೇಕು. ಇದು ಸರ್ಕಾರದ ಮೊದಲ ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.